ಬಿಕ್ಕಟ್ಟಿನಲ್ಲಿ ಬೈಜೂಸ್: ಭಾರತದ ಸ್ಟಾರ್ಟ್ಅಪ್ ಗುಳ್ಳೆ ಒಡೆಯಿತೇ?
ಪ್ರಮುಖ ಎಜುಟೆಕ್ ಕಂಪೆನಿ ಬೈಜೂಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನೂರಾರು ಕೋಟಿ ಡಾಲರ್ ಸಾಲ ಕೊಟ್ಟಿರುವವರು ಬೆನ್ನು ಬಿದ್ದಿದ್ದಾರೆ. ಬೆಂಗಳೂರು, ನೊಯ್ಡಿ ಮೊದಲಾದೆಡೆಗಳಲ್ಲಿನ ಬಹುಪಾಲು ಕಚೇರಿ ಸ್ಥಳಗಳನ್ನು ಕಂಪೆನಿ ತೆರವು ಮಾಡುತ್ತಿದೆ.
ಕಳೆದ ಎಪ್ರಿಲ್ ಕೊನೆಯಲ್ಲಿ ಬೈಜೂಸ್ನ ಬೆಂಗಳೂರಿನ ಕಚೇರಿಗಳ ಮೇಲೆ ಫೆಮಾ ಉಲ್ಲಂಘನೆ ಅನುಮಾನದೊಂದಿಗೆ ಈ.ಡಿ. ದಾಳಿ ನಡೆಯಿತು. ಕಂಪೆನಿ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಹೂಡಿಕೆದಾರರ ಆತಂಕದ ಸತತ ಕರೆಗಳಿಗೆ ಉತ್ತರಿಸಬೇಕಾಯಿತು. ಅವರು ಕಂಪೆನಿಯನ್ನು ಸಮರ್ಥಿಸಿಕೊಳ್ಳುತ್ತ ಅಕ್ಷರಶಃ ಅತ್ತುಬಿಟ್ಟಿದ್ದರು ಎಂಬ ವರದಿಯಿದೆ.
ಹಲವು ತಿಂಗಳುಗಳಿಂದ ಬೈಜೂಸ್ ಬಿಕ್ಕಟ್ಟಿನಲ್ಲಿದೆ. ಈ.ಡಿ. ದಾಳಿ ಮಾತ್ರವಲ್ಲದೆ, ಹಣಕಾಸು ಸ್ಥಿತಿ ವರದಿ ಸಲ್ಲಿಕೆಯಲ್ಲಿನ ವಿಳಂಬ, ಅಮೆರಿಕ ಮೂಲದ ಹೂಡಿಕೆದಾರರ ಗಂಭೀರ ಆರೋಪಗಳೆಲ್ಲ ಸುತ್ತುವರಿದಿವೆ. ಆಡಳಿತ ಮತ್ತು ನಿರ್ದೇಶಕರ ಮಂಡಳಿಯ ಸಲಹೆಗಳ ಕಡೆಗಣನೆ ಆರೋಪವೂ ಇದೆ. ಆರಂಭಿಕ ಹೂಡಿಕೆದಾರರಲ್ಲಿ ಕೆಲವರು ಇದೇ ಕಾರಣಕ್ಕೆ ಮಂಡಳಿಯಿಂದ ಹೊರಬಂದ ಉದಾಹರಣೆಗಳಿವೆ. ಆರೋಪಗಳನ್ನೆಲ್ಲ ಬೈಜೂಸ್ ನಿರಾಕರಿಸುತ್ತದಾದರೂ, ಆ ಕಂಪೆನಿಯ ಇವತ್ತಿನ ಬಿಕ್ಕಟ್ಟು ಭಾರತದ ಸ್ಟಾರ್ಟ್ಅಪ್ಗಳು ಎದುರಿಸುತ್ತಿರುವ ಸವಾಲುಗಳಿಗೆ ಕನ್ನಡಿ ಹಿಡಿದಿದೆ.
ಬೈಜೂಸ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಮೊದಲು ಅದರ ಅತಿ ವೇಗದ ಬೆಳವಣಿಗೆ ಹೇಗಿತ್ತು ಎಂಬುದನ್ನೊಮ್ಮೆ ಗಮನಿಸಬೇಕು. ಅದರ ಸಂಸ್ಥಾಪಕ ಬೈಜು ರವೀಂದ್ರನ್ ಖಾಸಗಿ ಟ್ಯೂಟರ್ ಆಗಿದ್ದವರು. ಅಲ್ಲಿಂದ ಪ್ರಾರಂಭಿಸಿದ ರವೀಂದ್ರನ್ 22 ಶತಕೋಟಿ ಡಾಲರ್ ಕಂಪೆನಿಯನ್ನು ಕಟ್ಟಿದ್ದೇ ಬೆರಗಿನ ಸಂಗತಿ.
