ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್| ಹಂತ ಹಂತವಾಗಿ ವಿಶ್ವ ದರ್ಜೆಗೆ: ಶಾಸಕ ಅನಿಲ್ ಚಿಕ್ಕಮಾದು
JLR ಸಿಬ್ಬಂದಿಯ ಅಹವಾಲು ಕೇಳಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ
ದಾಂಡೇಲಿ: ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸಂಸ್ಥೆಯನ್ನು ಹಂತ ಹಂತವಾಗಿ ವಿಶ್ವ ದರ್ಜೆಗೆ ಏರಿಸುವ ಗುರಿ ಇದೆ ಎಂದು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಅಧ್ಯಕ್ಷರಾದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ದಾಂಡೇಲಿ ಕಾಳಿ ಜಂಗಲ್ ರೆಸಾರ್ಟ್, ಓಲ್ಡ್ ಮ್ಯಾಗ್ಝೀನ್ ಹೌಸ್, ಗಣೇಶ್ ಗುಡಿ ಮತ್ತು ಬೆಳಗಾವಿಯ ಭೀಮ್ ಘಡ್ ಅಡ್ವೆಂಚರ್ ಕ್ಯಾಂಪ್ ಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಸಿಬ್ಬಂದಿ ಜೊತೆ ಚರ್ಚಿಸುವ ವೇಳೆ ಈ ವಿಷಯ ತಿಳಿಸಿದರು.
ಪ್ರವಾಸಿಗರ ಫೀಡ್ ಬ್ಯಾಕ್ ಡೈರಿಯನ್ನು ಗಮನಿಸಿದ ಅಧ್ಯಕ್ಷರು, ಪ್ರವಾಸಿಗರು ನೀಡುವ ಅಭಿಪ್ರಾಯಗಳೇ ನಿಮ್ಮ ಮತ್ತು ಸಂಸ್ಥೆಯ ಗುಣಮಟ್ಟಕ್ಕೆ ಮಾನದಂಡ. ಆದ್ದರಿಂದ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
JLR ಮುಖ್ಯವಾಗಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ನಮ್ಮ ಅರಣ್ಯ ಸಂಪತ್ತು, ಪರಿಸರ ಸಂಪತ್ತು ಹಾಗೂ ಪ್ರಾಣಿ-ಪಕ್ಷಿ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರೀತಿ ಹುಟ್ಟುವಂತೆ, ತಿಳುವಳಿಕೆ ಹೆಚ್ಚುವಂತೆ ಮಾಡಬೇಕು ಎಂದು ಕರೆ ನೀಡಿದರು.
ಸ್ವಿಮ್ಮಿಂಗ್ ಪೂಲ್‌ಗೆ ಒಪ್ಪಿಗೆ
ಪ್ರವಾಸಿಗರ ಫೀಡ್ ಬ್ಯಾಗ್ ಡೈರಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಅಧ್ಯಕ್ಷರು, JLR ಆಹಾರದ ಗುಣಮಟ್ಟ ಮತ್ತು ವಾತಾವರಣದ ಬಗ್ಗೆ ಪ್ರವಾಸಿಗರೆಲ್ಲಾ ಸಕಾರಾತ್ಮವಾಗಿ ಪ್ರತಿಕ್ರಿಯೆ ನೀಡಿರುವುದಕ್ಕೆ ಸಿಬ್ಬಂದಿ ಮತ್ತು ಅಧಿಕಾರಿಗಳ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
ಜೊತೆಗೆ ಪ್ರವಾಸಿಗರ ಫೀಡ್ ಬ್ಯಾಕ್ ಡೈರಿಯಲ್ಲಿ ಹೆಚ್ಚಿನ ಬೇಡಿಕೆ ಇದ್ದ ದಾಂಡೇಲಿ ಕಾಳಿ JLRಗೆ ತಕ್ಷಣವೇ ಸ್ವಿಮ್ಮಿಂಗ್ ಪೂಲ್ ಮಂಜೂರು ಮಾಡಿದರು.
