ಹೊನ್ನಾವರ | ಟೊಂಕಾ ಕಡಲ ಕಿನಾರೆಯಲ್ಲಿ HTL Line ಸರ್ವೇಗೆ ಮೀನುಗಾರರ ವಿರೋಧ: ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿಚಾರ್ಜ್
ಪೊಲೀಸ್ ದೌರ್ಜನ್ಯ ಖಂಡಿಸಿ ಮೀನುಗಾರಿಕೆ ಸಚಿವರ ಮನೆಯೆದುರು ಧರಣಿ
ಹೊನ್ನಾವರ, ಫೆ.1: ತಾಲೂಕಿನ ಕಾಸರಕೋಡ ಟೊಂಕಾ ಕಡಲ ತೀರದ ಮೀನುಗಾರರ ಕೇರಿಯಲ್ಲಿ ಭಾರತ ಸರಕಾರದಿಂದ ಅನುಮೋದಿತ CZMP-2019 (ಕರಾವಳಿ ವಲಯ ನಿರ್ವಹಣಾ ಯೋಜನೆ) ನಕ್ಷೆಗಳಿಗೆ ಹೊಸದಾಗಿ HTL line ( ಉಬ್ಬರ ರೇಖೆ) ಸರ್ವೇಗೆ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ. ಈ ವೇಳೆ ಪೊಲೀಸರು ಮೀನುಗಾರರ ಮೇಲೆ ಲಾಠಿಚಾರ್ಜ್ ಮಾಡಿದ್ದು, 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ತಮ್ಮ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 200ಕ್ಕೂ ಹೆಚ್ಚು ಮೀನುಗಾರರು ಮುರುಡೇಶ್ವರದಲ್ಲಿರುವ ಮೀನುಗಾರಿಕೆ ಸಚಿವ ಮಾಂಕಾಳ್ ವೈದ್ಯರ ಮನೆ ಮುಂದೆ ಗುರುವಾರ ರಾತ್ರಿ ಸುಮಾರು 3 ಗಂಟೆಗೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
HTL line ಗಾಗಿ ಸರ್ವೇ:
ಭಟ್ಕಳ ಉಪ ವಿಭಾಗದ ಸಹಾಯಕ ಆಯುಕ್ತೆ ಡಾ.ನಯನಾ ನೇತೃತ್ವದಲ್ಲಿ ಅಧಿಕಾರಿಗಳು ಬುಧವಾರ ಸರ್ವೇಗೆ ಮುಂದಾಗಿದ್ದರು. ಈ ವೇಳೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಮೀನುಗಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದು, ಇದರಿಂದ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಲ್ಲದೆ 18 ಮೀನುಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೀನುಗಾರರು ದೂರಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವ ಹಸಿಮೀನು ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಗಣಪತಿ ತಾಂಡೇಲ, ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಈಗಾಗಲೇ ಭಾರತ ಸರಕಾರದಿಂದ ಅನುಮೋಧಿತ CZMP-2019 (ಸಿ. ಆರ್. ಝೆಡ್) ನಕ್ಷೆ ಗಳಿಗೆ ಹೊಸದಾಗಿ HTL line ( ಉಬ್ಬರ ರೇಖೆ) ಗುರುತು ಮಾಡಲು ಬಂದಾಗ ಮೀನುಗಾರರು ನಮಗೆ ನೀಡಿದ ಆಶ್ರಯ ಯೋಜನೆ ಮನೆಗಳಿರುವ ಗ್ರಾಮ ನಕಾಶೆ ಕಾಸರಕೋಡ ಟೆಕ್ಕಾ 2 (missing village) ಅನ್ನು ಕರಾವಳಿ ವಲಯ ನಿರ್ವಹಣಾ ನಕ್ಷೆ (CZMP)ಯಲ್ಲಿ ತೋರಿಸಿ. ಕೇವಲ ಖಾಸಗಿ ಬಂದರಿಗಾಗಿ ಹೊಸ ರಸ್ತೆಗಾಗಿ ತಮ್ಮ ಅಧಿಕಾರ ವ್ಯಾಪ್ತಿಗೆ ಬರದಿದ್ದರು ಹೊಸದಾಗಿ ಸಮುದ್ರ ಉಬ್ಬರ ರೇಖೆ ತಿದ್ದುವದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಎ.ಸಿ. ಸೂಚನೆಯಂತೆ ಪೊಲೀಸರು ನಮ್ಮ ಲಾಠಿಚಾರ್ಜ್ ಮಾಡಿದರು. ಹಲವರನ್ನು ವಶಕ್ಕೆ ಪಡೆದು ಕರೆದೊಯ್ದರು ಎಂದು ದೂರಿದ್ದಾರೆ.
