ಭಟ್ಕಳ : ಸಿಸಿಟಿವಿಯಲ್ಲಿ ಸೆರೆಯಾದ ಗೋವು ಕಳ್ಳತನ; ಕಠಿಣ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಭಟ್ಕಳ: ಮುಸುಕು ಧರಿಸಿ ಮೂವರು ವ್ಯಕ್ತಿಗಳು ರಸ್ತೆಯಲ್ಲಿ ನಿಂತಿದ್ದ ದನಗಳನ್ನು ಕಾರಿನಲ್ಲಿ ಹಾಕಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ 3:15ರ ಸುಮಾರಿಗೆ ಕಾರಿನಲ್ಲಿ ಬಂದವರು ಗೋವಿಗೆ ಆಹಾರ ನೀಡುವ ನೆಪದಲ್ಲಿ ಅದನ್ನು ಎತ್ತಿ ಕಾರಿನಲ್ಲಿ ಹಾಕಿಕೊಂಡು ಪರಾರಿಯಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಲಿ ಬ್ಯಾಂಕ್ ಸಮೀಪ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆ ಸ್ಥಳೀಯ ಜನರಲ್ಲಿ ಆಕ್ರೋಶವನ್ನುಂಟು ಮಾಡಿದ್ದು ಗೋಕಳ್ಳರನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿ ಜಾಲಿಯ ನಾಗರಿಕರು ಭಟ್ಕಳ ನಗರ ಠಾಣೆಯ ವೃತ್ತ ನಿರೀಕ್ಷಕರ ಮೂಲಕ ಡಿವೈಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಗೋವುಗಳ ಕಳ್ಳತನದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದನ್ನು ತಡೆಯದೇ ಇದ್ದರೆ ತಮ್ಮದೇ ಆದ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳು ವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಜಾಲಿ ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ನಾಯ್ಕ, ವಸಂತ ನಾಯ್ಕ, ಸಂಕೇತ ಆಚಾರಿ, ಉಮೇಶ ನಾಯ್ಕ ಹಾಗೂ ನಾಗರಿಕರು ಉಪಸ್ಥಿತರಿದ್ದರು.