ಭಟ್ಕಳ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಭಟ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಲಯನ್ಸ್ ಕ್ಲಬ್ ಮುರುಡೇಶ್ವರ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಭಟ್ಕಳದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಡಾ. ಅಶೋಕ ಕಾಮತ್ ಶಿಬಿರವನ್ನು ಉದ್ಘಾಟಿಸಿ, ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಗಳನ್ನು ವಿವರಿಸಿದರು. ಬೆಳಿಗ್ಗೆ ಬೇಗ ಏಳುವುದು, ಧ್ಯಾನ ಮತ್ತು ಪ್ರಾಣಾಯಾಮಗಳ ಮೂಲಕ ಸ್ಮರಣಶಕ್ತಿ ಹೆಚ್ಚಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ, ಸಾಮಾಜಿಕ ಮಾಧ್ಯಮದ ಆಕರ್ಷಣೆಯಿಂದ ಶಿಕ್ಷಣಕ್ಕೆ ಉಂಟಾಗುವ ಹಾನಿಯನ್ನು ಮನನೆ ಮಾಡಿಸಿ, ಅದರಿಂದ ದೂರ ಉಳಿಯುವಂತೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಪ್ರಾಸ್ತಾವಿಕ ಭಾಷಣ ನೀಡಿ, ಭಟ್ಕಳದ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು. ಈ ಗುರಿ ಸಾಧಿಸಲು ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಘವೇಂದ್ರ ನಾಯ್ಕ, ಲಯನ್ಸ್ ಕ್ಲಬ್ನ ಅಧ್ಯಕ್ಷ ವಿಶ್ವನಾಥ ಮಡಿವಾಳ, ಸದಸ್ಯ ಎಂ.ವಿ. ಹೆಗಡೆ, ಕಾರ್ಯದರ್ಶಿ ನಾಗೇಶ ಮಡಿವಾಳ, ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾ ಪಕಿ ರೂಪಾ ಖಾರ್ವಿ, ಎನ್.ಇ.ಎಸ್. ಮುಖ್ಯಾಧ್ಯಾಪಕ ಗಣಪತಿ ಶಿರೂರು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರ್ವಹಣೆ ಮಾಡಿದರು. ಶಿಕ್ಷಣ ಸಂಯೋಜಕ ಅಶೋಕ ಆಚಾರಿ ವಂದಿಸಿದರು.
ಶಿಬಿರದ ಬಳಿಕ, ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ನೀಡಲಾಯಿತು. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ಕಲ್ಪಿಸಿ, ಹೆಚ್ಚು ಅಂಕ ಗಳಿಸಲು ಸೂಕ್ತ ಅಧ್ಯಯನ ವಿಧಾನಗಳನ್ನು ತಿಳಿಸಲಾಯಿತು. ಶಿಬಿರದಲ್ಲಿ ಭಟ್ಕಳ ತಾಲೂಕಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.