ಓ ಮೆಣಸೇ...
ಇತ್ತೀಚಿನ ದಿನಗಳಲ್ಲಿ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ಆದ್ದರಿಂದ ನನಗೆ ರಾಜಕೀಯ ಸಾಕಾಗಿ ಹೋಗಿದೆ - ಡಿ.ಕೆ.ಸುರೇಶ್, ಸಂಸದ
ಒಹೋ, ನೀವು ಗಾಂಧಿ ತಾತನ ಕಾಲದಲ್ಲಿ ರಾಜಕೀಯಕ್ಕೆ ಬಂದವರಲ್ಲವೇ?
ಪ್ರಧಾನಿ ಮೋದಿಯವರು ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರಾಗಿದ್ದಾರೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಇಷ್ಟನ್ನು ಹೇಳಲು ನಿಮಗೆ ಅಷ್ಟು ವರ್ಷಗಳು ಬೇಕಾದವು. ಆತ ಬೇರಾವ ಸಬ್ಜೆಕ್ಟ್ ನಲ್ಲಿ ಅಕ್ಷರಸ್ಥ ಎಂಬುದನ್ನು ಯಾವಾಗ ತಿಳಿಸುತ್ತೀರಿ?
ಕಾಂಗ್ರೆಸ್‌ಗೆ 60 ವರ್ಷಗಳಲ್ಲಿ ಸಾಧ್ಯವಾಗದ್ದನ್ನು ಬಿಜೆಪಿ 9 ವರ್ಷಗಳಲ್ಲಿ ಸಾಧಿಸಿದೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಹೌದಪ್ಪಾ! ಅವರು ಧಾರಾಳ ನಾಶ ನಷ್ಟ ಮಾಡಿದ್ದಾರೆ. ಆದರೆ ಸರ್ವ ನಾಶ ಮಾಡಲು ಬಿಜೆಪಿಯವರೇ ಬರಬೇಕಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಬಿಜೆಪಿ ನಾಯಕ ಬಿ.ಎಲ್.ಸಂತೋಷ್‌ರ ಕೊಡುಗೆ ಇದೆ - ಎಂ.ಬಿ.ಪಾಟೀಲ್, ಸಚಿವ
ಆದ್ದರಿಂದ ಶಾಸಕರಿಗೆ ಧರ್ಮೋಪದೇಶ ಮಾಡುವುದಕ್ಕೆ ಆ ಮಹಾನುಭಾವನನ್ನೂ ಕರೆ ತರುತ್ತೀರಾ?
ನೇತಾಜಿ ಸುಭಾಶ್ಚಂದ್ರ ಬೋಸ್ ಬದುಕಿದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ - ಅಜಿತ್ ದೋವಲ್, ಭದ್ರತಾ ಸಲಹೆಗಾರ
ಗಾಂಧೀಜಿಯ ಹತ್ಯೆ ಮಾಡದೆ ಇದ್ದಿದ್ದರೆ ನಿಮ್ಮ ವಲಯದಲ್ಲಿ ಗೋಡ್ಸೆ ಹೀರೊ ಆಗುತ್ತಿದ್ದನೇ?
ಬಸನಗೌಡ ಪಾಟೀಲ್ ಯತ್ನಾಳ ಎಂದರೆ ಒಂದು ಹವಾ ಇದೆ - ಪ್ರತಾಪ ಸಿಂಹ, ಸಂಸದ
ದುರ್ನಾತ ಮಾತ್ರ ತೀರಾ ಅಸಹನೀಯ
ಚಂಡಮಾರುತದಿಂದ ಗುಜರಾತ್‌ನಲ್ಲಿ ಜೀವಹಾನಿಯಾಗದೆ ಇರುವುದು ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ- ಅಮಿತ್ ಶಾ, ಕೇಂದ್ರ ಸಚಿವ
ನಿಮ್ಮವರನ್ನೆಲ್ಲಾ ನಿರಾಶ್ರಿತಗೊಳಿಸಿ ಬಿಟ್ಟ ಕರ್ನಾಟಕದ ಚಂಡಮಾರುತ ಯಾರ ಸಾಧನೆ?
ಮನೆಗೆಲಸ ಅಥವಾ ಮಕ್ಕಳನ್ನು ಹೆರಲು ಮಾತ್ರ ಮಹಿಳೆಯರು ಸೀಮಿತವಾಗಬಾರದು - ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ
ಮದ್ಯ ಖರೀಸುವುದಕ್ಕೆ ದುಡ್ಡನ್ನೂ ಅವಳೇ ಗಂಡನಿಗೆ ಕೊಡಬೇಕು ಅಂತೀರಾ?