ರವೀಂದ್ರನ್ ಕೇರಳದ ಹಳ್ಳಿಯೊಂದರಲ್ಲಿ ಬೆಳೆದವರು. ತಂದೆ ಭೌತಶಾಸ್ತ್ರ ಶಿಕ್ಷಕ ಮತ್ತು ತಾಯಿ ಗಣಿತ ಶಿಕ್ಷಕಿಯಾಗಿದ್ದ ಅಲ್ಲಿನ ಶಾಲೆಯಲ್ಲಿ ಓದಿದರು. ಆದರೆ ತರಗತಿಗಳೆಂದರೇ ಅವರಿಗೆ ಆಗುತ್ತಿರಲಿಲ್ಲ. ತರಗತಿ ತಪ್ಪಿಸಿ ಆಡಲು ಹೋಗಿಬಿಡುತ್ತಿದ್ದರು. ಶಾಲೆಯಲ್ಲಿ ಕಲಿತದ್ದಕ್ಕಿಂತ ಮನೆಯಲ್ಲಿ ಓದಿದ್ದೇ ಹೆಚ್ಚು.
ಕೆಲಕಾಲ ಇಂಜಿನಿಯರ್ ವೃತ್ತಿಯಲ್ಲಿದ್ದ ಅವರು, ನಂತರ ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಪತೀ ವಾರವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಹೋದಾಗ ಸ್ಟೇಡಿಯಂನಲ್ಲಿ ತರಗತಿಗಳನ್ನು ನಡೆಸತೊಡಗಿದರು. ಉತ್ತಮ ಬೋಧಕರು ಕಡಿಮೆಯಿರುವ ಮತ್ತು ಹಳೆಯ ರೀತಿಯ ಬೋಧನಾ ವಿಧಾನವಿರುವ ಭಾರತದಲ್ಲಿ ರವೀಂದ್ರನ್ ಬೋಧನಾ ವಿಧಾನಗಳು ಗಮನ ಸೆಳೆದವು. ಪ್ರೀಮಿಯರ್ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಗೆ ದಾಖಲಾತಿಗಾಗಿ ನಡೆಯುವ ತೀವ್ರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಅವರು ಪಳಗಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ರವೀಂದ್ರನ್ ತಮ್ಮ ಅತ್ಯುತ್ತಮ ವಿದ್ಯಾರ್ಥಿಗಳನ್ನೇ ಬೋಧಕರನ್ನಾಗಿ ನೇಮಿಸಿಕೊಂಡರು ಮತ್ತು 41 ಕೋಚಿಂಗ್ ಸೆಂಟರ್ಗಳನ್ನು ತೆರೆದರು. 2011ರಲ್ಲಿ, ಅವರು ತೆರೆದ ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೇ ಬೈಜೂಸ್ನ ಮಾತೃಸಂಸ್ಥೆ. ರವೀಂದ್ರನ್ ಮತ್ತವರ ಪತ್ನಿ ದಿವ್ಯಾ ಗೋಕುಲ್ನಾಥ್ ಇದರ ಸಂಸ್ಥಾಪಕರು.
2015ರಲ್ಲಿ ರವೀಂದ್ರನ್ ಈ ಬೋಧನಾ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಲಿಕೆಗಾಗಿ ಸ್ವಯಂ ಕಲಿಕೆಯ ಅಪ್ಲಿಕೇಶನ್ ಪ್ರಾರಂಭಿಸಿದರು.
2018ರ ಹೊತ್ತಿಗೆ ಬೈಜೂಸ್ ಆ್ಯಪ್ 15 ಮಿಲಿಯನ್ಗೂ ಹೆಚ್ಚು ಬಳಕೆದಾರರನ್ನು ಹೊಂದಿತ್ತು. ಈ ಹಂತದಲ್ಲಿಯೇ 100 ಕೋಟಿ ಡಾಲರ್ಗೂ ಅಧಿಕ ಮೌಲ್ಯದ ಕಂಪೆನಿಯಾಗುವುದರೊಂದಿಗೆ ಬೈಜೂಸ್ ಭಾರತದ ಯುನಿಕಾರ್ನ್ ಕ್ಲಬ್ ಸೇರಿತು. ಕಂಪೆನಿಯೊಂದು 100 ಕೋಟಿ ಡಾಲರ್ ಮೀರಿದ ಮೌಲ್ಯದ್ದಾದರೆ ಅದನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. 2011ರಲ್ಲಿ ಶುರುವಾದ ಬೈಜೂಸ್ ಅತಿ ಕಡಿಮೆ ಸಮಯದಲ್ಲಿಯೇ ಅಂಥ ಸಾಧನೆಯ ಶಿಖರ ತಲುಪಿತ್ತು.
