ಅಂಜುಮನ್ ಪದವಿ ಮಹಾವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಶೈಕ್ಷಣಿಕ ಸಾಧನೆ
ಭಟ್ಕಳ: ಭಟ್ಕಳದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರವು ಶೈಕ್ಷಣಿಕವಾಗಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಜೊತೆಗೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ರ್‍ಯಾಂಕುಗಳು, ಸುವರ್ಣ ಪದಕಗಳು ಮತ್ತು ನಗದು ಪುರಸ್ಕಾರಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈ ವರ್ಷವೂ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದಿಂದ ರ್‍ಯಾಂಕ್ ಪಡೆದಿರುತ್ತಾರೆ.
ಕುಮಾರ ಮೋಹಿದ್ದೀನ್ ಅಸ್ಬಾ ವಾಣಿಜ್ಯ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ 9ನೇ ರ್‍ಯಾಂಕ್ ಪಡೆದಿರುತ್ತಾನೆ. ಈ ವಿದ್ಯಾರ್ಥಿ ಬಿ.ಕಾಂ. ಅಂತಿಮ ವರ್ಷದಲ್ಲಿ ಆರು ವಿಷಯಗಳಲ್ಲಿ, ಐದು ವಿಷಯಗಳಿಗೆ ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದು ವಿಶೇಷವಾಗಿದೆ.
ಕುಮಾರಿ ಪೂಜಾ ಪ್ರಕಾಶ ನಾಯ್ಕ, ಕಲಾ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 3ನೇ ರ್‍ಯಾಂಕ್ ಪಡೆದಿರುತ್ತಾರೆ. ತುಂಬಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಪೂಜಾ ನಾಯ್ಕ 3ನೇ ರ್‍ಯಾಂಕ್ ಪಡೆಯುವುದರ ಜೊತೆಗೆ ಎರಡು ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರ ಪಡೆದ ಸಾಧನೆಯನ್ನೂ ಮಾಡಿರುತ್ತಾಳೆ. ಕನ್ನಡ ವಿಷಯದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಕಾರಣ ಪೂಜಾ ನಾಯ್ಕ ‘ದಿವಂಗತ ಮಿರ್ಜಿ ಅಣ್ಣಾರಾವ್ ಶೆಡಬಾಲ ಸುವರ್ಣ ಪದಕ’ ಮತ್ತು ‘ಶಿಕ್ಷಕ ದಿವಂಗತ ಮಲ್ಲಪ್ಪ ನಿಂಗಪ್ಪ ಇಂಗಳಗಿ ಸ್ಮರಣಾರ್ಥ ಸುವರ್ಣ ಪದಕ’ ಪಡೆದಿರುತ್ತಾಳೆ. ಜೊತೆಗೆ ಕನ್ನಡ ವಿಷಯಕ್ಕಾಗಿಯೇ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಹೆಸರಿನಲ್ಲಿ ನೀಡುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಗದು ಪುರಸ್ಕಾರಕ್ಕೂ ಭಾಜನಳಾಗಿದ್ದಾಳೆ. ಇನ್ನು ಒಟ್ಟಾರೆಯಾಗಿ ಬಿ.ಎ. ಪದವಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಪ್ರಯುಕ್ತ ಕೊಡಮಾಡುವ ಉಷಾ ಅವಾಲಿಕರ್ ನಗದು ಪುರಸ್ಕಾರವನ್ನೂ ಪೂಜಾ ತನ್ನದಾಗಿಸಿಕೊಂಡಿದ್ದಾಳೆ. ಪೂಜಾ ಹಿಂದಿನ ವರ್ಷದಲ್ಲೂ ಕನ್ನಡ ಐಚ್ಛಿಕ ವಿಷಯಕ್ಕೆ ನೂರಕ್ಕೆ ನೂರು ಅಂಕ ಪಡೆಯುವುದರ ಮೂಲಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಪುರಸ್ಕಾರವನ್ನು ಪಡೆದಿರುವುದು ವಿಶೇಷವಾಗಿದೆ. ಇಂದು ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ನಡೆದ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವದಲ್ಲಿ ಮಾನ್ಯ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವರೂ ಸಮಕುಲಾಧಿಪತಿಗಳೂ ಆದ ಡಾ. ಎಂ.ಸಿ. ಸುಧಾಕರ ಅವರು ಪೂಜಾ ನಾಯ್ಕಳಿಗೆ ರ್ಯಾಂಕ್ ಪ್ರಮಾನ ಪತ್ರ ನೀಡುವುದರ ಜೊತೆಗೆ ಅವಳ ಕೊರಳಿಗೆ ಸುವರ್ಣಪದಕ ತೊಡಿಸಿದರು.
