ಭಟ್ಕಳ: ತಂಝೀಮ್ ನೇತೃತ್ವದಲ್ಲಿ ಗೋವಾದಿಂದ ಮಂಗಳೂರುವರೆಗಿನ ಮುಸ್ಲಿಮರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧತೆ
► ಶುಕ್ರವಾರ ಕರಾವಳಿ ಕರ್ನಾಟಕದ್ಯಂತ ವಕ್ಫ್ ಸಂಶೋಧನಾ ಬಿಲ್ ವಿರೋಧಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ ►ಕರಾವಳಿ ಜಿಲ್ಲೆಗಳ ಮುಸ್ಲಿಮ್ ಮುಖಂಡರ ಸಭೆಯಲ್ಲಿ ನಿರ್ಧಾರ

ಭಟ್ಕಳ: ವಕ್ಫ್ ಸಂಶೋಧನಾ ಬಿಲ್ ವಿರೋಧಿಸಲು ಗೋವಾದಿಂದ ಮಂಗಳೂರುವರೆಗಿನ ಕರಾವಳಿ ಜಿಲ್ಲೆಗಳ ಮುಸ್ಲಿಮ್ ಮುಖಂಡರ ಒಗ್ಗಟ್ಟಿನ ಪ್ರದರ್ಶನಕ್ಕೆ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಮಂಗಳವಾರ ಇಲ್ಲಿನ ನವಾಯತ್ ಕಾಲೋನಿಯ ರಾಬಿತಾ ಸೊಸೈಟಿಯ ಸಭಾಂಗಣದಲ್ಲಿ ನಡೆದ ಮುಸ್ಲಿಮ್ ಮುಖಂಡರ, ಉಲೇಮಾಗಳ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಮುಸ್ಲಿಮರ ಐಕ್ಯತೆಯ ಮಹತ್ವವನ್ನು ಒತ್ತಿ ಹೇಳಲಾಯಿತು. ತಂಝೀಮ್ ನೇತೃತ್ವದಲ್ಲಿ ಕರಾವಳಿಯ ಸಮಸ್ತ ಮುಸ್ಲಿಮರ ಏಕತೆಯ ಸಂಕೇತವಾಗಿ ಒಂದು ವೇದಿಕೆಯನ್ನು ರಚಿ ಸಲು ಒಪ್ಪಿಗೆ ಸಿಕ್ಕಿತು. ವಕ್ಫ್ ಬಿಲ್ ಸೇರಿದಂತೆ ಕೇಂದ್ರ ಸರಕಾರದ ಕರಾಳ ಕಾನೂನುಗಳ ವಿರುದ್ಧ ನಿರಂತರ ಪ್ರತಿಭಟನೆಗೆ ಸಭೆಯಲ್ಲಿ ಸನ್ನದ್ಧತೆ ವ್ಯಕ್ತವಾಯಿತು. ಶುಕ್ರವಾರ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆಗಳು, ಮನವಿ ಪತ್ರ ಸಲ್ಲಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಮುಂಬರುವ ದಿನಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ರೀತಿಯಲ್ಲಿ ವಕ್ಪ್ ಕಾಯ್ದೆಯನ್ನು ವಿರೋಧಿಸಿ ಸತತ ಪ್ರತಿಭಟನೆಗಳಿಗೆ ಕರಾವಳಿಯ ಮುಸ್ಲಿಮ್ ಸಮುದಾಯವು ಒಗ್ಗಟ್ಟಾಗಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.
ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಂಬಂದ್ರಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಅಶ್ರಫ್ ಬ್ಯಾರಿ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನಾ ಮುಹಮ್ಮದ್ ಇಲಿಯಾಸ್ ನದ್ವಿ, ಮಾಜಿ ಶಾಸಕ ಮೋಹಿದ್ದೀನ್ ಬಾವ, ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅತಿಕುರ್ರಹ್ಮಾನ್ ಮುನಿರಿ, ಉಡುಪಿ ಮುಸ್ಲಿಮ್ ಒಕ್ಕೂಟದ ಮುಹಮ್ಮದ್ ಮೌಲಾ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ತಂಝೀಮ್ ರಾಜಕೀಯ ಸಮಿತಿ ಸಂಚಾಲಕ ಸೈಯ್ಯದ್ ಇಮ್ರಾನ್ ಲಂಕಾ, ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಸಿರ್ಸಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ತೌಫೀಖ್ ಬ್ಯಾರಿ, ನಮ್ಮ ನಾಡು ಒಕ್ಕೂಟದ ಕಾರ್ಯದರ್ಶಿ ಹುಸೇನ್ ಹೈಕಾಡಿ, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿ ಬೇಂಗ್ರೆ ಸೇರಿದಂತೆ ಗೋವಾ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಜಮಾಅತ್‌ಗಳ ಮುಖಂಡರು ಮತ್ತು ಪ್ರತಿನಿಧಿಗಳು ಭಾಗವಹಿಸಿ ಸಲಹೆಗಳನ್ನು ನೀಡಿದರು.