ಇಂಥ ಕಂಪೆನಿಯೊಂದರ ಕುಸಿತಕ್ಕೆ ಕಾರಣವಾದದ್ದೇನು? 2010ರ ದಶಕದ ವೇಳೆಗೇ ಹೂಡಿಕೆದಾರರು ರವೀಂದ್ರನ್ ಬೆಂಬಲಿಸಲು ಸಾಲಾಗಿ ನಿಂತಿದ್ದರು. ರಾಷ್ಟ್ರದ ಅತಿದೊಡ್ಡ ಆರೋಗ್ಯ ಮತ್ತು ಶಿಕ್ಷಣ ಸಾಮ್ರಾಜ್ಯಗಳಲ್ಲಿ ಒಂದನ್ನು ನಡೆಸುತ್ತಿರುವ ರಂಜನ್ ಪೈ ಅವರು ಬೈಜೂಸ್ಗೆ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದರು. ಬ್ಲೂಮ್ಬರ್ಗ್ಗೆ 2017ರಲ್ಲಿ ನೀಡಿದ ಸಂದರ್ಶನದಲ್ಲಿ ಪೈ ಅವರು ರವೀಂದ್ರನ್ ಬಗ್ಗೆ ಹೇಳುತ್ತ, ದೇಶದ ಪ್ರತಿಭಾವಂತ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದಿದ್ದರೂ ಹೃದಯದಿಂದ ಇನ್ನೂ ಶಿಕ್ಷಕರಾಗಿದ್ದಾರೆ ಎಂದು ಹೆಮ್ಮೆಪಟ್ಟಿದ್ದು ರವೀಂದ್ರನ್ ಹೆಚ್ಚುಗಾರಿಕೆಗೆ ಸಾಕ್ಷಿಯಾಗಿತ್ತು.
ಬೈಜು ಅವರ ಆರಂಭಿಕ ಬೆಂಬಲಿಗರಲ್ಲಿ ಸೆಕ್ವೊಯಾ ಕ್ಯಾಪಿಟಲ್ ಕೂಡ ಸೇರಿದೆ. ಅದು 2015ರಲ್ಲಿ 480 ಕೋಟಿ ರೂ. ಹೂಡಿಕೆ ಮಾಡಿದೆ ಎಂಬುದು ಟ್ರಾಕ್ಷನ್ (Tracxn) ನೀಡುವ ಮಾಹಿತಿ. ಅದಾದ ಮೇಲೆ ಲೈಟ್ಸ್ಪೀಡ್ ವೆಂಚರ್ ಪಾರ್ಟ್ನರ್ಸ್ ಮತ್ತು ಚಾನ್ ಝುಕರ್ಬರ್ಗ್ ಇನಿಶಿಯೇಟಿವ್ ಸಂಸ್ಥೆಗಳು 50 ಮಿಲಿಯನ್ ಡಾಲರ್ ಹೂಡಿದವು.
SPAC (Special purpose acquisition companies) ಸಂಸ್ಥೆಗೆ ಇಷ್ಟು ದೊಡ್ಡ ಮೊತ್ತದಲ್ಲಿ ಬಂಡವಾಳ ಹರಿಯುತ್ತಿದ್ದಂತೆ ರವೀಂದ್ರನ್ ಭಾರತ ಮತ್ತು ವಿದೇಶಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಶೈಕ್ಷಣಿಕ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಂಡರು. ವಿಲೀನದ ಮೂಲಕ ಕಂಪೆನಿಯ ಜಾಗತಿಕ ವಿಸ್ತರಣೆಗೆ ರವೀಂದ್ರನ್ ಯೋಜಿಸಿದರು.
ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶಕ್ಕೆ ರವೀಂದ್ರನ್ ಸಾಲ ಮಾರುಕಟ್ಟೆಗಳ ಬಾಗಿಲನ್ನೂ ತಟ್ಟಿದರು. ಬೈಜೂಸ್ 2021ರಲ್ಲಿ ಕೇವಲ 50 ಕೋಟಿ ಡಾಲರ್ ಸಾಲವನ್ನು ಪಡೆಯಲು ಪ್ರಯತ್ನಿಸಿದರೂ, ಬ್ಲಾಕ್ಸ್ಟೋನ್ ಇಂಕ್., ಫಿಡೆಲಿಟಿ ಮತ್ತು ಜಿಐಸಿ ಸೇರಿದಂತೆ ಹಲವಾರು ಸಾಗರೋತ್ತರ ಹೂಡಿಕೆದಾರರು ಇವರು ಬಯಸಿದ್ದಕ್ಕಿಂತ ದುಪ್ಪಟ್ಟು ಗಾತ್ರದಲ್ಲಿ 120 ಕೋಟಿ ಡಾಲರ್ವರೆಗೂ ಹಣ ಹಾಕಿದರು.