ಈ ವರ್ಷ ಕನ್ನಡ ಎಂ.ಎ. ಪದವಿಯಲ್ಲಿ ಈ ಕಾಲೇಜಿನ ವಿದ್ಯಾರ್ಥಿನಿ ಮಾಯಾ ನಾಯ್ಕ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೂ ಸಹ ರ್‍ಯಾಂಕ್ ಮತ್ತು ಚಿನ್ನದ ಪದಕಗಳಿಂದ ವಂಚಿತಳಾದ ಬಗ್ಗೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್. ಎಸ್. ನಾಯಕ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿದ್ಯಾರ್ಥಿನಿಯು ಪದವಿ ಮುಗಿದ ಮೇಲೆ ಕೆಲವು ವರ್ಷ ಬಿಟ್ಟು ಎಂ.ಎ.ಗೆ ಸೇರಿಕೊಂಡಿದ್ದಳು. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ನಿರಂತರತೆ ಇರದಿದ್ದರೆ ಅಂತವರಿಗೆ ರ್‍ಯಾಂಕ್ ನೀಡಲಾಗುವುದಿಲ್ಲವೆಂಬ ನಿಯಮ ವಿಶ್ವವಿದ್ಯಾಲಯದಲ್ಲಿ ಇದೆ. ಆದ್ದರಿಂದ ವಿಶ್ವವಿದ್ಯಾಲಯ ಮಟ್ಟದಲ್ಲಿ ಕನ್ನಡ ಎಂ.ಎ. ದಲ್ಲಿ ಪ್ರಥಮ ಸ್ಥಾನ ಪಡೆದರೂ ಈಕೆಗೆ ರ್‍ಯಾಂಕ್ ಸಿಗಲಿಲ್ಲ. ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದವರಿಗೆ ಮೊದಲ ರ್‍ಯಾಂಕ್ ನೀಡುವಂತಾಯಿತು ಮತ್ತು ಮಾಯಾ ನಾಯ್ಕ ರ್‍ಯಾಂಕ್‍ನಿಂದ ವಂಚಿತಳಾಗು ವಂತಾಯಿತು. ಇಲ್ಲದಿದ್ದರೆ ಅಂಜುಮನ್ ಕಾಲೇಜಿಗೆ ಎಂ.ಎ. ಕನ್ನಡಕ್ಕೆ ಮೊದಲ ರ್‍ಯಾಂಕ್ ಮತ್ತು ಸುವರ್ಣ ಪದಕಗಳು ನಿಶ್ಚಿತವಾಗಿತ್ತು ಎಂದು ಪ್ರೊ. ಆರ್. ಎಸ್. ನಾಯಕ ಹೇಳುತ್ತಾರೆ. ಈ ಹಿಂದೆಯೂ ಎಂ.ಎ. ಕನ್ನಡದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳಾದ ಸವಿತಾ ನಾಯ್ಕ ಮತ್ತು ಮಾಧವಿ ಗೊಂಡ ಸುವರ್ಣ ಪದಕ ಪಡೆಯುವುದರ ಮೂಲಕ ಕಾಲೇಜಿಗೆ ಮತ್ತು ಕಾಲೇಜಿನ ಕನ್ನಡ ವಿಭಾಗಕ್ಕೆ ಕೀರ್ತಿ ತಂದಿರುವುದನ್ನು ಆರ್. ಎಸ್. ನಾಯಕ ನೆನಪು ಮಾಡಿಕೊಳ್ಳುತ್ತಾರೆ.
ಅಂಜುಮನ್ ಕಾಲೇಜಿನ ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಹಾಮಿ ಈ ಮಸ್ಲಮೀನ್ ಸಂಸ್ಥೆಯ ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿ ಮತ್ತು ಸಮಸ್ತ ವಿದ್ಯಾರ್ಥಿ ಸಮುದಾಯ ಹಾರ್ದಿಕ ಅಭಿನಂದನೆ ಸಲ್ಲಿಸಿ, ಇಂತಹ ಸಾಧನೆ ನಿರಂತರವಾಗಿರಲಿ ಎಂದು ಹಾರೈಸಿದ್ದಾರೆ.