ಭಟ್ಕಳದಲ್ಲಿ ಭಾರೀ ಮಳೆ: ಮನೆಗಳಿಗೆ ನುಗ್ಗಿದ ನೀರು, ಹೊಳೆಯಂತಾದ ಹೆದ್ದಾರಿ
ಭಟ್ಕಳ: ಸೋಮವಾರ ರಾತ್ರಿ ಆರಂಭವಾದ ಭಾರೀ ಮಳೆಯಿಂದ ಭಟ್ಕಳದಲ್ಲಿ ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಮಂಗಳವಾರ ದಿನಪೂರ್ತಿ ತೀವ್ರ ಮಳೆಯಾಗಿದ್ದು, ಮಳೆ ನೀರು ರಸ್ತೆಗೆ ಹರಿದು ಬಂದು ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡಿದೆ.
ರಂಗೀನ ಕಟ್ಟೆ ಎಂಬಲ್ಲಿ ಹೆದ್ದಾರಿಯು ಹೊಳೆಯಾಗಿ ಮಾರ್ಪಟ್ಟಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಸೋಮವಾರ ರಾತ್ರಿ 3 ಗಂಟೆಯ ವೇಳೆಗೆ ಮಳೆ ತೀವ್ರ ಗತಿಗೆ ತಲುಪಿದ್ದು, ಶಿರಾಲಿ, ಮೂಡ ಭಟ್ಕಳ, ತಲಂದ, ಮತ್ತು ಪುರರ್ವರ್ಗ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಹಲವಾರು ಮನೆಗಳು ಹಾನಿಗೊಳಗಾದವು. ಶಮ್ಸುದ್ದೀನ್ ಸರ್ಕಲ್ ಮತ್ತು ರಂಗೀನ್ ಕಟ್ಟಾ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಟ್ರಾಫಿಕ್ ಜಾಮ್ ಆಗಿದೆ.
ಬೆಳಿಗ್ಗೆ 6 ಗಂಟೆಗೆ ನೀರು ರಸ್ತೆಗೆ ನುಗ್ಗಿ, ಸ್ಥಳೀಯರು ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳಬೇಕಾದ ಸ್ಥಿತಿ ನಿರ್ಮಾಣ ವಾಗಿತ್ತು. ಮಂಗಳವಾರ ಸಂಜೆಯಿಂದ ಮಳೆ ಮತ್ತೆ ಜೋರು ಪಡೆದುಕೊಂಡಿದ್ದು ಪರಿಸ್ಥಿತಿ ಉಲ್ಭಣಗೊಳ್ಳುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಬೇಲೂರು, ಕೀತ್ರೆ, ತಲಗೋಡು ಮತ್ತು ಹಡೀನ ಗ್ರಾಮಗಳಲ್ಲಿ ಹಲವು ಮನೆಗಳ ಗೋಡೆಗಳು ಕುಸಿದಿವೆ. ಪ್ರಮುಖವಾಗಿ, ಕೋಟಕಂಡದಲ್ಲಿ ಮಂದಿರದ ಕಾಂಪೌಂಡ್ ಗೋಡೆ ಕುಸಿದು ಹಾನಿಯಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಭಟ್ಕಳದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ 128.8 ಮಿ.ಮೀ ಮಳೆಯಾಗಿದೆ. ಈ ವರ್ಷದ ಒಟ್ಟು ಮಳೆಯ ಪ್ರಮಾಣ 4898.6 ಮಿ.ಮೀ. ದಾಖಲಾಗಿದೆ.