ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಜನಸೇವೆಯನ್ನು ಮಾಡಿ: ಶ್ರೀಮದ್ ವಿದ್ಯಾಧೀಶ ಸ್ವಾಮಿ
ಭಟ್ಕಳ: "ಜನ ಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಜನಸೇವೆಯನ್ನು ಧ್ಯೇಯವಾಗಿಟ್ಟುಕೊಳ್ಳಬೇಕು. ಜನಸೇವೆ ಕೂಡ ದೇವರ ಕಾರ್ಯವಾಗಿದೆ," ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ವಡೇರ ಸ್ವಾಮಿಜಿ ಗುರುವಾರ ನಡೆದ ಸಭೆಯಲ್ಲಿ ಹೇಳಿದರು.
ಅವರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ದಿನೇಶ ಪೈ ದಂಪತಿಗಳು ಷಷ್ಠ್ಯಬ್ದ ಪೂರ್ತಿ ಪ್ರಯುಕ್ತ ಉಗ್ರರಥ ಶಾಂತಿ ಮತ್ತು ದೇವತಾ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ, ಸಚಿವ ಮಂಕಾಳ ಎಸ್. ವೈದ್ಯರು ಆ ರಸ್ತೆಯಲ್ಲಿ ತೆರಳುವ ಭಕ್ತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡಿದ್ದು, ಇದನ್ನು ಶ್ರೀಗಳು ದೇವರ ಸೇವೆ ಎಂದು ಶ್ಲಾಘಿಸಿದರು. "ಗುರುಗಳ ಮಾರ್ಗದರ್ಶನ ಪಡೆದು ನೂತನ ಮಾರ್ಗಗಳನ್ನು ತೋರಿಸುವ ಜನಪರ ಕಾರ್ಯಗಳು ಮುಂದುವರಿಯಬೇಕು," ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯರು, "ಯಾರು ಗುರುಗಳಿಗೆ ತಲೆಬಾಗುತ್ತಾರೋ ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಾರೆ. ಗುರುಗಳ ಆಶೀರ್ವಾದ ಎಲ್ಲೆಡೆ ಯಶಸ್ಸನ್ನು ತರುತ್ತದೆ. ಮಠ-ಮಂದಿರಗಳಿಗೆ ಬೆಂಬಲ ನೀಡುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ," ಎಂದು ಹೇಳಿದರು.
ಹಾಂಗ್ಯೋ ಐಸ್‌ಕ್ರೀಂ ವ್ಯವಸ್ಥಾಪಕ ನಿರ್ದೆಶಕ ಪ್ರದೀಪ ಪೈ, ಸಚಿವ ವೈದ್ಯರನ್ನು ಶ್ಲಾಘಿಸಿ, "ಅವರು ಅಧಿಕಾರ ಇಲ್ಲದಾ ಗಿಯೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಶ್ರೀಗಳು ಮೊಕ್ಕಾಂಗೇ ಬರುವ ಮೊದಲು, ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಿ ಕೊಟ್ಟಿರುವುದಕ್ಕೆ ಜಿಎಸ್‌ಬಿ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ," ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಹೆಸ್ಕಾಂ, ಪುರಸಭೆ, ಕೆಇಬಿ ಕಾಂಟ್ರಾಕ್ಟರ್‌ಗಳು ಸೇರಿದಂತೆ ಹಲವು ಇಲಾಖೆಗಳ ಪ್ರತಿನಿಧಿಗಳಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಹಾಂಗ್ಯೋ ಐಸ್‌ಕ್ರೀಂನ ದಿನೇಶ ಪೈ, ಉದ್ಯಮಿ ರಾಜೇಶ್ ನಾಯಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ್, ಕಾಮಾಕ್ಷೀ ದೇವಸ್ಥಾನದ ಅಧ್ಯಕ್ಷ ಹರೀಶ ಕಾಮತ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.