ಇಂದಿರಾ ಗಾಂಧಿ ಹೇರಿದ್ದ ‘ತುರ್ತು ಪರಿಸ್ಥಿತಿ’ ದೇಶದ ಇತಿಹಾಸದಲ್ಲೇ ಕರಾಳ ಯುಗ - ನರೇಂದ್ರ ಮೋದಿ, ಪ್ರಧಾನಿ
ನಿಮ್ಮ ದುರಾಡಳಿತ ಬರುವ ತನಕ ಜನ ಹಾಗೆಯೇ ನಂಬಿಕೊಂಡಿದ್ದರು.
‘ಶಕ್ತಿ’ ಯೋಜನೆಯಿಂದಾಗಿ ದೇವಸ್ಥಾನ ಹಾಗೂ ಪೂಜಾ ಕೇಂದ್ರಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ - ಪ್ರಿಯಾಂಕ್ ಖರ್ಗೆ, ಸಚಿವ
ಆ ಮೂಲಕ ಪುರೋಹಿತರು ಸಂತುಷ್ಟರಾದರೆ ಸಾಕು. ಕಾಂಗ್ರೆಸ್‌ನವರ ಜನ್ಮ ಸಾರ್ಥಕವಾಯಿತು.
ಭವಿಷ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಬೀದಿ ರಂಪಾಟ ನಿಶ್ಚಿತ - ಆರ್.ಅಶೋಕ್, ಶಾಸಕ
ಅಲ್ಲಿದ್ದ ರಂಪಾಟದ ತಜ್ಞರನ್ನೆಲ್ಲ ನೀವು ಬಹಳ ಹಿಂದೆಯೇ ನಿಮ್ಮ ಪಾಳಯಕ್ಕೆ ಸೆಳೆದುಕೊಂಡಿರುವುದರಿಂದ ಅವರು ನೆಮ್ಮದಿಯಿಂದಿದ್ದಾರೆ.
ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸುವುದು ಮೋದಿ ಸರಕಾರದ ಕೆಲಸವಲ್ಲ - ಬಿ.ವೈ. ವಿಜಯೇಂದ್ರ, ಶಾಸಕ
ಸ್ವತಃ ತಾನು ನೀಡಿದ ಭರವಸೆಗಳನ್ನು ನೆನಪಿಸಿಕೊಳ್ಳುವುದಕ್ಕೆ ಮೋದಿಯ ಬಳಿ ಸಮಯ ಇಲ್ಲ ಎಂಬುದು ಈಗ ಎಲ್ಲರಿಗೆ ಗೊತ್ತಿದೆ.
ಮಹಿಳೆಯರಂತೆ ಪುರುಷರು ಮತದಾನ ಮಾಡಿದ್ದಾರೆ, ಹಾಗಿರುವಾಗ ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಪ್ರಯಾಣ ಕಲ್ಪಿಸಬೇಕು - ವಾಟಾಳ್ ನಾಗರಾಜ್, ಹೋರಾಟಗಾರ
ನೀವು ಇಂತಹ ಚಿಲ್ಲರೆ ವಿಷಯಗಳಲ್ಲಿ ಬ್ಯುಸಿ ಆಗಿಬಿಟ್ಟರೆ ಕನ್ನಡ ನಾಡಿನ ಮೇಲೆ ಸಂಸ್ಕೃತ ಹೇರಿಕೆಯ ವಿರುದ್ಧ ಯಾರು ಹೋರಾಡಬೇಕು?
ಸಿದ್ದರಾಮಯ್ಯನವರ ಸ್ವಭಾವ ಮತ್ತು ರಾಜಕೀಯ ನಡವಳಿಕೆ ಗಮನಿಸಿದರೆ ಡಿಸಿಎಂ ಡಿಕೆಶಿಗೆ ಸಿಎಂ ಆಗಲು ಬಿಡುವುದಿಲ್ಲ - ಭಗವಂತ ಕೂಬಾ, ಕೇಂದ್ರ ಸಚಿವ
ಸಿದ್ದರಾಮಯ್ಯನವರು ಡಿಕೆಶಿಯನ್ನು ಪ್ರಧಾನಿಪಟ್ಟಕ್ಕೆ ಸಜ್ಜುಗೊಳಿಸುತ್ತಿದ್ದಾರೆಂಬ ಗುಸುಗುಸು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆಯಲ್ಲಾ?