ಸಿಕ್ವೊಯಾ ಕ್ಯಾಪಿಟಲ್, ಬ್ಲಾಕ್ಸ್ಟೋನ್ ಇಂಕ್. ಮತ್ತು ಮಾರ್ಕ್ ಝುಕರ್ಬರ್ಗ್ ಫೌಂಡೇಶನ್ ಸೇರಿದಂತೆ ಹಲವಾರು ದೈತ್ಯ ಜಾಗತಿಕ ಹೂಡಿಕೆದಾರರನ್ನು ಬೈಜೂಸ್ ಆಕರ್ಷಿಸಿತು. ಕೋವಿಡ್ ಹೊತ್ತಲ್ಲಿ ಭಾರತದಲ್ಲಿನ ಬಹುಪಾಲು ಎಜುಟೆಕ್ ಮಾರುಕಟ್ಟೆಯನ್ನು ಬದಿಗೆ ಸರಿಸಿ ಆಕ್ರಮಿಸಿಕೊಂಡ ಕಂಪೆನಿ ಬೈಜೂಸ್. ಆಗ ಅದು ಎಜುಟೆಕ್ ಮಾರುಕಟ್ಟೆಯ ಸ್ಟಾರ್ ಆಗಿಬಿಟ್ಟಿತು. ಇಂಡಿಯನ್ ಕ್ರಿಕೆಟ್ ಟೀಂ, ಶಾರುಕ್ಖಾನ್ ಇವರೆಲ್ಲ ಅದರ ಪ್ರಮೋಟರ್ಸ್ ಆದರು.
ಆನ್ಲೈನ್ ಮೂಲಕ ಕಲಿಯುವ ವಿದ್ಯಾರ್ಥಿಗಳನ್ನೇ ಇದು ಅವಲಂಬಿಸಿತ್ತು. ಆದರೆ ಕೋವಿಡ್ ಆತಂಕ ದೂರವಾಗಿ ಮಕ್ಕಳು ಶಾಲೆಗೆ ಹೋಗತೊಡಗಿದರು. ಇಲ್ಲಿಂದಲೇ ಶುರುವಾದದ್ದು ಬೈಜೂಸ್ ದಿಗಿಲು. ಆನ್ಲೈನ್ ಟ್ಯೂಟರಿಂಗ್ಗೆ ಬೇಡಿಕೆ ಇಲ್ಲವಾಗಿ ಬೈಜೂಸ್ ದಿಕ್ಕೆಟ್ಟಿತು. ಈ ಹಂತದಲ್ಲಿಯೂ ರವೀಂದ್ರನ್ ಹಣಕಾಸು ವ್ಯವಸ್ಥೆಯನ್ನು ಒಂದು ಹದ್ದುಬಸ್ತಿಗೆ ತರುವ ಬದಲು ಇಕ್ವಿಟಿಯನ್ನು ಹೆಚ್ಚಿಸಲು ಪ್ರಯತ್ನಿಸಿದರೆಂಬ ಆರೋಪಗಳಿವೆ. ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ಬಳಿಕ ಎಜುಟೆಕ್ ಕಂಪೆನಿ ಜರ್ಜರಿತಗೊಳ್ಳುತ್ತಿದ್ದರೂ ರವೀಂದ್ರನ್ ಇಂಥ ತಪ್ಪುಹೆಜ್ಜೆ ಇಡುತ್ತಿದ್ದುದನ್ನು ಅವರ ಉದ್ಯೋಗಿಗಳೇ ಪ್ರಶ್ನಿಸಿದ್ದರು ಎನ್ನುತ್ತವೆ ವರದಿಗಳು.
ಹೆಚ್ಚುಕಡಿಮೆ ಇದೇ ಹೊತ್ತಲ್ಲಿಯೇ ಬೈಜೂಸ್ ಹಣಕಾಸು ಸ್ಥಿತಿಯ ಬಗ್ಗೆ ಅನುಮಾನಗಳು ಎದ್ದಿದ್ದವು. ಕಂಪೆನಿಗಿದ್ದ ಖ್ಯಾತಿಗೆ ನಿಧಾನವಾಗಿ ಹೊಡೆತ ಬೀಳತೊಡಗಿತು. ವರ್ಷಗಳವರೆಗೆ ಸಿಎಫ್ಒ ನೇಮಕವಾಗದ ಬಗ್ಗೆ ಹೂಡಿಕೆದಾರರು ಪ್ರಶ್ನಿಸತೊಡಗಿದ್ದರು. ಅಲ್ಲದೆ, ಅಷ್ಟೊಂದು ಆತುರದಲ್ಲಿ ಡಜನ್ಗಟ್ಟಲೆ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಂಡದ್ದೇಕೆ ಎಂಬ ಪ್ರಶ್ನೆಯನ್ನೂ ಎತ್ತಿದ್ದರು. ಹಲವಾರು ಹಿರಿಯ ಉದ್ಯೋಗಿಗಳು ಕೆಲಸ ತೊರೆದರು. ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳ ವಜಾ ಕ್ರಮಕ್ಕೂ ಕಂಪೆನಿ ಮುಂದಾಯಿತು. ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಿದರು. ಅನೇಕ ಬೋಧನಾ ಕೇಂದ್ರಗಳು ಬಹುತೇಕ ಖಾಲಿಯಾದವು.
