ಅಪಪ್ರಚಾರದ ರಾಜಕೀಯಕ್ಕೆ ಪಾಠ ಕಲಿಸಿದ ಕಾಂಗ್ರೆಸ್ ಗೆಲುವು
ಮೂರೂ ವಿಧಾನ ಸಭಾ ಕ್ಷೇತ್ರಗಳಲ್ಲಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಒಂದೊಂದು ಕ್ಷೇತ್ರ ಒಂದೊಂದು ಪಕ್ಷಗಳ ಪಾಲಾಗಿದ್ದವು. ತಾನು ಈ ಮೊದಲು ಗೆದ್ದಿದ್ದ ಸಂಡೂರು ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜೊತೆಗೇ, ಜೆಡಿಎಸ್ ಗೆದ್ದಿದ್ದ ಚನ್ನಪಟ್ಟಣ ಮತ್ತು ಬಿಜೆಪಿ ಗೆದ್ದಿದ್ದ ಶಿಗ್ಗಾಂವಿ ಕ್ಷೇತ್ರಗಳನ್ನೂ ಈಗ ತನ್ನ ತೆಕ್ಕೆಗೆ ಕಾಂಗ್ರೆಸ್ ತೆಗೆದುಕೊಂಡಿದೆ. ಚನ್ನಪಟ್ಟಣ ಏನಿದ್ದರೂ ತನ್ನದು ಎಂದುಕೊಂಡಿದ್ದ ಕುಮಾರಸ್ವಾಮಿ ಮತ್ತು ಶಿಗ್ಗಾಂವಿಯಲ್ಲಿ ಹಿಡಿತ ಹೊಂದಿದ್ದ ಬಸವರಾಜ ಬೊಮ್ಮಾಯಿ ಇಬ್ಬರ ರಾಜಕೀಯದ ಪ್ರಾಬಲ್ಯ ಕಾಲ ಮುಗಿಯಿತೆ? ಸದ್ಯದ ಮಟ್ಟಿಗೆ ಇದೊಂದು ಪ್ರಶ್ನೆ ಮಾತ್ರವಾಗಿದ್ದರೂ, ಅದು ತನ್ನೊಳಗೇ ಇರುವ ಉತ್ತರವನ್ನು ಖಚಿತಪಡಿಸುವ ಕಾಲವೂ ಬಹು ಬೇಗ ಬರಲೂ ಬಹುದು.
ಈ ಸಲದ ಫಲಿತಾಂಶ ಮತ್ತು 2023ರ ಚುನಾವಣೆಯ ಫಲಿತಾಂಶಗಳನ್ನು ಹೋಲಿಸಿ ನೋಡೋಣ.
ಚನ್ನಪಟ್ಟಣ ಕ್ಷೇತ್ರ:
ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್ ಗೆಲುವು. ಗೆಲುವಿನ ಅಂತರ 25,413 ಮತಗಳು-ಪಡೆದ ಮತಗಳ ಪ್ರಮಾಣ ಶೇ.54.33. ಸೋತ ಅಭ್ಯರ್ಥಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ.
ಈ ಕ್ಷೇತ್ರದಲ್ಲಿನ ಕಳೆದ ಸಲದ ಫಲಿತಾಂಶ: ಜೆಡಿಎಸ್‌ನ ಕುಮಾರಸ್ವಾಮಿ ಗೆಲುವು. ಗೆಲುವಿನ ಅಂತರ 15,915 ಮತಗಳು ಪಡೆದಿದ್ದ ಮತಗಳ ಪ್ರಮಾಣ ಶೇ.48.83.
ಶಿಗ್ಗಾಂವಿ ಕ್ಷೇತ್ರ:
ಕಾಂಗ್ರೆಸ್‌ನ ಯಾಸಿರ್ ಪಠಾಣ್ ಗೆಲುವು. ಗೆಲುವಿನ ಅಂತರ 13,448. ಪಡೆದ ಮತಗಳ ಪ್ರಮಾಣ ಶೇ.52.41. ಸೋತ ಅಭ್ಯರ್ಥಿ ಬಿಜೆಪಿಯ ಭರತ್ ಬೊಮ್ಮಾಯಿ.
