ಪ್ರಾ..ಟ್ ಎಂದು ಮೊದಲು ಹೇಳಿದ್ದು ಸಿ.ಟಿ. ರವಿ ಅಲ್ಲವಂತೆ!
ಆನ್ ರೆಕಾರ್ಡ್
ಬೆಳಗಾವಿ ಅಧಿವೇಶನದ ಕ್ಲೈಮ್ಯಾಕ್ಸ್ ಪುಷ್ಪಾ-2 ಸಿನೆಮಾದ ಕ್ಲೈಮ್ಯಾಕ್ಸ್ ಅನ್ನು ನಿವಾಳಿಸಿ ಬಿಸಾಕಿದೆ. ಪಂಚಮಸಾಲಿ ಹೋರಾಟದ ಕಿಚ್ಚು ಕ್ಷಣಮಾತ್ರದಲ್ಲಿ ಕೊಚ್ಚಿಕೊಂಡು ಹೋಗಿದೆ. ಉತ್ತರ ಕರ್ನಾಟಕದ ಚರ್ಚೆಯೂ ಅಡ್ರೆಸ್ಸಿಗಿಲ್ಲ. ಚರ್ಚೆ ಏನಿದ್ದರೂ ಪ್ರಾ..ಟ್ ಮೇಲೆ. ಸಿ.ಟಿ. ರವಿ ನಿಜವಾಗಿಯೂ ಪ್ರಾ..ಟ್ ಎಂದು ಹೇಳಿದ್ದಾರೆಯೇ? ಅಥವಾ ಇಲ್ಲವೇ ಎನ್ನುವ ಬಗ್ಗೆ. ಸಿಟಿ ರವಿ ‘ಫ್ರಸ್ಟ್ರೇಷನ್’ ಅಂದದ್ದನ್ನು ಲಕ್ಷ್ಮೀ ಹೆಬ್ಬಾಳ್ಕರ್ ‘ಪ್ರಾ..ಟ್’ ಅಂತಾ ಟ್ವಿಸ್ಟ್ ಮಾಡಿಬಿಟ್ಟರು ಎನ್ನುವ ವಾದವೂ ಇದೆ. ಇರಲಿ.
ಆದರೆ ವಿಷಯ ಏನೆಂದರೆ ಪ್ರಾ..ಟ್ ಎಂದು ಮೊದಲು ಹೇಳಿದ್ದು ಸಿ.ಟಿ. ರವಿ ಅಲ್ಲವಂತೆ! ಲಕ್ಷ್ಮೀ ಹೆಬ್ಬಾಳ್ಕರ್ ಪರಿಷತ್ ಒಳಗೆ ಬರುತ್ತಿದ್ದಂತೆ ಬಿಜೆಪಿಯ ಸದಸ್ಯರೊಬ್ಬರು ‘ಪ್ರಾ..ಟ್ ಬಂದ್ಲು’ ಎಂದು ಪಕ್ಕದಲ್ಲಿದ್ದ ಸಿ.ಟಿ. ರವಿಯ ಕಿವಿ ಊದಿದರಂತೆ. ಆಮೇಲೆ ಇದು ಕ್ಯಾಚಿ ಪದ ಎಂದು ರವಿ ಹೇಳಿದ್ದರೂ ಹೇಳಿರಬಹುದು ಎಂದು ಬಿಜೆಪಿಯ ಇನ್ನೊಬ್ಬ ಸದಸ್ಯರು ಆಫ್ ಡಿ ರೆಕಾರ್ಡ್ ಮಾತನಾಡುತ್ತಾ ತಿಳಿಸಿದ್ದಾರೆ.
