ಮಹಾರಾಷ್ಟ್ರ-ಜಾರ್ಖಂಡ್ ಚುನಾವಣೆಗಳ ಸುತ್ತ...
ಮೊದಲನೆಯದಾಗಿ ಮಹಾರಾಷ್ಟ್ರ ಚುನಾವಣೆ ವಿಚಾರ.
ಮಹಾರಾಷ್ಟ್ರದ ಎಲ್ಲಾ 288 ಸ್ಥಾನಗಳಲ್ಲಿ ಔಪಚಾರಿಕ ಕದನ ನಡೆಯಲಿರುವುದು ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ನಡುವೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್‌ಸಿಪಿ ಪ್ರಮುಖ ಪಕ್ಷಗಳಾಗಿದ್ದ ಮಹಾರಾಷ್ಟ್ರದಲ್ಲಿ ಈಗ ಎರಡು ಶಿವಸೇನೆಗಳಿವೆ ಮತ್ತು ಎರಡು ಎನ್‌ಸಿಪಿಗಳಿವೆ. ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಇವೆ. ಈ ಆರು ಪ್ರಮುಖ ಪಕ್ಷಗಳ ಜೊತೆಗೆ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ, ಬಹುಜನ ಸಮಾಜ ಪಕ್ಷ, ಎಐಎಂಐಎಂ ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ ಇವೆ. ಇದರ ಜೊತೆಗೆ, ಪ್ರಹಾತ್ ಜನಶಕ್ತಿ ಪಕ್ಷದ ಬಚ್ಚು ಕಡು ನೇತೃತ್ವದಲ್ಲಿ ಪರಿವರ್ತನ್ ಮಹಾಶಕ್ತಿ ಎಂಬ ಹೊಸದಾಗಿ ರೂಪುಗೊಂಡ ತೃತೀಯ ರಂಗವಿದೆ. ಇದು ಸ್ವಾಭಿಮಾನಿ ಶೆಟ್ಕರಿ ಸಂಘಟನೆ, ರೈತರ ಮೋರ್ಚಾವನ್ನು ಒಳಗೊಂಡಿದೆ.
ಆಡಳಿತಾರೂಢ ಮಹಾಯುತಿ ಮತದಾರರನ್ನು ಓಲೈಸಲು ದೊಡ್ಡ ಅನುಕೂಲವನ್ನು ಹೊಂದಿತ್ತು. ಅದು ‘ಲಡ್ಕಿ ಬಹಿನ್’ ಯೋಜನೆಯ ಮೂಲಕ ಲಕ್ಷಗಟ್ಟಲೆ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡುತ್ತಿದೆ. ಈಗಾಗಲೇ ಕೆಲವು ಹೊಸ ಜಾತಿಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದ್ದು, ಕೆನೆಪದರದ ಆದಾಯ ಅರ್ಹತೆಯನ್ನು ವಾರ್ಷಿಕ ರೂ. 8 ಲಕ್ಷದಿಂದ 15 ಲಕ್ಷಕ್ಕೆ ಏರಿಸಿದೆ ಮತ್ತು ಕೆಲವು ಹಿಂದುಳಿದ ಜಾತಿಗಳ, ಹಾಗೆಯೇ ಬ್ರಾಹ್ಮಣರ ಆರ್ಥಿಕ ಅಭಿವೃದ್ಧಿಗೂ ಒತ್ತು ಕೊಟ್ಟಿದೆ. ಮಹಾಯುತಿ ಹಿಂದುತ್ವದ ಕಾರ್ಡನ್ನು ‘ಬಟೇಂಗೆ ತೊ ಕಟೇಂಗೆ’ ಎಂಬ ಘೋಷಣೆಯೊಂದಿಗೆ ಪ್ರಯೋಗಿಸಿದೆ. ಈ ಹೊತ್ತಲ್ಲಿ ಮಹಾಯುತಿಗೆ ಪ್ರತಿಯಾಗಿ ಮಹಾ ವಿಕಾಸ್ ಅಘಾಡಿ ಶಿವಾಜಿಯ ಜಾತ್ಯತೀತ ರುಜುವಾತುಗಳು ಮತ್ತು ದ್ಯಾನೇಶ್ವರ್, ತುಕಾರಾಂ, ನಾಮದೇವ್, ಫುಲೆ, ಅಂಬೇಡ್ಕರ್, ಶಾಹು ಪ್ರತಿಪಾದನೆಯ ಪ್ರಗತಿಪರ ನೆಲೆಯಿಂದ ಜನರನ್ನು ತಲುಪಲು ಯತ್ನಿಸಿದೆ.
