ಭಟ್ಕಳ: ರಸ್ತೆ ಅಪಘಾತ; ದಂಪತಿ, ಮಗುವಿಗೆ ಗಂಭೀರ ಗಾಯ
ಭಟ್ಕಳ: ಉಡುಪಿಯ ಆಸ್ಪತ್ರೆಗೆಂದು ತೆರಳುತ್ತಿದ್ದ ಭಟ್ಕಳ ಜಾಲಿ ರಸ್ತೆ ದಂಪತಿಯ ಬೈಕ್ ಬೈಂದೂರು ಬಳಿ ರಸ್ತೆ ಅಪಘಾತ ವಾಗಿದ್ದು ಈ ಅಪಘಾತದಲ್ಲಿ ಪತಿ, ಪತ್ನಿ ಹಾಗೂ 9 ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿಪ್ಪರ್ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಮಗು ಸಹಿತ ಪತಿ, ಪತ್ನಿ ಗಾಯಗೊಂಡಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಭಟ್ಕಳ ಜಾಲಿ ರಸ್ತೆಯ ನಿವಾಸಿ ಮೊಹಮ್ಮದ್ ಇಸಾ ಶಾಬಂದ್ರಿ (35) ತನ್ನ ಪತ್ನಿ ಶಾಹೀನ್ ಮತ್ತು ಒಂಬತ್ತು ವರ್ಷದ ಮಗ ಇಸಾಕ್ ನೊಂದಿಗೆ ಸ್ಕೂಟರ್‌ನಲ್ಲಿ ಉಡುಪಿ ವೈದ್ಯರ ಬಳಿ ತಪಾಸಣೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಬೈಂದೂರಿನಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿ ಎದುರಿನಿಂದ ಹಾದು ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಯಾವುದೇ ಸೂಚನೆ, ಏಕಾಏಕಿ ಟರ್ನ್ ಆದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.