ಭಟ್ಕಳದಲ್ಲಿ ಗುಡುಗು ಮಿಂಚಿನ ಮಳೆಗೆ ಧರಶಾಹಿಯಾದ ಮರ; ರಸ್ತೆ ಸಂಚಾರ ಅಸ್ತವ್ಯಸ್ಥ
ಭಟ್ಕಳ: ರವಿವಾರ ಬೆಳಗ್ಗೆಯಿಂದ ಬಿರುಗಾಳಿಯೊಂದಿಗೆ ಮಳೆ ಆರಂಭಗೊಂಡಿದ್ದು ಕೆಲವು ಕಡೆಗಳಲ್ಲಿ ಬೃಹತ್ ಮರಗಳು ಧರೆಗೆ ಉರುಳಿ ಬಿದ್ದಿವೆ ಎಂದು ವರದಿಯಾಗಿದೆ.
ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲ್ಲಮಾ ಇಕ್ಬಾಲ್ ಪ್ರಾಥಮಿಕ ಶಾಲೆ ಬಳಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಬೃಹತ್ ಮರವು ರಸ್ತೆಗೆ ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಪ.ಪಂ. ಸದಸ್ಯರಾದ ತೌಫೀಖ್ ಬ್ಯಾರಿ, ವಸೀಮ್ ಮನೆಗಾರ್, ಮಕ್ಬೂಲ್ ಶೇಕ್ ಮತ್ತು ಇರ್ಫಾನ್ ಎಂಬುವವರು ಸ್ಥಳಕ್ಕೆ ತಲುಪಿ ಮರವನ್ನು ತೆರವುಗೊಳಿಸಿದರು.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದಿಂದಾಗಿ ಕರಾವಳಿ ಕರ್ನಾಟಕದ ಮೇಲೆ ಗಂಟೆಗೆ 40 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹೆಚ್ಚಿನ ಅಲೆಗಳು ಮತ್ತು ಬಿರುಗಾಳಿ ಬೀಸುವ ಸಾಧ್ಯತೆಗಳೂ ಇವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಿರುವವರು ಕೂಡಲೇ ದೋಣಿಗಳನ್ನು ಬಿಟ್ಟು ಬೋಟು ಸಮೇತ ದಡಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಮೇ 22 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಕೆಲವೆಡೆ ಮಿಂಚು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.