ಇಡೀ ಮಹಾರಾಷ್ಟ್ರ ಚುನಾವಣೆ ಗೊಂದಲ ಗೋಜಲುಗಳ ಗೂಡೇ ಆಗಿದೆ ಎಂಬುದು ನಿಜ. ಇನ್ನೊಂದೆಡೆ ಗೊಂದಲಗಳನ್ನು ಸೃಷ್ಟಿಸುವುದು ಕೂಡ ನಡೆಯಿತೇ ಎಂಬ ಪ್ರಶ್ನೆಯೂ ಇದೆ. ಮಹಾಯುತಿ, ಎಂವಿಎ ಹೊರತಾಗಿ ಬಿಜೆಪಿ ಮತ್ತು ರಾಜ್ ಠಾಕ್ರೆಯವರ ಎಂಎನ್‌ಎಸ್ ನಡುವಿನ ತೆರೆಮರೆಯ ಮೈತ್ರಿಯೂ ಸುದ್ದಿಯಲ್ಲಿದ್ದು, ಇದರ ನೇತೃತ್ವ ದೇವೇಂದ್ರ ಫಡ್ನವೀಸ್ ಅವರದು. ಮುಂಬೈ ವಲಯದಲ್ಲಿ 36 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಅಲ್ಲಿ ರಾಜ್ ಠಾಕ್ರೆಯವರ ಎಂಎನ್‌ಎಸ್ 26 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸುತ್ತಿದೆ. ಮುಂಬೈನಲ್ಲಿ ರಾಜ್ ಠಾಕ್ರೆ ಪಕ್ಷಕ್ಕೆ ಒಳ್ಳೆಯ ಬೇಸ್ ಇದೆ. ಆದರೆ ದಾದರ್ ಮಾಹಿಂ ಕ್ಷೇತ್ರದಲ್ಲಿ ಈಗ ಮೊದಲ ಚುನಾವಣೆ ಎದುರಿಸುತ್ತಿರುವ ರಾಜ್ ಠಾಕ್ರೆ ಮಗ ಅಮಿತ್ ಠಾಕ್ರೆಗೆ ಎದುರಾಳಿಯಾಗಿ ಉದ್ಧವ್ ಠಾಕ್ರೆ ಶಿವಸೇನೆ ಅಭ್ಯರ್ಥಿ ಮಾತ್ರವಲ್ಲದೆ, ಏಕನಾಥ್ ಶಿಂದೆ ಶಿವಸೇನೆಯ ಅಭ್ಯರ್ಥಿ ಕೂಡ ಇದ್ದಾರೆ. ಇದರೊಂದಿಗೆ, ದಾದರ್ ಮಾಹಿಂ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಂತಾಗಿದೆ. ಸಿಎಂ ಶಿಂದೆ ಅವರ ಪಕ್ಷದ ನಾಯಕರೊಬ್ಬರು ಮಹಾಯುತಿಯ ಅಭ್ಯರ್ಥಿಯಾಗಿದ್ದರೂ, ಬಿಜೆಪಿ ಇಲ್ಲಿ ಶಿಂದೆ ಪಕ್ಷದ ಅಭ್ಯರ್ಥಿಯ ಬದಲು ರಾಜ್ ಠಾಕ್ರೆ ಪುತ್ರನ ಬೆಂಬಲಕ್ಕೆ ನಿಂತಿತ್ತು. ನಂತರ ಒತ್ತಡದ ಮೇರೆಗೆ ಶಿಂದೆ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ. ರಾಜ್ ಠಾಕ್ರೆಯವರ ಪಕ್ಷ ಮುಂಬೈ ವಲಯದ ಉಳಿದ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಎದುರು ಯಾರನ್ನೂ ಕಣಕ್ಕಿಳಿಸಿಲ್ಲ. ಆದರೆ ಎಲ್ಲಿ ಶಿಂದೆ ಪಕ್ಷದ ಅಭ್ಯರ್ಥಿಗಳಿದ್ದಾರೋ ಅಲ್ಲಿ ರಾಜ್ ಠಾಕ್ರೆ ಪಕ್ಷದ ಅಭ್ಯರ್ಥಿಗಳು ಎದುರಾಳಿಗಳಾಗಿದ್ದಾರೆ. ಹೀಗೆ ರಾಜ್ ಠಾಕ್ರೆಯನ್ನು ಬಳಸಿಕೊಂಡು ಒಂದು ಕಡೆ ಉದ್ಧವ್ ಠಾಕ್ರೆ ಮತ್ತು ಇನ್ನೊಂದು ಕಡೆ ಶಿಂದೆಯನ್ನು ದುರ್ಬಲಗೊಳಿಸುವ ತಂತ್ರವನ್ನು ಫಡ್ನವೀಸ್ ಹೂಡಿದ್ದಾರೆ. ಮತಗಳ ವಿಭಜನೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ.
ಇನ್ನೊಂದೆಡೆ, 2019ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯೊಂದಿಗೆ ಸರಕಾರ ರಚಿಸಲು ಬಿಜೆಪಿ ಮತ್ತು ಶರದ್ ಪವಾರ್ ನಡುವೆ ಸಭೆ ನಡೆದಿತ್ತು ಮತ್ತು ಆ ಸಭೆಯಲ್ಲಿ ಗೌತಮ್ ಅದಾನಿ ಕೂಡ ಇದ್ದರು ಎಂದು ಅಜಿತ್ ಪವಾರ್ ಹೇಳಿದ್ದಾರೆ. ಗೌತಮ್ ಅದಾನಿ ಮತ್ತು ಬಿಜೆಪಿ ನಡುವಿನ ಸಂಬಂಧ ಏನು? ಅವತ್ತಿನ ಆ ರಹಸ್ಯ ಸಭೆಯಲ್ಲಿ ಪಕ್ಷಕ್ಕೆ ಹೊರಗಿನವರಾದ ಅದಾನಿ ಭಾಗವಹಿಸಿದ್ದು ಹೇಗೆ? ಎಂಬುದೇ ಈಗ ಎದ್ದಿರುವ ಪ್ರಶ್ನೆ. ಅವತ್ತಿನ ರಹಸ್ಯದ ಕಥೆಯನ್ನು ಈಗ ಮಹಾರಾಷ್ಟ್ರ ಚುನಾವಣೆ ಹೊತ್ತಿನಲ್ಲಿ ಅಜಿತ್ ಪವಾರ್ ಬಹಿರಂಗಪಡಿಸಿರುವುದರ ಹಿಂದಿನ ರಾಜಕೀಯ ಏನು? ಎಂಬ ಅನುಮಾನವೂ ಮೂಡಿದೆ.
ಹಾಗಾದರೆ ಮಹಾರಾಷ್ಟ್ರವನ್ನು ಗೆಲ್ಲುವವರು ಯಾರು?
ಫಲಿತಾಂಶ ಏನಾಗಬಹುದು ಎಂದು ನೋಡುವಾಗ, ಪ್ರಮುಖವಾಗಿ ಕೆಲವು ವಿಚಾರಗಳು ಚರ್ಚೆಯಲ್ಲಿವೆ.
1. ಲೋಕಸಭೆ ಫಲಿತಾಂಶದ ಹಿನ್ನೆಲೆಯಲ್ಲಿನ ಲೆಕ್ಕಾಚಾರ ಬೇಡ
ಎಂವಿಎ ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಗೆದ್ದಿದೆ. ಸಾಂಗ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಮತ್ತು ಶರದ್ ಪವಾರ್ ಮೌನವಾಗಿ ಬೆಂಬಲಿಸಿದ್ದ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ಮತ್ತೊಂದೆಡೆ ಮಹಾಯುತಿ 48ರಲ್ಲಿ 18 ಸ್ಥಾನಗಳನ್ನು ಮಾತ್ರ ಗೆದ್ದಿತು. 2019ರ ಫಲಿತಾಂಶಕ್ಕೆ ಹೋಲಿಸಿದರೆ 25 ಸ್ಥಾನಗಳ ಕುಸಿತ ಕಂಡಿತು. ಕೆಲವು ಅಂಶಗಳು ಎಂವಿಎ ಮುನ್ನಡೆಗೆ ಲೋಕಸಭೆ ಮಟ್ಟದಲ್ಲಿ ಕಾರಣವಾಗಿರಬಹುದಾದರೂ, ಅಸೆಂಬ್ಲಿ ಮಟ್ಟದಲ್ಲಿ ನಿರ್ಣಾಯಕ ಮುನ್ನಡೆಗೆ ಅವೇ ಅಂಶಗಳು ನೆರವಾಗುತ್ತವೆಂದು ಹೇಳಲಾಗದು. ಮತಗಳಿಕೆ ಪ್ರಮಾಣ ನೋಡಿದರೆ ಮುನ್ನಡೆಯ ಅಂತರ ಹೆಚ್ಚಿಲ್ಲ. ಎಂವಿಎ ಶೇ.43.71 ಮತಗಳನ್ನು ಗಳಿಸಿದರೆ, ಮಹಾಯುತಿ ಶೇ.43.55 ಮತಗಳನ್ನು ಪಡೆದಿದೆ. ಅಂದರೆ ಅಂತರ ಶೇ.0.16 ಮಾತ್ರ. ಇನ್ನು ಒಟ್ಟು ಮತಗಳ ಲೆಕ್ಕದಲ್ಲಿ ಎರಡೂ ಮೈತ್ರಿಗಳ ನಡುವಿನ ವ್ಯತ್ಯಾಸ ಕೇವಲ ಎರಡು ಲಕ್ಷ ಮತಗಳು. ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ನಡುವೆ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಲೋಕಸಭೆ ಮಟ್ಟದಲ್ಲಿ ಅಷ್ಟು ಗಮನಾರ್ಹವೆನ್ನಿಸದ ಸಣ್ಣ ಪಕ್ಷಗಳು ಈಗ ಪ್ರಾಮುಖ್ಯತೆ ಪಡೆಯಬಹುದು. ವಂಚಿತ್ ಬಹುಜನ ಅಘಾಡಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಎಐಎಂಐಎಂ, ಬಹುಜನ ವಿಕಾಸ್ ಅಘಾಡಿ, ಪ್ರಹಾರ್ ಜನಶಕ್ತಿ ಪಾರ್ಟಿ ಇತ್ಯಾದಿಗಳು ಆಡಬಹುದಾದ ಆಟ ಕುತೂಹಲ ಮೂಡಿಸಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ ಹೆಚ್ಚು ಸ್ಥಳೀಯವಾಗಿರುತ್ತದೆ ಮತ್ತು ಬಹಳಷ್ಟು ಅಭ್ಯರ್ಥಿಗಳ ಮೇಲೆ ಅವಲಂಬಿತವಾಗಿರುತ್ತದೆ. ಲೋಕಸಭೆ ಚುನಾವಣೆಯಲ್ಲಿನ ಮೋದಿ ಚಹರೆ, ‘ಇಂಡಿಯಾ’ ಬ್ಲಾಕ್‌ನ ಸಂವಿಧಾನ ಉಳಿಸಿ ಘೋಷಣೆ ಇವೆಲ್ಲ ಅಸೆಂಬ್ಲಿ ಮಟ್ಟದಲ್ಲಿ ನಿರ್ಣಾಯಕವಾಗದೇ ಹೋಗಬಹುದು.
2. ಪ್ರಾದೇಶಿಕ ಬಲಾಬಲ
ಪ್ರತಿಯೊಂದು ಮೈತ್ರಿ ವಿವಿಧ ಪ್ರದೇಶಗಳಲ್ಲಿ ತನ್ನದೇ ಆದ ಅನುಕೂಲಗಳನ್ನು ಹೊಂದಿರುತ್ತದೆ. ಮಹಾಯುತಿ ಕೊಂಕಣ ಮತ್ತು ಥಾಣೆಯಲ್ಲಿ ಸ್ಪಷ್ಟವಾಗಿ ಮುಂದಿದೆ ಮತ್ತು ಉತ್ತರ ಮಹಾರಾಷ್ಟ್ರದಲ್ಲಿ ಸ್ವಲ್ಪ ಮಟ್ಟಿನ ಪ್ರಭಾವ ಹೊಂದಿದೆ. ಶಿವಸೇನೆ ಹೋಳಾಗಿರುವುದು ಕೊಂಕಣ ಮತ್ತು ಥಾಣೆಯಲ್ಲಿ ಉದ್ಧವ್ ಠಾಕ್ರೆಗೆ ಹೆಚ್ಚು ಹಾನಿ ತರಬಹುದು. ಮತ್ತೊಂದೆಡೆ, ಎಂವಿಎ ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಲೋಕಸಭೆ ಚುನಾವಣೆಗಿಂತ ಸ್ವಲ್ಪ ಹೆಚ್ಚೇ ಮುನ್ನಡೆ ಸಾಧಿಸಿದೆ. ಮುಂಬೈ ನಗರ ಮತ್ತು ಮುಂಬೈ ಉಪನಗರಗಳಲ್ಲಿ, ಎರಡೂ ಮೈತ್ರಿಗಳು ಸಮಬಲ ಹೊಂದಿವೆ. ಆದರೂ ಫಲಿತಾಂಶ ಎಂವಿಎಗೆ ಸ್ವಲ್ಪ ಹೆಚ್ಚು ಅನುಕೂಲಕರ ಆಗಬಹುದು. ಅಂತಿಮವಾಗಿ, ಚುನಾವಣೆಯನ್ನು ನಿರ್ಧರಿಸುವ ಪ್ರದೇಶ ವಿದರ್ಭ. ಇಲ್ಲಿನ 35 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ.
