ಭಟ್ಕಳ: ಜಾನುವಾರುಗಳ ಕಳ್ಳಸಾಗಾಟದ ದೂರು; ಸದ್ಯ ಬೀಫ್ ಖರೀದಿ, ಸೇವನೆ ಬೇಡ ಎಂದು ತಂಝೀಮ್ ನಿರ್ಧಾರ
ಭಟ್ಕಳ: ಜಾನುವಾರುಗಳ ಕಳ್ಳಸಾಗಾಟ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಯಲ್ಲಿ ಇಲ್ಲಿನ ಮುಸ್ಲಿಮರ ಕೇಂದ್ರ ಸಂಘಟನೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ಸಭೆ ಸೇರಿದ ಭಟ್ಕಳದ ಉಲೇಮಾಗಳು, ವಿದ್ವಾಂಸರು ತಾತ್ಕಾಲಿಕವಾಗಿ ಬೀಫ್ ಖರೀದಿ ಮತ್ತು ಸೇವನೆ ಮಾಡದಂತೆ ನಿರ್ಧರಿಸಿ ಆದೇಶಿಸಿದ್ದಾರೆ.
ಭಟ್ಕಳದಲ್ಲಿ ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳ ಕಳುವುಗೈದು ಅದನ್ನು ಮಾಂಸದ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದು ಇದಕ್ಕೆ ಪುಷ್ಟಿ ಎಂಬಂತೆ ಗೋವುಕಳ್ಳಸಾಗಾಟದ ಹಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕಳ್ಳತನದಿಂದ ಖರೀದಿ ಮಾಡಿದ ಜಾನುವಾರುಗಳ ಮಾಂಸ ತಿನ್ನುವುದು ಇಸ್ಲಾಂ ಧರ್ಮದಲ್ಲಿ ಹರಾಮ್ (ನಿಷಿದ್ಧ) ಆಗಿದೆ . ಈ ಹಿನ್ನೆಯಲ್ಲಿ ಮಾಂಸ ಮಾರಾಟಗಾರರು ಹಾಗೂ ದನದ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ಮುಸ್ಲಿಮ್ ಮುಖಂಡರು ಮತ್ತು ವಿದ್ವಾಂಸರು ಕಳ್ಳತನಗೈದ ಮತ್ತು ಅಕ್ರಮವಾಗಿ ಸಾಗಾಟ ಮಾಡಿದ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ಮತ್ತು ಮಾಂಸದಂಗಡಿಗಳಿಸೆ ಸರಬರಾಜು ಮಾಡುವುದನ್ನು ನಿಲ್ಲಿಸುವವರೆಗೂ ಭಟ್ಕಳದಲ್ಲಿ ಬೀಫ್ ಮಾರಾಟ ಮಾಡಕೂಡದು ಮತ್ತು ಅಂತಹ ಮಾಂಸವನ್ನು ಖರೀದಿಸಿ ಸೇವಿಸಬಾರದು ಎಂದು ನೊಟೀಸ್ ಜಾರಿ ಮಾಡಿ ಜನರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕದ್ದ ಜಾನುವಾರುಗಳ ಕುರಿತ ವರದಿಗಳು ಭಟ್ಕಳದಲ್ಲಿ ಗೊಂದಲ ಉಂಟು ಮಾಡಿವೆ . ಈ ಬಗ್ಗೆ ವಿವರವಾಗಿ ಮಾಹಿತಿ ಪಡೆಯಲಾಗುತ್ತಿದ್ದು ಈ ಗೊಂದಲ ನಿವಾರಣೆ ಆಗುವವರೆಗೆ ಜನರು ಬೀಫ್ ಖರೀದಿಸಬಾರದು ಎಂದು ತಂಝೀಮ್ ಹೇಳಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಭಟ್ಕಳದ ಖಾಝಿಗಳು, ವಿದ್ವಾಂಸರು ಮತ್ತು ತಂಝೀಮ್ ಪದಾಧಿಕಾರಿಗಳು ಮಾಂಸ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲವು ಮಾಂಸ ವ್ಯಾಪಾರಿಗಳು ಅನುಮಾನಾಸ್ಪದ ಮಾಂಸದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸಂಶಯಾಸ್ಪದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾತು ಕೇಳಿ ಬಂದಿದೆ . ಇದಕ್ಕಾಗಿ ಮುಸ್ಲಿಂ ಧರ್ಮಗುರುಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಶುದ್ಧ ಮತ್ತು ಹಲಾಲ್ ಮಾಂಸವನ್ನು ಮಾತ್ರ ಮಾರಾಟ ಮಾಡುವ ಅನಿವಾರ್ಯತೆಯನ್ನು ಒತ್ತಿಹೇಳಿದ್ದಾರೆ. ಹರಾಮ್ ಮಾಂಸದ ಮಾರಾಟವನ್ನು ಸಹಿಸುವುದಿಲ್ಲ ಎಂದು ವಿದ್ವಾಂಸರು ಎಚ್ಚರಿಕೆಯನ್ನು ನೀಡಿದ್ದಾರೆ.
ಪರಿಸ್ಥಿತಿಯನ್ನು ಸಮಗ್ರವಾಗಿ ತಿಳಿದುಕೊಳ್ಳಲು , ತಂಝೀಮ್ ಸಂಸ್ಥೆಯು ಸಮಿತಿಯನ್ನು ರಚಿಸಿದ್ದು ಹತ್ತು ದಿನಗಳ ಒಳಗಾಗಿ ಭಟ್ಕಳದಲ್ಲಿ ಆರೋಗ್ಯಕರ ಮತ್ತು ಹಲಾಲ್ ಜಾನುವಾರುಗಳ ಮಾಂಸ ಪೂರೈಸಲು ಕ್ರಮವಹಿಸುವುದಾಗಿ ತಂಝೀಮ್ ಮುಖಂಡರು ಮಾಹಿತಿ ನೀಡಿದ್ದಾರೆ. ಅನುಮಾನಾಸ್ಪದ ಪ್ರಾಣಿಗಳ ವಧೆ ಮತ್ತು ಸಂಶಯಾಸ್ಪದ ಮಾಂಸದ ಪೂರೈಕೆಯನ್ನು ನಿಲ್ಲಿಸುವುದು ಇದರಲ್ಲಿ ಸೇರಿದೆ.