ಭಟ್ಕಳ: ಯುವಕನಿಗೆ ಖಾಸಗಿ ಬಸ್ಸಿನಲ್ಲಿ ಸಹ ಪ್ರಯಾಣಿಕರು, ಚಾಲಕನಿಂದ ಥಳಿತ; ಗಾಯಾಳು ಆಸ್ಪತ್ರೆಗೆ ದಾಖಲು
ಭಟ್ಕಳ: ಹೈದರಾಬಾದಿನಿಂದ ಮಂಗಳೂರಿಗೆ ಬರುತ್ತಿರುವ ಖಾಸಗಿ ಬಸ್ಸಿನಲ್ಲಿ ಗಂಗಾವತಿ ಬಳಿ ಭಟ್ಕಳದ ಯುವಕನ ಮೇಲೆ ಸೋಮವಾರ ರಾತ್ರಿ ಗುಂಪು ಹಲ್ಲೆ ನಡೆದಿದೆ ಎನ್ನಲಾಗಿದ್ದು, ಹಲ್ಲೆಗೊಳಗಾದ ಯುವಕ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧಿಸಿದಂತೆ ಆಕ್ರೋಶಿತ ಭಟ್ಕಳದ ನೂರಾರು ಯುವಕರು ಮಂಗಳೂರಿನಿಂದ ಹೈದರಾಬಾದ್ ಗೆ ಹೋಗುತ್ತಿದ್ದ ಅದೇ ಬಸ್ಸನ್ನು ಭಟ್ಕಳದಲ್ಲಿ ತಡೆಯಲು ಪ್ರಯತ್ನಿಸಿದಾಗ ಪೊಲೀಸರು ಆಕ್ರೋಶಿತರನ್ನು ಚದುರಿಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಯುವಕನನ್ನು ಭಟ್ಕಳ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಹನಿಫಾಬಾದ್ ನಿವಾಸಿ ಮಜೀಬುರ್ರಹ್ಮಾನ್ ಎಂದು ಗುರುತಿಸಲಾಗಿದೆ.
ಯುವಕನ ಮೇಲೆ ಹಲ್ಲೆಯಾದರೂ ಪೊಲೀಸರು ಪ್ರಕರಣವನ್ನು ದಾಖಲಿಸುತ್ತಿಲ್ಲ ಎಂದು ಹಲ್ಲೆಗೊಳಗಾದ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೆ ಬಸ್ಸಿನ ಚಾಲಕ ಮತ್ತು ನಿರ್ವಾಹಕನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಸ್ ನ್ನು ವಶಕ್ಕೆ ಪಡೆದು, ಚಾಲಕ ಮತ್ತು ನಿರ್ವಾಹಕನನ್ನು ವಿಚಾರಣೆಗೊಳಪಡಿಸಬೇಕು, ಅಲ್ಲದೆ ಬಸ್ಸಿನಲ್ಲಿರುವ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಭಟ್ಕಳ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಈ ಘಟನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಮತ್ತು ನಮ್ಮಲ್ಲಿ ಯಾವುದೇ ದೂರು ಬಂದಿಲ್ಲ. ಭಟ್ಕಳದಲ್ಲಿ ಬಸ್ ತಡೆಯುವ ಪ್ರಯತ್ನ ನಡೆದಿತ್ತು. ಅದನ್ನು ಪೊಲೀಸರು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.