ಮೀನುಗಾರ ಮುಖಂಡ ಭಾಸ್ಕರ್ ಮಾತನಾಡಿ, ನಾವು ಕಳೆದ 70 ವರ್ಷಗಳಿಂದ ಸಮುದ್ರ ತೀರದಲ್ಲೇ ಬದುಕನ್ನು ಕಟ್ಟಿಕೊಂಡಿದ್ದೇವೆ. ಇಲ್ಲಿ ಸುಮಾರು 600 ಮನೆಗಳಿಗೆ ಸರಕಾರವೇ ಪಟ್ಟಾ ನೀಡಿದೆ. ಈಗ ಬಂದು ಮತ್ತೊಮ್ಮೆ ಸರ್ವೇ ಮಾಡಿ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಲು ನೋಡುತ್ತಿದ್ದಾರೆ. ಇದನ್ನು ಮಾಡಲು ನಾವು ಬಿಡೆವು. ಸಹಾಯಕ ಆಯುಕ್ತರು ನಮ್ಮ ಸಮಸ್ಯೆಗಳನ್ನು ಆಲಿಸದೆ ಸರಕಾರಿ ಆದೇಶ ಪಾಲನೆಯ ಹೆಸರಲ್ಲಿ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಸಾಗರಮಾಲ ಯೋಜನೆಯಡಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಚ್.ಪಿಪಿಎಲ್.) ಖಾಸಗಿ ಕಂಪೆನಿಯಿಂದ ಖಾಸಗಿ ಬಂದರ್ ನಿಮಾರ್ಣವಾಗುತ್ತಿದ್ದು ಈ ಬಂದರ್ ಗೆ ಉತ್ತಮ ರಸ್ತೆ ಕಲ್ಪಿಸಲು ಸಮುದ್ರ ತೀರವನ್ನೇ ತಮ್ಮ ಬದುಕನ್ನಾಗಿ ರೂಪಿಸಿಕೊಂಡಿರುವ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಸ್ಥಳಿಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮದಲ್ಲಿರುವ ಉದ್ದೇಶಿತ ಖಾಸಗಿ ಬಂದರಿಗೆ ಉತ್ತಮ ಸಂಪರ್ಕ ಕಲ್ಪಿಸಲು ಬಂದರುಗಳ ನಿರ್ದೇಶಕರು ಮತ್ತು ಕರ್ನಾಟಕ ಕಡಲ ಮಂಡಳಿಯಿಂದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಂದರು ಮತ್ತು ಅದರ ಸಂಬಂಧಿತ ಚಟುವಟಿಕೆಗಳು ಪರಿಸರ ಸೂಕ್ಷ್ಮ ಶರಾವತಿ ನದಿ ಮುಖಜ ಭೂಮಿ ಮತ್ತು ಟೊಂಕದ ಕಡಲತೀರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸ್ಥಳೀಯ ಮೀನುಗಾರರು ಬಂದರು ಸ್ಥಾಪನೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಏನಿದು ಹೈ ಟೆಡ್ ಲೈನ್ ಸರ್ವೇ?
