ಮುರುಡೇಶ್ವರ| ಪ್ರವಾಸಿಗರ ರಕ್ಷಣೆಗೆ ತಕ್ಷಣದ ಕ್ರಮಕ್ಕೆ ತಂಝೀಮ್ ಒತ್ತಾಯ
ಅಬ್ದುಲ್ ರಖೀಬ್
ಭಟ್ಕಳ: ಮುರುಡೇಶ್ವರ ಪ್ರವಾಸಿ ತಾಣದಲ್ಲಿ ಅಲೆಗಳಿಗೆ ಸಿಲುಕಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆಯು ಭಟ್ಕಳ ನಗರವನ್ನು ಆಘಾತಕ್ಕೊಳಪಡಿಸಿದೆ. ಈ ದುಃಖದ ಸಂದರ್ಭ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಭಗವಂತನು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದೆ.
ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಮುರುಡೇಶ್ವರ ತೀರದಲ್ಲಿ ಆಗುತ್ತಿರುವ ಪ್ರಮಾದಗಳು ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದ ಫಲ ಎಂದು ಆರೋಪಿಸಿದ್ದಾರೆ. ಪ್ರತಿವರ್ಷ ಸಮುದ್ರದ ಅಲೆಗಳಿಗೆ ಸಿಲುಕಿ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವ ಬೆಳವಣಿಗೆ ಗಂಭೀರವಾಗಿ ಗಮನಸೆಳೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.
"ಮೂರುಡೇಶ್ವರ ಸಮುದ್ರ ತೀರದಲ್ಲಿ ಪ್ರವಾಸಿಗರ ಸುರಕ್ಷತೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಒತ್ತಾಯಿಸುತ್ತೇವೆ. ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರವಾಸಿಗರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ," ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಕೇವಲ ಮುರುಡೇಶ್ವರವಲ್ಲ, ರಾಜ್ಯದ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಯೇ ಮೊದಲ ಆದ್ಯತೆ ಆಗಬೇಕೆಂದು ತಂಝೀಮ್ ಸರ್ಕಾರವನ್ನು ಆಗ್ರಹಿಸಿದೆ. ಈ ಘಟನೆ ರಾಜ್ಯದ ಪ್ರವಾಸಿಗರು ಎಷ್ಟು ಅಸುರಕ್ಷಿತರಾಗಿ ದ್ದಾರೆ ಎಂಬುದನ್ನು ತೋರಿಸುತ್ತಿದ್ದು, ವಿಶೇಷವಾಗಿ ಶಾಲಾ ಶೈಕ್ಷಣಿಕ ಪ್ರವಾಸಗಳ ಸುರಕ್ಷತೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ದೋರಣೆ ಎತ್ತಿ ತೋರಿಸುತ್ತಿದೆ ಎಂದು ತಂಝೀಮ್ ಸಂಸ್ಥೆ ಅಭಿಪ್ರಾಯಪಟ್ಟಿದೆ.