ರಾಮಮಂದಿರ ಉದ್ಘಾಟನೆಯಿಂದ ದೂರ: ಕಾಂಗ್ರೆಸ್ ಎದುರಿನ ಸವಾಲುಗಳು
Photo: PTI
ಬಿಜೆಪಿ, ಸಂಘ ಪರಿವಾರ ಮತ್ತು ಅವುಗಳ ಭಕ್ತಪಡೆ ಕಾಂಗ್ರೆಸ್ ವಿರುದ್ಧ ಈಗ ಹಿಂದೂ ವಿರೋಧಿ, ರಾಮನ ವಿರೋಧಿ ಎಂದು ಹರಿಹಾಯುತ್ತಿವೆ. ಕಾರಣ: ಅದು, ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಖಚಿತಪಡಿಸಿದೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನವನ್ನು ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾರೆ ಎಂದು ಪಕ್ಷ ಹೇಳಿದೆ. ಅದರ ಈ ನಿಲುವು, ಹಿಂದೆ ಅಯೋಧ್ಯೆ ವಿವಾದದ ವಿಚಾರದಲ್ಲಿ ಅದು ತೆಗೆದುಕೊಂಡಿದ್ದ ನಿಲುವನ್ನು ನೋಡಿಕೊಂಡರೆ ಬಹಳ ಭಿನ್ನವಾದುದು ಮತ್ತು ಇದರಲ್ಲೂ ಒಂದು ರಾಜಕೀಯ ಆಯಾಮವಿದೆ. ಅವತ್ತಿನದು ಅನಿವಾರ್ಯವಾಗಿ ಧರ್ಮವನ್ನು ಬಳಸಿಕೊಳ್ಳುವ ರಾಜಕಾರಣವಾಗಿತ್ತು ಮತ್ತು ಇಂದು ಧರ್ಮವನ್ನು ಗೌರವಿಸುತ್ತಲೇ, ಅದು ರಾಜಕೀಯವಾಗಿರುವುದನ್ನು, ಒಂದು ಪಕ್ಷ ತನ್ನ ಕಾರ್ಯಕ್ರಮವಾಗಿ ಅದನ್ನು ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸುವ ನಿಲುವಾಗಿ ಕಾಣಿಸುತ್ತಿದೆ.
ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ತಲ್ಲಣದ ಸಂದರ್ಭದಲ್ಲಿ ಅದು ಕಾಂಗ್ರೆಸ್ ತೆಗೆದುಕೊಂಡಿರುವ ಬಹಳ ಧೈರ್ಯದ ನಿಲುವೆಂಬಂತೆ ಕಂಡರೂ, ಅದರ ತಳಮಳಗಳು ಮತ್ತು ಈ ವಿವಾದದ ವಿಷಯದಲ್ಲಿ ಅದು ಹೊತ್ತಿರುವ ಇತಿಹಾಸದ ಭಾರ ಕೂಡ ಅದನ್ನು ವಿಚಿತ್ರ ಸಂದಿಗ್ಧತೆಯಲ್ಲಿ ಸಿಲುಕಿಸಿದೆ ಎಂಬುದು ಸ್ಪಷ್ಟ. ಇತಿಹಾಸದ ಹೊರೆ, ವರ್ತಮಾನದ ಧರ್ಮಸಂಕಟ ಮತ್ತು ಭವಿಷ್ಯದ ಆತಂಕಗಳು ಕಾಂಗ್ರೆಸ್ ಅನ್ನು ಕಾಡುತ್ತಿವೆ.
ಒಂದೆಡೆ ಅದು ಬಾಬರಿ ಮಸೀದಿ ಧ್ವಂಸದ ಹೊಣೆಯನ್ನು ಹೊರಬೇಕಾಗಿದೆ. ಇನ್ನೊಂದೆಡೆ, ರಾಮಮಂದಿರದಿಂದ ಗರಿಷ್ಠ ಲಾಭ ಪಡೆಯಲು ಹೊರಟಿರುವ ಬಿಜೆಪಿಯನ್ನು ಎದುರಿಸುವುದಕ್ಕಾಗಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಜೊತೆಗಿನ ತನ್ನ ಸಂಬಂಧ ಕೆಡದಂತೆ ನೋಡಿಕೊಳ್ಳುವಲ್ಲಿಯೂ ಮತ್ತಷ್ಟು ಆರೋಪಗಳನ್ನು ಎದುರಿಸಬೇಕಾಗಿದೆ. ಇಂಥ ಸ್ಥಿತಿಯಲ್ಲಿ ಕಾಂಗ್ರೆಸ್ ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸದಿರುವ ತನ್ನ ನಿರ್ಧಾರ ಪ್ರಕಟಿಸುವಾಗ ಹೇಗೆ ಅತಿ ಎಚ್ಚರಿಕೆಯಿಂದ ಹೇಳಿಕೆ ನೀಡಿದೆ ಎಂಬುದನ್ನು ನೋಡಬೇಕು.
