ಚುನಾವಣೆಗಾಗಿ ಹಿಂದುತ್ವ ಎನ್ನುವವರಿಗೆ ಮರುಳಾಗದಿರಿ: ಆರ್.ವಿ.ದೇಶಪಾಂಡೆ
ಹೊನ್ನಾವರ: ಯಾರೂ ಕೂಡ ಇದೇ ಧರ್ಮ, ಜಾತಿಯಲ್ಲಿ ಹುಟ್ಟಬೇಕೆಂದು ಹುಟ್ಟುವುದಿಲ್ಲ. ಆದರೆ ಕೆಲಸಗಳಿಲ್ಲದ ಬಿಜೆಪಿಗರು ಇದೇ ಜಾತಿ- ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ನಾವೇನು ಹಿಂದು ಅಲ್ವಾ? ಕೇವಲ ಚುನಾವಣೆಗಾಗಿ, ಅಧಿಕಾರಕ್ಕಾಗಿ ಹಿಂದುತ್ವ ಎನ್ನುವ ಅವರಿಗೆ ಯಾರೂ ಮರುಳಾಗಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಹಳಿಯಾಳ ಶಾಸಕರೂ ಆದ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ನಗರಬಸ್ತಿಕೇರಿ ಜಿಲ್ಲಾ ಪಂಚಾಯತ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮತದ ಮಹತ್ವ ಅರಿತಾಗ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ. ಬಿಜೆಪಿಯ ಆಡಳಿತದಲ್ಲಿ ಅಭಿವೃದ್ಧಿ ಆಗಿಲ್ಲ, ಬಿಜೆಪಿಗರು ಆಶ್ವಾಸನೆ ನೀಡಿದಂತೆ ಜನಧನ್ ಖಾತೆಗೆ 15 ಲಕ್ಷ ರೂ. ಬಂದಿಲ್ಲ, ಬದಲಾಗಿ ಸೇವಾ ಶುಲ್ಕವನ್ನ ನಮ್ಮದೇ ಖಾತೆಯಿಂದ ಕಡಿತಗೊಳಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಬಿಜೆಪಿಯ ಸಂಸದರುಗಳು ಸಂಸತ್‌ನಲ್ಲಿ ಮೌನಿ ಬಾಬಾಗಳಾಗಿದ್ದರು. ಕಾಂಗ್ರೆಸ್ ಯಾವತ್ತೂ ಜಾತಿ- ಧರ್ಮವನ್ನ ನೋಡಿಲ್ಲ. ಆದರೆ ಅದೇ ಜಾತಿ- ಧರ್ಮದ ಹೆಸರಲ್ಲಿ ಕೆಲವು ದೇಶವನ್ನ ಇಬ್ಭಗೆ ಮಾಡ ಹೊರಟಿದ್ದಾರೆ. ಸಂವಿಧಾನ ಬದಲಿಸಲು ಹೊರಟವರು, ಗಾಂಧೀಯನ್ನ ಕೊಂದ ಗೋಡ್ಸೆಯನ್ನ ದೇಶಭಕ್ತ ಎನ್ನುವವರನ್ನು ಈ ಬಾರಿ ಮನೆಗೆ ಕಳುಹಿಸಬೇಕಿದೆ. ಸುಳ್ಳನ್ನ ಕರಗತ ಮಾಡಿಕೊಂಡಿರುವ ಬಿಜೆಪಿಗರು, ಕಪ್ಪು ಹಣ ತರುತ್ತೇವೆಂದು ಚುನಾವಣಾ ಬಾಂಡ್ ಮೂಲಕ ಅಧಿಕೃತವಾಗಿ ಭ್ರಷ್ಟಾಚಾರ ಮಾಡುವುದನ್ನ ಹೇಳಿಕೊಟ್ಟಿದ್ದಾರೆ. ಬಿಜೆಪಿ ವಾಷಿಂಗ್ ಮಶೀನ್ ಆಗಿಬಿಟ್ಟಿದೆ. ಭ್ರಷ್ಟಾಚಾರಿಗಳೆಲ್ಲ ಅವರ ಪಕ್ಷಕ್ಕೆ ಸೇರಿ ಶುದ್ಧರಾಗುತ್ತಿದ್ದಾರೆ. ಡಬಲ್ ಸ್ಟ್ಯಾಂಡರ್ಡ್‌ನ ಬಿಜೆಪಿಗರ ಬಗ್ಗೆ ಜನ ಎಚ್ಚರವಿರಬೇಕು ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯ ಜನ ಮುಗ್ದರು, ಹೇಗೆ ಬೇಕಾದರೂ ವಂಚಿಸಬಹು ದೆಂದು ಬಿಜೆಪಿಗರು ಅಂದುಕೊಂಡಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಯನ್ನ ಜಿಲ್ಲೆಯ ಜನರ ಧ್ವನಿಯಾಗಿ ಗೆಲ್ಲಿಸಬೇಕಿದೆ ಎಂದರು.
ಸ್ಥಳೀಯ ಮಹಿಳೆಯರು ಉಡಿ ತುಂಬುವ ಮೂಲಕ ಡಾ.ಅಂಜಲಿ ಅವರಿಗೆ ಆಶೀರ್ವದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ವೆಂಕಟೇಶ ಹೆಗಡೆ ಹೊಸಬಾಳೆ, ಗಣೇಶ್ ನಾಯ್ಕ ಮುಂತಾದವರಿದ್ದರು.