ಭಟ್ಕಳ: “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ‍್ಯವಂತ” ಸೀರತ್ ಅಭಿಯಾನಕ್ಕೆ ಚಾಲನೆ
ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕವು ಸೆ.13 ರಿಂದ 22 ವರೆಗೆ “ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ‍್ಯವಂತ” ಎಂಬ ವಿಷಯದಲ್ಲಿ ಆಭಿಯಾನ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಶುಕ್ರವಾರ ಭಟ್ಕಳದ ವಿವಿಧ ಮಸೀದಿಗಳಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಜಗತ್ತಿನ ಹಾಗು ರಾಜ್ಯದ ವಿವಿಧ ಚಿಂತಕರ ಬರಹಗಳ “ಪ್ರವಾದಿ ಮುಹಮ್ಮದ್(ಸ)” ಎಂಬ ಲೇಖನ ಸಂಕಲನ ಬಿಡುಗಡೆಗೊಳಿಸುವುದರ ಅಭಿಯಾನಕ್ಕೆ ಚಾಲನೆ ನೀಡಿತು.
ಭಟ್ಕಳದ ಐತಿಹಾಸಿಕ ಜಾಮಿಯ ಮಸೀದಿ ಚಿನ್ನದ ಪಳ್ಳಿಯಲ್ಲಿ ಮೌಲಾನ ಅಬ್ದುಲ್ ಅಲೀಮ್ ಖತೀಬ್ ನದ್ವಿ, ಹುರುಳಿ ಸಾಲ್ ನ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಮೌಲಾನ್ ಮುಹಮ್ಮದ್ ಜಾಫರ್ ನದ್ವಿ, ತೆಂಗಿನ ಗುಂಡಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಸ್ಹಾಖ್ ಡಾಂಗಿ ನದ್ವಿ ಲೇಖನ ಸಂಕಲನ ಬಿಡುಗಡೆಗೊಳಿಸಿದರು.
10 ದಿನ ನಡೆಯುವ ಈ ಅಭಿಯಾನದಲ್ಲಿ ರಾಜ್ಯದ್ಯಂತ ಪ್ರವಾದಿ ಮುಹಮ್ಮದ್ ಪೈಗಂಬರರ ಬದುಕು ಮತ್ತು ಚಿಂತನೆ ಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದ್ದು ಉನ್ನತ ಚಾರಿತ್ಯ್ರವಂತ ಸಮಾಜ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್(ಸ) ರ ಸಂದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಮಾಹಿತಿ ನೀಡಿದರು.
ಈ ಸಂದರ್ಭ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಚ ಮೌಲಾನ ಅಬ್ದುಲ್ ಅಲೀಮ್ ಕಾಸ್ಮಿ, ಮೌಲಾನ ಶುಯೇಬ್ ನದ್ವಿ, ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಸೈಯ್ಯದ್ ಹಸನ್ ಬರ್ಮಾವರ್, ಅಬ್ದುಲ್ ಕಾದಿರ್ ಡಾಂಗಿ, ಖಾಜಿ ನಝೀರ್ ಆಹಮದ್, ಅಂಜುಮನ್ ಶಿಕ್ಷಣ ಸಂಸ್ಥೆಯ ಇಂಜಿನೀಯರ್ ತನ್ವೀರ್ ಆಹ್ಮದ್, ಅಲ್ತಾಫ್ ಗೋಹರ್, ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ ಮತ್ತಿತರರು ಉಪಸ್ಥಿತರಿದ್ದರು.