ಅಂಕೋಲಾ| ಮತ್ತೆ ಭೂಮಿ ಕುಸಿಯುವ ಭೀತಿ, ಮಿಲಿಟರಿ ತಂಡದಿಂದ ಕಾರ್ಯಾಚರಣೆ: ಸಚಿವ ಕೃಷ್ಣ ಭೈರೇಗೌಡ
ಅಂಕೋಲಾ: ಶಿರೂರಿನಲ್ಲಿ ದುರಂತ ನಡೆದ ದಿನವೇ ರಾಜ್ಯ ಸರಕಾರ ಪರಿಹಾರ ನೀಡಿದೆ. ಪುಡಿಗಾಸು ಎಂದ ಕೇಂದ್ರ ಸಚಿವರು ಹೆಚ್ಚಿನ ಪರಿಹಾರ ನೀಡಲಿ, ನಾವು ರಾಜಕೀಯ ಮಾಡಲು ಬಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿ ಮಾತನಾಡಿದ ಅವರು, ಈಗಾಗಲೇ ಘಟನೆ ನಡೆದ ದಿನದಿಂದಲೇ ಪರಿಹಾರ ನೀಡಿದ್ದೇವೆ. ಪುಡಿಗಾಸು ಎಂದವರು ಕೊಡಲಿ. ನಾವು ಶಿರೂರಿಗೆ ಪ್ರಚಾರಕ್ಕೆ ಬಂದಿಲ್ಲ. ಜಿಲ್ಲಾಡಳಿತದ ಜೊತೆಗೆ ಮಾತನಾಡಿ, ಬೇರೆಡೆ ಮನೆ, ನಿವೇಶನ ನೀಡುವ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಸ್ಥಳಾಂತರ ಮಾಡಿದರೂ ಕೆಲೆವೆಡೆ ಜನರು ಹೋಗಲ್ಲ. ಹಿಗಾಗಿ ಚರ್ಚೆ ಮಾಡುತ್ತೇವೆ ಎಂದರು.
ಗುಡ್ಡದ ಮಣ್ಣು ಕೆಸರಿನಂತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಯಾವಾಗಲಾದರೂ ಮತ್ತೆ ಗುಡ್ಡ ಕುಸಿತ ಆಗಬಹುದು. ಮಳೆಯ ನಡುವೆಯೂ ತೆರವು ಕಾರ್ಯ ನಡೆಯುತ್ತಿದೆ ಎಂದರು.
ಕಾರ್ಯಾಚರಣೆಗೆ ಬೆಳಗಾವಿಯಿಂದ ಮಿಲಿಟರಿ ತಂಡ ಬರುತ್ತಿದೆ. ಆದರೆ ಭೂಮಿ ಮತ್ತೆ ಕುಸಿಯುವ ಭೀತಿ ಇರುವುದರಿಂದ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯೂ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಅವರಿಂದ ವರದಿ ತೆಗೆದುಕೊಂಡು ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗುಯ್ತದೆ. ಅವುಗಳನ್ನು ಸರಿಪಡಿಸಬೇಕು ಎಂದು ಲಿಖಿತವಾಗಿ ಸೂಚನೆ ನೀಡುತ್ತೇವೆ ಎಂದರು.