ಅದಕ್ಕೂ ಮೊದಲು ಇತಿಹಾಸವನ್ನು ಕೊಂಚ ಗಮನಿಸಬೇಕು. ಈಗಾಗಲೇ ಹೇಳಿದಂತೆ, ರಾಮಜನ್ಮಭೂಮಿ ವಿವಾದದ ವಿಷಯಕ್ಕೆ ಬಂದಾಗ ಕಾಂಗ್ರೆಸ್ ಈ ಹಿಂದೆ ತೆಗೆದುಕೊಂಡಿರುವ ನಿಲುವು ಕೂಡ ವಿಚಿತ್ರ ಸಂದಿಗ್ಧತೆಯಲ್ಲೇ ತೆಗೆದುಕೊಂಡಿದ್ದಾಗಿದೆ ಮತ್ತು ವಿರೋಧಾಭಾಸಗಳಿಂದ ಕೂಡಿದ್ದಾಗಿದೆ. 1986ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬಾಬರಿ ಮಸೀದಿಯ ಬೀಗಗಳನ್ನು ತೆರೆಯಲಾಗಿತ್ತು. ಮೂರು ವರ್ಷಗಳ ನಂತರ, ಅಂದರೆ 1989ರಲ್ಲಿ ವಿವಾದಿತ ಸ್ಥಳದಲ್ಲಿ ಶಿಲಾನ್ಯಾಸಕ್ಕೆ ರಾಜೀವ್ ಗಾಂಧಿಯವರೇ ವಿಎಚ್ಪಿಗೆ ಅನುಮತಿ ನೀಡಿದ್ದರು. 1991ರಲ್ಲಿ ಲೋಕಸಭೆ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮತ್ತೆ ರಾಮಮಂದಿರ ವಿಷಯ ಪ್ರಸ್ತಾಪಿಸಿ, ಬಾಬರಿ ಮಸೀದಿಯನ್ನು ಕೆಡವದೆ ಮಂದಿರ ಕಟ್ಟುವುದಾಗಿ ಹೇಳಿತ್ತು. ಒಂದು ವರ್ಷದ ನಂತರ, 1992ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಹೊತ್ತಲ್ಲಿಯೇ ಬಾಬರಿ ಮಸೀದಿ ಧ್ವಂಸವಾಯಿತು. ಒಂದು ವರ್ಷದ ನಂತರ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್, ಮಸೀದಿಯನ್ನು ಪುನರ್ ನಿರ್ಮಿಸಲು ಕಾಂಗ್ರೆಸ್ ಸರಕಾರ ಬದ್ಧವಾಗಿರುವುದಾಗಿ ಘೋಷಿಸಿದರು. ನಂತರ 2019ರ ನವೆಂಬರ್ ನಲ್ಲಿ, ರಾಮ ಜನ್ಮಭೂಮಿ-ಬಾಬರಿ ಮಸೀದಿ ಕೇಸ್ನಲ್ಲಿ ಹಿಂದೂಗಳ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದ ಹಿನ್ನೆಲೆಯಲ್ಲಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿತು ಮತ್ತು ತಾನು ರಾಮ ಮಂದಿರ ನಿರ್ಮಾಣದ ಪರವಾಗಿರುವುದಾಗಿ ಘೋಷಿಸಿತು.
