ಶಿರೂರಿನಲ್ಲಿ ಗುಡ್ಡ ಕುಸಿತ ದುರಂತ| ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಆಗ್ರಹ
ಭಟ್ಕಳ: ಶಿರೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಮತ್ತು ಸೂಕ್ತ ಪರಿಹಾರ ನೀಡಲು ಆಗ್ರಹಿಸಿ, ಭಟ್ಕಳ ನಾಮಧಾರಿ ಸಮಾಜದ ಸದಸ್ಯರು ಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ, "ಅಂಕೋಲಾದ ಶಿರೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ನಮ್ಮ ಸಮುದಾಯದ ಜಗನ್ನಾತ ನಾಯ್ಕ ಮತ್ತು ಲೋಕೇಶ ನಾಯ್ಕ ನಾಪತ್ತೆಯಾಗಿ ದ್ದಾರೆ. ಅವರು ಇನ್ನೂ ಪತ್ತೆಯಾಗಿಲ್ಲ. ಸರ್ಕಾರವು ಶೀಘ್ರ ಕ್ರಮ ಕೈಗೊಂಡು ಪತ್ತೆ ಮಾಡಬೇಕು ಮತ್ತು ಅವರ ಕುಟುಂಬ ಗಳಿಗೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ಮನವಿಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ, ನಾವು ಬೀದಿಗಿಳಿದು ಹೋರಾಟ ನಡೆಸುವಂತಾಗುತ್ತದೆ," ಎಂದರು.
ಈ ಮನವಿಯನ್ನು ಭಟ್ಕಳ ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಅಶೋಕ ಭಟ್ ಅವರ ಮೂಲಕ ಸಲ್ಲಿಸಲಾಯಿತು.
ಈ ವೇಳೆ, ಭಟ್ಕಳ ಗುರುಮಠ ದೇವಸ್ತಾನದ ಅಧ್ಯಕ್ಷ ಅರುಣ್ ನಾಯ್ಕ, ಶಿರಾಲಿ ಸಾರದಹೋಳೆ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಕೆ. ನಾಯ್ಕ, ಪ್ರಮುಖರಾದ ಸುಬ್ರಾಯ ನಾಯ್ಕ, ಎಂ.ಆರ್. ನಾಯ್ಕ, ಡಿ.ಎಲ್. ನಾಯ್ಕ, ವಾಸು ನಾಯ್ಕ, ವಿಠ್ಠಲ್ ನಾಯ್ಕ, ಕೆ.ಆರ್. ನಾಯ್ಕ, ಮಹಾಬಲೇಶ್ವರ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.