ಶಿರೂರಿನಲ್ಲಿ ಗುಡ್ಡ ಕುಸಿತ| ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ತೀರ್ಮಾನ: ಸಚಿವ ಮಂಕಾಳ್ ವೈದ್ಯ
ಕಾರವಾರ: ಶಿರೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಂಗಾವಳಿ ನದಿಯ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ನದಿ ನೀರಿನಲ್ಲಿ ಮುಳುಗಡೆಯಾಗಿದೆ ಎನ್ನಲಾದ ಕೇರಳ ಮೂಲದ ಅರ್ಜುನ್ ಹಾಗೂ ಲಾರಿ, ಸ್ಥಳೀಯರ ಇಬ್ಬರ ಪತ್ತೆ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಹೇಳಿದ್ದಾರೆ.
ಶಿರೂರು ಬಳಿ ಸುದ್ದಿಗೋಷ್ಠಿ ನಡೆಸಿದ ಅವರು ಶಿರೂರು ಗುಡ್ಡ ಕುಸಿತ ದುರಂತ ಇಂದಿಗೆ 13 ದಿನವಾಗಿದೆ. ನದಿಯ ನೀರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಸದ್ಯಕ್ಕೆ ಏನು ಮಾಡಲಾಗದ ಪರಿಸ್ಥಿತಿ ಇರುವುದರಿಂದ ಸ್ಥಗಿತಗೊಳಿಸಲು ಉತ್ತರಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಕಾರ್ಯಾಚರಣೆಯನ್ನು ಉಳಿದ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿ ಸುವುದಾಗಿ ಹೇಳಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಕಾರ್ಯಾಚರಣೆ ನಿಲ್ಲಿಸುತ್ತಿಲ್ಲ. ಆದರೆ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾಗಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ಕಾರ್ಯಾಚರಣೆ ನಡೆಸುತ್ತಿದ್ದರು. ಮಳೆ ಕಡಿಮೆಯಾದ ಮೇಲೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಘಟನೆಯಲ್ಲಿ ನಾಪತ್ತೆಯಾದವರ ಕುಟುಂಬಕ್ಕೆ ಸರಕಾರ ಪರಿಹಾರ ನೀಡುವ ಕಾರ್ಯ ಆಗಲಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಭಟ್ಕಳದಿಂದ ಕಾರವಾರದ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಂದರೆ ಇದೆ ಎಂದು ಆರಂಭದಿಂದಲೂ ಹೇಳುತ್ತಿದ್ದೆ. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕೇಂದ್ರ ಸಚಿವರು ಸ್ಥಳಕ್ಕೆ ಬರಬೇಕಿತ್ತು. ಆದರೆ ಈವರೆಗೆ ಮಾತನಾಡಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಗುಡ್ಡ ಕುಸಿಯುವ ಆತಂಕವಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ.ಕೆ ಅವರು ಮಾತನಾಡಿ ಗಂಗಾವಳಿಯ ಮೂರು ಸ್ಥಳಗಳಲ್ಲಿ ಡೈವಿಂಗ್ ಮಾಡಿದ್ದ ಈಶ್ವರ ಮಲ್ಪೆ ತಂಡ ನದಿಯಲ್ಲಿ ಬೃಹದಾಕಾರದ ಬಂಡೆಗಳು, ಮರದ ತುಂಡುಗಳು ಹಾಗೂ ಹೈಟೆನ್ಶನ್ ವಿದ್ಯುತ್ ತಂತಿಗಳು ಇರುವುದನ್ನು ತಿಳಿಸಿದ್ದರು. ನದಿಯ ಹರಿವು ಸಹ ಹೆಚ್ಚಿದ್ದು ನೀರಿನೊಳಗೆ ಏನೂ ಕಾಣಿಸದ ಪರಿಸ್ಥಿತಿ ಇರುವುದರಿಂದಾಗಿ ಕಾರ್ಯಾಚರಣೆ ಅಡ್ಡಿಯಾಗುತ್ತಿದೆ ಎಂದಿದ್ದರು. ಎನ್ಡಿಆರ್‌ಎಫ್ ನೊಂದಿಗೆ ಈಶ್ವರ್ ಮಲ್ಪೆ ಡೈವ್ ಮಾಡಿದ್ದು, ಈ ವೇಳೆ 300 ಮೀಟರ್ ಆಳದವರೆಗೆ ಇಳಿದರೂ ಸಹ ಕೇವಲ ಮರ, ಕಲ್ಲುಗಳೇ ಕಂಡುಬಂದಿದ್ದು ಲಾರಿಯ ಸುಳಿವು ಸಿಗದೇ ಡೈವಿಂಗ್ ತಂಡ ವಾಪಸ್ಸಾಗಿದ್ದು ಈಶ್ವರ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಡೈವಿಂಗ್ ಕಾರ್ಯಾಚರಣೆ ವಿಫಲವಾಗಿದ್ದ ರಿಂದಾಗಿ ಸದ್ಯಕ್ಕೆ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದರು. ಈ ಸಂದರ್ಭ ನೌಕಾನೆಲೆ, ಆರ್ಮಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.
"ಈಗಾಗಲೇ ಎಂಟು ಜನರ ಶವ ನದಿಯಲ್ಲಿ ಪತ್ತೆಯಾಗಿದೆ. ಇನ್ನೆಷ್ಟು ಶವ ಇದೆ ಎಂದು ಗೊತ್ತಿಲ್ಲ. ಮೂವರು ನಾಪತ್ತೆಯಾಗಿರುವ ಬಗ್ಗೆ ದೂರು ಇದೆ. ಈ ಮೂವರ ಕುಟುಂಬಕ್ಕೂ ಪರಿಹಾರ ನೀಡಲಾಗುವುದು. ನಿಯಮದ ಪ್ರಕಾರ 7 ವರ್ಷಗಳ ಕಾಲ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೂ ಮಾನವೀಯತೆ ದೃಷ್ಟಿಯಡಿ ಅವರ ಕುಟುಂಬದವರ ಜೊತೆಗೆ ಅಗ್ರಿಮೆಂಟ್ ಮಾಡಿಕೊಂಡು ಪರಿಹಾರ ನೀಡಲಾಗುವುದು.
ದುರಂತ ಆದ ಬಳಿಕ ಸ್ಥಳಕ್ಕೆ ಕೇಂದ್ರ ಸಚಿವರು ಆಗಮಿಸಿಲ್ಲ. ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು ಸೇರಿದಂತೆ ಸಾಕಷ್ಟು ಜನರು ಆಗಮಿಸಿದ್ದಾರೆ. ಸ್ಥಳೀಯ ಶಾಸಕರು ಇಲ್ಲೆ ಇದ್ದರು. ಕೇಂದ್ರ ಸಚಿವರು ಜವಾಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸಬೇಕಿತ್ತು. ಜಿಲ್ಲೆಯ ಕರಾವಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಿವಿಧ ಸಮಸ್ಯೆಗಳನ್ನು ಐಆರ್.ಬಿ ಕಂಪೆನಿ ಗಂಭೀರವಾಗಿ ತೆಗೆದುಕೊಂಡಿಲ್ಲ".
- ಮಂಕಾಳ್ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