► ಸಿ.ಟಿ. ರವಿಗೆ ಇಲ್ಲ ವಿಜಯೇಂದ್ರ ಸಪೋರ್ಟ್
ಜಗಳ-ಒಳಜಗಳಗಳ ಪೇಟೆಂಟ್ ಪಡೆದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ವಲ್ಪಮಟ್ಟಿಗೆ ಕದನವಿರಾಮ ಘೋಷಿಸಿವೆ. ಶಿಸ್ತಿನ ಪಕ್ಷ ಎಂದು ಪೋಸು ಕೊಡುತ್ತಿದ್ದ ಬಿಜೆಪಿ 2008ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಹಾರಿಸಿದ ಬಂಡಾಯದ ಬಾವುಟವನ್ನು ಹೀನಾಯ ಸೋಲಿನ ಬಳಿಕವೂ ಕೆಳಗಿಳಿಸಿಲ್ಲ. ಸಿ.ಟಿ. ರವಿ ವಿಚಾರದಲ್ಲಿ ಬಿಜೆಪಿಯನ್ನು ಬಗ್ಗು ಬಡಿಯಬೇಕು ಎಂದು ಕಾಂಗ್ರೆಸ್ ಇರುವ-ಇಲ್ಲದಿರುವ ಹತಾರಗಳನ್ನು ಹುಡುಕುತ್ತಿದ್ದರೆ ಪುತ್ರರತ್ನ ವಿಜಯೇಂದ್ರ ಮತ್ತು ಸಾಮ್ರಾಟ್ ಅಶೋಕ್ ‘ಸಿ.ಟಿ. ರವಿ ಯಾವ ಬಣದವರು ಹೇಳಿ’ ಎಂದು ಸ್ಮೈಲ್ ಕೊಡುತ್ತಿದ್ದಾರಂತೆ!
ಇತ್ತೀಚೆಗೆ ಬಸನಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ವಗೈರೆ ವಗೈರೆಗಳು ತಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾಗ ಒಳಗೊಳಗೆ ಕುಮ್ಮಕ್ಕು ನೀಡಿ ಕಿಕ್ ತೆಗೆದುಕೊಳ್ಳುತ್ತಿದ್ದ ಸಿ.ಟಿ. ರವಿಗೆ ನಾವ್ಯಾಕೆ ಬೆಂಬಲ ಕೊಡಬೇಕು ಎನ್ನುವ ಖಡಕ್ ವಾದ ಅವರದು. ಆದರೂ ಇರಲಿ ಎಂದು ಮಾಧ್ಯಮದವರು ಕೇಳಿದಾಗ ಮಾತನಾಡುತ್ತಿದ್ದಾರಂತೆ.
► ಕೂತಲ್ಲಿ ಕೂರುತ್ತಿಲ್ಲ ಡಿಕೆಶಿ!
ಬೈಸಿಕೊಂಡಿರುವುದು ಲಕ್ಷ್ಮೀ ಹೆಬ್ಬಾಳ್ಕರ್, ಆದರೆ ಶ್ಯಾನೆ ಬೇಜಾರಾಗಿರುವುದು ಡಿ.ಕೆ. ಶಿವಕುಮಾರ್ ಅವರಿಗಂತೆ. ಕೆರಳಿ ಕೆಂಡವಾಗಿರುವ ಕನಕಪುರದ ಬಂಡೆ ಮಂಡೆ ಬಿಸಿಮಾಡಿಕೊಂಡು ಕೂತಲ್ಲಿ ಕೂರುತ್ತಿಲ್ಲ, ನಿಂತಲ್ಲಿ ನಿಲ್ಲುತ್ತಿಲ್ಲವಂತೆ. ಬಿಜೆಪಿಯವರು ಮೀಡಿಯಾ-ಸೋಷಿಯಲ್ ಮೀಡಿಯಾ ಬಳಸಿಕೊಂಡು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ನಾವು ಈ ಪ್ರಕರಣವನ್ನು ಲಾಜಿಕಲ್ ಎಂಡ್ಗೆ ತೆಗೆದುಕೊಂಡು ಹೋಗಲೇಬೇಕು ಎಂದು ಶಪಥ ಮಾಡಿದ್ದಾರಂತೆ. ಆದರೆ ಯಾವ ರೀತಿಯ ಲಾಜಿಕಲ್ ಎಂಡ್ಗೆ ತೆಗೆದುಕೊಂಡು ಹೋಗಬೇಕು ಎನ್ನುವುದು ಉಳಿದ ಕಾಂಗ್ರೆಸ್ ನಾಯಕರಿಗೆ ಅರ್ಥವಾಗುತ್ತಿಲ್ಲ.
