ಭಟ್ಕಳ: ಸಿವಿಲ್ ಇಂಜಿನಿಯರ್ ಅನುಮಾನಾಸ್ಪದ ಮೃತ್ಯು; ಪ್ರಕರಣ ದಾಖಲು
ಭಟ್ಕಳ: ಸಿವಿಲ್ ಇಂಜಿನಿಯರ್ ಫಹಾದ್ ಮೋಟಿಯಾ(35) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೃತ ಫಹಾದ್ ಮೋಟಿಯಾ, ಫಾರೂಕ್ ಮೋಟಿಯಾ ಅವರ ಪುತ್ರನಾಗಿದ್ದು, ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಘಟನೆ ವಿವರ: ಫಹಾದ್ ರಾತ್ರಿ 9 ಗಂಟೆಯ ಸುಮಾರಿಗೆ ಗುಡ್‌ಲಕ್ ರಸ್ತೆಯ ಅಬು ಉಬೈದಾ ಮಸೀದಿ ಬಳಿ ಇರುವ ತಮ್ಮ ಅತ್ತೆಯ ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದರು. ಅಲ್ಪ ಸಮಯದ ನಂತರ, ಅವರ ಮೃತದೇಹ ಕೆಲವೇ ಅಂತರದ ದೂರದಲ್ಲಿ ಬಿದ್ದಿರುವುದನ್ನು ಕಂಡುಬಂದಿತ್ತು. ಈ ಸಂದರ್ಭ, ಅವರ ಬೈಕ್ ಹುರುಳಿಸಾಲ್ ಪ್ರದೇಶದ ಇಳಿಜಾರಿನಲ್ಲಿ ಸುಮಾರು 30 ಹೆಜ್ಜೆಗಳ ಅಂತರದಲ್ಲಿ ಪಾರ್ಕಿಂಗ್ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕತ್ತಲಲ್ಲಿ ಮಲಗಿದ್ದ ವ್ಯಕ್ತಿಯನ್ನು ಗಮನಿಸಿದ ಕೆಲವರು ಅವರನ್ನು ಹತ್ತಿರದ ಬೀದಿದೀಪದ ಕೆಳಗೆ ಸ್ಥಳಾಂತರಿಸಿ ಪರಿಶೀಲನೆ ನಡೆಸಿದರು ಎನ್ನಲಾಗಿದ್ದು, ಇದಕ್ಕೆ ಫಹಾದ್ ಸ್ಪಂದಿಸಲಿಲ್ಲ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಖಂಡರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಫಹಾದ್ ಸಾವಿನ ಸುದ್ದಿ ವ್ಯಾಪಕವಾಗಿ ಹರಡುತ್ತಲೇ, ಆಸ್ಪತ್ರೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಕೆಲವು ಮಂದಿ ಹೃದಯ ಸ್ತಂಭನದಿಂದ ಅವರು ಮೃತಪಟ್ಟಿರಬಹುದು ಎಂದು ಶಂಕಿಸಿದರೆ, ಇತರರು ಅವರ ಕುತ್ತಿಗೆಯ ಮೇಲೆ ಕಂಡುಬಂದ ಮಸುಕಾದ ಗುರುತುಗಳನ್ನು ಗಮನಿಸಿದರು. ವೈದ್ಯರು ಕೂಡ ಈ ಗುರುತುಗಳನ್ನು ಕಳವಳಕಾರಿ ಎಂದು ಗುರುತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತರ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು, ಫಹಾದ್ ಹಣಕಾಸಿನ ವಿವಾದಗಳಿಂದ ಒತ್ತಡದಲ್ಲಿದ್ದರು ಹಾಗೂ 15 ದಿನಗಳ ಹಿಂದೆ ಅವರ ಮೇಲೆ ಹಲ್ಲೆ ಕೂಡಾ ನಡೆಸಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಂತಕರು ಬಟ್ಟೆ ಬಳಸಿ ಅಥವಾ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದೆಂದು ಅವರು ಶಂಕಿಸಿದ್ದಾರೆ.
ಭಟ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಣೆ ನಡೆಸಿದ್ದಾರೆ. ಬೈಕ್ ಮತ್ತು ಮೃತದೇಹ ನಡುವೆ ಇದ್ದ ದೂರ, ಮತ್ತಿತರ ಸಂಗತಿಗಳನ್ನು ಪರಿಶೀಲಿಸಿದ್ದಾರೆ.
ಭಟ್ಕಳ ಡಿವೈಎಸ್ಪಿ ಮಹೇಶ್ ಅವರು, ಫಹಾದ್ ಅವರ ಹಿಂದಿನ ಬೆದರಿಕೆಗಳು ಮತ್ತು ಹಲ್ಲೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ನಗರ ಠಾಣೆ ಪಿಎಸ್‌ಐ ನವೀನ್, ಗ್ರಾಮಾಂತರ ಪಿಎಸ್‌ಐ ಚಂದನ್ ಗೋಪಾಲ್, ವಿಧಿವಿಜ್ಞಾನ ತಜ್ಞ ರಮೇಶ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರಿಗೆ ಲಭಿಸಿದ್ದು, ವರದಿಯಲ್ಲಿ ಅನುಮಾನಾಸ್ಪದ ಅಂಶ ಕಂಡ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.