ಉತ್ತರ ಕನ್ನಡ | ಅನಂತ್ ಕುಮಾರ್ ಹೆಗಡೆಯನ್ನು ಬಿಟ್ಟು ಕಾಗೇರಿಗೆ ಲೋಕಸಭಾ ಟಿಕೆಟ್ ನೀಡಿದ ಬಿಜೆಪಿ
ವಿಶ್ವೇಶ್ವರ ಹೆಗಡೆ ಕಾಗೇರಿ | ಅನಂತ ಕುಮಾರ್ ಹೆಗಡೆ
ಕಾರವಾರ: ಸತತ ಆರು ಅವಧಿಗೆ ಸಂಸದರಾಗಿದ್ದ ಅನಂತ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡದೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿ, ಒಮ್ಮೆ ಸೋತು ಆರು ಬಾರಿ ಗೆಲುವು ಕಂಡು ಮತ್ತೊಮ್ಮೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಸದ ಅನಂತ ಕುಮಾರ್ ಹೆಗಡೆಗೆ ಈ ಬಾರಿಯ ಲೋಕಸಭೆ ಟಿಕೆಟ್ ಕೈ ತಪ್ಪಿದೆ.
ಕಳೆದ ಲೋಕಸಭಾ ಚುನಾವಣೆ ಬಳಿಕ ನಾಪತ್ತೆಯಾಗಿ ಕಳೆದೆರಡು ತಿಂಗಳ ಹಿಂದೆ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ಷೇತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ದಿಢೀರ್ ಪ್ರತ್ಯಕ್ಷರಾದ ಬಳಿಕ ಕೇವಲ ಕೋಮು ಪ್ರಚೋದಕ ಹೇಳಿಕೆಗಳನ್ನಷ್ಟೇ ನೀಡಿ ಮತ್ತಷ್ಟು ವಿವಾದ ಸೃಷ್ಟಿಸಿದ್ದರು. ಅಲ್ಲದೇ ಅನಂತ ಕುಮಾರ್ ಹೆಗಡೆಯವರು, ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ 400 ಸೀಟು ಗೆಲ್ಲಬೇಕು ಎಂದು ಹೇಳಿಕೆ ನೀಡಿದ್ದು, ರಾಷ್ಟ್ರಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.
ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಪ್ರಚಾರಕ್ಕೆ ಆಗಮಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಳೆದ ವಿಧಾನಸಭಾ ಚುಣಾವಣೆ ಸಂದರ್ಭದಲ್ಲಿ ಅಂಕೋಲಾಕ್ಕೆ ಆಗಮಿಸಿದ್ದಾಗಲೂ ಸಂಸದರು ಗೈರಾಗಿದ್ದರು.
ಟಿಕೆಟ್ ಘೋಷಣೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಗೆ ಒಟ್ಟು 7 ಬಾರಿ ಸ್ಪರ್ಧಿಸಿ, 6 ಬಾರಿ ಶಾಸಕರಾಗಿದ್ದರು. ಕಳೆದ ವಿಧಾನಸಭೆ ಚುಣಾವಣೆಯಲ್ಲಿ ಸೋಲು ಕಂಡಿದ್ದಾರೆ. ಆರೆಸ್ಸೆಸ್ ಹಿನ್ನಲೆಯಿಂದ ಬಂದಿರುವ ಅವರು 1990ರಿಂದ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ, ಪರ್ತಕರ್ತ ಹರಿಪ್ರಕಾಶ ಕೋಣೆಮನೆ ಹೆಸರುಗಳು ಲೋಕಸಭಾ ಚುನಾವಣೆಗೆ ಜಿಲ್ಲೆಯಿಂದ ಚಾಲ್ತಿಯಲ್ಲಿದ್ದವು. ಬಿಜೆಪಿ ಹೈಕಮಾಂಡ್ ಕೊನೆಗೂ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಬಗೆಗಿದ್ದ ಕುತೂಹಲಕ್ಕೆ ತೆರೆ ಎಳೆದಿದೆ. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಕಾಗೇರಿ ಅವರ ಹೆಸರು ಘೋಷಣೆಯಾಗಿದೆ.