ಮುರುಡೇಶ್ವರ ಕಡಲ ತೀರದಲ್ಲಿ ವಿದ್ಯಾರ್ಥಿನಿಯರ ಮೃತ್ಯು ಪ್ರಕರಣ: ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ
ಭಟ್ಕಳ: ಮುರುಡೇಶ್ವರ ಕಡಲ ತೀರದಲ್ಲಿ ಶಾಲಾ ಪ್ರವಾಸಕ್ಕೆಂದು ಬಂದ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾಗಿರುವ ದಾರುಣ ಘಟನೆ ನಡೆದಿದ್ದು, ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿನಿಯರು ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಭೇಟಿ ನೀಡಿದ ಸಂದರ್ಭ, ಸಮುದ್ರದಲ್ಲಿ ಆಟವಾಡಲು ಇಳಿದಾಗ ಈ ಘಟನೆ ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿ 7 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರು ಪಾಲಾಗಿದ್ದು, ಸ್ಥಳೀಯರ ಸಹಕಾರದಿಂದ ಮೂವರು ವಿದ್ಯಾರ್ಥಿನಿಯರು ಮತ್ತು ಶಿಕ್ಷಕನನ್ನು ರಕ್ಷಿಸಲಾಗಿದೆ.
ನಿನ್ನೆ ಓರ್ವ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದರೆ, ಇಂದು ಉಳಿದ ಮೂವರ ಮೃತದೇಹಗಳು ಪತ್ತೆಯಾದವು. ಈ ದುರ್ಘಟನೆಯ ಬಳಿಕ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಉ.ಕ. ಜಿಲ್ಲಾಡಳಿತ ಈ ಕುರಿತು ತ್ವರಿತ ನಿರ್ಧಾರ ಕೈಗೊಂಡಿದ್ದು, ಮುಂದಿನ ಆದೇಶದವರೆಗೆ ಕಡಲತೀರ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದಾಗಿ ತಿಳಿದುಬಂದಿದೆ.
ಕೋಲಾರದ ಜಿಲ್ಲಾಡಳಿತದಿಂದ ಅಂತಿಮ ನಮನ: ನಾಳೆ ಬೆಳಗ್ಗೆ 8 ಗಂಟೆಗೆ ಕೋಲಾರದ ಜಿಲ್ಲಾಡಳಿತ ಭವನದ ಬಳಿ, ನೀರು ಪಾಲಾದ ನಾಲ್ವರು ವಿದ್ಯಾರ್ಥಿನಿಯರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯರ ಸ್ಮರಣಾರ್ಥ ಗೌರವ ಸಮರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.
ಈ ದುರ್ಘಟನೆಯ ಬಗ್ಗೆ ಸಮುದ್ರದ ಪಕ್ಕದಲ್ಲಿ ಲೈಫ್‌ಗಾರ್ಡ್‌ಗಳ ಕೊರತೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಲು ಒತ್ತಾಯಿಸುತ್ತಿದೆ.