ಉತ್ತರ ಕನ್ನಡ ಜಿಲ್ಲೆಗೆ ಸರಕಾರ ವಿಶೇಷ ಪ್ಯಾಕೇಜ್ ನೀಡಲಿ: ಡಾ.ವೆಂಕಟೇಶ ನಾಯ್ಕ
24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಶಿರಸಿ: ಉತ್ತರ ಕನ್ನಡವನ್ನು ಬುಡಕಟ್ಟು ಜಿಲ್ಲೆಯೆಂದು ಸರಕಾರ ಘೋಷಣೆ ಮಾಡಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೆಂಕಟೇಶ ನಾಯ್ಕ ಹೇಳಿದ್ದಾರೆ.
ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳು ಎಂಬ ವಿಚಾರ ಗೋಷ್ಠಿಯಲ್ಲಿ ಬುಡಕಟ್ಟುಗಳ ಬದುಕು ಮತ್ತು ಜಾನಪದ ವೈಶಿಷ್ಟ್ಯತೆಗಳು ವಿಷಯದ ಕುರಿತು ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ 15ಲಕ್ಷ ಜನಸಂಖ್ಯೆ ಇದೆ. ಶೇ.32ರಷ್ಟು ಬುಡಕಟ್ಟು ಸಮುದಾಯದ ಜನರಿದ್ದಾರೆ. ಬುಡಕಟ್ಟು ಸಮುದಾಯಗಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಉತ್ತರ ಕಾಣದ ಜಿಲ್ಲೆಯಾಗಿ ಉತ್ತರ ಕನ್ನಡ ಜಿಲ್ಲೆಯ ಪರಿಸ್ಥಿತಿ ಇದೆ. ಬುಡಕಟ್ಟು ಸಮುದಾಯಗಳನ್ನು ಒಂದೇ ವೇದಿಕೆಗೆ ತರುವ ಕೆಲಸವಾಗುತ್ತಿಲ್ಲ ಎಂದು ತಿಳಿಸಿದರು.
ಉತ್ತರ ಕನ್ನಡವನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಮಾಡುವ ಅವಕಾಶವಿದ್ದರೂ ಆದು ಆಗುತ್ತಿಲ್ಲ. ಮೂಲಭೂತ ಸೌಕರ್ಯ ಗಳಿಲ್ಲದ ಕುಟುಂಬಗಳು ನಮ್ಮ ಜಿಲ್ಲೆಯಲ್ಲಿವೆ. ಪ್ರಾದೇಶಿಕ ಸಮಸ್ಯೆಗಳನ್ನು ಅರ್ಥೈಸಿಕೊಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರವಾಗಬೇಕು ಎಂದರು.
ರಂಗಭೂಮಿ, ಯಕ್ಷಗಾನ ಕಲೆ ಕಲಾವಿದರ ಪಾಡು ವಿಷಯದ ಕುರಿತು ರಂಗ ನಿರ್ದೇಶಕ ಕಿರಣ ಭಟ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ಕನ್ನಡದ ಮೊಟ್ಟ ಮೊದಲ ನಾಟಕ ಬರೆದವರು ಸಹ ನಮ್ಮ ಉತ್ತರ ಕನ್ನಡ ಜಿಲ್ಲೆಯವರು. ಶಿರಸಿಯಲ್ಲಿ ಮೊಟ್ಟ ಮೊದಲ ನಾಟಕ ತಂಡ ಹುಟ್ಟಿಕೊಂಡಿದೆ. ಮರಾಠಿ ರಂಗ ಭೂಮಿ ಹುಟ್ಟಿಕೊಳ್ಳಲು ಯಕ್ಷಗಾನ ಕಾರಣವಾಗಿದೆ ಎಂದು ಹೇಳಿದರು.
ಅರಣ್ಯ ವಾಸಿಗಳ ಹಕ್ಕಿನ ಸಮಸ್ಯೆ ಮತ್ತು ಸಾಧ್ಯತೆಗಳು ವಿಷಯದ ಕುರಿತು ಮಾತನಾಡಿದ ಅರಣ್ಯ ಅತಿಕ್ರಮಣದಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ, ಜನಪ್ರತಿನಿಧಿಗಳು ಗಟ್ಟಿಯಾಗಿ ಅತಿಕ್ರಮಣದಾರರ ಸಮಸ್ಯೆ ಕುರಿತು ಧ್ವನಿ ಎತ್ತುತ್ತಿಲ್ಲ. ಸರಕಾರ ಚಿಂತನೆ ಮಾಡುತ್ತಿಲ್ಲ ಎಂದರು.
ಸಮ್ಮೇಳನದಲ್ಲಿ 10 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಬರಹಗಾರ್ತಿ ವಿಜಯನಳಿನಿ ರಮೇಶ್ ಆಶಯ ನುಡಿಗಳನ್ನಾಡಿದರು. ಹಿರಿಯ ಸಾಹಿತಿ ಡಾ .ಆರ್. ಜಿ. ಗುಂದಿ ಅಂಕೋಲಾ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನಾಧ್ಯಕ್ಷ ಆರ್. ಡಿ. ಹೆಗಡೆ ಆಲ್ಮನೆ, ಸಾಂತ್ವನ ಮಹಿಳಾ ವೇದಿಕೆಯ ಜ್ಯೋತಿ ಭಟ್, ಪತ್ರಕರ್ತ ನಾಗರಾಜ ಮತ್ತೀಗಾರ, ಪ್ರಾಚಾರ್ಯ ನರೇಂದ್ರ ನಾಯ್ಕ, ಲಿಂಗಯ್ಯ ಹಿರೇಮಠ ಮತ್ತಿತರರಿದ್ದರು. ಸುಬ್ರಹ್ಮಣ್ಯ ಭಟ್ ಯಲ್ಲಾಪುರ ಸ್ವಾಗತಿಸಿದರು. ಸಿದ್ದಪ್ಪ ಬಿರಾದಾರ ಹಳಿಯಾಳ ನಿರೂಪಿಸಿದರು. ಸೀತಾ ದಾನಗೇರಿ ವಂದಿಸಿದರು.