ಪದವಿ ಫಲಿತಾಂಶ: ಭಟ್ಕಳದ ಅಂಜುಮನ್ ಮಹಿಳಾ ಕಾಲೇಜು ಉತ್ತಮ ಸಾಧನೆ
ಭಟ್ಕಳ, ಜ.3: ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ನಡೆಸಿದ ಬಿಎ, ಬಿಎಸ್ಸಿ ಮತ್ತು ಬಿಕಾಂ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಮಹಿಳಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯರು (6ನೇ ಸೆಮಿಸ್ಟರ್) ಅತ್ಯುತ್ತಮ ಸಾಧನೆ ತೋರಿದ್ದಾರೆ.
ಬಿಕಾಂ ವಿಭಾಗದಲ್ಲಿ ಕಾಲೇಜು ಶೇ.96ರಷ್ಟು ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 76 ವಿದ್ಯಾರ್ಥಿನಿಯರಲ್ಲಿ 73 ಮಂದಿ ಉತ್ತೀರ್ಣರಾಗಿದ್ದು, 47 ಡಿಸ್ಟಿಂಕ್ಷನ್ ಹಾಗೂ 19 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ನಿಮ್ರಾ ನದೀಮ್ ಅಹ್ಮದ್ ಶಾಬಂದ್ರಿ, 4200 ಅಂಕಗಳಿಗೆ 4077 ಅಂಕಗಳೊಂದಿಗೆ ಕಾಲೇಜಿಗೆ ಅಗ್ರ ಸ್ಥಾನ ಗಳಿಸಿದ್ದು, 97.07 ಶೇ. ಫಲಿತಾಂಶ ದಾಖಲಿಸಿದ್ದಾರೆ.
ಬಿಎ ವಿಭಾಗದಲ್ಲಿ 29 ವಿದ್ಯಾರ್ಥಿನಿಯರ ಪೈಕಿ 26 ಮಂದಿ ತೇರ್ಗಡೆಯಾಗಿದ್ದು, ಶೇ.89.7 ಫಲಿತಾಂಶ ದಾಖಲಾಗಿದೆ. ಉತ್ತೀರ್ಣರಾದವರ ಪೈಕಿ 15 ಮಂದಿ ಡಿಸ್ಟಿಂಕ್ಷನ್, 10 ಮಂದಿ ಪ್ರಥಮ ದರ್ಜೆ ಗಳಿಸಿದ್ದಾರೆ. ನುಸೈನಾ ಅಲ್ತಾಫ್ ಹುಸೇನ್ ಕೊಬಟ್ಟೆ, 3900 ರಲ್ಲಿ 3546(90.92ಶೇ.) ಅಂಕಗಳೊಂದಿಗೆ ಕಾಲೇಜಿಗೆ ಅಗ್ರ ಸ್ಥಾನಿಯಾಗಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿನಿಯರ ಪೈಕಿ 22 ಮಂದಿ ಉತ್ತೀರ್ಣರಾಗಿದ್ದು, ಶೇ.95.7 ಫಲಿತಾಂಶ ದಾಖಲಾಗಿದೆ. ಉತ್ತೀರ್ಣರಾದವರ ಪೈಕಿ 16 ಮಂದಿ ಡಿಸ್ಟಿಂಕ್ಷನ್ ಹಾಗೂ 5 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮೈಮುನ್ನಿಸಾ 4100 ಅಂಕಗಳಿಗೆ 3686(89.90%) ಅಂಕಗಳೊಂದಿಗೆ ಕಾಲೇಜಿಗೆ ಅಗ್ರಸ್ಥಾನ ಗಳಿಸಿದ್ದಾರೆ ಎಂದು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ರಯೀಸಾ ಶೇಖ್ ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿನಿಯರನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷೆ ಕಾಜಿಯಾ ಮುಝಮ್ಮಿಲ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯೀಲ್, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸೈಯದ್ ಸಲೀಂ ಸಹಿತ ಇತರ ಪದಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.