3. ಏಕನಾಥ್ ಶಿಂದೆ ಕುರಿತ ಜನಾಭಿಪ್ರಾಯ ಸುಧಾರಣೆ
ಏಕನಾಥ್ ಶಿಂದೆ ಅವರು ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದ ದಿನಗಳಿಗೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ಇದೆ. ಮಹಾಯುತಿ ಬಗ್ಗೆ ಅತೃಪ್ತಿ ಹೊಂದಿರಬಹುದಾದ ಮತದಾರರು ಕೂಡ ಶಿಂದೆ ಬಗ್ಗೆ ನಕಾರಾತ್ಮ ಅಭಿಪ್ರಾಯ ಹೊಂದಿಲ್ಲ ಎನ್ನಲಾಗುತ್ತಿದೆ. ಶಿಂದೆ ವರ್ಚಸ್ವಿ ನಾಯಕ ಅಥವಾ ಶ್ರೇಷ್ಠ ವಾಗ್ಮಿ ಅಲ್ಲದೆ ಇದ್ದರೂ, ತಳಮಟ್ಟದ ರಾಜಕಾರಣಿಯಾಗಿ ಗಮನ ಸೆಳೆಯುತ್ತಾರೆ. ಸರಕಾರದಲ್ಲಿನ ‘ಲಡ್ಕಿ ಬಹಿನ್’ನಂತಹ ಅನೇಕ ಯೋಜನೆಗಳ ಶ್ರೇಯಸ್ಸು ಕೂಡ ಶಿಂದೆಗೇ ಹೋಗುತ್ತದೆ. ಆದರೂ, ಈ ಸಕಾರಾತ್ಮಕ ಭಾವನೆ ಮತಗಳಾಗಿ ಬದಲಾಗುವುದೇ ಎಂಬ ಅನುಮಾನವೂ ಇದೆ. ಏಕೆಂದರೆ ಶಿಂದೆ ಬಿಜೆಪಿಯ ಪಾಲುದಾರ ಮತ್ತು ಬಿಜೆಪಿಯ ಪ್ರಚಾರ ಶಿಂದೆಗಿಂತಲೂ ಹೆಚ್ಚಾಗಿ ಮೋದಿ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಇದು ಮತದಾರರಲ್ಲಿ ಗೊಂದಲಕ್ಕೂ ಕಾರಣವಾಗಬಹುದು.
4. ಶರದ್ ಪವಾರ್ ಜಾಣ ನಡೆ
ಎನ್‌ಸಿಪಿ ಶರದ್ ಪವಾರ್ ಬಣ ಬಹುಶಃ ಎಂವಿಎಯಲ್ಲಿ ಪ್ರಬಲ ಪಕ್ಷವಾಗಿ ಗಮನ ಸೆಳೆದಿದೆ ಮತ್ತು ಶರದ್ ಪವಾರ್ ಪ್ರಚಾರವನ್ನು ಮುನ್ನಡೆಸಿದ ರೀತಿಯೂ ವಿಶೇಷವೆನ್ನಿಸಿದೆ. ಕೆಲ ತಿಂಗಳ ಹಿಂದೆ ಅವರ ಬಣದಲ್ಲಿ ಉತ್ತಮ ಅಭ್ಯರ್ಥಿಗಳ ಕೊರತೆ ಕಾಣಿಸುತ್ತಿತ್ತು, ಹೆಚ್ಚಿನ ಕ್ಷೇತ್ರಗಳಲ್ಲಿನ ಪ್ರಬಲರು ಅಜಿತ್ ಪವಾರ್‌ಬಣದಲ್ಲಿದ್ದರು. ಆದರೆ ಆ ಕೊರತೆಯನ್ನು ಸರಿದೂಗಿಸುವ ಹಾಗೆ ಶರದ್ ಪವಾರ್ ಜಾಣ್ಮೆಯ ನಡೆ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.
5. ಜಾತಿ ಧ್ರುವೀಕರಣ
ಮೀಸಲಾತಿ ಪ್ರಮುಖ ವಿಷಯವಾಗಿದೆ ಮತ್ತು ಬಿಜೆಪಿಯಿಂದ ಮರಾಠರ ಒಂದು ಭಾಗ ದೂರವಾಗಿರುವ ಹಾಗೂ ಒಬಿಸಿ ಮತದಾರರು ಹತ್ತಿರವಾಗಿರುವ ಸಾಧ್ಯತೆಯಿದೆ. ಆದರೆ ಧ್ರುವೀಕರಣದ ಮಟ್ಟ ತುಂಬಾ ತೀಕ್ಷ್ಣವಾಗಿಲ್ಲ. ಮಹಾಯುತಿ ಮರಾಠಾ ಮತಗಳ ದೊಡ್ಡ ಪಾಲನ್ನು ಪಡೆಯಲಿದೆ ಎನ್ನಲಾಗಿದೆ. ವಾಸ್ತವವಾಗಿ, ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆ ಪ್ರಕಾರ, ಮಹಾಯುತಿ ಮರಾಠರ ಮತ ಗಳಿಕೆಯಲ್ಲಿ ಎಂವಿಎಗಿಂತ ಸ್ವಲ್ಪ ಮುಂದಿದೆ. ಮತ್ತೊಂದೆಡೆ, ಎಂವಿಎ ಮಹಾಯುತಿಗಿಂತ ಹಿಂದೆ ಇದ್ದರೂ ಗಮನಾರ್ಹ ಪ್ರಮಾಣದ ಒಬಿಸಿ ಮತಗಳನ್ನು ಪಡೆಯುತ್ತದೆ. ಒಬಿಸಿಗಳೊಳಗೆ ಇಲ್ಲಿಯವರೆಗೆ ಬಿಜೆಪಿ ಪರವಾಗಿದ್ದ ಧಂಗರ್ ಸಮುದಾಯ ಸ್ವಲ್ಪ ಮಟ್ಟಿಗೆ ಪಕ್ಷದಿಂದ ದೂರ ಸರಿದಿದೆ ಎಂದೂ ಹೇಳಲಾಗಿದೆ. ಮೀಸಲಾತಿ ವಿಷಯವೊಂದೇ ಮತದಾನದ ಮೇಲೆ ಅಷ್ಟಾಗಿ ಪ್ರಭಾವ ಬೀರಲಾರದು ಎಂಬಂತೆ ತೋರುತ್ತಿದೆ. ನೀರಿನ ಬಿಕ್ಕಟ್ಟು ಮತ್ತು ಸೋಯಾಬೀನ್ ಮತ್ತು ಹತ್ತಿಗೆ ಬೆಂಬಲ ಬೆಲೆ ಮೊದಲಾದವುಗಳು ಪ್ರಭಾವ ಬೀರುವ ವಿಷಯಗಳಾಗಿವೆ. ಮತ್ತೊಂದೆಡೆ, ‘ಲಡ್ಕಿ ಬಹಿನ್’ನಂತಹ ಯೋಜನೆ ಮಹಿಳೆಯರ ಮತಗಳನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ. ಅನೇಕ ಮತದಾರರು ವೈಯಕ್ತಿಕ ಅಭ್ಯರ್ಥಿಗಳಿಗೆ ನಿಷ್ಠೆಯ ಆಧಾರದ ಮೇಲೆ ಮತ ಚಲಾಯಿಸುವುದೂ ಇರುತ್ತದೆ. ಸಿಎಸ್‌ಡಿಎಸ್ ಸಮೀಕ್ಷೆಯ ಪ್ರಕಾರ, ಕೇವಲ ಮೂರು ಸಾಮಾಜಿಕ ಗುಂಪುಗಳು ಮಾತ್ರವೇ ಯಾವುದೇ ಒಂದು ಮೈತ್ರಿಯ ಬಲವರ್ಧನೆಯಲ್ಲಿ ಮುಖ್ಯ ಪಾತ್ರ ವಹಿಸಲಿವೆ. ಎಂವಿಎ ಪರ ಮುಸ್ಲಿಮರು ಮತ್ತು ನವ ಬೌದ್ಧರು ಮತ್ತು ಮಹಾಯುತಿ ಪರ ಮೇಲ್ಜಾತಿ ಹಿಂದೂಗಳು ನಿಲ್ಲಲಿದ್ದಾರೆ.
6. ಎಂವಿಎಯಲ್ಲಿ ದುರ್ಬಲವಾಗಿರುವ ಶಿವಸೇನೆ ಉದ್ಧವ್ ಠಾಕ್ರೆ ಬಣ
ಶಿವಸೇನೆ ಠಾಕ್ರೆ ಬಣ ವಿಭಜನೆಗೆ ಮುಂಚೆಯೇ ತನ್ನ ಚುನಾವಣಾ ಕಾರ್ಯಕ್ಷಮತೆಯನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಸ್ಪರ್ಧಿಸಿದ ಸ್ಥಾನಗಳಲ್ಲಿ ಶೇ.50 ಕ್ಕಿಂತ ಹೆಚ್ಚನ್ನು ಅದು ಗೆದ್ದಿಲ್ಲ. ಅದರ ಅತ್ಯುತ್ತಮ ಸಾಧನೆ ಎನ್ನಲಾದ 1995ರ ಫಲಿತಾಂಶದಲ್ಲೂ ಅದು 169ರಲ್ಲಿ 73 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಅದು ಮೂರು ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ, ಅದರ ಕ್ಷೇತ್ರ ಮಟ್ಟದ ನಾಯಕತ್ವ ಮತ್ತು ಸಂಘಟನೆಯ ಗಣನೀಯ ಭಾಗ ಶಿಂದೆ ಬಣದ ಪಾಲಾಗಿದೆ. ಹಾಗಾಗಿ, ಅನೇಕ ಸ್ಥಳಗಳಲ್ಲಿ ಅದು ಅಸ್ತಿತ್ವ ಹೊಂದಿಲ್ಲ. ಎರಡನೆಯದಾಗಿ, ಅನೇಕ ಸ್ಥಾನಗಳಲ್ಲಿ ತನ್ನ ಮಿತ್ರಪಕ್ಷಗಳ ಬೆನ್ನಿಗಿದ್ದು, ನೇರ ಪಾಲ್ಗೊಳ್ಳುವಿಕೆ ಕಡಿಮೆಯಿದೆ. ಮತ್ತೆ ಕೆಲ ಸ್ಥಾನಗಳಲ್ಲಿ, ವಿಶೇಷವಾಗಿ ಕೊಂಕಣದಲ್ಲಿ ಕೂಡ ಅದರ ಪಾಲು ಕಡಿಮೆಯಿದೆ. ಮೂರನೆಯದಾಗಿ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಅದಕ್ಕೆ ಸೈದ್ಧಾಂತಿಕ ಅಸಾಮರಸ್ಯ ಹೆಚ್ಚಾಗಿಯೇ ಇದೆ. ಬಿಜೆಪಿ ಮತ್ತು ಶಿಂದೆ ಇಬ್ಬರಿಗೂ ಇದರ ಲಾಭ ಹೋಗಲೂ ಬಹುದು. ಮುಂಬೈ ಇದಕ್ಕೆ ಅಪವಾದ. ಇಲ್ಲಿ ಮೈತ್ರಿ ಲೆಕ್ಕಾಚಾರ ಉತ್ತಮ ಫಲ ನೀಡುವಂತೆ ತೋರುತ್ತದೆ, ಕಾಂಗ್ರೆಸ್-ಎನ್‌ಸಿಪಿ ಮತದಾರರು, ಅದರಲ್ಲೂ ಮುಸ್ಲಿಮರು ಮತ್ತು ದಲಿತರು ಠಾಕ್ರೆಯ ಶಿವಸೇನೆಗೂ, ಶಿವಸೇನೆಯ ನೆಲೆ ಮಿತ್ರಪಕ್ಷಗಳಿಗೂ ಪರಸ್ಪರ ಬಲವಾಗಿವೆ.