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (NGT), ಚೆನ್ನೈ ಆದೇಶಗಳು ಮತ್ತು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (KSCZMA) ಅನುಮೋದನೆಯ ಬೆಂಬಲದೊಂದಿಗೆ, HPPL ಬಂದರು ಪ್ರದೇಶವನ್ನು ಮುಖ್ಯ ರಸ್ತೆಯೊಂದಿಗೆ ಸಂಪರ್ಕಿಸುವ 2.1 ಕಿ.ಮೀ. ಕಚ್ಚಾ ರಸ್ತೆಯನ್ನು ಡಾಂಬರು ರಸ್ತೆಯನ್ನಾಗಿ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಹೊಸದಾಗಿ ಸಮುದ್ರದ ಹೈ ಟೆಡ್ ಲೈನ್ (HTL) ಗುರುತು ಕಾರ್ಯಕ್ಕಾಗಿ ಸರ್ವೇ ನಡೆದಿದೆ. ಈ ಹಿಂದೆ 40 ಮೀ. ಇದ್ದುದ್ದನ್ನು ಈಗ 50ಮೀಟರ್ ನಿಗದಿ ಪಡಿಸಿದ್ದಾರೆ. ಸಿ.ಆರ್.ಝೆಡ್ ನಿಂದ 600 ಕುಟುಂಬಗಳಿಗೆ ನೀಡಿದ ಸೈಟುಗಳಲ್ಲೇ ರಸ್ತೆ ನಿರ್ಮಾಣಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಇದರಿಂದಾಗಿ ಮೀನುಗಾರರ ಕುಟುಂಬ ಬೀದಿಪಾಲಾಗಲಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ದೌರ್ಜನ್ಯ ಖಂಡಿಸಿ ಮೀನುಗಾರಿಕಾ ಸಚಿವರ ಮನೆಯೆದುರು ಧರಣಿ
ಹೊನ್ನಾವರದ ಟೋಂಕಾದಲ್ಲಿ ಮೀನುಗಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸುಮಾರು 200ಕ್ಕೂ ಹೆಚ್ಚು ಮೀನುಗಾರರು ಮುರುಡೇಶ್ವರದಲ್ಲಿರುವ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯರ ಮನೆ ಮುಂದೆ ಗುರುವಾರ ರಾತ್ರಿ ಸುಮಾರು 3 ತಾಸು ಧರಣಿ ನಡೆಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಗಣಪತಿ ತಾಂಡೇಲ, ಸಚಿವರು ಈ ಮುಂಚೆ ಯಾವುದೇ ಸಮಸ್ಯೆ ಎದುರಾದರೆ ನಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಸರಕಾರ ಪೊಲೀಸರನ್ನು ಬಳಸಿಕೊಂಡು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದೆ. ಹಾಗಾಗಿ ನಾವು ಸಚಿವರ ಬಳಿ ಬಂದಿದ್ದೇವೆ. ಸಚಿವರು ನಮ್ಮ ಸಮಸ್ಯೆ ಪರಿಹರಿಸಿ ಕೊಟ್ಟ ಮಾತು ಈಡೇರಿಸಿಕೊಡಬೇಕೆಂದು ಆಗ್ರಹಿಸಿದರು.
ಉಷಾ ಎನ್ನುವ ಮೀನುಗಾರ ಮಹಿಳೆ ಮಾತನಾಡಿ, ಪೊಲೀಸರು ನಮ್ಮ ಜನರನ್ನು ಹಿಡಿದುಕೊಂಡು ಹೋಗಿದ್ದಾರೆ. ನಮ್ಮ ಮನೆ-ಮಠ ಬಿಟ್ಟು ಇಲ್ಲಿ ಬಂದಿದ್ದೇವೆ ಸಚಿವರು ನಮ್ಮ ಸಮಸ್ಯೆಯನ್ನು ಆಲಿಸಬೇಕು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಚಿವ ವೈದ್ಯರು ಬುಧವಾರ ಸಂಜೆ ಬೆಂಗಳೂರಿಗೆ ತೆರಳಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಸಚಿವರ ಪತ್ನಿ ಪುಷ್ಪಲತಾ ಮೀನುಗಾರರೊಂದಿಗೆ ಮಾತನಾಡಿ ಸಮಾಧಾನ ಪಡಿಸಿದರು.
ಮೀನುಗಾರರ ಕುಟುಂಬಕ್ಕಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸಚಿವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಧರಣಿನಿರತರು, ಸರ್ವೇ ನೆಪದಲ್ಲಿ ಪೊಲೀಸರು ಬಂದು ಮತ್ತೇ ತೊಂದರೆ ಕೊಟ್ಟರೆ ನಾವು ಊರಿನ ಎಲ್ಲ ಜನರು ಮನೆಮಾರುಗಳನ್ನು ಬಿಟ್ಟು ಸಚಿವರ ಮನೆ ಮುಂದೆ ಬಂದು ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿ ಧರಣಿ ಹಿಂಪಡೆದು ಸ್ಥಳದಿಂದ ತೆರಳಿದರು.