ಗೃಹಸಚಿವ ಪರಮೇಶ್ವರ್ ಭಟ್ಕಳಕ್ಕೆ ಭೇಟಿ; ನೂತನ ಪೊಲೀಸ್ ವಸತಿ ಗೃಹ ಉದ್ಘಾಟನೆ
ಭಟ್ಕಳ: ಗೃಹಸಚಿವ ಜಿ. ಪರಮೇಶ್ವರ್ ಅವರು ರವಿವಾರ ಭಟ್ಕಳಕ್ಕೆ ಭೇಟಿ ನೀಡಿದರು. ಸಾಗರ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ 45 ಸಾವಿರ ಮನೆಗಳನ್ನ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶೇಕಡಾ ನೂರರಷ್ಷು ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಮಾಡುತ್ತೇವೆ. ಇದರಿಂದ ಸಿಬ್ಬಂದಿಗಳಿಗೆ ಕೆಲಸ ಮಾಡಲು ಹೆಚ್ಚಿನ ರೀತಿಯಲ್ಲಿ ಉತ್ತೇಜನ ಸಿಗಲಿದೆ ಎಂದರು.
ಅಂತರಜಿಲ್ಲಾ ಪೊಲೀಸರ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರೀಯಿಸಿದ ಅವರು, ಬೇರೆ ಇಲಾಖೆಗೂ ನಮ್ಮ ಇಲಾಖೆಗೂ ವ್ಯತ್ಯಾಸವಿದೆ. ಯಾವುದೇ ಕೇಸ್ ನಡೆಸುತ್ತಿರುವಾಗ ವರ್ಗಾವಣೆ ಮಾಡಿದ್ರೆ ಕೇಸಿನ ಇತಿಮಿತಿ ಬದಲಾಗುತ್ತೆ. ಹೀಗಾಗಿ ಗಂಡ-ಹೆಂಡತಿ , ಹೆಲ್ತ್ ಪ್ರಕರಣ ನೋಡಿ ವರ್ಗಾವಣೆ ಮಾಡುತ್ತೇವೆಂದು ಹೇಳಿದರು.
ಬರುವ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಆಧುನಿಕತೆಯನ್ನ ತರುತ್ತೇವೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ತಂತ್ರಜ್ಞಾನ ಉಪಯೋಗಿಸುತ್ತೇವೆ. ಪ್ರತಿಯೊಂದು ಸ್ಟೇಷನ್ ಲಿಂಕ್ ಹೆಡ್ ಕ್ವಾಟರ್ಸ್‌ನಲ್ಲಿ ಮಾನಿಟರ್ ಮಾಡುವ ವ್ಯವಸ್ಥೆಯನ್ನ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಇಲಾಖೆಯನ್ನ ಹಂತಹಂತವಾಗಿ ಬದಲಾವಣೆ ಮಾಡುತ್ತೇವೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.