ಈಗ ಬಿಜೆಪಿ ಮತ್ತು ಸಂಘ ಪರಿವಾರ, ಸುದೀರ್ಘವಾದ ರಾಮಮಂದಿರ ಆಂದೋಲನದ ಯಶಸ್ಸೆಂಬಂತೆ ಬಿಂಬಿಸಲು ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿವೆ ಮತ್ತು ಕಾಂಗ್ರೆಸ್ ಆ ಕಾರ್ಯಕ್ರಮದಿಂದ ದೂರವಿರುವುದಾಗಿ ಘೋಷಿಸಿರುವುದು ಮಹತ್ವದ ನಿರ್ಧಾರ ಎನ್ನಬಹುದಾದ ಹೊತ್ತಿನಲ್ಲಿಯೇ ಅದು ವಿವಾದಕ್ಕೂ ತುತ್ತಾಗುತ್ತಿದೆ ಎಂಬುದು ಸುಳ್ಳಲ್ಲ. ತನ್ನನ್ನು ಸುತ್ತಿಕೊಳ್ಳುವ ಸಂಕಟಗಳ ಅರಿವಿದ್ದೇ, ಈ ವಿವಾದಗಳಿಂದ ಕೊಂಚವಾದರೂ ತಪ್ಪಿಸಿಕೊಳ್ಳಲೆಂದೇ ಅದು ಎಚ್ಚರಿಕೆಯ ಹೇಳಿಕೆಯನ್ನು ಕೊಟ್ಟಿರುವುದು.
ಕಾಂಗ್ರೆಸ್ ಹೇಳಿಕೆಯಲ್ಲಿನ ಅಂಶಗಳು ಹೀಗಿವೆ: 1.ಅಯೋಧ್ಯೆಯ ಮಂದಿರವನ್ನು ಬಿಜೆಪಿ ಹಾಗೂ ಆರೆಸ್ಸೆಸ್ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿವೆ; 2.ಅಪೂರ್ಣಗೊಂಡಿರುವ ದೇಗುಲವನ್ನು ಚುನಾವಣಾ ಲಾಭಕ್ಕಾಗಿ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಉದ್ಘಾಟಿಸುತ್ತಿದ್ಧಾರೆ; 3.ರಾಮನನ್ನು ದೇಶದ ಕೋಟ್ಯಂತರ ಮಂದಿ ಪೂಜಿಸುತ್ತಾರೆ. ಧರ್ಮ ಎನ್ನುವುದು ವೈಯಕ್ತಿಕ ವಿಚಾರ; 4.ಕೋಟ್ಯಂತರ ರಾಮಭಕ್ತರ ಭಾವನೆಗಳನ್ನು ಗೌರವಿಸುತ್ತ, 2019ರಲ್ಲಿ ರಾಮಮಂದಿರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಾಂಗ್ರೆಸ್ ಬದ್ಧವಿದೆ.
ತನ್ನ ಹೇಳಿಕೆಯಲ್ಲಿ ಕಾಂಗ್ರೆಸ್ ರಾಮಮಂದಿರದ ವಿಚಾರವಾಗಿ ವಿರೋಧ ವ್ಯಕ್ತಪಡಿಸದೆ, ಅದನ್ನು ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಕಾರ್ಯಕ್ರಮವಾಗಿ ಮಾಡಿಕೊಂಡಿರುವುದನ್ನು ಆಕ್ಷೇಪಿಸಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ತಾನು ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಯತ್ನಿಸಿದೆ. ಹೀಗೆ ಹೇಳುವ ಮೂಲಕ ಅದು ಹಿಂದೆ ತಾನು ತೆಗೆದುಕೊಂಡಿದ್ದ ನಿಲುವು ಮತ್ತು ಈಗಿನ ರಾಜಕೀಯ ಸನ್ನಿವೇಶದಲ್ಲಿ ತಾನು ನಡೆದುಕೊಳ್ಳಬೇಕಿರುವ ರೀತಿ ಎರಡನ್ನೂ ಸಮತೂಗಿಸಲು ನೋಡಿದೆ.
ಮೊದಲನೆಯದಾಗಿ, ಕಳೆದ ನಾಲ್ಕು ದಶಕಗಳಲ್ಲಿ ವಿವಿಧ ಹಂತಗಳಲ್ಲಿ ಕಾಂಗ್ರೆಸ್ ಗೊತ್ತಿದ್ದು ಮತ್ತು ಕೆಲವೊಮ್ಮೆ ಗೊತ್ತಿಲ್ಲದೆ ಅಯೋಧ್ಯೆ ವಿಚಾರವನ್ನು ಬಳಸಿಕೊಳ್ಳಲು ಯತ್ನಿಸಿದ್ದರೂ, ಅದು ಯಾವಾಗಲೂ ಸಂಘಪರಿವಾರದ ಯೋಜನೆಯೇ ಆಗಿದೆ. ಸಂಘಪರಿವಾರದ ಹಿಂದೂ ಕಾರ್ಡ್ ಅನ್ನು ತಾನೂ ಬಳಸಲು ಹೋಗಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದ್ದೇ ಹೆಚ್ಚು. ರಾಜೀವ್ ಗಾಂಧಿ ಅವಧಿಯಲ್ಲಿ ಶಿಲಾನ್ಯಾಸಕ್ಕೆ ಅನುಮತಿ ಕೊಟ್ಟ ನಿರ್ಧಾರವನ್ನೂ, ಹಾಗೆಯೇ, ಪಿ.ವಿ. ನರಸಿಂಹರಾವ್ ಕಾಲದಲ್ಲಿ, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಉರುಳಿಸುವಾಗ ಮಧ್ಯಪ್ರವೇಶಿಸದಿರಲು ಅದು ನಿರ್ಧರಿಸಿದ್ದನ್ನೂ ಇಲ್ಲಿ ಗಮನಿಸಬಹುದು.
