ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಂಪರ್ಕಕ್ಕೇ ಸಿಗದ ಶಾಸಕ, ಸಂಸದರು!
ಟಿಕೆಟ್ ತಪ್ಪಿದ ಬಳಿಕ ಸೈಲೆಂಟ್ ಆದ ಅನಂತ್ ಕುಮಾರ್ ಹೆಗಡೆ
ವಿಶ್ವೇಶ್ವರ ಹೆಗಡೆ ಕಾಗೇರಿ - ಅನಂತ್ ಕುಮಾರ್ ಹೆಗಡೆ
ಭಟ್ಕಳ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಅರು ಬಾರಿ ಗೆದ್ದು ಕಳೆದ ಚುನಾವಣೆಯಲ್ಲಿ ಸೋತಿರುವ ಆರ್.ಎಸ್.ಎಸ್. ಕಟ್ಟಾಳು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕೆ ಇಳಿಸಿದೆ.
ಟಿಕೆಟ್ ಘೋಷಣೆಯಾದ ದಿನ ಸಂಭ್ರಮ ಪಟ್ಟುಕೊಂಡಿರುವ ಕಾಗೇರಿ, ತನಗೆ ಟಿಕೆಟ್ ಕೊಟ್ಟಿದ್ದಕ್ಕೆ ಕೇಂದ್ರದ ನಾಯಕರಿಗೆ ಧನ್ಯವಾದ ಹೇಳಿದ್ದರು. ಅಲ್ಲದೆ ಉ.ಕ ಬಿಜೆಪಿಯ ಭದ್ರಕೋಟೆಯಾಗಿದ್ದು ನನ್ನ ಗೆಲುವು ನಿಶ್ಚಿತ. ಅನಂತ್ ಕುಮಾರ್ ಹೆಗಡೆಯೊಂದಿಗೆ ಭೇಟಿಯಾಗಿ ಅವರ ಸಹಕಾರ ಕೋರುತ್ತೇನೆ. ನಾನು ಮತ್ತು ಅನಂತ್ ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು.
ಆದರೆ, ಯಾಕೋ ಕಾಗೇರಿಯವರ ಗ್ರಹಚಾರ ಸರಿ ಇಲ್ಲ ಅಂತ ಕಾಣುತ್ತೇ. ತನ್ನ ಜೋಡೆತ್ತು ಆಗಬೇಕಿದ್ದ ಅನಂತ್ ಕುಮಾರ್ ಹೆಗಡೆ ಈಗ ಯಾವುದಕ್ಕೂ ಮಣಿಯುತ್ತಿಲ್ಲ. ಒಂದೆಡೆ ಟಿಕೆಟ್ ತಪ್ಪಿದ ಕೋಪ ಮತ್ತೊಂದಡೆ ಕಾಗೇರಿಗೆ ಟಿಕೆಟ್ ಸಿಕ್ಕಿರುವ ಅಸೂಯೆ. ಹೀಗಾಗಿ ಅನಂತ್ ಕುಮಾರ್ ಹೆಗಡೆಯವರು ಕಾಗೇರಿಯವರಿಗೆ ಕ್ಯಾರೆ ಮಾಡುತ್ತಿಲ್ಲ. ಅವರ ಜೋಡೆತ್ತು ಆಗುವುದಿರಲಿ ಕಾಗೇರಿಯವರ ಹೆಸರೂ ಕೂಡ ಈಗ ಅನಂತ್ ಕುಮಾರ್ ಹೆಗಡೆಗೆ ಅಪಥ್ಯವಾಗತೊಡಗಿದೆ.
