ಭಾರೀ ಮಳೆಯಿಂದ ಭಟ್ಕಳದಲ್ಲಿ ಜಲಾವೃತ: ಶಾಲಾ ಕಾಲೇಜುಗಳಿಗೆ ರಜೆ
ಭಟ್ಕಳ: ರವಿವಾರ ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಭಟ್ಕಳ ತಾಲೂಕಿನಾದ್ಯಂತ ಹಾನಿಯನ್ನುಂಟು ಮಾಡಿದೆ, ಪ್ರಮುಖ ರಾಷ್ಟ್ರೀಯ ಹೆದ್ದಾರಿ 66 ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೀವ್ರ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಮತ್ತು ಪ್ರಯಾಣಿಕರಿಗೆ ಗಂಭೀರ ಸವಾಲಾಗಿದೆ.
ಇನ್ನೆರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಭಟ್ಕಳ, ಹೊನ್ನಾವರ, ಕುಮಟಾ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ಒಳಚರಂಡಿ ಸಮಸ್ಯೆಗಳ ಜತೆಗೆ ಜಾಲಿ ಪಟ್ಟಣ ಪಂಚಾಯತಿ ಹಾಗೂ ಹೆಬ್ಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಳಚರಂಡಿ (ಯುಜಿಡಿ) ಯೋಜನೆಯಡಿ ಅಪೂರ್ಣಗೊಂಡಿರುವ ಒಳಚರಂಡಿ ಕಾಮಗಾರಿಯು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಅಪೂರ್ಣ ಯೋಜನೆಯಿಂದಾಗಿ ಶಾಲಾ ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಳ್ಳೂತ್ತಿದ್ದು, ವಿದ್ಯಾರ್ಥಿಗಳ ದೈನಂದಿನ ಪ್ರಯಾಣಕ್ಕೆ ಅಡಚಣೆಯಾಗಿದೆ.
ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಚರಂಡಿ ಸಮಸ್ಯೆ ಬಗೆಹರಿಸಿ ಯುಜಿಡಿ ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಭವಿಷ್ಯದಲ್ಲಿ ಇಂತಹ ಅಡೆತಡೆಗಳನ್ನು ತಡೆಗಟ್ಟಲು, ನಿವಾಸಿಗಳ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ತಾಲ್ಲೂಕು ಆಡಳಿತವು ಈ ಮೂಲಸೌಕರ್ಯ ಸಮಸ್ಯೆಗಳಿಗೆ ಆದ್ಯತೆ ನೀಡಬೇಕಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಳೆ ಮುಂದುವರಿದಿದ್ದು, ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.