ಈ ಕ್ಷೇತ್ರದಲ್ಲಿನ ಕಳೆದ ಸಲದ ಫಲಿತಾಂಶ: ಬಿಜೆಪಿಯ ಬಸವರಾಜ ಬೊಮ್ಮಾಯಿ ಗೆಲುವು. ಗೆಲುವಿನ ಅಂತರ 35,978 ಮತಗಳು. ಪಡೆದಿದ್ದ ಮತಗಳ ಪ್ರಮಾಣ ಶೇ.54.95.
ಸಂಡೂರು ಕ್ಷೇತ್ರ:
ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಗೆಲುವು. ಗೆಲುವಿನ ಅಂತರ 9,649. ಸೋತ ಅಭ್ಯರ್ಥಿ ಬಿಜೆಪಿಯ ಬಂಗಾರು ಹನುಮಂತು. ಕಳೆದ ಬಾರಿಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಿತ್ತು.
ಮೂರೂ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಲ್ಲಿ ಕಾಣಿಸುವ ಪ್ರಮುಖ ಅಂಶಗಳು:
1. ಆಂತರಿಕ ಕಚ್ಚಾಟ, ಬಣ ರಾಜಕೀಯದ ಆರೋಪಗಳಿಗೆ ಗೆಲುವಿನ ಮೂಲಕ ಕಾಂಗ್ರೆಸ್ ಖಡಕ್ ಉತ್ತರ.
2. ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಹೀನಾಯ ಸೋಲು.
3. ಕಾಂಗ್ರೆಸ್ ಸರಕಾರದ ವಿರುದ್ಧ ಸತತ ಅಪಪ್ರಚಾರ, ಅನಗತ್ಯ ಆರೋಪಗಳನ್ನು ಮಾಡುತ್ತ ಬಂದ ಬಿಜೆಪಿಗೆ ತೀವ್ರ ಮುಖಭಂಗ.
ಉಪ ಚುನಾವಣೆಯಲ್ಲಿ ಬಂದಿರುವ ಫಲಿತಾಂಶವನ್ನು ಒಂದು ಚೌಕಟ್ಟಿನಲ್ಲಿ ಹಿಡಿದು ನೋಡುವುದಾದರೆ,
ಒಂದರ ಜೊತೆ ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ:
ಉಪ ಚುನಾವಣೆಯಲ್ಲಿ ತನ್ನ ಭದ್ರಕೋಟೆ ಸಂಡೂರಿನಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳನ್ನೂ ಬೋನಸ್ ಆಗಿ ಪಡೆದು ಬೀಗಿದೆ. ಇದರೊಂದಿಗೆ, ತಾನು ಜನಬೆಂಬಲ ಕಳೆದುಕೊಂಡಿಲ್ಲ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿತ್ತಾದರೂ, ಈ ಬಾರಿ ಬೇರೆ ಬೇರೆ ರಾಜಕೀಯ ಸಮೀಕರಣಗಳ ಕಾರಣದಿಂದಾಗಿ ಗೆಲುವು ಸುಲಭ ಎನ್ನುವ ಹಾಗಿರಲಿಲ್ಲ. ಕಡೆಗೂ ಅಲ್ಲಿ ಬಿಜೆಪಿ ಲೆಕ್ಕಾಚಾರಗಳನ್ನು ಮೀರಿ, ತುಕಾರಾಂ ಕುಟುಂಬ ತನ್ನ ಪ್ರಾಬಲ್ಯ ಉಳಿಸಿಕೊಂಡಂತಾಗಿದೆ ಮತ್ತು ಅವರ ಪಕ್ಷನಿಷ್ಠೆ ಖಂಡಿತವಾಗಿಯೂ ಕಾಂಗ್ರೆಸ್ ಪಾಲಿನ ಬಲವಾಗಿದೆ. ಅನ್ನಪೂರ್ಣ ತುಕಾರಾಂ ಅವರು ಬಿಜೆಪಿಯ ಬಂಗಾರು ಹನುಮಂತು ವಿರುದ್ಧ ಗೆದ್ದಿದ್ದಾರೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿ ಎರಡರಲ್ಲೂ ಮಾಜಿ ಸಿಎಂಗಳು ತಮ್ಮ ಪುತ್ರರನ್ನು ಪಣಕ್ಕಿಟ್ಟಿದ್ದರು ಮತ್ತು ಪಣದಲ್ಲಿ ಆ ಇಬ್ಬರೂ ನಾಯಕರಿಗೆ ಹೀನಾಯ ಸೋಲಾಗಿದೆ. ಕುಮಾರಸ್ವಾಮಿ ಪುತ್ರ ನಿಖಿಲ್ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸೋಲು ಅನುಭವಿಸಿದ್ದಾರೆ. ತನಗೆ ಬೇಡವಾಗಿದ್ದ ಈ ಚುನಾವಣೆಯಲ್ಲಿ ಒತ್ತಾಯಕ್ಕೆ ಕಟ್ಟುಬಿದ್ದು ಕಣಕ್ಕಿಳಿದಿದ್ದ ನಿಖಿಲ್ ಪಾಲಿಗೆ ಇದು ಸತತ ಮೂರನೇ ಸೋಲು. ಇದರೊಂದಿಗೆ ಅವರ ರಾಜಕೀಯ ಭವಿಷ್ಯವೂ ಮಂಕಾಯಿತೇ? ಎಂಬ ಪ್ರಶ್ನೆ ಮೂಡಿದೆ. ಬೊಮ್ಮಾಯಿ ಪುತ್ರ ಭರತ್ ಕಾಂಗ್ರೆಸ್‌ನ ಯಾಸಿರ್ ಪಠಾಣ್ ವಿರುದ್ಧ ಸೋಲು ಕಂಡಿದ್ದಾರೆ. ಚೊಚ್ಚಲ ಚುನಾವಣೆಯಲ್ಲೇ ಅವರು ನೆಲ ಕಚ್ಚಿದ್ದಾರೆ. ಅಲ್ಲದೆ ಬಸವರಾಜ ಬೊಮ್ಮಾಯಿ ರಾಜಕಾರಣವೂ ಒಂದು ಕೊನೆಗೆ ಬಂದು ಮುಟ್ಟಿದ ಹಾಗೆ ಕಾಣಿಸುತ್ತಿದೆ. ಶಿಗ್ಗಾಂವಿಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಗೆಲ್ಲುವುದಿಲ್ಲ ಎಂಬ ಅಭಿಪ್ರಾಯವನ್ನು ಅಳಿಸಿಹಾಕುವ ಹಾಗೆ ಯಾಸಿರ್ ಪಠಾಣ್ ಗೆಲುವು ಸಾಧಿಸಿದ್ದಾರೆ.
ಸಿ.ಪಿ. ಯೋಗೇಶ್ವರ್ ಈ ಗೆಲುವಿನಿಂದ ಮತ್ತೊಮ್ಮೆ ವೈಯಕ್ತಿಕ ವರ್ಚಸ್ಸು ತೋರಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬದ್ಧ ವೈರಿಗಳು ಒಂದಾಗಿ ಪಡೆದ ಗೆಲುವು ಇದಾಗಿದೆ. ಜೆಡಿಎಸ್ ಭದ್ರಕೋಟೆ ಎನ್ನಿಸಿದ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.