ಈ ಎಲ್ಲದರ ನಡುವೆ ಟಿಕೇಟ್ ವಂಚಿತ ಅನಂತ್ ಕುಮಾರ್ ಹಗಡೆ ಕಳೆದ ಐದಾರು ದಿನಗಳಿಂದ ಯಾರ ಕೈಗೂ ಸಿಗದೆ ಮನೆಯಲ್ಲೇ ಏಕಾಂತವಾಸದಲ್ಲಿದ್ದಾರೆಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಗೇರಿಯವರು ಕೂಡ ಅವರನ್ನು ಭೇಟಿಯಾಗಲು ಹೋಗಿ ಕಾದು ಕಾದು ಸುಸ್ತಾಗಿ ಕೊನೆಗೂ ಬರಿಗೈಯಿಂದ ಮರಳಿದ್ದಾಗಿ ಮಾಹಿತಿ ಇದೆ.
ಉ.ಕ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ತನಗೆ ಗೆಲುವು ನಿಶ್ಚಿತ ಎಂಬ ಭ್ರಮೆಯಲ್ಲಿದ್ದ ಕಾಗೇರಿಯವರಿಗೆ ಈಗ ಮೇಲಿಂದ ಮೇಲೆ ಕರೆಂಟ್ ಶಾಕ್ ಕೊಟ್ಟಂತೆ ಒಂದಿಲ್ಲೊಂದು ಅಘಾತಗಳು ಹೊಡೆತ ನೀಡುತ್ತಿವೇ. ಇಂದು (28-03-2024) ರಂದು ಸಾಮಾಜಿ ಜಾಲಾತಾಣಗಳು ವೆಬ್ ಸುದ್ದಿತಾಣಗಳಲ್ಲಿ ಅವರ ಹಳೆಯ ಫೋಟೊವೊಂದು ವೈರಲ್ ಆಗಿದ್ದು 2013ರಲ್ಲಿ ಇಫ್ತಾರ್ ಕೂಟದಲ್ಲಿ ಮುಸ್ಲಿಮರೊಂದಿಗೆ ತಲೆಯ ಮೇಲೆ ಟೋಪಿ ಧರಿಸಿರುವ ಫೋಟೋ ವೈರಲ್ ಮಾಡಿ ಇದನ್ನು ಅನಂತ್ ಕುಮಾರ್ ಹೆಗಡೆಯವರ ಬಣ ಮಾಡುತ್ತಿದೆ ಎಂದು ವರದಿಯಾಗುತ್ತಿದೆ.
ಅಲ್ಲದೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಈಗ ಕೈ ಪಕ್ಷದ ಹತ್ತಿರಕ್ಕೆ ಬಂದಿದ್ದು ಕಾಗೇರಿಯವರಿಗೆ ಕೈ ಕೊಡುತ್ತಿದ್ದಾರೆ. ಅಲ್ಲದೆ ಘಟ್ಟದ ಕೆಳಗಿನವರು ಕಾಗೇರಿಯವರು ಅನ್ಯಾಯ ಮಾಡಿದ್ದು ಜಿಲ್ಲಾ ಉಸ್ತುವಾರಿ ಇದ್ದಾಗಲೂ ಕಾರವಾರ ಅಂಕೋಲ, ಕುಮಾಟಾ ಭಾಗಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕರಾವಳಿಗರಲ್ಲಿ ತಾರತಮ್ಯ ಮಾಡುತ್ತಿ ದ್ದಾರೆ. ಉ.ಕ ಜಿಲ್ಲೆಯ ವಿಭಜನೆಗೆ ಹುನ್ನಾರ ನಡೆಸಿದ್ದಾರೆ. ಅಭಿವೃದ್ಧಿ ಎಂಬುದು ಕೇವಲ ಶಿರಸಿ-ಸಿದ್ದಾಪುರಕ್ಕೆ ಸೀಮಿತವಾಗದಿರಲಿ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಮಹಾಂತೇಶ್ ಎನ್ನುವವರು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಕಾಗೇರಿಯವರಿಗೆ ಲೋಕಸಭಾ ಟಿಕೇಟ್ ಸಂತೋಷ, ಸಂಭ್ರಮ ನೀಡಿದ್ದಕ್ಕಿಂತ ಹೆಚ್ಚಾಗಿ ತಲೆನೋವು ಮತ್ತು ಆತಂಕ ತಂದೊಡ್ಡಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ನಡೆಯುತ್ತಿದೆ.