7. ಚುನಾವಣೋತ್ತರ ಸನ್ನಿವೇಶ ವಿಭಿನ್ನವಾಗಿರಬಹುದು
ಎರಡು ಮೈತ್ರಿಕೂಟಗಳಲ್ಲಿ ಒಂದು ಬಹುಮತದ ಗಡಿ ದಾಟುವ ಸಾಧ್ಯತೆಯಿದೆ, ಅದು ಸ್ವಂತವಾಗಿ ಅಥವಾ ಸಮಾನ ಮನಸ್ಕ ಸಣ್ಣ ಪಕ್ಷಗಳ ಸಹಾಯದಿಂದ ಸಾಧ್ಯವಾಗಬಹುದು. ಆದರೆ, ಈಗ ಇರುವ ಮೈತ್ರಿಗಳು ಚುನಾವಣೆಯ ನಂತರ ಬದಲಾಗಬಹುದು. ವಿಶೇಷವಾಗಿ ನಾಲ್ಕು ದೊಡ್ಡ ಪ್ರಾದೇಶಿಕ ಪಕ್ಷಗಳಲ್ಲಿ ಒಂದು ಅಥವಾ ಎರಡು ಪಕ್ಷಗಳು ಬೇರೆ ಆಲೋಚನೆ ಮಾಡಲೂ ಬಹುದು. ಅಮಿತ್ ಶಾ ಮತ್ತು ಶರದ್ ಪವಾರ್ ಅಂತಿಮವಾಗಿ ನಡೆಸುವ ದಾಳಗಳು ಖಂಡಿತವಾಗಿಯೂ ನಿರ್ಣಾಯಕವಾಗಿರಲಿವೆ.
ಜಾರ್ಖಂಡ್ ಚುನಾವಣೆ
ಜೆಎಂಎಂನ ಆದಿವಾಸಿ ಪ್ರಾಬಲ್ಯವನ್ನು ಬಿಜೆಪಿ ಮುರಿಯ ಬಹುದೇ? ಮತದಾರರನ್ನು ಆಕರ್ಷಿಸಲು ನೀಡಿರುವ ಭರವಸೆಗಳ ನಡುವೆಯೇ ದೊಡ್ಡ ಪೈಪೋಟಿಯಿದೆಯೆ? ಜಾರ್ಖಂಡ್‌ನಲ್ಲಿ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಜನಸಂಖ್ಯಾ ಭೀತಿ, ಆದಿವಾಸಿ ಸುರಕ್ಷತೆ, ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿಷಯಗಳನ್ನು ಎತ್ತಿದೆ.
ಹರ್ಯಾಣದಲ್ಲಿನ ಅದ್ಭುತ ಗೆಲುವು ಕೂಡ ಜಾರ್ಖಂಡ್‌ನಲ್ಲಿ ಅಧಿಕಾರಕ್ಕೆ ಮರಳುವ ಅದರ ವಿಶ್ವಾಸವನ್ನು ಹೆಚ್ಚಿಸಿದೆ.
ಒಡಿಶಾದಲ್ಲಿ ಆದಿವಾಸಿ ನಾಯಕನನ್ನು ಸಿಎಂ ಮಾಡಿರುವುದರಿಂದ ಈ ಬಾರಿ ಆದಿವಾಸಿ ಮತಗಳನ್ನು ಸೆಳೆಯುವ ನಿರೀಕ್ಷೆಯೂ ಬಿಜೆಪಿಗಿದೆ. ಚಂಪಯಿ ಸೊರೇನ್ ಬಿಜೆಪಿಗೆ ಬಂದಿರುವುದು ಕೊಲ್ಹಾನ್ ಬೆಲ್ಟ್ ಮತ್ತು ರಾಜ್ಯದ ಇತರ ಆದಿವಾಸಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜೆಎಂಎಂ ನೇತೃತ್ವದ ‘ಇಂಡಿಯಾ’ ಒಕ್ಕೂಟವನ್ನು ಮಣಿಸುವ ಬಿಜೆಪಿ ನಿರೀಕ್ಷೆಯನ್ನು ಹೆಚ್ಚಿಸಿದೆ.