ಈಗ ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎನ್ನುವಾಗ ಅದು, ರಾಮಮಂದಿರ ಉದ್ಘಾಟನೆ ಬಿಜೆಪಿ-ಆರೆಸ್ಸೆಸ್ ನಾಯಕರ ರಾಜಕೀಯ ಕಾರ್ಯಕ್ರಮ ಎಂಬುದನ್ನು ಒತ್ತಿ ಹೇಳಿದೆ. ಜನವರಿ 22ರಂದು ರಾಮಮಂದಿರದ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿರುವುದು ಐವರಿಗೆ ಮಾತ್ರ. ಅರ್ಚಕರೊಬ್ಬರನ್ನು ಹೊರತುಪಡಿಸಿದರೆ ಉಳಿದ ನಾಲ್ವರು ಪ್ರಧಾನಿ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ರಾಜ್ಯಪಾಲರಾದ ಆನಂದಿಬೆನ್ ಪಟೇಲ್. ಇನ್ನು ಕಾರ್ಯಕ್ರಮದ ಒಟ್ಟು ಉಸ್ತುವಾರಿಯನ್ನು ವಿಎಚ್ಪಿ ಮತ್ತು ಆರೆಸ್ಸೆಸ್ ಹೊತ್ತುಕೊಂಡಿವೆ. ಇದು ಪೂರ್ತಿ ಬಿಜೆಪಿಯ ಹಾಗೂ ಸಂಘ ಪರಿವಾರದ ಕಾರ್ಯಕ್ರಮವಾಗಿದೆ ಎಂಬುದಕ್ಕೆ ಇದು ಸಾಕು.
ಕಾರ್ಯಕ್ರಮದಿಂದ ತಾನು ದೂರವಿರಲು ಇದು ಕಾರಣ ಎಂದು ಮನದಟ್ಟು ಮಾಡಲು ಕಾಂಗ್ರೆಸ್ ಪ್ರಯತ್ನಿಸಿದೆ ಮತ್ತು ಲೋಕಸಭೆ ಚುನಾವಣೆ ಎದುರಲ್ಲಿರುವಾಗ ಈ ಜಾಗರೂಕತೆಯನ್ನು ವಹಿಸುವುದು ಅದಕ್ಕೆ ಅನಿವಾರ್ಯವೂ ಆಗಿದೆ. ಆದ್ದರಿಂದಲೇ ಅದು ರಾಮನನ್ನು ಕೋಟ್ಯಂತರ ಜನರು ಪೂಜಿಸುತ್ತಾರೆ ಎಂದೂ, ಧರ್ಮವು ವೈಯಕ್ತಿಕ ವಿಚಾರವಾಗಿದೆ ಎಂದೂ ಹೇಳಲು ಮರೆತಿಲ್ಲ. ಕಾಂಗ್ರೆಸ್ ಈ ಹೊತ್ತಿನಲ್ಲೇ ಒಂದು ನಿಲುವು ಪ್ರಕಟಿಸುವಂತೆ ಮಾಡಿ ಅದನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಬಿಜೆಪಿ ಉದ್ದೇಶವೂ ಆಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ವಿಚಾರ ಕಾಂಗ್ರೆಸಿಗೂ ಗೊತ್ತಿದೆ. ಹಿಂದೂ ವಿರೋಧಿ, ರಾಮ ವಿರೋಧಿ ಎಂಬ ಅಪವಾದಗಳಿಗೆ ತುತ್ತಾಗುವುದು ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಪಾಲಿಗೆ ಸವಾಲಿನ ಸನ್ನಿವೇಶವಾಗಲಿದೆ. ಹಾಗಿದ್ದೂ, ಸಂಘಪರಿವಾರದ ರಾಜಕೀಯ ಕಾರ್ಯಕ್ರಮವನ್ನು ತಾನು ಸಮರ್ಥಿಸಲಾರೆ ಎಂಬ ಧೋರಣೆಯನ್ನು ಕಾಂಗ್ರೆಸ್ ಸ್ಪಷ್ಟವಾಗಿ ವ್ಯಕ್ತಪಡಿಸಿದೆ.
