ಕಾಗೇರಿ ಆರು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ಮಾತನಾಡಲಿ, ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ: ಡಾ.ಅಂಜಲಿ ಸವಾಲು
ಭಟ್ಕಳ: ನಾನು ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ. ಬಿಜೆಪಿ ಆಡಳಿತವಿದ್ದರೂ ಖಾನಾಪುರದಲ್ಲಿ ಐದು ವರ್ಷದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆರು ಅವಧಿಯಲ್ಲಿ ಮಾಡಿದ ಕೆಲಸಗಳನ್ನ ತೋರಿಸಲಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಸವಾಲೆಸೆದರು.
ಮಾವಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಡವರು, ರೈತರಿಗೆ ಅನ್ಯಾಯವಾದರೆ ಯಾರಿಗೂ ಬಿಡಲ್ಲ, ಅದು ಎಷ್ಟೇ ದೊಡ್ಡವರಿರಲಿ. ದೇವರ ಮನಸ್ಸಲ್ಲಿ ಹಿಂದೂ- ಮುಸ್ಲಿಂ ಎಂಬ ವ್ಯತ್ಯಾಸವಿಲ್ಲ, ಕಾಂಗ್ರೆಸ್‌ಗೂ ಇಲ್ಲ. ಆದರೆ ಬಿಜೆಪಿ ರಾಜಕೀಯಕ್ಕಾಗಿ ನಮ್ಮ ನಮ್ಮಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ಮುಂದೆಯೂ ಅದನ್ನೇ ಮಾಡುತ್ತಾರೆ. ಕಾಂಗ್ರೆಸ್‌ನ ನಾಯಕರು ಹಸ್ತದ ಐದು ಬೆರಳಂತೆ. ಚುನಾವಣೆಯಲ್ಲಿ ಒಂದಾಗಿ ಮುಷ್ಠಿಯಂತೆ ಕೆಲಸ ಮಾಡುತ್ತೇವೆ. ನನಗೆ ಮತ ನೀಡದರೆ ಬಡವರ ಧ್ವನಿಯಾಗಿ ಸಂಸತ್‌ನಲ್ಲಿ ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಇದು ನನ್ನ ಚುನಾವಣೆ. ಬಡವರು, ಸಾಮಾನ್ಯಜನರ ಚುನಾವಣೆ. ಬಿಜೆಪಿಗರು 30 ವರ್ಷಗಳಿಂದ ಸುಳ್ಳು ಹೇಳಿದ್ದನ್ನ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯೆಂಬ ಕೆಟ್ಟ ಸಂಸ್ಕೃತಿಯನ್ನ ದೇಶದಿಂದಲೇ ಕಿತ್ತೆಸೆಯದಿದ್ದರೆ ಮುಂದೆ ಗಂಡಾಂತರವಿದೆ. ಮೋದಿ ಹೆಸರಲ್ಲಿ ಮತ ಕೇಳುವ ಬಿಜೆಪಿ ಗರಿಗೆ ನಾಚಿಕೆಯಾಗಬೇಕು. ನಾನು ನನ್ನ ಹೆಸರಿನಲ್ಲಿ, ಪಕ್ಷದ ಚಿಹ್ನೆಯಲ್ಲಿ, ನಮ್ಮ ಅಭ್ಯರ್ಥಿಯ ಮುಖ ತೋರಿಸಿ ಮತ ಕೇಳುತ್ತೇವೆ. ನಾವು ಮಾಡಿದ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತೇವೆ. ಬಿಜೆಪಿಗರು ಬುದ್ಧಿ ಕಲಿಯಬೇಕು, ಸುಳ್ಳು ಹೇಳುವುದನ್ನ ಬಿಡಬೇಕು. ಜನ ನಿಮ್ಮನ್ನ ರಾಜ್ಯದಲ್ಲಿ ತಿರಸ್ಕರಿಸಿದ್ದಾರೆ, ಮುಂದೆ ದೇಶದಲ್ಲೂ ತಿರಸ್ಕರಿಸುವ ದಿನ ಬಂದೇ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ವಕ್ತಾರ ಸುಧೀರಕುಮಾರ್ ಮಾತನಾಡಿ, ನಾ ಖಾವೂಂಗಾ, ನಾ ಖಾನೇ ದೂಂಗಾ ಎಂದಿದ್ದ ಪ್ರಧಾನಿ ಮೋದಿ, ಬಡಜನರನ್ನ ಬೀದಿಗೆ ತಂದ ಕಂಪನಿಗಳಿಂದ ಚುನಾವಣಾ ಬಾಂಡ್ ಮೂಲಕ ಹಣ ಪಡೆದು ಬಹುದೊಡ್ಡ ಭ್ರಷ್ಟಾಚಾರ ಮಾಡಿದ್ದಾರೆ. ನಮ್ಮ ಆಹಾರ, ನಮ್ಮ ಸಂಸ್ಕೃತಿಯನ್ನ ಆಡಿಕೊಳ್ಳುವ ಬಿಜೆಪಿಗರಿಗೆ ಮತ ನೀಡಬೇಡಿ. ಆಜಾನ್, ಹಲಾಲ್, ಹಿಜಾಬ್ ವಿವಾದಗಳನ್ನ ಬಿಟ್ಟರೆ ಬಿಜೆಪಿ ಮಾಡಿದ್ದೇನಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದೆ; ಈ ಬಾರಿ ನಮ್ಮ ಅಭ್ಯರ್ಥಿ ಡಾ.ಅಂಜಲಿ ಅವರನ್ನ ಬಹುಮತದಿಂದ ಗೆಲ್ಲಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ವಿಧಾನಸಭಾ ಚುನಾವಣೆಯ ಪೂರ್ವ ನೀಡಿದ್ದ ಐದೂ ಗ್ಯಾರಂಟಿಯನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಬಹುಮತ ನೀಡುವ ಮೂಲಕ ಗೆಲ್ಲಿಸಿ ತರಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ, 30 ವರ್ಷ ಸಂಸದರಾದವರು ಒಂದೇ ಒಂದು ದಿನ ಸಂಸತ್ ನಲ್ಲಿ ಜಿಲ್ಲೆಯ ಬಗ್ಗೆ ಮಾತನಾಡಿಲ್ಲ. ಶ್ರೀಮಂತ- ಬಡವನೆಂಬ ಮೇಲು ಕೀಳಿಲ್ಲದ, ಜಾತಿ- ಧರ್ಮವಿಲ್ಲದ, ಸಮಾನತೆ ಸಾರುವ ಸಂವಿಧಾನವನ್ನ ಬದಲಿಸುತ್ತೇವೆನ್ನುವ ಬಿಜೆಪಿಯನ್ನೇ ಈ ದೇಶದಿಂದ ಮುಕ್ತ ಮಾಡಬೇಕಿದೆ. ಕಸ್ತೂರಿ ರಂಗನ್ ವರದಿ ಯನ್ನ ತಿರಸ್ಕರಿಸಿ ಎಂದು ನಾವು ಕಾಗೇರಿಯವರ ಮನೆ ಮುಂದೆ ಪ್ರತಿಭಟಿಸಿದಾಗಲೂ ಅವರು ಸ್ಪಂದಿಸಿರಲಿಲ್ಲ. ಪೆಟ್ರೋಲ್- ಡೀಸೆಲ್ ದರ ಇಳಿಸುತ್ತೇವೆಂದಿದ್ದ ಮೋದಿಯವರಿಗೆ ನುಡಿದಂತೆ ನಡೆದುಕೊಳ್ಳಲಾಗಿಲ್ಲ. ಜಿಎಸ್‌ಟಿ ಹೆಸರಲ್ಲಿ ದರೋಡೆ ಮಾಡಿದರು. ಇದಕ್ಕೆಲ್ಲ ಒಂದೇ ಉತ್ತರ, ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.
ಸ್ಥಳೀಯ ಮುಸ್ಲಿಂ ಮುಖಂಡ ಡಾ.ಅಮೀರುದ್ದೀನ್ ಮಾತನಾಡಿ, ಇದು ಬದಲಾವಣೆಯ ಚುನಾವಣೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಬೇಕೆಂದರೆ, ಸಂವಿಧಾನದ ರಕ್ಷಣೆಯಾಗಬೇಕೆಂದರೆ ಕಾಂಗ್ರೆಸ್ ಗೆಲ್ಲಬೇಕಿದೆ ಎಂದರು.
ಡಾ.ಅಂಜಲಿ ಅವರಿಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕಾರ್ಯಕ್ರಮದಲ್ಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು.