ಮತ್ತೊಂದೆಡೆ, ‘ಇಂಡಿಯಾ’ ಒಕ್ಕೂಟ ಬಿಜೆಪಿಯ ಕೋಮುವಾದಿ ರಾಜಕೀಯದ ಎದುರು ಆದಿವಾಸಿಗಳ ಘನತೆಯ ಪ್ರಶ್ನೆಯನ್ನು ಮುಂದೆ ಮಾಡಿದೆ. ಲೋಕಸಭೆಯ ಫಲಿತಾಂಶಗಳಲ್ಲಿ ಸ್ಪಷ್ಟವಾದಂತೆ, ಹೇಮಂತ್ ಸೊರೇನ್ ಅವರನ್ನು ಜೈಲಿಗೆ ಕಳಿಸಿದ್ದು ಆದಿವಾಸಿಗಳನ್ನು ಕೆರಳಿಸಿತು, ‘ಇಂಡಿಯಾ’ ಒಕ್ಕೂಟ ಆದಿವಾಸಿ ಬೆಲ್ಟ್ ಅನ್ನು ಗೆದ್ದಿತು ಮತ್ತು ಬಿಜೆಪಿ ಎಲ್ಲಾ ಬುಡಕಟ್ಟು ಕ್ಷೇತ್ರಗಳನ್ನು ಕಳೆದುಕೊಂಡಿತು.
ಆದಿವಾಸಿ ನಾಯಕಿಯಾಗಿ ಕಲ್ಪನಾ ಸೊರೇನ್
ಹೇಮಂತ್ ಸೊರೇನ್ ಬಂಧನದ ನಂತರ ಅವರ ಪತ್ನಿ ಕಲ್ಪನಾ ಸೋರೆನ್ ವಹಿಸಿದ್ದ ಮುಂದಾಳತ್ವ ಅವರನ್ನು ರಾಜ್ಯದಲ್ಲಿ ಪ್ರಬಲ ಮಹಿಳಾ ಆದಿವಾಸಿ ನಾಯಕಿಯಾಗಿ ಜನಪ್ರಿಯಗೊಳಿಸಿದೆ. ಅವರು ಪಕ್ಷದ ಲೋಕಸಭಾ ಪ್ರಚಾರದ ನೇತೃತ್ವ ವಹಿಸಿದ್ದರು. ತಮ್ಮ ನಿಯಮಿತ ಭೇಟಿಗಳ ಮೂಲಕ ದಿಲ್ಲಿಯಲ್ಲಿ ಮೈತ್ರಿಯನ್ನು ನಿರ್ವಹಿಸಿದರು, ಉಪಚುನಾವಣೆಯಲ್ಲಿ ಗೆದ್ದರು ಮತ್ತು ಈಗ ರಾಜ್ಯಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದಾರೆ. ಪತಿಯ ನೆರಳನ್ನು ಮೀರಿ ತನ್ನ ಸ್ಪಷ್ಟವಾದ ಭಾಷಣಗಳಿಂದ, ತನ್ನ ರಾಜಕೀಯ ವಾಕ್ಚಾತುರ್ಯದ ಮೂಲಕ ತನ್ನನ್ನು ತಾನು ಯಶಸ್ವಿಯಾಗಿ ವ್ಯಕ್ತಪಡಿಸಿಕೊಳ್ಳುತ್ತಿದ್ದಾರೆ.
ಪೈಪೋಟಿಯ ರಣತಂತ್ರ
ಈ ಚುನಾವಣೆ ಮತದಾರರನ್ನು ಆಕರ್ಷಿಸಲು ಅಭಿವೃದ್ಧಿಯ ದೊಡ್ಡ ಭರವಸೆಗಳನ್ನು ಮುಂದಿಟ್ಟಿದೆ. ಬಿಜೆಪಿ ತನ್ನ ‘ಐದು ಭರವಸೆಗಳು’ (ಪಾಂಚ್ ಪ್ರಾಣ) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರಿಗೆ ಮತ್ತು ಕಾಲೇಜಿಗೆ ಹೋಗುವ ಯುವಕರಿಗೆ ಮಾಸಿಕ ನಗದು ವರ್ಗಾವಣೆ, ಉದ್ಯೋಗಗಳು ಮತ್ತು ಅಗ್ಗದ ಸಿಲಿಂಡರ್‌ಗಳ ಭರವಸೆ ನೀಡಿದೆ.
ಇನ್ನು, ಜೆಎಂಎಂ ನೇತೃತ್ವದ ‘ಇಂಡಿಯಾ’ ಒಕ್ಕೂಟ ಕೂಡ ಮಹಿಳೆಯರಿಗೆ ಮಾಸಿಕ 2,500 ರೂ. ವರ್ಗಾಯಿಸುವ ಘೋಷಣೆ ಮಾಡಿದೆ. ಬಿಜೆಪಿ ಹಿಂದೂಗಳು ಮತ್ತು ಆದಿವಾಸಿಗಳನ್ನು ಒಗ್ಗೂಡಿಸಿ ಮತ ಸೆಳೆಯಲು ನೋಡಿದೆ. ಮುಸ್ಲಿಮರ ವಿರುದ್ಧದ ತಂತ್ರಕ್ಕೂ ಇದನ್ನು ಬಿಜೆಪಿ ಬಳಸಿದೆ.
ಆದರೂ, ಇದು ಸುಲಭವಲ್ಲ. ಹೇಮಂತ್ ಸೊರೇನ್ ನಾಯಕತ್ವದಲ್ಲಿ ಜೆಎಂಎಂ ರಾಜ್ಯದಲ್ಲಿ ಆದಿವಾಸಿಗಳ ಧ್ವನಿಯಾಗಿ ಹೊರಹೊಮ್ಮಿದೆ. ಆದಿವಾಸಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನ ಸರಕಾರದ ಯತ್ನ ಫಲ ಕೊಡುವ ನಿರೀಕ್ಷೆಯಿದೆ.
ಹಿಂದಿನ ಬಿಜೆಪಿ ಸರಕಾರದ ಹಲವು ನಿರ್ಧಾರಗಳನ್ನು ಹಿಂಪಡೆಯಲಾಗಿದೆ. ಹಿಂದುತ್ವದ ವಿರುದ್ಧ ಜಾತ್ಯತೀತತೆ, ಕೋಮು ಸೌಹಾರ್ದ, ಸಾಂವಿಧಾನಿಕ ಮೌಲ್ಯ ಮತ್ತು ಜಾತಿ ಜನಗಣತಿಗಳಿಗೆ ‘ಇಂಡಿಯಾ’ ಒಕ್ಕೂಟ ಒತ್ತುಕೊಟ್ಟಿದೆ.