ಎರಡನೆಯದಾಗಿ, ಅಪೂರ್ಣವಾಗಿರುವ ಮಂದಿರವನ್ನು ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ರಾಜಕೀಯ ಲಾಭಕ್ಕೋಸ್ಕರ ಉದ್ಘಾಟಿಸುತ್ತಿದ್ದಾರೆ ಎಂಬ ವಾದವನ್ನು ಕಾಂಗ್ರೆಸ್ ಮುಂದಿಟ್ಟಿದೆ. ಕಾಂಗ್ರೆಸ್ನ ಈ ಹೇಳಿಕೆ ಹೊರಬೀಳುವುದಕ್ಕೆ ಒಂದು ದಿನ ಮೊದಲು ಶಂಕರಾಚಾರ್ಯರ ಮಠಗಳ ಮಠಾಧೀಶರು, ಮಂದಿರ ಅಪೂರ್ಣವಾಗಿರುವುದರಿಂದ ಪ್ರಾಣಪ್ರತಿಷ್ಠಾಪನೆ ಶಾಸ್ತ್ರಕ್ಕೆ ವಿರುದ್ಧವಾಗಿದೆ ಎಂದಿದ್ದರು. ಶಾಸ್ತ್ರಕ್ಕೆ ವಿರುದ್ಧವಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ನಿರ್ಧಾರ ಶಂಕರಾಚಾರ್ಯರಿಂದ ವ್ಯಕ್ತವಾಗಿತ್ತು. ‘‘ಪ್ರಧಾನಿ ಮೋದಿ ರಾಮನ ಪ್ರತಿಮೆಯನ್ನು ಮುಟ್ಟಿ ಅದನ್ನು ಪ್ರತಿಷ್ಠಾಪನೆ ಮಾಡುವುದಾದರೆ, ಅದನ್ನು ನೋಡಿ ಚಪ್ಪಾಳೆ ತಟ್ಟಲು ನಾನು ಅಲ್ಲಿಗೆ ಹೋಗಬೇಕೆ?’’ ಎಂದು ಪುರಿಯ ಗೋವರ್ಧನಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಪ್ರಶ್ನಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು, ಹೀಗೆ ಶಾಸ್ತ್ರಕ್ಕೆ ವಿರುದ್ಧವಾಗಿ ಆತುರದಲ್ಲಿ ಪ್ರಾಣಪ್ರತಿಷ್ಠಾಪನೆಗೆ ಮುಂದಾಗಿರುವುದರ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ಚುನಾವಣಾ ರಾಜಕೀಯದ ಉದ್ದೇಶ ಹೊಂದಿವೆ ಎಂಬುದನ್ನು ಪ್ರತಿಪಾದಿಸಲು ಕಾಂಗ್ರೆಸ್ ಯತ್ನಿಸಿದೆ.
ಮೂರನೆಯದಾಗಿ, ಇದು ಬಿಜೆಪಿ ಮತ್ತು ಆರೆಸ್ಸೆಸ್ಕಾರ್ಯಕ್ರಮ ಎಂದು ಹೇಳುವ ಮೂಲಕ ತನಗೆ ಆಗಬಹುದಾದ ಹೊಡೆತದಿಂದ ಸಾಧ್ಯವಾದಷ್ಟೂ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸಿದರೂ, ಅದಕ್ಕೆ ಇರುವ ದೊಡ್ಡ ತೊಡಕೆಂದರೆ, ಈ ಹಿಂದೆ ಅದು ವಿವಿಧ ಹಂತಗಳಲ್ಲಿ ಅಯೋಧ್ಯೆ ವಿಚಾರವಾಗಿ ತೆಗೆದುಕೊಂಡಿದ್ದ ನಿರ್ಧಾರಗಳು. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಕೂಡ ಹಿಂದುತ್ವದ ಆಟ ಆಡುತ್ತಲೇ ಬಂದಿತ್ತೆಂಬುದು ಸುಳ್ಳಲ್ಲ. ರಾಜೀವ್ ಗಾಂಧಿಯವರು ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಕ್ರಮಗಳು ಅದರ ಒಂದು ಭಾಗವಾದರೆ, 1991ರ ಲೋಕಸಭೆ ಹೊತ್ತಿನಲ್ಲಿಯ ಕಾಂಗ್ರೆಸ್ ಪ್ರಣಾಳಿಕೆ ಇನ್ನೊಂದು ಭಾಗವಾಗಿತ್ತು. ಆನಂತರ ಬಾಬರಿ ಮಸೀದಿ ಧ್ವಂಸವನ್ನು ತಡೆಯಲು ಮುಂದಾಗದ ಅದರ ನಿಲುವು ಕೂಡ ಹಿಂದುತ್ವದ ಆಟದ ಭಾಗವೇ ಆಗಿತ್ತಲ್ಲವೆ? 