ಕಚ್ಚಾಟ ಮರೆತು ಒಗ್ಗೂಡಿ ಗೆದ್ದ ಕಾಂಗ್ರೆಸ್:
ಮೂರೂ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಗೆಲುವು, ಈ ಬಾರಿ ಅದು ಒಂದೇ ಗುರಿಯೊಂದಿಗೆ ಒಗ್ಗೂಡಿ ಕೆಲಸ ಮಾಡಿದ್ದರ ಪರಿಣಾಮವೂ ಹೌದು. ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಸೋದರರು ತೆಗೆದುಕೊಂಡ ರಾಜಕೀಯ ನಿಲುವು ಬಹಳ ಮಹತ್ವದ್ದು. ದೇವೇಗೌಡರ ಕುಟುಂಬದ ದ್ವೇಷ ರಾಜಕಾರಣವನ್ನು ಡಿ.ಕೆ. ಶಿವಕುಮಾರ್ ಕುಟುಂಬದ ಸ್ನೇಹದ ರಾಜಕಾರಣ ಮಣಿಸಿದೆ. ಯೋಗೇಶ್ವರ್ ವೈಯಕ್ತಿಕ ವರ್ಚಸ್ಸು, ಸರಕಾರದ ಬಲದ ಜೊತೆಗೇ ಡಿ.ಕೆ. ಬ್ರದರ್ಸ್ ನಿರ್ವಹಿಸಿದ ಪಾತ್ರ ಚನ್ನಪಟ್ಟಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇನ್ನು, ಸಂಡೂರಿನಲ್ಲಿ ಜನಾರ್ದನ ರೆಡ್ಡಿ ಆಟದ ಮುಂದೆ ಕಾಂಗ್ರೆಸ್ ಆಟ ನಡೆಯದು ಎಂದುಕೊಂಡವರಿಗೆಲ್ಲ ಗೆಲುವಿನ ಮೂಲಕವೇ ಕಾಂಗ್ರೆಸ್ ಉತ್ತರ ಕೊಟ್ಟಿದೆ. ಬಹಳ ಸಮಯದಿಂದ ಬಳ್ಳಾರಿಯಿಂದ ದೂರವೇ ಇರಬೇಕಾಗಿ ಬಂದಿದ್ದ ರೆಡ್ಡಿಗೆ ಕಡೆಗೂ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಸಿಕ್ಕಿತ್ತು. ಬರುತ್ತಲೇ ಅವರಿಂದ ಜಿಲ್ಲೆಯಲ್ಲಿ ಮ್ಯಾಜಿಕ್ ಸೃಷ್ಟಿಯಾಗಲಿದೆ ಮತ್ತದರ ಮೊದಲ ಸ್ಯಾಂಪಲ್ ಸಂಡೂರು ವಿಧಾನಸಭೆ ಉಪ ಚುನಾವಣೆಯಲ್ಲಿನ ಬಿಜೆಪಿಯ ಗೆಲುವೇ ಆಗಿರಲಿದೆ ಎಂದೇ ಅಂದುಕೊಳ್ಳಲಾಗಿತ್ತು.
ಮತ್ತು ಅಂಥ ಮ್ಯಾಜಿಕ್ ಸೃಷ್ಟಿಸುವ ಮೂಲಕ ಬಿಜೆಪಿಯಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳುವ ಅನಿವಾರ್ಯತೆ ರೆಡ್ಡಿಗೂ ಇತ್ತು. ಈಗ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ. ಕಾಂಗ್ರೆಸ್ ಸಂಡೂರು ಕ್ಷೇತ್ರವನ್ನು ತನ್ನ ಕೋಟೆಯಾಗಿಯೇ ಉಳಿಸಿಕೊಳ್ಳುವ ಮೂಲಕ ಬಿಜೆಪಿಯ ಕನಸನ್ನೂ, ರೆಡ್ಡಿ ಕನಸನ್ನೂ ನುಚ್ಚು ನೂರು ಮಾಡಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸುವ ಹೊಣೆಯನ್ನು ಸಿದ್ದರಾಮಯ್ಯ ವಹಿಸಿದ್ದು ಸಚಿವ ಸಂತೋಷ್ ಲಾಡ್ ಮತ್ತು ನಾಗೇಂದ್ರ ಅವರಿಗೆ. ಅಲ್ಲಿ ಮತ್ತೆ ರೆಡ್ಡಿ ಎಂಟ್ರಿ ಕೊಡಲು ಆಗದ ಹಾಗೆ ಮಾಡಲು ಕಾಂಗ್ರೆಸ್‌ಗೆ ಈ ಗೆಲುವು ಅನಿವಾರ್ಯವಾಗಿತ್ತು. ಸಿದ್ದರಾಮಯ್ಯ ಅದೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆಂದರೆ, ಮೂರು ದಿನ ಸಂಡೂರಿನಲ್ಲಿಯೇ ಉಳಿದು ಪಕ್ಷದ ಪರ ಭರ್ಜರಿ ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಅವರ ವರ್ಚಸ್ಸು ಗೆದ್ದಿದೆ. ಬಂಗಾರು ಹನುಮಂತುವನ್ನು ಸೋಲಿಸುವ ಮೂಲಕ ರೆಡ್ಡಿಯನ್ನು ಜನರು ಹೊರಗೇ ಇಟ್ಟಿದ್ದಾರೆ. 13 ವರ್ಷಗಳ ಕಾಲ ಬಳ್ಳಾರಿ ಪ್ರವೇಶಿಸಲು ಸಾಧ್ಯವಾಗದೇ ಇದ್ದುದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸವಾಲು ಹಾಕಿದ್ದ ರೆಡ್ಡಿ ವಿರುದ್ಧ ಸಿದ್ದರಾಮಯ್ಯ ಕೂಡ ಜಿದ್ದಿಗೆ ಬಿದ್ದವರಂತೆ ನಿಂತಿದ್ದರು ಮತ್ತು ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುವುದರೊಂದಿಗೆ ಸಿದ್ದರಾಮಯ್ಯ ಕೂಡ ಗೆದ್ದಂತಾಗಿದೆ. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೋತಿದ್ದಾರೆ ಎನ್ನುವುದಕ್ಕಿಂತಲೂ, ಬಸವರಾಜ ಬೊಮ್ಮಾಯಿ ರಾಜಕೀಯ ಬದುಕು ಬಹಳ ದೊಡ್ಡ ಸೋಲಿನ ಸುಳಿಗೆ ಸಿಲುಕಿದೆ. ಅವರೇ ಗೆದ್ದಿದ್ದ ಕ್ಷೇತ್ರದಲ್ಲಿ ಅವರ ಪುತ್ರನನ್ನು ಮತದಾರರು ಸೋಲಿಸಿ ಮನೆಗೆ ಕಳಿಸಿದ್ದಾರೆ. ತನ್ನ ಕ್ಷೇತ್ರ ತನ್ನ ಮಗನ ಹಿಡಿತಕ್ಕೆ ಬರಬೇಕೆಂಬ ಬಸವರಾಜ ಬೊಮ್ಮಾಯಿಯವರ ದುರಾಸೆಯನ್ನು ಪಕ್ಷದವರೇ ಒಳಗೊಳಗೇ ವಿರೋಧಿಸಿದ್ದರು. ಅದಕ್ಕೀಗ ಕ್ಷೇತ್ರದ ಜನರು ಕೂಡ ತಮ್ಮ ಮುದ್ರೆಯೊತ್ತಿದ್ದು, ಕುಟುಂಬ ರಾಜಕಾರಣವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಬಿಜೆಪಿಯ ಭದ್ರಕೋಟೆ ಎಂದುಕೊಂಡು ಬರಲಾಗಿದ್ದ ಕ್ಷೇತ್ರದಲ್ಲಿ ಕಮಲ ತಲೆಕೆಳಗಾಗಿದೆ. ನಾಯಕ ಎಂದರೆ ಬೊಮ್ಮಾಯಿ ಮಾತ್ರ ಎಂಬಂತಾಗಿ ಹೋಗಿದ್ದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ತನಗಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದೆ. ಸತೀಶ್ ಜಾರಕಿಹೊಳಿ, ಝಮೀರ್ ಅಹಮದ್ ಮೊದಲಾದ ನಾಯಕರ ಪ್ರಯತ್ನ ಫಲ ಕೊಟ್ಟಿದೆ. ಸತೀಶ್ ಜಾರಕಿಹೊಳಿಯವರಂತೂ ತಮ್ಮದೇ ಆದ ಒಂದು ತಂಡವನ್ನೇ ಕಳಿಸಿದ್ದರು. ಆ ತಂಡ ಶಿಗ್ಗಾಂವಿಯ ಮನೆಮನೆಗೂ ಭೇಟಿ ನೀಡಿತು. ಮುಸ್ಲಿಮ್ ಮತಗಳು ಕಾಂಗ್ರೆಸ್ ಪರವಾಗಿಯೇ ಇರುವಂತೆ ಈ ಮೂಲಕ ಸತೀಶ್ ಜಾರಕಿಹೊಳಿ ನೋಡಿಕೊಂಡರು.
