ಶಿರಾಲಿ ಸಾರದೊಳೆ ನಾಮಧಾರಿ ಸಮಾಜದಿಂದ ಸಚಿವ ಮಾಂಕಾಳ್ ವೈದ್ಯರಿಗೆ ಸನ್ಮಾನ
ಭಟ್ಕಳ: ಶಿರಾಲಿ ಸಾರದಾಹೊಳೆ ನಾಮಧಾರಿ ಸಮಾಜ ಬಾಂಧವರಿಂದ ಸಚಿವ ಮಾಂಕಾಳ್ ಎಸ್. ವೈದ್ಯರಿಗೆ ಸ್ವಾಗತಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಂಕಾಳ್ ವೈದ್ಯ, ನಾಮಧಾರಿ ಸಮಾಜ ಬಾಂಧವರು ನನ್ನನ್ನು ಹಿಂದೆಯೂ ಕೈಬಿಟ್ಟಿಲ್ಲ. ಮುಂದೆಯೂ ಕೈಬಿಡಲ್ಲ. ನಾನು ಸಚಿವನಾಗಲು ಸಮಾಜ ಬಾಂಧವರ ಆಶೀರ್ವಾದವೇ ಕಾರಣ ಎಂದರು.
ಹಳೆಕೋಟೆ ಹನುಮಂತ ದೇವಸ್ಥಾನದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ ಸಚಿವರು ದೇವಸ್ಥಾನದ ಆಡಳಿತ ಮಂಡಳಿ ನೀಡಿದ ಮನವಿಯನ್ನು ಸ್ವೀಕರಿಸಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗು ವುದಾಗಿ ತಿಳಿಸಿದರು. ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದು ನಾಮಧಾರಿ ಸಮಾಜದವರು ನನ್ನನ್ನು ಅಪ್ಪಿಕೊಂಡಿದ್ದಾರೆ. ಅವರ ಋಣವನ್ನು ನಾನು ತೀರಿಸಲೇಬೇಕು. ಹಾಗಾಗಿ ನಿಮ್ಮ ಮನವಿಯಲ್ಲಿ ತಿಳಿಸಿರುವ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಮಟಾದ ಸೂರಜ್ ನಾಯ್ಕ ಸೋನಿ, ಹಳೆಕೋಟೆ ಹನುಮಂತ ದೇವಸ್ಥಾನದ ಸುಬ್ರಾಯ ನಾಯ್ಕ ತೆರ್ನಮಕ್ಕಿ, ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ನಾಯ್ಕ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣನಾಯ್ಕ ಮಾತನಾಡಿದರು.
ಭಟ್ಕಳ ನಾಮಧಾರಿ ಸಮಾಜ ಅಧ್ಯಕ್ಷ ಅರುಣ ನಾಯ್ಕ, ದೇವಸ್ಥಾನ ಆಡಳಿತ ಮಂಡಳಿ ಪ್ರಮುಖ ಜೆ.ಜೆ.ನಾಯ್ಕ ಉಪಸ್ಥಿತ ರಿದ್ದರು. ಈ ಸಂದರ್ಭದಲ್ಲಿ ಸಚಿವ ಮಾಂಕಾಳ್ ವೈದ್ಯರು, ಜಪಾನ್ ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಮಂಜುನಾತ್ ನಾಯ್ಕರನ್ನು, ಪಿಯು ಕಾಲೇಜ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿಜಯ ಈಶ್ವರ ನಾಯ್ಕರನ್ನೂ ಹಾಗೂ ಧನುಷ್ ನಾಯ್ಕರನ್ನು ಸನ್ಮಾನಿಸಿದರು.