1991ರಲ್ಲಿ ಅಧಿಕಾರಕ್ಕೆ ಬಂದ ನರಸಿಂಹ ರಾವ್ ಸರಕಾರ, ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪ 1947ರ ಆಗಸ್ಟ್ 15ರಂದು ಇದ್ದಂತೆಯೇ ಮುಂದುವರಿಯುತ್ತದೆ ಎಂದು ಕಾನೂನು ತರಲು ಮುಂದಾದಾಗ, ರಾಮ ಜನ್ಮಭೂಮಿ-ಬಾಬರಿ ಮಸೀದಿ ಸಂಕೀರ್ಣವನ್ನು ಅದರಿಂದ ಹೊರಗಿಟ್ಟಿತ್ತು. ಸಂಘಪರಿವಾರದ ಕಾಶಿ ಮತ್ತು ಮಥುರಾ ಅಜೆಂಡಾ ಎಂದಿಗೂ ಕೈಗೂಡದು ಎಂದು ಪ್ರತಿಪಾದಿಸುತ್ತ ಮುಸ್ಲಿಮರನ್ನು ಒಲಿಸಿಕೊಳ್ಳುವಾಗಲೇ, ಮತ್ತೊಂದೆಡೆ ಹಿಂದೂಗಳನ್ನು ಓಲೈಸುವ ತಂತ್ರವನ್ನೂ ಅದು ಜಾರಿಯಲ್ಲಿಟ್ಟಿತ್ತು ಎಂಬುದಕ್ಕೆ ಇದು ಸಾಕ್ಷಿ. ಬಾಬರಿ ಮಸೀದಿ ಧ್ವಂಸದ ನಂತರ, ಮಸೀದಿ ಪುನರ್ನಿರ್ಮಾಣಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದ್ದ ನರಸಿಂಹ ರಾವ್ ಮೇಲೆ ಕಾಂಗ್ರೆಸ್ ಎಲ್ಲ ಆಪಾದನೆಯನ್ನು ಹೊರಿಸಿ ಕೂತುಬಿಟ್ಟಿತು.
1990ರ ದಶಕದ ಅಂತ್ಯದ ವೇಳೆಗೆ, ಸಮ್ಮಿಶ್ರ ಸರಕಾರಗಳ ಯುಗ ಶುರುವಾಗಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರವಿದ್ದ ಹೊತ್ತಲ್ಲಿ, ಸಂಧಾನದ ಮೂಲಕ ಇತ್ಯರ್ಥಕ್ಕೆ ಬೆಂಬಲವಿರುವುದಾಗಿಯೂ, ನ್ಯಾಯಾಲಯದ ಇತ್ಯರ್ಥಕ್ಕಾಗಿ ನಿರೀಕ್ಷಿಸುವುದಾಗಿಯೂ ಹೇಳುತ್ತಿದ್ದುದು ಬಿಟ್ಟರೆ ಅಯೋಧ್ಯೆ ವಿವಾದದಿಂದ ಕಾಂಗ್ರೆಸ್ ದೂರವೇ ಇತ್ತು. ಕಡೆಗೆ 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹಿಂದೂಗಳ ಪರವಾಗಿ ಬರುವುದರೊಂದಿಗೆ, ಕಾಂಗ್ರೆಸ್ ಎದುರಿನ ಆಯ್ಕೆಗಳೂ ಕೊನೆಯಾದವು. ತೀರ್ಪಿನ ಬಗ್ಗೆ ಸಣ್ಣ ತಕರಾರು ತೆಗೆಯಲೂ ಆಗದ ಸ್ಥಿತಿಯಲ್ಲಿದ್ದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುವುದಾಗಿಯೂ, ತಾನು ರಾಮಮಂದಿರ ನಿರ್ಮಾಣದ ಪರವಾಗಿರುವುದಾಗಿಯೂ ಪ್ರತಿಪಾದಿಸಿತ್ತು. ಈಗ ಅದು, ಅಯೋಧ್ಯೆ ಕಾರ್ಯಕ್ರಮದಿಂದ ದೂರ ಕಾಯ್ದುಕೊಳ್ಳುವ ತೀರ್ಮಾನದ ಹೊತ್ತಿನಲ್ಲಿಯೂ, ಸುಪ್ರೀಂ ಕೋರ್ಟ್ ತೀರ್ಪಿನ ಕುರಿತ ತನ್ನ ಬದ್ಧತೆಯನ್ನು ಮತ್ತು ರಾಮಮಂದಿರದ ಪರವಾದ ತನ್ನ ನಿಲುವನ್ನು ಪುನರುಚ್ಚರಿಸಿದೆ.
