ಭಟ್ಕಳ: ಸಾಮಾಜಿಕ ಮಾಧ್ಯಮ ಬಳಕೆದಾರರ ಜವಾಬ್ದಾರಿ ಮತ್ತು ಸೈಬರ್ ಸುರಕ್ಷತೆ ಕುರಿತು ಕಾರ್ಯಗಾರ
ಭಟ್ಕಳ: ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಸಾಮಾಜಿಕ ಮಾಧ್ಯಮ ಅಡ್ಮಿನ್ ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಸೈಬರ್ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲು ಶನಿವಾರದಂದು ನವಾಯತ್ ಕಾಲನಿಯ ರಾಬಿತಾ ಸೂಸೈಟಿ ಸಭಾಂಗಣದಲ್ಲಿ ಕಾರ್ಯಗಾರ ಆಯೋಜಿಸಿತ್ತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಖ್ಯಾತ ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರ ಬಿ.ಟಿ. ವೆಂಕಟೇಶ್ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿಯ ಸೈಬರ್ ಸೆಕ್ಯುರಿಟಿ ತರಬೇತುದಾರ ಹಾಗೂ ಮಂಗಳೂರು ಸಹ್ಯಾದ್ರಿ ಕಾಲೇಜೀನ್ ಪ್ರಾಧ್ಯಾಪಕ ಡಾ.ಅನಂತ್ ಪ್ರಭು ಭಾಗವಹಿಸಿದ್ದರು.
ಇಂದು ಯಾರೂ ಕೂಡ ಸುರಕ್ಷಿತವಾಗಿಲ್ಲ. ನಮ್ಮ ಎಲ್ಲ ದತ್ತಾಂಶಗಳು ಸೋರಿಕೆಯಾಗುತ್ತಿವೆ. ನಮ್ಮ ಸ್ಮಾರ್ಟ್ ಫೋನ್ ನಮ್ಮ ಚಲನವಲನಗಳನ್ನು ಗಮನಿಸುತ್ತಿದೆ. ನಮ್ಮ ಬ್ಯಾಂಕ್ ಖಾತೆಗಳಿಗೆ ಯಾರುಬೇಕಾದರೂ ಕನ್ನ ಹಾಕಬಹುದು. ಕ್ಷಣಾರ್ಧದಲ್ಲೇ ನಮ್ಮ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ದೋಚಬಹುದು. ಇದು ಪ್ರತಿನಿತ್ಯವೋ ನಡೆಯುತ್ತಲೇ ಇದೇ. ಇವುಗಳಿಂದ ಸುರಕ್ಷಿವಾಗಿರಲು ಹಲವು ಉಪಕ್ರಮಗಳಿವೆ ಅದನ್ನು ಅನುಸರಿಸಿದರೆ ಅಗಬಹುದಾದ ಅನಾಹುತ ಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅನಂತ್ ಪ್ರಭು ಹೇಳಿದರು.
ನ್ಯಾಯವಾದಿ ಬಿ.ಟಿ ವೆಂಕಟೇಶ್ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಲಾಭ ಮತ್ತು ನಷ್ಟಗಳು ಸಮವಾಗಿದ್ದು ಅದರ ಬಳಕೆಯ ಮೇಲೆ ಲಾಭನಷ್ಟದ ಲೆಕ್ಕ ಹಾಕಬಹುದು. ಸಾಮಾಜಿಕ ಮಾಧ್ಯಮಗಳಿಂದ ದೂರ ಇರಲು ಯಾರಿಂದಲೂ ಸಾಧ್ಯವಿಲ್ಲ. ಅದೀಗ ನಮ್ಮ ಬುದುಕಿನ ಅತಿ ಮುಖ್ಯ ವೇದಿಕೆಯಾಗಿ ಮಾರ್ಪಟ್ಟಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಇತ್ತಿಚೆಗೆ ನಮ್ಮ ಸುತ್ತಮುತ್ತಲು ಅನೇಕಾರು ಮಂದಿ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ತಂಝೀಮ್ ಸಂಸ್ಥೆ ಇಂತಹ ಕಾರ್ಯಾಗಾರವನ್ನು ಆಯೋಜಿಸುತ್ತಿದೆ ಎಂದರು.
ತಂಝೀಮ್ ಮೀಡಿಯಾ ವಾಚ್ ಕಮಿಟಿ ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಅತಿಥಿಗಳನ್ನು ಪರಿಚಯಿಸಿದರು. ಮಿಸ್ಬಾ-ಉಲ್ -ಹಖ್ ದನ್ಯವಾದ ಅರ್ಪಿಸಿದರು.
ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಯುನೂಸ್ ಖಾಝಿಯಾ, ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತಿಕುರ‍್ರಹ್ಮಾನ್ ಮುನಿರಿ, ಕಾರ್ಯಗಾರದ ಸಂಚಾಲಕ ಮುಬಶ್ಶಿರ್ ಹುಸೇನ್ ಹಲ್ಲಾರೆ, ತಂಝೀಮ್ ರಾಜಕೀಯ ಸಮಿತಿ ಸಂಚಾಲಕ ಸೈಯ್ಯದ್ ಇಮ್ರಾನ್ ಲಂಕಾ ಮತ್ತಿತರರು ಉಪಸ್ಥಿತರಿದ್ದರು.