2021ರಲ್ಲಿ ಬೈಜೂಸ್ 327 ಮಿಲಿಯನ್ ಡಾಲರ್ ನಷ್ಟ ತೋರಿಸಿತು. ಇದು ಹಿಂದಿನ ವರ್ಷಕ್ಕಿಂತ 17 ಪಟ್ಟು ಹೆಚ್ಚಿತ್ತು. ಬೈಜೂಸ್ ತನ್ನ ಗ್ರಾಹಕರ ಶೋಷಣೆಗೆ ನಿಂತಿದೆ ಎಂಬ ಆರೋಪವೂ ಕೇಳಿಬಂತು. ಆನ್ಲೈನ್ ಕೋರ್ಸ್ ತೆಗೆದುಕೊಳ್ಳುವಂತೆ ಪೋಷಕರನ್ನು ಬಲವಂತ ಮಾಡುತ್ತಿದೆ ಎಂಬ ದೂರುಗಳೂ ಇದ್ದವು.
ಈ ಮಧ್ಯೆ, ಮಾರ್ಚ್ 2021ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದ ವರದಿ ಸಲ್ಲಿಕೆ ಆಗದಿರುವ ಬಗ್ಗೆ ತೆರಿಗೆ ಅಧಿಕಾರಿಗಳ ಪ್ರಶ್ನೆಯನ್ನು ಎದುರಿಸಬೇಕಾಯಿತಲ್ಲದೆ, ಮನಿ ಲಾಂಡರಿಂಗ್ ಮತ್ತು ಫಾರೆಕ್ಸ್ ಉಲ್ಲಂಘನೆಗಳನ್ನು ತನಿಖೆ ಮಾಡುವ ಈ.ಡಿ. ಬೈಜೂಸ್ ಅಧಿಕಾರಿಗಳಿಗೆ ಸಮನ್ಸ್ ಕಳುಹಿಸಿತು. ಎಪ್ರಿಲ್ ಅಂತ್ಯದಲ್ಲಿ ನಡೆದ ದಾಳಿಯ ನಂತರ ಬೈಜು ಅವರ ವಿರುದ್ಧ ಆರೋಪಗಳನ್ನೇನೂ ದಾಖಲಿಸಲಾಗಿಲ್ಲ. ಆದರೆ ಔಪಚಾರಿಕ ತನಿಖೆ ಶುರು ಮಾಡಬೇಕೆ ಎಂಬುದನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತದ ಕಂಪೆನಿ ನಿಯಂತ್ರಕಗಳು ಶೀಘ್ರವೇ ನಿರ್ಧರಿಸಲಿವೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಹಣಕಾಸು ವರ್ಷದ ಮುಕ್ತಾಯದ ಹದಿನೆಂಟು ತಿಂಗಳ ನಂತರ ಆಡಿಟ್ ಹೇಳಿಕೆಗಳನ್ನು ಬಿಡುಗಡೆ ಮಾಡಿರುವ ಬೈಜೂಸ್, 45.7 ಶತಕೋಟಿ ರೂ. ನಷ್ಟ ತೋರಿಸಿರುವುದಾಗಿಯೂ ವರದಿಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 13 ಪಟ್ಟು ಹೆಚ್ಚು.
ಬೈಜೂಸ್ನ ಈ ಹಣಕಾಸು ಬಿಕ್ಕಟ್ಟು ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿದೆ. ಕೆಲ ಹೂಡಿಕೆದಾರರು ತಮ್ಮ ಷೇರುಗಳನ್ನು ಇತರ ಹೂಡಿಕೆದಾರರಿಗೆ ಮಾರಿದ್ದೂ ಆಯಿತು, ಕೂಡಲೇ ಸಾಲಪಾವತಿಸಬೇಕೆಂದು ಸಾಲಗಾರರು ಬೆನ್ನುಬಿದ್ದಿದ್ಧಾರೆ. ಬೈಜೂಸ್ ವಿರುದ್ಧ ಮೊಕದ್ದಮೆ ಹೂಡಿರುವ ಅಮೆರಿಕದ ಸಾಲದಾತ ಕಂಪೆನಿಯೊಂದು, 500 ಮಿಲಿಯನ್ ಡಾಲರ್ಗಳಷ್ಟನ್ನು ಬೈಜೂಸ್ ಮರೆಮಾಚುತ್ತಿದೆ ಎಂದು ಆರೋಪಿಸಿದೆ.