ನಾಲ್ಕನೆಯದಾಗಿ, ಕಾಂಗ್ರೆಸ್ ತನ್ನ ನಿಲುವನ್ನು ಪ್ರಕಟಿಸಿದೆಯಾದರೂ, ಅದು ಒಟ್ಟಾರೆ ಕಾಂಗ್ರೆಸಿಗರ ನಿಲುವಾಗಿಲ್ಲ ಎಂಬುದು ಕೂಡ ಬಹಿರಂಗವಾಗುತ್ತಲೇ ಇದೆ. ಕಾಂಗ್ರೆಸ್ನ ಹಲವು ನಾಯಕರು, ಅದರಲ್ಲೂ ಹಿಂದಿ ಪ್ರದೇಶದ ರಾಜ್ಯಗಳ ನಾಯಕರು ಬಿಜೆಪಿಯ ಹಿಂದುತ್ವದ ಅಜೆಂಡಾ ಎದುರಿಸಲು ಮತ್ತು ಹಿಂದೂ ವಿರೋಧಿ, ರಾಮ ವಿರೋಧಿ ಆಪಾದನೆಗಳನ್ನು ತಪ್ಪಿಸಿಕೊಳ್ಳಲು ಕಾರ್ಯಕ್ರಮದಲ್ಲಿ ಪಕ್ಷದ ಸಾಂಕೇತಿಕ ಪ್ರಾತಿನಿಧ್ಯವಾದರೂ ಅಗತ್ಯ ಎಂದು ಹೇಳುತ್ತಿದ್ದಾರೆ. ಮಂದಿರದ ಟ್ರಸ್ಟ್ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಮತ್ತು ಅದು ರಾಷ್ಟ್ರೀಯ ಸರಕಾರದಿಂದ ಸ್ಥಾಪಿತವಾಗಿದೆ. ಕಾರ್ಯಕ್ರಮದಿಂದ ದೂರ ಉಳಿಯುವುದರಿಂದ ಎಲ್ಲವನ್ನೂ ಬಿಜೆಪಿಗೆ ಬಿಟ್ಟುಕೊಟ್ಟಂತೆ ಆಗುತ್ತದೆ ಮತ್ತು ಹಿಂದೂ ವಿರೋಧಿ ಎಂಬ ಆಪಾದನೆಗೆ ತುತ್ತಾಗಬೇಕಾಗುತ್ತದೆ. ಕಾಂಗ್ರೆಸ್ ಸರಕಾರವಿದ್ದಾಗಲೇ ಮಂದಿರ ಶಿಲಾನ್ಯಾಸಕ್ಕೆ ಅನುಮತಿ ಕೊಟ್ಟದ್ದರ ಫಲವೂ ಇಲ್ಲದಂತಾಗುತ್ತದೆ ಎಂಬ ಆತಂಕ ಅಂಥ ನಾಯಕರದ್ದಾಗಿದೆ.
