ಪ್ರವಾದಿ ಮುಹಮ್ಮದ್ ರನ್ನು ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವುದು ಬೇಡ: ಪ್ರೋ.ಆರ್.ಎಸ್.ನಾಯಕ
ಭಟ್ಕಳ: ಪ್ರವಾದಿ ಮುಹಮ್ಮದ್ ಅವರು ಎಲ್ಲ ಸಮುದಾಯಕ್ಕಾಗಿ ಬಂದ ಪ್ರವಾದಿಯಾಗಿದ್ದು ಅವರನ್ನೂ ಕೇವಲ ಮುಸ್ಲಿಮ್ ಸಮುದಾಯಕ್ಕಾಗಿ ಮಾತ್ರ ಸೀಮಿತಗೊಳಿಸದಿರೋಣ ಎಂದು ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಲೇಖಕ ಫ್ರೋ. ಆರ್.ಎಸ್ ನಾಯಕ ಹೇಳಿದರು.
ಅವರು ಸೋಮವಾರ ದಂದು ಭಟ್ಕಳದ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ‍್ಯವಂತ” ಸೀರತ್ ಅಭಿಯಾನದಲ್ಲಿ ಪ್ರವಾದಿ ಮುಹಮ್ಮದ್ ರ ಕುರಿತ ಪ್ರಜಾವಾಣಿಯ ಸೀರತ್ ವಿಶೇಷ ಪುರವಾಣಿ ಹಾಗೂ ಲೇಖನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಏಸು ಕ್ರಿಸ್ತನನ್ನು ಕ್ರೈಸ್ತರಿಗೆ, ಬಸವಣ್ಣನನ್ನು ಲಿಂಗಾಯತರಿಗೆ ಸೀಮಿತಗೊಳಿಸಿದಂತೆ ಪ್ರವಾದಿ ಮುಹಮ್ಮದ್ ರನ್ನು ಮುಸ್ಲಿಮ್ ಸಮುದಾಯಕ್ಕೆ ಸೀಮಿತಗೊಳಿಸಿದರೆ ಅವರ ವಿಶಾಲ ವ್ಯಕ್ತಿತ್ವ ಕುಗ್ಗಿಸಿದಂತಾಗುತ್ತದೆ. ಪ್ರವಾದಿ ಮುಹಮ್ಮದ್ ವಿಚಾರಗಳು, ಎಲ್ಲ ಕಾಲಕ್ಕೆ, ಎಲ್ಲ ಸಮುದಾಯಗಳಿಗೆ ಬೇಕಾಗಿವೆ. ಅವರು ಮಹಿಳೆಯರ ಪರ, ನೊಂದವರ ಪರ ಬಡವರ ಪರ ದ್ವನಿ ಎತ್ತಿದ ಮಹಾನುಭಾವ. ಅವರ ಸಂದೇಶಗಳು ಇಡೀ ಮನುಕುಲದ ಒಳಿತಾಗಾಗಿವೆ ಅದನ್ನು ಅಳವಡಿಸಿಕೊಳ್ಳು ವುದರ ಮೂಲಕ ನಾವು ಮಾನವೀಯ ಮೌಲ್ಯಗಳು ಈ ಸಮಾಜದಲ್ಲಿ ಶಾಶ್ವತವಾಗಿ ನೆಲೆಸುವಂತೆ ನಾವು ನೋಡಿ ಕೊಳ್ಳಬೇಕು. ಇದು ಎಲ್ಲ ಪ್ರಗತಿಪರರ, ಶಾಂತಿಪ್ರೀಯ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಭಟ್ಕಳ ಪುರಸಭಾ ಉಪಾಧ್ಯಕ್ಷ ಮುಹಿದ್ದೀನ್ ಅಲ್ತಾಫ್ ಖರೂರಿ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ ಭಟ್ಕಳ ಶಾಖೆಯ ಪ್ರವಾದಿ ಸಂದೇಶಗಳನ್ನು ಸಮಾಜದ ಎಲ್ಲರಿಗಾಗಿ ತಲುಪುವಂತೆ ಮಾಡುತ್ತಿರುವುದು ಶ್ಲಾಘನೀಯ. ಇಂದು ಜಗತ್ತಿನ ಮುಸ್ಲಿಮರ ಅಧೋಗತಿ ಕಾರಣ ನಾವೇ. ಏಕೆಂದರೆ ನಾವು ಪ್ರವಾದಿಗಳ ಸಂದೇಶಗಳನ್ನು ಮರೆತಿದ್ದೇವೆ. ಅದನ್ನು ಜೀವನದಲ್ಲಿ ಪಾಲಿಸುತ್ತಿಲ್ಲ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಪ್ರವಾದಿ ಮುಹಮ್ಮದ್ ಪೈಗಂಬರರ ಜೀವನ ಸಂದೇಶಗಳನ್ನು ಎಲ್ಲರಿಗೂ ತಲುಪುವಂತಹ ಕೆಲಸ ನಾವು ಮಾಡುತ್ತಿಲ್ಲ. ಇದರಿಂದಾಗಿ ಸಮಾಜದಲ್ಲಿ ಮುಸ್ಲಿಮರ ಬಗ್ಗೆ ತಪ್ಪುಕಲ್ಪನೆಗಳು ಮನೆಮಾಡಿಕೊಂಡಿವೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮುಖಂಡರಾದ ಸೈಯ್ಯದ್ ಶಕೀಲ್ ಎಸ್.ಎಂ., ಖಾಝಿ ನಝೀರ್ ಆಹಮದ್, ಸಲಾಹುದ್ದೀನ್ ಎಸ್.ಕೆ, ಮುಜಾಹಿದ್ ಮುಸ್ತಫಾ, ಮೌಲಾನ ಯಾಸೀರ್ ಬರ್ಮಾವರ್ ನದ್ವಿ, ಯೂನೂಸ್ ರುಕ್ನುದ್ದೀನ್, ಮೌಲಾನ ಝೀಯಾವುರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಲಿಯಾಖತ್ ಅಲಿ, ಖಮರುದ್ದೀನ್ ಮಷಾಯಿಖ್, ಮೌಲಾನ ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ ಮತ್ತಿತರರು ಇದ್ದರು.