ಭಟ್ಕಳ: ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಪತ್ರಿಕಾ ದಿನಾಚರಣೆ
ಭಟ್ಕಳ: ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಸುಧೀಂದ್ರ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಲಾದ ಪತ್ರಿಕಾ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ತಾಪಂ ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿ ಡಿ ಮೊಗೇರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪತ್ರಕರ್ತರಿಗೆ ತನ್ನದೇ ಆದ ಜವಾಬ್ದಾರಿಗಳಿವೆ. ನ್ಯಾಯ, ಸತ್ಯದ ಹಾದಿಯಲ್ಲಿ ಸಮಾಜ ವನ್ನು ಕರೆದೊಯ್ಯುವ ಕಾರ್ಯ ಪತ್ರಕರ್ತರದ್ದಾಗಿದೆ. ಪತ್ರಕರ್ತರು ತಪ್ಪು ಸರಿಪಡಿಸುವುದರ ಜತೆಗೆ ಸಮಾಜದ ಅಭಿವೃದ್ಧಿ, ಏಳ್ಗೆಯ ಬಗ್ಗೆಯೂ ಗಮನಹರಿಸುವ ಕೆಲಸ ಮಾಡಬೇಕೆಂದರು.
ಮುಖ್ಯ ಅತಿಥಿಯಾಗಿದ್ದ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಪತ್ರಕರ್ತರ ಪೆನ್ನಿಗೆ ಬಹಳಷ್ಟು ಶಕ್ತಿ ಇದೆ. ಪ್ರಚಲಿತ ಸುದ್ದಿಗಳನ್ನು ಸಮಾಜಕ್ಕೆ ಮುಟ್ಟಿಸುವುದರ ಮೂಲಕ ಪತ್ರಕರ್ತರು ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾರೆಂದರು.
ವಿಶೇಷ ಆಹ್ವಾನಿತರಾದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಹಾಗೂ ಉದ್ಯಮಿ ನಾಗೇಶ ಭಟ್ ಮಾತನಾಡಿ, ಬಹಳಷ್ಟು ಚಿಂತನೆ ನಡೆಸಿ ಗುರುಸುಧೀಂದ್ರ ಕಾಲೇಜಿನಲ್ಲಿ ಪತ್ರಿಕೋದ್ಯಮ ತರಗತಿ ಆರಂಭಿಸಲಾಗಿದೆ. ಇಂತಹ ಕಾರ್ಯಕ್ರಮದಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಸಿಕ್ಕಿದಂತಾಗಿದೆ. ಭಟ್ಕಳದ ಪತ್ರಕರ್ತರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದರು. ಉಪನ್ಯಾಸ ನೀಡಿದ ಸಂಘದ ಹಿರಿಯ ಸದಸ್ಯ ಸತೀಶಕುಮಾರ ನಾಯ್ಕ ಮಾತನಾಡಿ, ಪತ್ರಿಕಾ ಧರ್ಮದ ಜೊತೆಗೆ ಮಾನವೀಯತೆಯನ್ನು ಗಮನಿಸಿ ವರದಿಗಾರಿಕೆ ಮಾಡಬೇಕು. ಸಮಾಜದ ಏಳಿಗೆಗೂ ಪತ್ರಕರ್ತರು ಕಾಳಜಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಮುಖ್ಯ ಅತಿಥಿಯಾಗಿದ್ದ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಖಚಾಂಚಿ ಮೋಹನ ನಾಯ್ಕ, ಸದಸ್ಯ ಈಶ್ವರ ನಾಯ್ಕ, ಪತ್ರಿಕೋದ್ಯಮದ ವಿದ್ಯಾರ್ಥಿನಿ ಲಿಡಿಯಾ ನಿರೂಪಿಸಿದರು. ಉಪಾಧ್ಯಕ್ಷ ಎಂ ಆರ್ ಮಾನ್ವಿ ವಂದಿಸಿದರು.
ಇದೇ ಸಂದರ್ಭ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ವಿತರಕ ಮುಂಡಳ್ಳಿಯ ಗಣೇಶ ಮಂಜಯ್ಯ ನಾಯ್ಕ ಹಾಗೂ ರಾಜ್ಯ ಮಟ್ಟದ ವಿಶೇಷ ಪತ್ರಕರ್ತ ಪ್ರಶಸ್ತಿ ಪಡೆದ ರಾಧಾಕೃಷ್ಣ ಭಟ್ಟ ಅವರನ್ನು ಗೌರವಿಸಿ ಸನ್ಮಾನಿ ಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಭಾಗದ ಗಣ್ಯರು, ಶ್ರೀ ಗುರು ಸುಧೀಂದ್ರ ಕಾಲೇಜು ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.