ಕುಮಟಾ ಬಳಿ ರೈಲು ಹಳಿಗೆ ಹಾನಿ: ವೈರಲ್ ವೀಡಿಯೊ ಸುಳ್ಳು!
ಕುಮಟಾ: ಕುಮಟಾ ಬಳಿಯ ಶಿರೂರಿನಲ್ಲಿ ಹಾಗೂ ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಸಿತ ಘಟನೆಗಳ ನಡುವೆಯೇ, ಕುಮಟಾ ಬಳಿಯ ಮಿರ್ಜಾನ್ ನಲ್ಲಿ ರೈಲ್ವೆ ಹಳಿ ಕುಸಿದಿದೆ ಎಂದು ಬಿಂಬಿಸುವ ವೈರಲ್ ವಿಡಿಯೊ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ ಈ ವಿಡಿಯೊ ನಕಲಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ಈ ವಿಡಿಯೊದಲ್ಲಿ ರೈಲು ಹಳಿಯ ಮೇಲೆ ಮಣ್ಣು ಕುಸಿದು ಬಿದ್ದು, ಟ್ರ್ಯಾಕ್ ಅಡಿಯಲ್ಲೇ ನೀರು ಹರಿದು ಹೋಗುತ್ತಿರುವುದನ್ನು ತೋರಿಸಲಾಗಿತ್ತು. ಆಗಸ್ಟ್ 1ರಂದು ಈ ಘಟನೆ ಸಂಭವಿಸಿದ್ದು, ಈ ಮಾರ್ಗವಾಗಿ ಬರುವ ರೈಲುಗಾಡಿಗಳ ವೇಳೆ ವ್ಯತ್ಯಯವಾಗುವ ಹೇಳಿಕೆ ನೀಡಿದೆ ಎಂಬ ವೆಚ್ಚರಿಕೆಯನ್ನೂ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಹಲವು ಮಂದಿ ಸ್ಪಷ್ಟನೆಗಾಗಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅಂಥ ಯಾವುದೇ ಘಟನೆಗಳು ನಡೆದಿಲ್ಲ. ಇಂಥ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮದ ಬಗ್ಗೆಯೂ ಚಿಂತನೆ ನಡೆಸಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ.
ಯೂಟ್ಯೂಬ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ಈ ವೀಡಿಯೊ ಶೇರ್ ಮಾಡಲಾಗಿದ್ದು, ಬೇರೆ ಬೇರೆ ಕಡೆಗಳಿಂದ ಪೋಸ್ಟ್ ಆಗಿರುವುದು ವಾರ್ತಾಭಾರತಿ ನಡೆಸಿದ ಶೋಧನೆಯಲ್ಲಿ ತಿಳಿದು ಬಂದಿದೆ. ಕೆಲ ಪೋಸ್ಟ್ ಗಳಲ್ಲಿ ಇದು ರಾಜಸ್ಥಾನದ ವೀಡಿಯೊ ಎನ್ನಲಾಗಿದ್ದು, ಮತ್ತೆ ಕೆಲವು ಮಧ್ಯಪ್ರದೇಶದ್ದೆಂದು ಹೇಳಲಾಗಿತ್ತು. ಜತೆಗೆ ರೈಲ್ವೆ ಅಧಿಕಾರಿಗಳು ಕೂಡಾ ಇದು ಮಿರ್ಜಾನ್ ನಿಂದ ಪೋಸ್ಟ್ ಆದ ವಿಡಿಯೊ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗೂಗಲ್ ಲೆನ್ಸ್ ನಲ್ಲಿ ಹುಡುಕಾಡಿದಾಗ ಹಲವು ತಿಂಗಳಿಂದ ಇಂಥ ವೀಡಿಯೊ ಪೋಸ್ಟ್ ಆಗಿದ್ದು, ಬೇರೆ ಬೇರೆ ಕಡೆಗಳಿಂದ ಶೇರ್ ಮಾಡಲಾಗಿದೆ. ಆದರೆ ಮೂಲ ವೀಡಿಯೊ ಎಲ್ಲಿಂದ ಪೋಸ್ಟ್ ಆಗಿದೆ ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಮಿರ್ಜಾನ್ ನಿಂದ ಅಲ್ಲ ಎನ್ನುವುದು ದೃಢಪಟ್ಟಿದೆ.