ಭಟ್ಕಳ ಇತಿಹಾಸದ ಬೇರುಗಳು ಹಾಡುವಳ್ಳಿಯ ನೆಲದಲ್ಲಿದೆ : ಗಂಗಾಧರ ನಾಯ್ಕ
ಭಟ್ಕಳ: ಇತಿಹಾಸದ ಬೇರುಗಳು ಹಾಡುವಳ್ಳಿಯ ನೆಲದಲ್ಲಿದೆ ಎಂದು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ನುಡಿದರು.
ಅವರು ಹಾಡುವಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಾಡುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಆಯೋಜಿಸಿದ ಸಂಗೀತಪುರದ ಇತಿಹಾಸ ಮತ್ತು ಪರಂಪರೆ ಎಂಬ ವಿಷಯದ ಕುರಿತು ಆಯೋಜಿಸಿದ ಕವನ ರಚನಾ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಭಟ್ಕಳ ಒಂದು ಕಾಲಕ್ಕೆ ಜೈನರ ನೆಲೆವೀಡು. ಸಂಗೀತಪುರವೆಂದೇ ಹೆಸರಾಗಿದ್ದ ಹಾಡುವಳ್ಳಿಯು ಆ ಕಾಲಕ್ಕೆ ಸಾಂಸ್ಕೃತಿಕ ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಇಲ್ಲಿನ ಭಟ್ಟಾಕಳಂಕ ಎಂಬ ಜೈನ ಮುನಿಯ ಕಾರಣದಿಂದಾಗಿ ಭಟ್ಕಳ ಎಂಬ ಹೆಸರು, ಈ ನೆಲವನ್ನು ಆಳಿದ ಚೆನ್ನಭೈರಾದೇವಿಯಿಂದಾಗಿ ಭಟ್ಕಳದ ಹೃದಯ ಭಾಗಕ್ಕೆ ಚೆನ್ನಪಟ್ಟಣ ಎಂಬ ಹೆಸರೂ ಇತ್ತು ಎಂದು ಅವರು ಹೇಳಿದರು.
ನಮ್ಮ ಸ್ಥಳೀಯ ಇತಿಹಾಸ ಮತ್ತು ಪರಂಪರೆಯನ್ನು ಸ್ಮರಿಸುವ ಕವನ ರಚನಾ ಸ್ಪರ್ಧೆಯನ್ನು ಸಂಘಟಿಸುವಲ್ಲಿ ಆಸಕ್ತಿ ವಹಿಸಿದ ಹಾಡುವಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯವನ್ನು ಶ್ಲಾಘಿಸಿ ನಮ್ಮ ಸ್ಥಳೀಯ ಇತಿಹಾಸ, ಪರಂಪರೆಯನ್ನು ಯುವಜನತೆಗೆ ಮುಂದಿನ ಪೀಳಿಗೆಗೆ ದಾಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ದಿಸೆಯಲ್ಲಿ ಭಟ್ಕಳದ ಸಮಗ್ರ ಇತಿಹಾಸವನ್ನು ಸ್ಮರಿಸುವ ಮತ್ತು ಅದನ್ನು ಮುಂದಿನವರಿಗೆ ದಾಟಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲು ಚಿಂತನೆ ನಡೆಸಲಾಗುವುದು ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ನಮ್ಮ ಊರಿನ ಇತಿಹಾಸ ನೆನಪಿಸುವ ಉತ್ತಮ ಕಾರ್ಯಕ್ರಮ ಸಂಘಟಿಸಿದ ಪರಿಷತ್ತಿನ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವಂತಾಗಲಿಮ ಅದಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ ಎಂದರು.
ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಪದ್ಮರಾಜ ಜೈನ್ ಮಾತನಾಡಿ ಸಾಹಿತ್ಯ ಪರಿಷತ್ತಿನ ಸಹಯೋಗ ಮತ್ತು ಉತ್ತೇಜನದಿಂದ ಇಂದಿನ ಕಾರ್ಯಕ್ರಮ ಸಂಘಟಿಸಲಾಗಿದೆ. ನಮ್ಮ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇಲ್ಲಿನ ಇತಿಹಾಸದ ಕುರಿತು ತಿಳಿದುಕೊಳ್ಳಲೂ ಇಂದಿನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪಂಚಾಯತ ಸದಸ್ಯ ಜಯಂತ ಗೊಂಡ ಮಾತನಾಡಿದರು. ಕವನ ರಚನಾ ಸ್ಪರ್ಧೆಯಲ್ಲಿ ಮಂಗಳಗೌರಿ ಭಟ್ ಪ್ರಥಮ, ಪದ್ಮಪ್ರಸಾದ ಜೈನ್ ದ್ವಿತೀಯ ಬಹುಮಾನ ಪಡೆದರೆ ಮಹಾವೀರ ಜೈನ್ ಹಾಗೂ ಹಾಡುವಳ್ಳಿಯ ಇತಿಹಾಸದ ಕುರಿತು ಲೇಖನ ಬರೆದು ಮಂಡಿಸಿದ ಮಮತಾ ಗೊಂಡ ಪ್ರೋತ್ಸಾಹಕ ಬಹುಮಾನ ಪಡೆದರು. ವಿಜೇತರಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ನಗದು ಬಹುಮಾನ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಪ್ರಮಾಣ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಈರಪ್ಪ ನಾಯ್ಕ, ಮಾಜಿ ಅಧ್ಯಕ್ಷ ಮಾದೇವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೇವತಿ ಪದ್ಮರಾಜ ಜೈನ್ ಸ್ವರಚಿತ ಕವನ ವಾಚಿಸಿದರು.
ಸಾಹಿತಿ ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರಲ್ಲದೇ ಪ್ರಾಸ್ತಾವಿಕ ನುಡಿಗಳನ್ನಾಡಿ ಹಾಡುವಳ್ಳಿಯ ಐತಿಹಾಸಿಕ ಹಿನ್ನೆಲೆಯನ್ನು ತಿಳಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಕೃಷ್ಣ ಗೊಂಡ, ಖಜಾಂಚಿ ಗೋಪಾಲ ಶೇಟ್ಡಿ, ಸಹ ಕಾರ್ಯದರ್ಶಿ ಸೋಮಯ್ಯ ಗದ್ದೆಮನೆ, ವಿಷ್ಣು ಭಟ್, ಗಜಾನನ ಭಟ್, ಗಿರೀಶ ನಾಯ್ಕ ಕುರುಂದೂರು, ದಯಾನಂದ ಶೆಟ್ಟಿ, ವೆಂಕಟೇಶ ನಾಯ್ಕ, ನಾಗೇಶ ನಾಯ್ಕ ಹಿತ್ತಲಗದ್ದೆ, ಪದ್ಮಯ್ಯ ನಾಯ್ಕ ಮೂರ್ಕೋಡಿ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.