ಶಿರಸಿಯಲ್ಲಿ ರೌಡಿಶೀಟರ್ ಮೇಲೆ ಪೊಲೀಸ್ ಹಲ್ಲೆ ಆರೋಪ: ಭಟ್ಕಳದಲ್ಲಿ ಬಿಜೆಪಿ-ಸಂಘಪರಿವಾರದಿಂದ ಪ್ರತಿಭಟನೆ
ಸುಳ್ಳು ಆರೋಪ ಎಂದ ಜಿಲ್ಲಾ ಎಸ್.ಪಿ. ಎಂ.ನಾರಾಯಣ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ಸಂಘಪರಿವಾರದ ಕಾರ್ಯ ಕರ್ತ ಹಾಗೂ ಭಟ್ಕಳದ ಆಟೋರಿಕ್ಷಾ ಚಾಲಕ ಶ್ರೀನಿವಾಸ್ ನಾಯ್ಕ ಎಂಬಾತನ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ರೌಡಿಶೀಟರ್ ಪರೇಡ್ ನಡೆಸುವ ನೆಪದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಭಟ್ಕಳದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ನ್ನು ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಘಟನೆಯಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು 2 ಕಿಲೋಮೀಟರ್‌ಗೂ ಹೆಚ್ಚು ದೂರದ ವರೆಗೆ ವಾಹನಗಳು ಸಾಲುಗಟ್ಟಿ ನಿಂತವು. ಏಕಾಏಕಿ ನಡೆದ ರಸ್ತೆ ತಡೆಯಿಂದ ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತೀವ್ರ ತೊಂದರೆಗೀಡಾದರು. ಸ್ಥಳಕ್ಕಾಗಮಿಸಿದ ಭಟ್ಕಳ ಡಿವೈಎಸ್ಪಿ ಮಹೇಶ್ ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಅವರ ಮಧ್ಯಸ್ಥಿಕೆಯಿಂದ ರಸ್ತೆ ತಡೆಯನ್ನು ತೆರವುಗೊಳಿಸಲಾಯಿತು. ಆದರೆ, ಈ ಘಟನೆ ಸಾರ್ವಜನಿಕರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾರ್ಯಕರ್ತರು ತಮ್ಮ ಆರೋಪದಲ್ಲಿ, ಶಿರಸಿಯಲ್ಲಿ ನಡೆದ ಘಟನೆಯು ಪೊಲೀಸರ ಅತಿರೇಕದ ವರ್ತನೆ ಯನ್ನು ತೋರಿಸುತ್ತದೆ ಎಂದು ದೂರಿದ್ದಾರೆ. ಮಂಗಳವಾರ ಶಿರಸಿಯಲ್ಲಿ ರೌಡಿಶೀಟರ್ ಪರೇಡ್ ನಡೆಸಿದ್ದ ಎಸ್‌ಪಿ ಎಂ. ನಾರಾಯಣ ಅವರು, ಶ್ರೀನಿವಾಸ್ ನಾಯ್ಕರನ್ನು ಭಟ್ಕಳದಿಂದ ಶಿರಸಿಗೆ ಕರೆತಂದು, ತನಿಖೆ ನೆಪದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡ ಶ್ರೀನಿವಾಸ್ ನಾಯ್ಕ ಭಟ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಎಸ್‌ಪಿ ಆಗಮಿಸಿ ಕ್ಷಮೆ ಕೋರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ, ಬುಧವಾರ ಎಸ್‌ಪಿ ಎಂ. ನಾರಾಯಣ ಅವರು ಭಟ್ಕಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ದಲ್ಲಿ ಭಟ್ಕಳ ನಗರ ಠಾಣೆ ಎದುರು ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು. ಪೊಲೀಸ್ ವರಿಷ್ಠಾಧಿಕಾರಿಯ ವಿರುದ್ಧ ಘೋಷಣೆ ಕೂಗುತ್ತಾ, ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಆದರೆ, ಶಾಂತ ರೀತಿಯಲ್ಲಿ ಘಟನೆಯನ್ನು ನಿಭಾಯಿಸಿದ ಎಸ್‌ಪಿ, ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರಾದ ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕರೊಂದಿಗೆ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು. ಈ ಮಾತುಕತೆಯ ಬಳಿಕ ಮುಖಂಡರು ಕಾರ್ಯಕರ್ತರಿಗೆ ತಿಳಿಹೇಳಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, "ಜಿಲ್ಲೆಯ ರೌಡಿಶೀಟರ್‌ಗಳ ಮೇಲೆ ನಿಗಾ ಇರಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯ 10 ರೌಡಿಶೀಟರ್‌ಗಳನ್ನು ಶಿರಸಿಗೆ ಕರೆದು ಅವರ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಭಟ್ಕಳದ ರೌಡಿಶೀಟರ್ ಶ್ರೀನಿವಾಸ್ ನಾಯ್ಕನ ಮೇಲೆ ಹತ್ತಾರು ಪ್ರಕರಣಗಳಿವೆ, ಪೋಕ್ಸೋ ಪ್ರಕರಣವೂ ಸೇರಿದೆ. ಹಿಂದೂ ಕಾರ್ಯಕರ್ತನಾದವರು ಧರ್ಮಕ್ಕೆ ತಕ್ಕಂತೆ ನಡೆದು ಕೊಳ್ಳಬೇಕು ಎಂಬ ಕಿವಿಮಾತು ಹೇಳಿದ್ದೇವೆ. ಶಿರಸಿಯಿಂದ ಭಟ್ಕಳಕ್ಕೆ ಕರೆತಂದ ನಂತರ ಅವನು ನಾಟಕ ಮಾಡುತ್ತಿದ್ದಾನೆ. ಅವನ ಮೇಲೆ ಯಾರೂ ಹಲ್ಲೆ ಮಾಡಿಲ್ಲ, ಇದು ಸುಳ್ಳು ಆರೋಪ" ಎಂದು ಸ್ಪಷ್ಟಪಡಿಸಿದರು.