ಜೂನ್ನಲ್ಲಿ ಬೈಜೂಸ್ 40 ಮಿಲಿಯನ್ ಡಾಲರ್ ಬಡ್ಡಿ ಪಾವತಿಸದೇ ಇದ್ದುದು ಮಾತ್ರವಲ್ಲದೆ, ನ್ಯೂಯಾರ್ಕ್ನಲ್ಲಿ ತಾನೇ ಮೊಕದ್ದಮೆ ಹೂಡಿದ್ದು, ಸಾಲಗಾರರ ಅಪನಂಬಿಕೆಯನ್ನು ಆಕ್ಷೇಪಿಸಿದೆ. ಸಾಲದ ಒಪ್ಪಂದದ ಪ್ರಕಾರ ಸಾಲದಾತರು ತಮ್ಮ ಪಾಲನ್ನು ಕೆಲವು ಹೂಡಿಕೆದಾರರಿಗೆ ಮಾರಾಟ ಮಾಡುವಂತಿಲ್ಲ ಎಂದು ವಾದಿಸಿದೆ.
ಪೀಕ್ ಎಕ್ಸ್ವಿ, ಪ್ರೊಸಸ್ ಮತ್ತು ಚಾನ್ ಝುಕರ್ಬರ್ಗ್ ಇನಿಶಿಯೇಟಿವ್ ಈ ಮೂರು ದೊಡ್ಡ ಹೂಡಿಕೆದಾರ ಕಂಪೆನಿಗಳ ಪ್ರತಿನಿಧಿಗಳು ಇತ್ತೀಚೆಗೆ ಬೈಜೂಸ್ ಮಂಡಳಿಯನ್ನು ತೊರೆದಿದ್ದಾರೆ. ಸಂಸ್ಥೆಯ ಕಳಂಕಿತ ಹಣಕಾಸು ದಾಖಲೆಗಳನ್ನು ಉಲ್ಲೇಖಿಸಿ ಡೆಲಾಯ್ಟೆ ಹ್ಯಾಸ್ಕಿನ್ಸ್ ಆ್ಯಂಡ್ ಸೇಲ್ಸ್ ಬೈಜೂಸ್ ಲೆಕ್ಕಪರಿಶೋಧಕ ಹೊಣೆಗಾರಿಕೆಯನ್ನು ತ್ಯಜಿಸಿದೆ.
ರವೀಂದ್ರನ್ ಮಧ್ಯಪ್ರಾಚ್ಯದಲ್ಲಿ ಬೆಂಬಲಿಗರಿಂದ 1 ಶತಕೋಟಿ ಡಾಲರ್ ಇಕ್ವಿಟಿ ಹೂಡಿಕೆಯ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ತಿಂಗಳ ಆರಂಭದಲ್ಲಿ ಬರಬಹುದು ಎಂದುಕೊಳ್ಳಲಾಗಿದೆ. ಭಾರತದಲ್ಲಿಯೂ ತಮ್ಮ ಆರಂಭಿಕ ಹೂಡಿಕೆದಾರರಿಂದ ನೆರವು ಪಡೆಯುವ ಪ್ರಯತ್ನದಲ್ಲಿದ್ಧಾರೆ. ಹೂಡಿಕೆಗಳು ಬಂದರೆ, ಬೈಜೂಸ್ ಸಾಲದಾತರಿಗೆ ಹಣ ಪಾವತಿಸಬಹುದು.
ಹೆಚ್ಚಿನ ಹೂಡಿಕೆದಾರರು ಸಂಸ್ಥೆಯ ಮೌಲ್ಯಮಾಪನವನ್ನು 10 ಶತಕೋಟಿ ಡಾಲರ್ಗಿಂತ ಕಡಿಮೆಗೆ ಇಳಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಉದ್ಯಮದಲ್ಲಿ ಬಹುಬೇಗ ಮೇಲೇರಿದ ಪರಿಣಾಮವಾಗಿ ಅನನುಭವಿಯ ಉತ್ಸಾಹ ಮತ್ತು ತಪ್ಪು ಹೆಜ್ಜೆಗಳೇ ಈಗಿನ ಬಿಕ್ಕಟ್ಟುಗಳಿಗೆ ಕಾರಣ ಎಂಬುದು ರವೀಂದ್ರನ್ ಹಿತೈಷಿಗಳ ಅಭಿಪ್ರಾಯ. ಹಣಕಾಸು ಸ್ಥಿತಿ ಮಾಹಿತಿ ತಡೆಹಿಡಿದದ್ದು ಮತ್ತು ಖಾತೆಗಳನ್ನು ಕಟ್ಟುನಿಟ್ಟಾಗಿ ಆಡಿಟ್ ಮಾಡುವಲ್ಲಿ ವಿಫಲರಾಗುವ ಮೂಲಕ ಅಜಾಗರೂಕತೆಯಿಂದ ವರ್ತಿಸಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು. ಸರಿಯಾದ ಸಮಯದಲ್ಲಿ ಸರಿಯಾದ ಪರಿಣತರಿಂದ ಆರ್ಥಿಕ ಸಲಹೆ ಪಡೆಯದ ರವೀಂದ್ರನ್ ನಡೆಯ ಬಗ್ಗೆಯೂ ಆಕ್ಷೇಪಗಳಿವೆ.