ಎಲ್ಲಾ ಘಟಕಗಳ ಸಿಬ್ಬಂದಿಯ ಜೊತೆ ವೈಯುಕ್ತಿಕವಾಗಿ ಚರ್ಚಿಸಿ ಅವರ ಸೇವಾ ಹಿರಿತನ, ಬಡ್ತಿ ಸೇರಿ ಇನ್ನಿತರೆ ಸಮಸ್ಯೆಗಳನ್ನು ಆಲಿಸಿ ಬಹಳಷ್ಟಕ್ಕೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿದರು.
"ಮಿಲೆಟ್ ಮತ್ತು ದೇಸಿ ಕ್ರೀಡೆಗೆ ಒತ್ತು ಕೊಡಿ"
ಪ್ರವಾಸಿಗರಿಗೆ ಇಲ್ಲಿಯವರೆಗೂ ಅತ್ಯಂತ ಒಳ್ಳೆ ಗುಣಮಟ್ಟದ ಊಟ ತಿಂಡಿ ಒದಗಿಸಲಾಗುತ್ತಿದೆ. ಇದರ ಜೊತೆಗೆ ಆರೋಗ್ಯ ವೃದ್ಧಿಸುವ ಮಿಲೆಟ್ ನ ಖಾದ್ಯಗಳನ್ನು ರುಚಿಕರವಾಗಿ ಮಾಡಿ ಒದಗಿಸುವಂತೆ ಸೂಚಿಸಿದರು.
ಜೊತೆಗೆ ಮಕ್ಕಳಲ್ಲಿ ಬುಗುರಿ, ಗಿಲ್ಲಿ ದಾಂಡು ಸೇರಿ ದೇಸೀ ಕ್ರೀಡೆಗಳ ಜೊತೆಗೆ ಪ್ರಾಣಿ, ಪಕ್ಷಿ, ಪರಿಸರದ ಮಹತ್ವ ತಿಳಿಸುವ ರೀತಿಯಲ್ಲಿ ಕೆಲಸ ಮಾಡಿ. ಇದಕ್ಕಾಗಿ ಸಿಬ್ಬಂದಿ ನಿರಂತರವಾಗಿ ನಿಮ್ಮ ತಿಳಿವಳಿಕೆಯನ್ನು ವೃದ್ಧಿಸಿಕೊಳ್ಳಿ ಎಂದರು.
ಸ್ವಂತ ಆಸ್ತಿ ಮಾಡೋಣ: JLR ಸ್ವಂತ ಆಸ್ತಿ ಹೆಚ್ಚುವ ರೀತಿಯಲ್ಲಿ ಕೆಲಸ ಮಾಡೋಣ. KSTDC ಗೆ ಸೇರಿದ ಆಸ್ತಿಯನ್ನು ನಾವು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಜೊತೆಗೆ JLR ಸ್ವಂತ ಪ್ರವಾಸಿ ಕೇಂದ್ರಗಳನ್ನು ನಿರ್ಮಿಸುವ ಉದ್ದೇಶವೂ ನನಗಿದೆ. ಇದಕ್ಕೆ ಎಲ್ಲರ ಸಹಕಾರ ಹೆಚ್ಚಿಸಬೇಕು ಎಂದರು. ಗೋಕರ್ಣ, ಮಂಗಳೂರು, ಹುಣಸೂರು, ಗದಗ್ ಸೇರಿ ಉತ್ತರ ಕನ್ನಡದಲ್ಲೂ ಹೊಸ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸಿಬ್ಬಂದಿಗೆ ಪ್ರವಾಸ ಭಾಗ್ಯ
