ಮರಳು ಸಮಸ್ಯೆಗೆ ಬಿಜೆಪಿ ಕಾರಣ: ಭಟ್ಕಳ ಕಾಂಗ್ರೆಸ್ ಮುಖಂಡರ ಆರೋಪ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳು ಅಭಾವಕ್ಕೆ ಬಿಜೆಪಿ ನೇರ ಕಾರಣ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಆರೋಪಿಸಿದ್ದಾರೆ.
ಸೋಮವಾರ ಭಟ್ಕಳದ ಪ್ರವಾಸಿ ಬಂಗ್ಲೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತ, "ಬಿಜೆಪಿಯವರು ಮರಳುಗಾರಿಕೆಗೆ ಸಂಬಂಧಿಸಿದಂತೆ ಚೆನ್ನೈನ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದು, ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ಉಲ್ಭಣಗೊಂಡಿದೆ," ಎಂದು ತಿಳಿಸಿದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಅವರು ಮಾತನಾಡಿ, "ಜಿಲ್ಲೆಯಲ್ಲಿ ಬೇರೆ ಹಲವಾರು ಸಮಸ್ಯೆ ಗಳಿದ್ದರೂ, ಮರಳು ಸಮಸ್ಯೆ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬಿಜೆಪಿ ನಾಯಕರು ಕೋರ್ಟಿಗೆ ಹೋಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಆದರೆ, ಬಿಜೆಪಿ ಈ ಪ್ರಕರಣವನ್ನು ಹಿಂತೆಗೆದುಕೊಂಡರೆ, ಮರಳುಕೃಷಿ ಪುನಃ ಆರಂಭಗೊಂಡು ಜನರಿಗೆ ಮರಳು ತಲುಪುವ ಅವಕಾಶ ಸಿಗುತ್ತದೆ," ಎಂದು ಹೇಳಿದರು.
ಹಾಗೆಯೇ, "ಮರಳು ಸಮಸ್ಯೆಗೆ ನಮ್ಮ ನಾಯಕರು ಅಥವಾ ಸಚಿವರು ನೇರ ಕಾರಣವಲ್ಲ. ಬಿಜೆಪಿಯವರು ಕೋರ್ಟಿಗೆ ತೆರಳಿದ ವಿಚಾರವನ್ನು ಮರೆಮಾಚಿ ಕಾಂಗ್ರೆಸ್ ನಾಯಕರು ಮತ್ತು ಸಚಿವರ ಹೆಸರನ್ನು ಹಾಳುಮಾಡಲು ಯತ್ನಿಸುತ್ತಿ ದ್ದಾರೆ," ಎಂದು ಕಿಡಿ ಕಾರಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ, ವಿಷ್ಣುದೇವಾಡಿಗ ಸೇರಿ ದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.