ಭಾರತದ ಸ್ಟಾರ್ಟ್ಅಪ್ ಜಗತ್ತಿನಲ್ಲಿ, ಉತ್ಕರ್ಷದ ಸಮಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಬೆಂಬತ್ತಿ ಹೋಗುವ ಧಾವಂತದಲ್ಲಿ, ಆರ್ಥಿಕತೆ ವೇಗ ಕುಸಿದರೆ ಹೇಗೆ ಎದುರಿಸಬೇಕು ಎಂಬ ಯೋಜನೆ ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಬೈಜೂಸ್ ಬಹಳ ದೊಡ್ಡ ಉದಾಹರಣೆ ಎಂದೇ ವಿಶ್ಲೇಷಕರು ಪರಿಗಣಿಸುತ್ತಿದ್ದಾರೆ.
ಏಕೆ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಇಳಿಕೆಯಾಗುತ್ತಿದೆ?
ಇದಕ್ಕೆ ಮುಖ್ಯ ಕಾರಣಗಳೆಂದರೆ ಏರುತ್ತಿರುವ ಹಣದುಬ್ಬರ, ಅತ್ಯಧಿಕ ಬಡ್ಡಿದರ, ಎಚ್ಚರವಹಿಸುವ ಹೂಡಿಕೆದಾರರು.
ಈ ಮಧ್ಯೆ, ಫಂಡಿಂಗ್ ವಿಂಟರ್ ಸ್ಥಿತಿ ಮುಂದುವರಿಯ ಲಿದೆಯೇ ಎಂಬ ಪ್ರಶ್ನೆಯೂ ಇದೆ. ಸ್ಟಾರ್ಟ್ ಅಪ್ಗಳಿಗೆ ಕಡಿಮೆ ಬಂಡವಾಳದ ಒಳಹರಿವಿನ ಅವಧಿ ಹೆಚ್ಚುವುದನ್ನು ಫಂಡಿಂಗ್ ವಿಂಟರ್ ಎನ್ನಲಾಗುತ್ತದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿನ ಹೂಡಿಕೆ ಕಡಿತ ಹೀಗೆಯೇ ಮುಂದುವರಿದರೆ, ಅದು ಕೊನೆಗೊಳ್ಳುವವರೆಗೂ ಅಸ್ತಿತ್ವ ಉಳಿಸಿಕೊಳ್ಳಲು ಸ್ಟಾರ್ಟ್ ಅಪ್ಗಳು ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ.
ಅನೇಕ ಸ್ಟಾರ್ಟ್ಅಪ್ಗಳು ಉಸಿರು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿವೆ. ಆದರೂ, ಈ ಬಿಕ್ಕಟ್ಟು ಕೇವಲ ತಾತ್ಕಾಲಿಕ ಮತ್ತು ಸ್ವಲ್ಪಪ್ರಯತ್ನದಿಂದ ಭಾರತದ ಸ್ಟಾರ್ಟ್ ಅಪ್ ಉದ್ಯಮ ಉತ್ತಮ ಸ್ಥಿತಿಗೆ ಮರಳಬಹುದು ಎಂಬ ಭರವಸೆಯೂ ಇದೆ.
ಈ ಬಿಕ್ಕಟ್ಟಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಮತ್ತು ಅವುಗಳನ್ನು ಹೇಗೆ ಎದುರಿಸುವುದು ಎಂಬುದರ ಮೂಲಕ ಸರಿಯಾದ ಕ್ರಮಗಳನ್ನು ಅಳವಡಿಸಿ ಕೊಂಡರೆ, ಭಾರತೀಯ ಸ್ಟಾರ್ಟ್ಅಪ್ಗಳು ಮತ್ತೊಮ್ಮೆ ಯಶಸ್ಸಿನತ್ತ ಸಾಗಲು ಅವಕಾಶವಿದೆ ಎಂಬುದು ಪರಿಣಿತರ ನಿರೀಕ್ಷೆ.
ಭಾರತೀಯ ಯುನಿಕಾರ್ನ್ಗಳ ಕಥೆ ಏನು?
