ಅನಂತ್ ಕುಮಾರ್ ಹೆಗಡೆಯನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ಸಿಪಿಐ(ಎಂ) ಒತ್ತಾಯ
ಉತ್ತರ ಕನ್ನಡ ಜಿಲ್ಲೆಯ ಜನತೆಯನ್ನು ಇಲ್ಲಿಯ ಅಭಿವೃದ್ಧಿಯನ್ನು ಸತತವಾಗಿ ನಿರ್ಲಕ್ಷಿಸಿ ಕೇವಲ ಕೋಮುದ್ವೇಷ ಹಿಂಸೆಗೆ ಪ್ರಚೋದನೆ ನೀಡುವುದೇ ಸಂಸದೀಯ ಕೆಲಸ ಎಂದು ಭಾವಿಸಿದಂತಿರುವ ಸಂಸದ ಅನಂತ ಕುಮಾರ ಹೆಗಡೆಯವರು ಬಾಯಿಗೆ ಬಂದಂತೆ ಅಸಾಂವಿಧಾನಿಕವಾಗಿ ಮಾತಾಡುತ್ತಿರುವುದು ಅತ್ಯಂತ ಖಂಡನಾರ್ಹ.
ಕಳೆದ ನಾಲ್ಕೂವರೆ ವರ್ಷಗಳಿಂದ ನೇಪಥ್ಯದಲ್ಲಿ ಇದ್ದಂತಿದ್ದ ಉತ್ತರ ಕನ್ನಡ ಎಂಪಿ ಅನಂತಕುಮಾರ್ ಹೆಗಡೆ ಯವರು ಈಗ ಮೈಮೇಲೆ ದೆವ್ವ ಬಡಿದವರಂತೆ ಕೂಗಾಡುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಪ್ರಚೋದನಕಾರಿ ಕೋಮು ಸಂಘ ರ್ಷಕ್ಕೆ ಕಾರಣವಾಗುವಂತೆ ಮಾತನಾಡುತ್ತಿದ್ದಾರೆ. ಮತದಾರರು ಮತ್ತು ಪಕ್ಷದ ಕಾರ್ಯಕರ್ತರು ನೆನಪಾದಂತೆ ಮತ್ತು ತಕ್ಷಣ ಪ್ರಚಾರ ಪಡೆಯಲು ಬೊಬ್ಬೆ ಹೊಡೆಯುತ್ತಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ದೇಶದ ಸಂವಿಧಾನದ ಬಗ್ಗೆ ಗೌರವವಿಲ್ಲದಂತೆ ಮಾತನಾಡುತ್ತಿದ್ದಾರೆ. ಬಾಬ್ರಿ ಮಸೀದಿ ಕೆಡವಿದಂತೆ ಇನ್ನೂ ಹಲವಾರು ಮಸೀದಿ ಕೆಡವುದಾಗಿ ಕಿಡಿಗೇಡಿತನದ ಹಾಗೂ ಕೋಮುದ್ವೇಷಕ್ಕೆ ಕುಮ್ಮಕ್ಕು ಕೊಡುವಂತ ಹೇಳಿಕೆ ನೀಡುತ್ತಿರುವುದರಿಂದ ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.
ಚುನಾವಣಾ ಸಂದರ್ಭದಲ್ಲಿ ಕೋಮುವಾದಿ ರಾಜಕಾರಣ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದು ಅನಂತಕುಮಾರ ಹೆಗಡೆಯವರ ಖಾಯಂ ಹವ್ಯಾಸವಾಗಿದೆ. ಅಸಂವಿಧಾನಿಕ ಮಾತುಗಳಿಗೆ ತಡೆಯೊಡ್ಡಲು ಬಿಜೆಪಿ ಹಾಗೂ ಅರ್.ಎಸ್.ಎಸ್. ವಿಫಲವಾಗಿರುವದನ್ನು ನೋಡಿದರೆ ಅವರು ಕೂಡ ಶಾಮಿಲಿದ್ದಂತೆ ತೋರುತ್ತದೆ. ಪ್ರಜ್ಞಾವಂತ ಮತದಾರರು ಇವರ ಡೊಂಬರಾಟಕ್ಕೆ ಬಲಿಯಾಗಬಾರದೆಂದು ಸಿಪಿಐ(ಎಂ) ವಿನಂತಿಸುತ್ತದೆ. ಸಂಸದರ ಬಾಯಲ್ಲಿ ಇಂತಹ ದ್ವೇಷಕಾರುವ ಮಾತುಗಳು ಬರುತ್ತಿರುವುದು ಇದೇ ಮೊದಲಲ್ಲ. ಈ ಜಿಲ್ಲೆಯ ಅಭಿವೃದ್ಧಿ ಬಯಸದೇ ಇರುವ ಸಂಸದರು ಜನತೆಯನ್ನು ಒಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಈ ಕೂಡಲೇ ಕಠಿಣ ಕಾನೂನು ಕ್ರಮ ಇವರ ಮೇಲೆ ಜರುಗಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಉಕ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದ್ದಾರೆ.