ಈ ಹಂತದಲ್ಲಿ ಕಾಂಗ್ರೆಸ್ ಎದುರು ಒಂದು ದೊಡ್ಡ ಸವಾಲು ಇದೆ. ಕಾರ್ಯಕ್ರಮದಿಂದ ದೂರವಿರುವ ನಿಲುವು ತೆಗೆದುಕೊಂಡಿರುವುದು ಸರಿ. ಆದರೆ, ಅದು ಸರಿಯಾದ ನಿರ್ಧಾರ ಎಂದು ಜನರಿಗೆ ಎಷ್ಟು ಸಮರ್ಥವಾಗಿ ಕಾಂಗ್ರೆಸ್ ಮನವರಿಕೆ ಮಾಡಲಿದೆ ಎಂಬುದು ಬಹಳ ಮುಖ್ಯವಾಗಿದೆ. ಬಿಜೆಪಿ ಹಿಂದಿ ಭಾಷಿಕ ರಾಜ್ಯಗಳಲ್ಲಂತೂ ಸಂಪೂರ್ಣವಾಗಿ ಧ್ರುವೀಕರಣಕ್ಕೆ ಹೊರಟಿದೆ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸುವುದು ಬಿಜೆಪಿಗೆ ಬಹಳ ಸುಲಭದ ಕೆಲಸ. ಹಾಗಾಗದ ಹಾಗೆ, ತನ್ನ ನಿರ್ಧಾರ ಯಾವ ಕಾರಣಗಳಿಂದ ಸರಿಯಾಗಿದೆ, ಯಾಕೆ ಅಯೋಧ್ಯೆ ಕಾರ್ಯಕ್ರಮ ರಾಷ್ಟ್ರೀಯ ಕಾರ್ಯಕ್ರಮವಾಗದೆ, ಬಿಜೆಪಿಯ ಕಾರ್ಯಕ್ರಮ ಮಾತ್ರವಾಗಿದೆ, ಹೇಗೆ ಮೋದಿ ಅದನ್ನು ತನ್ನ ಲಾಭಕ್ಕೋಸ್ಕರ ಮಾತ್ರವೇ ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ಕಾಂಗ್ರೆಸ್ ಅರ್ಥ ಮಾಡಿಸಬಲ್ಲುದೆ?
ಇನ್ನು ಕೊನೆಯದಾಗಿ, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳ ಮನವೊಲಿಸುವ ಸವಾಲು ಕೂಡ ಸಣ್ಣದಲ್ಲ. ಮಿತ್ರಪಕ್ಷಗಳು ಕೂಡ ತನ್ನ ನಿಲುವನ್ನೇ ಅನುಸರಿಸಲಿವೆ ಮತ್ತು ರಾಮಮಂದಿರದ ಪ್ರತಿಷ್ಠಾಪನೆಯಿಂದ ದೂರವಿರಲಿವೆ ಎಂಬುದು ಕಾಂಗ್ರೆಸ್ ವಿಶ್ವಾಸ. ಒಂದು ವೇಳೆ ಈ ವಿಚಾರದಲ್ಲಿ ಕಾಂಗ್ರೆಸ್ ಒಬ್ಬಂಟಿಯಾಗಿಬಿಟ್ಟರೆ ದೊಡ್ಡ ಅಪಾಯ. ಆದರೆ ಸದ್ಯಕ್ಕೆ ಮೈತ್ರಿಕೂಟದ ಪಕ್ಷಗಳೆಲ್ಲವೂ ಕಾಂಗ್ರೆಸ್ ನಿಲುವಿಗೆ ಜೊತೆಯಾಗಿಯೇ ಇವೆ. ಕಾಂಗ್ರೆಸ್ ತನ್ನ ನಿರ್ಧಾರ ಪ್ರಕಟಿಸುವ ಮೊದಲು ಕೂಡ ಮೈತ್ರಿಪಕ್ಷಗಳ ನಿಲುವು ಇದೇ ಆಗಿದೆ ಎಂಬುದನ್ನು ಖಚಿತಪಡಿಸಿಕೊಂಡೇ ಹೆಜ್ಜೆಯಿಟ್ಟಿದೆ.
ಪಕ್ಷದ ಉನ್ನತ ನಾಯಕರು ಈ ಕಾರ್ಯಕ್ರಮದ ಬಳಿಕ ಮಂದಿರಕ್ಕೆ ಭೇಟಿ ನೀಡುವ ಮೂಲಕ, ಇಂಡಿಯಾ ಮೈತ್ರಿಕೂಟದ ವಿರೋಧವೇನಿದ್ದರೂ ಬಿಜೆಪಿ ರಾಜಕೀಯದ ಬಗ್ಗೆಯೇ ಹೊರತು ಯಾವತ್ತೂ ನಂಬಿಕೆಯ ಕುರಿತು ಅಲ್ಲ ಎಂದು ಮನದಟ್ಟು ಮಾಡುವ ಆಲೋಚನೆಯೂ ಇದೆಯೆನ್ನಲಾಗಿದೆ.
ಕಡೆಗೂ, ರಾಜಕೀಯ ಆಟದಲ್ಲಿ ಕಸರತ್ತುಗಳು ಮುಗಿಯುವುದಿಲ್ಲ ಎನ್ನುವುದೇ ಸತ್ಯ, ಅಲ್ಲವೆ?