2022ರಲ್ಲಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿನ 108 ಯುನಿಕಾರ್ನ್ಗಳಲ್ಲಿ 55 ನಷ್ಟದಲ್ಲಿವೆ. ಅವುಗಳ ಸರಾಸರಿ ವಾರ್ಷಿಕ ಆದಾಯ 76 ಮಿಲಿಯನ್ ಡಾಲರ್. ಆದರೆ ಅವುಗಳ ಸರಾಸರಿ ವಾರ್ಷಿಕ ಖರ್ಚು 122 ಮಿಲಿಯನ್ ಡಾಲರ್.
ಇನ್ನು, ಭಾರತೀಯ ಸ್ಟಾರ್ಟ್ಅಪ್ ವ್ಯವಸ್ಥೆ ಬಿಕ್ಕಟ್ಟಿಗೆ ಕಾರಣಗಳು ಹಲವು. ಇತ್ತೀ ಚಿನ ವರ್ಷಗಳಲ್ಲಿ ಟೆಕ್ ಕೆಲಸಗಾರರಿಗೆ ಸಂಬಳ ಗಗನಕ್ಕೇರಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸ್ಪರ್ಧಿಸುವುದು ಕಷ್ಟವಾಗುತ್ತಿದೆ. NASSCOMನ ಇತ್ತೀಚಿನ ಅಧ್ಯಯನದ ಪ್ರಕಾರ, ಭಾರತದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಸರಾಸರಿ ವೇತನ ಮುಂದಿನ ಐದು ವರ್ಷಗಳಲ್ಲಿ ಶೇ.20ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದ ಸಣ್ಣ ಉದ್ಯಮಗಳ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣಕಾಸಿನ ತೀವ್ರ ಕುಸಿತದಿಂದಾಗಿ ಭಾರತೀಯ ಸ್ಟಾರ್ಟ್ಅಪ್ ಉದ್ಯಮ ಭಾರೀ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶೇ.75ರಷ್ಟು ಹೂಡಿಕೆ ಕಡಿತಗೊಂಡಿದೆ. 84 ಸ್ಟಾರ್ಟ್ಅಪ್ಗಳಲ್ಲಿ 24,250 ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ.
ಸ್ಟಾರ್ಟ್ಅಪ್ಗಳು ಉದ್ಯಮವಾಗುವ ಪ್ರಕ್ರಿಯೆ
ಸ್ಟಾರ್ಟ್ಅಪ್ಗಳು ಒಂದು ಐಡಿಯಾ ಪ್ರಸ್ತುತಪಡಿಸುತ್ತವೆ. ಅದು ಬಿಸಿನೆಸ್ ಪ್ಲಾನ್ ಆಗಿ ಬದಲಾಗುತ್ತದೆ. ಈ ಬಿಸಿನೆಸ್ ಪ್ಲಾನ್ ಅನ್ನು ಸಂಸ್ಥಾಪಕರು ಹೂಡಿಕೆದಾರರ ಮುಂದಿಡುತ್ತಾರೆ. ಹೂಡಿಕೆದಾರರು ಆ ಪ್ಲಾನ್ನ ಮೌಲ್ಯ ಪರಿಶೀಲಿಸಿ, ನಂತರ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಹಾಗೆ ಹೂಡಿಕೆ ಮಾಡುವ ಮೊದಲ ಹಂತ ಸೀಡ್ ಫಂಡಿಂಗ್. ಅದು ಕಂಪೆನಿಯ ಮೂಲ ಬಂಡವಾಳವಾಗುತ್ತದೆ.
ಬಿಸಿನೆಸ್ ಪ್ಲಾನ್ನ ಮೌಲ್ಯವನ್ನು ಹೂಡಿಕೆದಾರರು ಹೇಗೆ ಕಂಡುಕೊಳ್ಳುತ್ತಾರೆ?
ಐಡಿಯಾ ಎಷ್ಟು ಆಕರ್ಷಕವಾಗಿದೆ ಎಂಬುದನ್ನು ಮೊದಲು ಗಮನಿಸುತ್ತಾರೆ. ಅದು ಮಾರುಕಟ್ಟೆಯಲ್ಲಿ ಗಮನ ಸೆಳೆಯಬಹುದೇ ಎಂಬುದರ ಪರಿಶೀಲನೆ ಮಾಡುತ್ತಾರೆ. ಅಂತಿಮ ಉತ್ಪನ್ನ ಅಥವಾ ಸೇವೆ ಎಷ್ಟು ಕಾರ್ಯಸಾಧು ಎಂದು ನೋಡುತ್ತಾರೆ. ಸಂಸ್ಥೆ ಸ್ಥಾಪಕರ ಹಿನ್ನೆಲೆ ಏನು ಎಂಬುದನ್ನೂ ನೋಡುತ್ತಾರೆ.