ಕೇಂದ್ರದಲ್ಲಿ ಅನಕ್ಷರಸ್ಥರು ಸರಕಾರ ನಡೆಸುತ್ತಿದ್ದಾರೆ. ಮುಂದಿನ ಸಲ ಅನಕ್ಷರಸ್ಥರು, ನಕಲಿ ಪದವೀಧರರಿಗೆ ಮತ ನೀಡಬೇಡಿ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ನಿಮಗೆ ಸಮಸ್ಯೆ ಇರುವುದು ಅವರ ವಿದ್ಯಾರ್ಹತೆ ಬಗ್ಗೆಯೇ ಹೊರತು ಅವರ ಯಾವುದೇ ಜನವಿರೋಧಿ, ಸರ್ವಾಧಿಕಾರಿ ಧೋರಣೆಯ ಬಗ್ಗೆ ಅಲ್ಲ ಎಂಬುದು ದೊಡ್ಡ ದುರಂತ.
ಯುವ ಸಮುದಾಯ ಪ್ರಜಾಪ್ರಭುತ್ವ, ರಾಜಕೀಯದ ಬಗ್ಗೆ ತಿಳಿದುಕೊಳ್ಳಲು ‘ರಾಜಕೀಯ ಆಡಳಿತ ಸಂಸ್ಥೆ’ ಆರಂಭಿಸುವ ಚಿಂತನೆ ಇದೆ - ಯು.ಟಿ.ಖಾದರ್, ಸ್ಪೀಕರ್
ಸ್ಪೀಕರ್‌ಗಳ ತರಬೇತಿಗೆ ಅದೆಲ್ಲಿ ಸಾಕಾಗುತ್ತದೆ? ಅದಕ್ಕೆ ಬೇರೆಯೇ ವಿಶೇಷ ವ್ಯವಸ್ಥೆ ಮಾಡಬೇಕಾದದ್ದು ಅನಿವಾರ್ಯ.
ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿದ್ದು, ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆಗೆ ನೀಡಿದಂತೆ- ಜೈರಾಮ್ ರಮೇಶ್, ಕಾಂಗ್ರೆಸ್ ನಾಯಕ
ನಾಳೆ ನಿಮ್ಮ ಸರಕಾರ ಬಂದರೆ ಅದೇ ಗೀತಾ ಪ್ರೆಸ್‌ನವರಿಗೆ ಅದಕ್ಕಿಂತ ದೊಡ್ಡ ಪುರಸ್ಕಾರಗಳನ್ನು ನೀಡುವ ಸರ್ವ ಸಾಧ್ಯತೆಗಳಿವೆ.
ಕಾಂಗ್ರೆಸ್ ಸರಕಾರ ಮತಾಂತರ, ಗೋಹತ್ಯೆ ನಿಷೇಧ ಹಿಂಪಡೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು - ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ- ಪೇಜಾವರ ಮಠ
ಕಾಂಗ್ರೆಸ್‌ನವರು ಬಿಜೆಪಿ, ಆರೆಸ್ಸೆಸ್‌ನವರನ್ನು ವಿರೋಧಿಸುವ ದುಸ್ಸಾಹಸಕ್ಕೆ ಇಳಿಯಬಾರದು ಎಂದು ಉಪದೇಶಿಸಿ. ಅಲ್ಲಿ ತುಂಬಿರುವ ನಿಮ್ಮ ನಿಷ್ಠರು ಶಿರಸಾವಹಿಸುತ್ತಾರೆ.
ಯೋಗ ಮಾಡುವ ಮೂಲಕ ಪ್ರಧಾನಿ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ -ಯಡಿಯೂರಪ್ಪ, ಮಾಜಿ ಸಿಎಂ
ಅವರು ಕೆಲವೊಮ್ಮೆ ಅಲ್ಪಸ್ವಲ್ಪಆಡಳಿತವನ್ನೂ ಮಾಡುತ್ತಾರೆಂದು ಜಗತ್ತಿಗೆ ತಿಳಿಸುವುದು ಹೇಗೆ?
ಭಾರತದ ಪ್ರಗತಿಯನ್ನು ಸಹಿಸದ ಕೆಲವು ದೇಶಗಳು ರಾಷ್ಟ್ರದೊಳಗಿನ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಸಿವೆ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
ಇದೇನು, ಆತ್ಮಾವಲೋಕನವೇ?