ಕೆಪಿಸಿಸಿ ಸಂಯೋಜಕ ವಿಶ್ವಾಸ್ ಅಮೀನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಹಿಳಾ ಬ್ಲಾಕ್ ಅಧ್ಯಕ್ಷೆ ನಯನಾ ನಾಯ್ಕ, ನಾಮಧಾರಿ ಮುಖಂಡ ಸುಕ್ರಾ ನಾಯ್ಕ, ದೇವಿದಾಸ್ ಗುಡಿಗಾರ್, ಕೃಷ್ಣ ಭಂಡಾರಿ, ಬೈಲೂರು ಗ್ರಾ.ಪಂ. ಅಧ್ಯಕ್ಷ ಕೃಷ್ಣ ನಾಯ್ಕ, ಕಾಯ್ಕಿಣಿ ಗ್ರಾ.ಪಂ. ಅಧ್ಯಕ್ಷ ರಾಜು ನಾಯ್ಕ, ಮೀನುಗಾರರ ಮುಖಂಡ ಆನಂದ್ ಹರಿಕಂತ್ರ ಇದ್ದರು.
"ಬಿಜೆಪಿ ಅಭ್ಯರ್ಥಿ ಕೇಂದ್ರದಲ್ಲಿ ನೋಡಿ ತಮಗೆ ಮತ ನೀಡಿ ಎನ್ನುತ್ತಾರೆ. ಇದು ಹೇಗಿದೆಯೆಂದರೆ, ಮದುವೆ ಮಾಡುವಾಗ ಶೋಕೇಸ್‌ಗಂತ ಒಂದು ಹುಡುಗ, ಮದುವೆಯಾಗುವವನೇ ಬೇರೆ ಎನ್ನುವಂತಿದೆ. ಶೋಕೇಸ್ ಅಭ್ಯರ್ಥಿಗೆ ಮತ ನೀಡುತ್ತೀರೋ, ಜನಪರ ಕೆಲಸ ಮಾಡುವವರಿಗೆ ಮತ ನೀಡುತ್ತೀರೋ ಎಂಬುದನ್ನ ಜನ ನಿರ್ಧರಿಸಲಿ".
-ಡಾ.ಅಂಜಲಿ ನಿಂಬಾಳ್ಕರ್, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
"ಉದ್ಯೋಗ ಕೇಳಿದರೆ ಪಕೋಡ ಮಾರಿ ಎನ್ನುವವರು ನಮಗೆ ಬೇಕಾ? ಇದು ಕೆಲಸ ಮಾಡದ ರಾಜಕಾರಣಿಗಳನ್ನ ಮನೆಗೆ ಕಳುಹಿಸುವ ಚುನಾವಣೆ. ಐದು ವರ್ಷಕ್ಕೊಮ್ಮೆ ನಮ್ಮ ಹಣೆಬರಹವನ್ನ ಜನ ಬರೆಯುತ್ತಾರೆಂಬ ಪ್ರಜ್ಞೆ ರಾಜಕಾರಣಿಗಳಾದ ನಮಗೂ ಇರಬೇಕು".
-ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ
"ನಾನು ಶಾಸಕನಾದಾಗ 1500 ಕೋಟಿ ರೂ. ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ್ದೆ. ಅದನ್ನ ಬಿಜೆಪಿಯ ಸರ್ಕಾರವಿದ್ದರೂ, ಅವರದ್ದೇ ಶಾಸಕರಿದ್ದರೂ, ಈಗಿನ ಬಿಜೆಪಿ ಅಭ್ಯರ್ಥಿ ಅಂದು ಸ್ಪೀಕರ್ ಎಂಬ ಉನ್ನತ ಹುದ್ದೆಯಲ್ಲಿದ್ದರೂ ಐದು ವರ್ಷಗಳಲ್ಲಿ ಕಾಮಗಾರಿಗಳನ್ನ ಪೂರ್ಣಗೊಳಿಸಲಾಗಿಲ್ಲ ಎಂದು ಮಂಕಾಳ ವೈದ್ಯ ಕಿಡಿಕಾರಿದರು.
30 ವರ್ಷಗಳಲ್ಲಿ ಸಂಸದರಾಗಿದ್ದವರು ಈ ಜಿಲ್ಲೆಗೆ ಏನು ಕೊಡುಗೆ ನೀಡಿದರು, ಈ ಕ್ಷೇತ್ರಕ್ಕೆ ಐದು ವರ್ಷಗಳಲ್ಲಿ ಬಿಜೆಪಿಗರು ಏನೇನು ಕಾರ್ಯಕ್ರಮ ತಂದಿದ್ದಾರೆ ಎಂಬುದನ್ನ ತೋರಿಸಲಿ. ನಮಗೆ ಬುದ್ಧಿವಾದ ಹೇಳಲು ಬರುವ ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು".