ಭಟ್ಕಳ: ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಶಸ್ತಿ ಪತ್ರ ವಿತರಣೆ
ಭಟ್ಕಳ, ಜು.16: ಅಜ್ಞಾನ ಅಂಧಕಾರಗಳಿಂದ ಕೂಡಿದ್ದ ಒಂದು ಸಮಾಜವನ್ನು ತಮ್ಮ ಉತ್ತಮ ಶಿಕ್ಷಣ ಮತ್ತು ತರಬೇತಿಯಿಂದಾಗಿ ಪ್ರವಾದಿ ಮುಹಮ್ಮದ್ (ಸ)ರು ಜಗತ್ತಿಗೆ ಒಂದು ಮಾದರಿ ಸಮಾಜವನ್ನಾಗಿ ರೂಪಿಸಿ ತೋರಿಸಿದ್ದಾರೆ ಎಂದು ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮುಖಂಡ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೋಮಾನಿ ಹೇಳಿದ್ದಾರೆ.
ಮಂಗಳವಾರ ಭಟ್ಕಳದ ರಾಬಿತಾ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪಾಠಗಳನ್ನು ಮಾಡಲಾಗುತ್ತಿದ್ದು, ಕಲಿಸಲಾಗುತ್ತಿಲ್ಲ. ಓದುವುದರಲ್ಲಿ ಮತ್ತು ಕಲಿಯುವುದರಲ್ಲಿ ಬಹಳ ವ್ಯತ್ಯಾಸ ಇದೆ. ನಮ್ಮ ಪೂರ್ವಜರು ಓದು ಬರಹದಿಂದ ದೂರವಿದ್ದರು. ಆದರೆ, ಅವರು ಯಾವುದೇ ವಿದ್ವಾಂಸರಿಗಿಂತ ಕಡಿಮೆ ಇರಲಿಲ್ಲ. ಇಂದು ಓದು ಎಂಬುದರ ಅರ್ಥ ಬದಲಾಗಿದೆ. ಪ್ರಸಕ್ತ ಓದು ಬರೆಹ ಬಲ್ಲವರು ಹಾಗೂ ಶಿಕ್ಷಣ ಪಡೆದವರ ಸಂಖ್ಯೆ ಮಾನವ ಇತಿಹಾಸದಲ್ಲೇ ಇಷ್ಟೊಂದು ಹೆಚ್ಚು ಇರಲಿಲ್ಲ. ಆದರೆ, ಈಗಿರುವಷ್ಟು ಓದು ಬರಹ ಬಲ್ಲ ಶಿಕ್ಷಿತ ಅಜ್ಞಾನಿಗಳೂ ಮಾನವ ಇತಿಹಾಸದಲ್ಲಿ ಎಂದೂ ಕಾಣಲಿಲ್ಲ ಎಂದು ಸಜ್ಜಾದ್ ನೋಮಾನಿ ಹೇಳಿದರು.
ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ ಮಾತನಾಡಿದರು. ರಾಬಿತಾ ಸೊಸೈಟಿಯ ಅಧ್ಯಕ್ಷ ಉಮರ್ ಫಾರೂಕ್ ಮುಸ್ಬಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಅತೀಕುರ್ರಹ್ಮಾನ್ ಮುನೀರಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಯುನುಸ್ ಕಾಝಿಯಾ, ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಹುಸೇನ್ ಜುಕಾಕೋ, ಜಾಮಿಯ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೌಲಾನ ತಲ್ಹಾ ನದ್ವಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ., ಭಟ್ಕಳ ಮುಸ್ಲಿಮ್ ಜಮಾಅತ್ ದುಬೈ ಇದರ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಮ್ ಉಪಸ್ಥಿತರಿದ್ದರು.
ಮಹಿಳಾ ವೇದಿಕೆಯಲ್ಲಿ ನ್ಯೂ ಶಮ್ಸ್ ಸ್ಕೂಲ್ನ ಫಹಮಿದಾ ಖಿಜರ್ ಹಾಗೂ ರೋಷನ್ ಮಾಲಿಕಿ ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನಿಸಿದರು. ತನ್ವಿರ್ ಜುಷದಿ ನದ್ವಿ, ಅಥರ್ ಪಿರ್ಝಾದೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 35 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ ಮುಂದೂಡಿಕೆ
ಮಂಗಳವಾರ ಸಂಜೆ ನಡೆಯಬೇಕಾಗಿದ್ದ ರಾಬಿತಾ ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪ ಸಮಾರಂಭವನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದ್ದು, ಜು.17ರಂದು ಸಂಜೆ 4:30ಕ್ಕೆ ನಡೆಯಲಿದೆ.
ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಮುಖಂಡ ಮೌಲಾನ ಸಜ್ಜಾದ್ ನೋಮಾನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬೆಸ್ ಸ್ಕೂಲ್, ಬೆಸ್ಟ್ ಟೀಚರ್ ಅವಾರ್ಡ್ ನೀಡಲಾಗುವುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.