ಭಟ್ಕಳ| ಪ್ರವಾದಿಯನ್ನು ನಿಂದಿಸಿದ ಯತಿ ನರಸಿಂಹನಂದಾ ಸ್ವಾಮಿಯನ್ನು ದೇಶದ್ರೋಹ ಪ್ರಕರಣದಡಿ ಬಂಧಿಸುವಂತೆ ತಂಝೀಮ್ ಆಗ್ರಹ
ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರನ್ನುನಿಂದಿಸಿದ ಯತಿ ನರಸಿಂಹನಂದಾ ಸರಸ್ವತಿ ಸ್ವಾಮಿಯನ್ನು ದೇಶ ದ್ರೋಹದ ಪ್ರಕರಣದಡಿ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಮಜ್ಲಿಸೆ ಇಸ್ಲಹ-ವ-ತಂಝೀಮ್ ನೇತೃತ್ವದಲ್ಲಿ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಸಹಾಯಕ ಆಯುಕ್ತರ ಮೂಲಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳದ ಜಾಮಿಯಾ ಮಸೀದಿ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಕತೀಬ್ ನದ್ವಿ, ಪ್ರವಾದಿ ಮುಹಮ್ಮದ್ (ಸ)ರ ವಿರೋಧಿ ಕೇವಲ ಮುಸ್ಲಿಮರ ವಿರೋಧಿಯಲ್ಲ. ಆತ ಹಿಂದೂ ವಿರೋಧಿಯೂ ಆಗಿದ್ದಾನೆ. ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಎಲ್ಲ ಧರ್ಮದ ಧಾರ್ಮಿಕ ಪುಸ್ತಕಗಳಲ್ಲಿ ಅವರನ್ನು ದೇವನ ಸಂದೇಶವಾಹಕರೆಂದು ಕರೆದಿವೆ. ಇಂತಹ ಪ್ರವಾದಿಯನ್ನು ನಿಂದಿಸುವಾತ ಕೇವಲ ಇಸ್ಲಾಮ್ ವಿರೋಧಿಯಲ್ಲ ಬದಲಾಗಿ ಎಲ್ಲ ಧರ್ಮದ ವಿರೋಧಿಯಾಗಿದ್ದಾನೆ. ಈತ ಹಿಂದೂ ಧರ್ಮದ ವಿರೋಧಿಯೂ ಆಗಿದ್ದಾನೆ. ಈತ ಈ ದೇಶದ ವಿರೋಧಿಯೂ ಆಗಿದ್ದಾನೆ. ನಮ್ಮ ದೇಶ ಎಲ್ಲ ಧರ್ಮ, ಜಾತಿ ಜನಾಂಗವನ್ನು ಸಮಾನವಾಗಿ ಕಾಣುತ್ತದೆ. ಇಂತಹ ದೇಶ ದಲ್ಲಿರುವ ಈ ವ್ಯಕ್ತಿ ಇಡೀ ದೇಶಕ್ಕೆ ದ್ರೋಹ ಎಸಗುತ್ತಿದ್ದಾನೆ. ಈತನ ಬಂಧನದ ಕುರಿತು ಕೇವಲ ಮುಸ್ಲಿಮರಷ್ಟೇ ಅಲ್ಲ ಹಿಂದೂಗಳು ಕೂಡ ಆಗ್ರಹಿಸಬೇಕು ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಅಸಭ್ಯವಾಗಿ ಮಾತನಾಡಿದ ಮನುಷ್ಯ ಕಳೆದ ಹತ್ತಾರು ವರ್ಷಗಳಿಂದ ಈ ದೇಶದ ಕಾನೂನು ಉಲ್ಲಂಘನೆ ಮಾಡುತ್ತಿದ್ದಾನೆ. ಪ್ರವಾದಿ ಮುಹಮ್ಮದ್ ರನ್ನು ನಿಂದಿಸುವುದರಿಂದ ಒಂದು ಸಮಾಜಕ್ಕೆ ನಷ್ಟ ಆಗುವುದಿಲ್ಲ ಬದಲಾಗಿ ಈ ದೇಶದ ಭದ್ರತೆ ಮತ್ತು ಅಖಂಡತೆಗೆ ಮಾರಕವಾಗಿದ್ದಾನೆ. ಈತನ ವಿರುದ್ಧ ಮಾದರಿ ಯೋಗ್ಯವಾಗಿ ಇನ್ನೂ ಮುಂದೇ ಯಾವುದೇ ಧಾರ್ಮಿಕ ವ್ಯಕ್ತಿಗಳ ವಿರುದ್ಧ ನಿಂದನೆ ಮಾಡದ ರೀತಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ನಮ್ಮ ಆಗ್ರಹವಾಗಿದೆ ಎಂದರು.
ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮನವಿ ಸಲ್ಲಿಸಿ ಮಾತನಾಡಿ, ಪ್ರವಾದಿ ಮುಹಮ್ಮದ್ ರು ಇಡಿ ಮನುಷ್ಯರ ಮಾರ್ಗದರ್ಶನಕ್ಕಾಗಿ ಬಂದಿದ್ದರು. ಅವರನ್ನು ನಿಂದಿಸುವುದು ಎಂದರೆ ಇಡಿ ಮನುಷ್ಯರನ್ನು ನಿಂದಿಸಿದಂತೆ ಇಂತಹ ವ್ಯಕ್ತಿಯನ್ನು ಬಂಧಿಸದೆ ಇದ್ದರೆ ನಾವು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರವಾರ ಚಲೋ ನಡೆಸಬೇಕಾಗುತ್ತದೆ. ಇಂದು ಶಾಂತರೀತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ನಾಳೆ ಇದೇ ರೀತಿಯ ಶಾಂತರೀತಿಯಲ್ಲಿ ಎಲ್ಲರೂ ಭಟ್ಕಳ ಬಂದ್ ಕಾರ್ಯಕ್ರದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ತಂಝೀಮ್ ರಾಜಕೀಯ ಸಮಿತಿ ಸಂಚಾಲಕ ಇಮ್ರಾನ್ ಲಂಕಾ ಮನವಿ ಪತ್ರ ಓದಿದರು. ಸಹಾಯಕ ಆಯುಕ್ತೆ ಡಾ. ನಯಾನ ಎಂ. ಮನವಿ ಪತ್ರ ಸ್ವೀಕರಿಸಿ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಭಟ್ಕಳ ಮುಸ್ಲಿಮ್ ಯುತ್ ಫಡೆರೇಶನ್ ಮಾಜಿ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ, ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ ಸೇರಿದಂತೆ ವಿವಿಧ ಜಮಾಅತ್ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.