ಈ ನಡುವೆ, ಹೊಸದಾಗಿ ರಚಿಸಲಾದ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾದ ಸಂಸ್ಥಾಪಕ ಜೈರಾಮ್ ಮಹತೊ ಸ್ಥಾಪಿತ ಪಕ್ಷಗಳಿಗೂ ತಲೆನೋವಾಗುವಷ್ಟು ಜನಪ್ರಿಯರಾಗುತ್ತಿದ್ದಾರೆ. ಅವರ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿರಬಹುದು, ಆದರೆ ದೊಡ್ಡ ಪಕ್ಷಗಳ ಪಾಲಿನ ಕುರ್ಮಿ ಮಹತೋ ಮತದಾರರ ಬಲವನ್ನು ಕಸಿಯಲಿರುವುದಂತೂ ನಿಶ್ಚಿತ ಎನ್ನಲಾಗುತ್ತಿದೆ.
ಎಐಎಂಐಎಂ ಆಟವೇನು?
10 ವರ್ಷಗಳ ನಂತರ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಉವೈಸಿ ಈ ಸಲ ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ, 2012ರ ದ್ವೇಷ ಭಾಷಣ ಪ್ರಕರಣದಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದರು ಮತ್ತು ಅದರಿಂದ ಅವರು ಖುಲಾಸೆಗೊಂಡದ್ದು 2022ರಲ್ಲಿ. ಇನ್ನು, ಮಹಾರಾಷ್ಟ್ರದಲ್ಲಿ ಎಐಎಂಐಎಂ 1 ವಿಧಾನಸಭಾ ಸ್ಥಾನವನ್ನು ಮಾತ್ರ ಹೊಂದಿದೆ.
ಮಹಾರಾಷ್ಟ್ರದಲ್ಲಿ ಮಾಲೇಗಾಂವ್ ಸೆಂಟ್ರಲ್, ಮಂಖುರ್ದ್ ಶಿವಾಜಿ ನಗರ ಮತ್ತು ಮುಂಬಾದೇವಿ ಯಂಥ ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಮಾತ್ರವೇ ಮುಸ್ಲಿಮರು ಜನಸಂಖ್ಯೆಯ ಶೇ.50-55ರಷ್ಟು ಇದ್ದಾರೆ ಮತ್ತು ಆ ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳ ಮುಸ್ಲಿಮ್ ನಾಯಕರು ಈಗಾಗಲೇ ಹಿಡಿತ ಹೊಂದಿದ್ದಾರೆ. ಮಾಲೇಗಾಂವ್ ಸೆಂಟ್ರಲ್ ಹೊರತುಪಡಿಸಿ, ಎಐಎಂಐಎಂ ಗರಿಷ್ಠ ಪ್ರಭಾವ ಬೀರಿದ ಹೆಚ್ಚಿನ ಸ್ಥಾನಗಳಲ್ಲಿ ಮುಸ್ಲಿಮರು ಶೇ.40ಕ್ಕಿಂತ ಕಡಿಮೆ ಇದ್ದಾರೆ. ಉದಾಹರಣೆಗೆ, ಇಮ್ತಿಯಾಝ್ ಜಲೀಲ್ ಈಗಾಗಲೇ ಗೆದ್ದಿರುವ ಔರಂಗಾಬಾದ್ ಸೆಂಟ್ರಲ್ ಮತ್ತು ಔರಂಗಾಬಾದ್ ಲೋಕಸಭಾ ಕ್ಷೇತ್ರಗಳು, ಧುಲೆ ಸಿಟಿ ಮತ್ತು ಬೈಕುಲ್ಲಾ ಕ್ಷೇತ್ರಗಳು. ಎಐಎಂಐಎಂ ಇಲ್ಲಿ ಗೆಲ್ಲಲು ಮುಸ್ಲಿಮ್ ಮತಗಳಲ್ಲದೆ ಇತರರ ಬೆಂಬಲವೂ ಬೇಕಾಗುತ್ತದೆ. ಜಲೀಲ್ ಅವರಿಗೆ ಭಾಗಶಃ ದಲಿತ ಬೌದ್ಧರ ಬೆಂಬಲವಿದೆ. ಅವರು ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಜೊತೆ ಮೈತ್ರಿ ಮಾಡಿಕೊಂಡು ಔರಂಗಾಬಾದ್ ಲೋಕಸಭಾ ಸ್ಥಾನ ಗೆದ್ದಿದ್ದರು. ನೀರು ಸರಬರಾಜು ಮತ್ತು ಆರೋಗ್ಯ ರಕ್ಷಣೆಯಂತಹ ಸಮಸ್ಯೆಗಳನ್ನು ಜಲೀಲ್ ಎತ್ತಿದ್ದರು.
ಅಕ್ಬರುದ್ದೀನ್ ಉವೈಸಿ ಮಹಾರಾಷ್ಟ್ರದಲ್ಲಿ ಪ್ರಚಾರ ಮಾಡಿದರೆ ಮುಸ್ಲಿಮರು ಶೇ.40ಕ್ಕಿಂತ ಕಡಿಮೆ ಇರುವಲ್ಲಿ ಹಿಂದೂ ಮತಗಳು ಎಐಎಂಐಎಂ ವಿರುದ್ಧ ಕ್ರೋಡೀಕರಣವಾಗುತ್ತವೆ ಎಂಬ ಆತಂಕವೂ ಪಕ್ಷಕ್ಕಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಎಐಎಂಐಎಂ ಪ್ರಭಾವವಿರುವ ಹೆಚ್ಚಿನ ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯರ್ಥಿಗಳೇ ಅದಕ್ಕೆ ಸವಾಲಾಗಿದ್ದಾರೆ.