ಇದೇ ಸಂದರ್ಭ JLR ಸಿಬ್ಬಂದಿ ಕುಟುಂಬ ಸಮೇತವಾಗಿ ನಾನಾ ಕಡೆ ಪ್ರವಾಸಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಡುತ್ತೇನೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ವ್ಯವಸ್ಥಾಪಕ ನಿರ್ದೇಶಕರಾದ IFS ಅಧಿಕಾರಿ ಪ್ರಶಾಂತ್ ಶಂಕಿನಮಠ, ಕಾರ್ಯಕಾರಿ ನಿರ್ದೇಶಕಿ ಪಿ.ಅನೂಷ, ವ್ಯವಸ್ಥಾಪಕ ಮೋಹನ್ ಬಾಬು, ಸ್ಲಂಬೋರ್ಡ್ ಸದಸ್ಯರಾದ ರಾಮಕೃಷ್ಣ ರೊಳ್ಳಿ ಸಭೆಯಲ್ಲಿ ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯಗೆ ಅಭಿನಂದಿಸಿದ ಅಧ್ಯಕ್ಷರು
JLR ಅಧ್ಯಕ್ಷರಾಗಿ ನೇಮಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂಧಿಸಿದ ಅನಿಲ್ ಚಿಕ್ಕಮಾದು ಅವರು, ಸಿಎಂ, ಡಿಸಿಎಂ ನಿರೀಕ್ಷೆಗೆ ತಕ್ಕಂತೆ JLR ಪ್ರಗತಿ ಕಾಣುವಂತೆ ಕಾರ್ಯಕ್ಷಮತೆ ಪ್ರದರ್ಶಿಸಿ ಎಂದು ಕರೆ ನೀಡಿದರು.
ಪಕ್ಷಿ ವೀಕ್ಷಕರ ನೆಚ್ಚಿನ ತಾಣ: ಅನುಕೂಲ ಹೆಚ್ಚಿಸಲು ಸೂಚನೆ
ರಾಜ್ಯದ ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣಗಳಲ್ಲಿ ಒಂದಾಗಿರುವ ಓಲ್ಡ್ ಮ್ಯಾಗ್ಝೀನ್ ಹೌಸ್ ನ್ನು ಅಗತ್ಯಕ್ಕೆ ತಕ್ಕಷ್ಟು ನವೀಕರಿಸಿ, ಪಕ್ಷಿ ವೀಕ್ಷಕರ ಬೇಡಿಕೆಯಂತೆ ಅಗತ್ಯ ಸವಲತ್ತುಗಳನ್ನು ಒದಗಿಸುವಂತೆ ಹಾಗೂ ಇಲ್ಲಿನ ಪಕ್ಷಿ ಸಂಪತ್ತಿನ ಬಗ್ಗೆ ಹೆಚ್ಚೆಚ್ಚು ಅಧ್ಯಯನಶೀಲರಾಗುವಂತೆ ನ್ಯಾಚುರಲಿಸ್ಟ್ ಗಳಿಗೆ ಸೂಚಿಸಿ, ಈ ಕೇಂದ್ರ ಸ್ವಾವಲಂಭಿಯಾದರಷ್ಟೆ ಸಾಲದು. ಆದಾಯ ಹೆಚ್ಚಿಸುವಷ್ಟು ಗುಣಮಟ್ಟದಲ್ಲಿ ಕೇಂದ್ರದ ನಿರ್ವಹಣೆ ಮಾಡಬೇಕು ಎನ್ನುವ ಸೂಚನೆ ನೀಡಿದರು. ಈ ಕೇಂದ್ರದಲ್ಲಿ ಪ್ರತ್ಯೇಕ ಕಾಟೇಜ್ ಗಳಿಗೆ ಪಕ್ಷಿ ಪ್ರಿಯರ ಬೇಡಿಕೆ ಬಗ್ಗೆ ಪರಿಶೀಲಿಸಿ, ಅಗತ್ಯ ಅನುಮತಿ ಪಡೆದು ಮುಂದುವರಿಯೋಣ ಎಂದು ಅಧ್ಯಕ್ಷರಾದ ಅನಿಲ್ ಚಿಕ್ಕಮಾದು ತಿಳಿಸಿದರು.