ಅಂಜುಮನ್ ಪದವಿ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ
ಭಟ್ಕಳ: ನಮಗೆ ಸಂವಿಧಾನ, ಸ್ವಾತಂತ್ರ್ಯ, ಶಿಕ್ಷಣ ಎಲ್ಲವೂ ಇದ್ದರೂ ಮನು ಸ್ಮೃತಿಯ ಕಾಲದಲ್ಲಿದ್ದ ಸ್ತ್ರೀ-ಪುರುಷ ತಾರ ತಮ್ಯ ಎಂಬುದು ಇಂದಿನವರೆಗೂ ಸ್ತ್ರೀಕುಲವನ್ನು ಶಾಪವಾಗಿ ಕಾಡುತ್ತಿರುವುದು ವಿಷಾದನೀಯವೆಂದು ಭಟ್ಕಳ ತಾಲೂಕಿನ ಕೋಣಾರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ಹೆಬ್ಬಾರ ನುಡಿದರು.
ಅವರು ಹಡೀಲ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಅಂಜುಮನ್ ಪದವಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಊರ ನಾಗರಿಕರನ್ನುದ್ದೇಶಿಸಿ ಮಾತನಾಡಿದರು.
ಪುರುಷ ಮಾಡುತ್ತಿರುವುದು ಮಾತ್ರ ಕೆಲಸ, ಸ್ತ್ರೀಯರು ಮಾಡುತ್ತಿರುವುದು ಕರ್ತವ್ಯವೆಂಬ ಭಾವನೆ ಅನೇಕರಲ್ಲಿ ಇಂದಿಗೂ ಇದೆ. ಉದ್ಯೋಗಸ್ಥ ಮಹಿಳೆಯೂ ಸಹ ತನ್ನ ಉದ್ಯೋಗದ ಜೊತೆಗೆ ಮನೆಗೆಲಸದ ಜವಾಬ್ದಾರಿಯನ್ನೂ ನಿರ್ವಹಿಸ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿರುವುದನ್ನು ಅರ್ಥಮಾಡಿಕೊಳ್ಳುವ ಪುರುಷರ ಸಂಖ್ಯೆ ತೀರ ಕಡಿಮೆ. ಪುರುಷ ಪ್ರಧಾನ ವ್ಯವಸ್ಥೆ ನಿರ್ಮಿತ ಸಮಾಜದಲ್ಲಿರುವ ಹಿರಿಯ ಮಹಿಳೆಯರಿಗೂ ಇದು ಸರಿ ಎಂಬ ಮನೋಭಾವವಿರುವುದು ದುರಂತವೇ ಸರಿ. ಪುರುಷರು ಮತ್ತು ಹಿರಿಯರು ತಮ್ಮ ಮನೋಭಾವವನ್ನು ಬದಲಿಸಿಕೊಂಡು ಹೆಣ್ಣಿಗೂ ಸಹಿತ ಗಂಡಿ ನಷ್ಟೇ ಸ್ಥಾನಮಾನ, ಸ್ವಾತಂತ್ರ್ಯವಿದೆ ಎಂಬುದನ್ನು ಅರ್ಥಮಾಡಿಕೊಂಡು ಭಾರತೀಯ ಕುಟುಂಬದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಬಿ. ಎಚ್. ನದಾಫ್ ಅವರು ಸ್ತ್ರಿ-ಪುರುಷ ಮತ್ತು ಇನ್ನುಳಿದ ಯಾವುದೇ ತರದ ತಾರತಮ್ಯದ ನಿವಾರಣಗೆ ಸರಿಯಾದ ಶಿಕ್ಷಣ ಮತ್ತು ಮಾನವೀಯತೆ ಮಾತ್ರ ಪರಿಹಾರ ಒದಗಿಸಬಹುದು ಎಂದರು. ಎನ್ನೆಸ್ಸೆಸ್ ಅಧಿಕಾರಿ ಪ್ರೊ. ಆರ್. ಎಸ್. ನಾಯಕ ಸ್ವಾಗತಿಸಿದರು, ಕುಮಾರಿ ಚೈತ್ರಾ ವಂದಿಸಿದರು.