► ನಯನ ಮೋಟಮ್ಮ ಕಾಣಿಸುತ್ತಿಲ್ಲವೇಕೆ?
ಮೂಡಿಗೆರೆ ಶಾಸಕಿ ನಯನ ತಮ್ಮ ತಾಯಿ ಮೋಟಮ್ಮ ಅವರಿಗಿಂತಲೂ ಹೆಚ್ಚು ನಂಬಿಕೊಂಡಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು. ಅಂತಹ ಗಾಡ್ ಮದರ್ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಿ.ಟಿ. ರವಿ ಪ್ರಾಸ್ಟಿಟ್ಯೂಟ್ ಎಂದು ಕರೆದರೂ ನಯನ ಮೋಟಮ್ಮ ಏಕೆ ಅಬ್ಬರಿಸಿ ಬೊಬ್ಬಿರಿಯುತ್ತಿಲ್ಲ ಎನ್ನುವ ಪ್ರಶ್ನೆ ಕಾಂಗ್ರೆಸ್ ಕಿಚನ್ ರೂಮಿನಿಂದ ಕೇಳಿಬರುತ್ತಿದೆ. ನೆಪಮಾತ್ರಕ್ಕೆ ಒಂದು ಬೈಟ್ ಕೊಟ್ಟು ಸೀದಾ ಮೂಡಿಗೆರೆ ಕಡೆ ಹೋಗಿಬಿಟ್ಟಿದ್ದಾರಂತೆ ನಯನ ಮೊಟಮ್ಮ.
ನಯನ ಮೋಟಮ್ಮ ಅನುಭವಿಸುತ್ತಿರುವ ನೋವೇ ಬೇರೆ. ಅವರಿಗೂ ಗಾಡ್ ಮದರ್ ರೀತಿಯಲ್ಲಿ ಸಿಕ್ಕಾಪಟ್ಟೆ ಆಘಾತವಾಗಿದೆಯಂತೆ. ‘ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಮಾನ ಆಗಿರುವುದು ಬಿಜೆಪಿ ನಾಯಕರಿಂದ. ಅದನ್ನು ಖಂಡಿಸಬಹುದು, ದಂಡಿಸಬಹುದು. ಆದರೆ ನನಗೆ ಅವಮಾನ ಆಗಿರುವುದು ನಮ್ಮದೇ ಪಕ್ಷದ ಸ್ಪೀಕರ್ ಖಾದರ್ ಅವರಿಂದ. ಅವರು ನನ್ನನ್ನು ಅಸೆಂಬ್ಲಿಯಿಂದ ಗೆಟ್ ಔಟ್ ಎಂದರು. ನಾನು ಯಾರಿಗೆ ದೂರು ನೀಡಲಿ’ ಎಂದು ನೊಂದು ಗಾಡ್ ಮದರ್ ವಿಚಾರಕ್ಕೂ ಕೇರ್ ಮಾಡದೆ ಮೂಡಿಗೆರೆಗೆ ಹೋಗಿದ್ದಾರಂತೆ.
► ಅಡ್ರೆಸ್ಸಿಗಿಲ್ಲ ಮಹಿಳಾ ಕಾಂಗ್ರೆಸ್!
ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ಮಹಿಳಾ ಕಾಂಗ್ರೆಸ್ ಮುನ್ನಡೆಸಿದ್ದರು. ಆದರೆ ಈಗ ಅವರನ್ನು ಸಿ.ಟಿ. ರವಿ ಆಡಬಾರದ ಮಾತಿನಿಂದ ಬೈದಿದ್ದರೂ ಮಹಿಳಾ ಕಾಂಗ್ರೆಸ್ ಅಂದುಕೊಂಡಷ್ಟು ಮಟ್ಟಿಗೆ ಆ್ಯಕ್ಟಿವ್ ಆಗಿಲ್ಲವಂತೆ. ಯಾಕೆ ಆ್ಯಕ್ಟಿವ್ ಆಗಿಲ್ಲ ಎಂದು ಮಹಿಳಾ ನಾಯಕಿಯೊಬ್ಬರನ್ನು ಕೇಳಿದರೆ, ‘ಲಕ್ಷ್ಮೀ ಹೆಬ್ಬಾಳ್ಕರ್ ಬೇರೆ ನಾಯಕಿಯರ ವಿಷಯದಲ್ಲಿ ಹೇಗೆ ಆ್ಯಕ್ಟಿವ್ ಆಗುತ್ತಿದ್ದರೋ ಅದೇ ರೀತಿ ಬೇರೆಯವರೂ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲ್ಲಿ ಆ್ಯಕ್ಟಿವ್ ಆಗುತ್ತಿದ್ದಾರೆ. ಇದರಲ್ಲಿ ಬಹಳ ವಿಶೇಷವೇನಿಲ್ಲ’ ಎನ್ನುತ್ತಾರೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯವರ ಕಾರ್ಯವೈಖರಿಯ ಬಗ್ಗೆ ಕೇಳಿದರೆ, ‘ಅವರದು ಸರಕಾರಿ ನೌಕರಿ ಇದ್ದ ಹಾಗೆ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಮಾತ್ರ. ಸಂಜೆ ಆದ ಮೇಲೆ ಸಿಗುವುದಿರಲಿ, ಫೋನ್ ಕೂಡ ಎತ್ತಲ್ಲ. ಬೆಳಗ್ಗೇನೂ ಅವರು ಕಾರ್ಯಪ್ರವೃತ್ತರಾಗುವುದು ತಡವಾಗಿ’ ಎಂದರು. ಕಾರಣವನ್ನು ಮಾತ್ರ ತಿಳಿಸಲಿಲ್ಲ.
► ದೇವೇಗೌಡರ ರಾಜ್ಯಸಭಾ ರಹಸ್ಯ ಬಯಲು
ತಮ್ಮ ಜೀವನದಲ್ಲಿ ಎಂದೂ ಹಿಂಬದಿಯ ರಾಜಕಾರಣ ಮಾಡದಿದ್ದ ಅಂದರೆ ಮೇಲ್ಮನೆಗೆ ಹೋಗಿರದಿದ್ದ ಎಚ್.ಡಿ. ದೇವೇಗೌಡರು ರಾಜ್ಯಸಭೆಗೆ ಹೋಗಲು ಕಾರಣ ಯಾರು ಮತ್ತು ಏನು ಗೊತ್ತಾ? ಕಾರಣ ನರೇಂದ್ರ ಮೋದಿ. ಮೋದಿ ‘ನಿಮ್ಮಂಥ ಅನುಭವಿಗಳು ಸಂಸತ್ತಿನಲ್ಲಿ ಇರಲೇಬೇಕು, ರಾಜ್ಯಸಭೆಗೆ ಬನ್ನಿ’ ಎಂದು ಕೇಳಿಕೊಂಡಿದ್ದರಿಂದ ಮನಸ್ಸು ಇಲ್ಲದಿದ್ದರೂ ದೇವೇಗೌಡರು ರಾಜ್ಯಸಭೆಗೆ ಹೋಗಿದ್ದಾರಂತೆ. ಹಾಗಂತ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ದಿಲ್ಲಿಯಲ್ಲಿ ಆತ್ಮೀಯರ ಜೊತೆ ಹರಟುತ್ತಿದ್ದ ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ರಾಜ್ಯಸಭಾ ರಹಸ್ಯವನ್ನು ಬಯಲು ಮಾಡಿದ್ದಾರೆ. ಕೇಳುತ್ತಿದ್ದವರಿಗೆ ‘ದೇವೇಗೌಡರು ರಾಜ್ಯಸಭೆಯಲ್ಲಿರುವುದು ಕಾಂಗ್ರೆಸ್ ಬೆಂಬಲದಿಂದ ಅಲ್ವಾ?, ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವುದು ಈ ಲೋಕಸಭಾ ಚುನಾವಣೆಯಿಂದ ಆಲ್ವಾ’ ಎಂದು ಕೇಳುವ ಧೈರ್ಯ ಬಂದಿಲ್ಲ.