ವಿಪಕ್ಷಗಳಿಗೆ ಪಾಠ: ಆರೋಪ, ಅಪಪ್ರಚಾರಗಳೇ ಸಾಧನೆಯಲ್ಲ:
ಬಿಜೆಪಿಯಂತೂ ಕಾಂಗ್ರೆಸ್ ಸರಕಾರದ ವಿರುದ್ಧ ಸತತವಾಗಿ ಮುಗಿಬೀಳುತ್ತಿತ್ತು. ವಿಜಯಪುರ ಜಿಲ್ಲೆ ವಕ್ಫ್ ಆಸ್ತಿ ಸಂಬಂಧವಾಗಿ ಎದ್ದ ವಿವಾದಗಳ ಬಗ್ಗೆ ಸರಕಾರ ಸ್ಪಷ್ಟನೆ ನೀಡಿದ ಬಳಿಕವೂ, ಆ ವಿವಾದವನ್ನು ಜೀವಂತವಾಗಿಡಲು ಮತ್ತು ಇನ್ನಷ್ಟು ಬೆಳೆಸಲು ಬಿಜೆಪಿ ಯತ್ನಿಸಿತ್ತು. ವಿಜಯಪುರದಲ್ಲಿನ ವಕ್ಫ್ ಆಸ್ತಿ ವಿವಾದದ ಬೆನ್ನಲ್ಲೇ ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದಾಗಿ ಸುದ್ದಿ ಹಬ್ಬಿಸಲಾಯಿತು. ಯಾದಗಿರಿಯಲ್ಲಿ 1,440 ರೈತರ ಜಮೀನು ಹಾಗೂ ಧಾರವಾಡದ ಉಪ್ಪಿನ ಬೆಟಗೇರಿಯ ಕೆಲ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬ ಉಲ್ಲೇಖವಿದೆ ಎಂಬ ಆರೋಪಗಳನ್ನು ಮಾಡಲಾಗಿತ್ತು. ಮುಡಾ ಪ್ರಕರಣದ ವಿರುದ್ಧ ಪಾದಯಾತ್ರೆ ನಡೆಸಿ ಜನರ ಗಮನ ಸೆಳೆಯಲು ಯತ್ನಿಸಿತ್ತು. ಆದರೆ ಬಿಜೆಪಿಯ ಅಬ್ಬರದ ಅಪಪ್ರಚಾರಗಳೆಲ್ಲವೂ ಚುನಾವಣಾ ರಾಜಕಾರಣದ ಗಿಮಿಕ್‌ಗಳೇ ಆಗಿದ್ದವು. ಸತತವಾಗಿ ನೆಪಗಳನ್ನು ಹುಡುಕುತ್ತ ಅಪಪ್ರಚಾರ ಮಾಡುತ್ತಲೇ ಬಂತು ಬಿಜೆಪಿ. ರಚನಾತ್ಮಕವಾಗಿ ಏನನ್ನೂ ಮಾಡದೆ, ಬರೀ ಸರಕಾರಕ್ಕೆ ಅಡ್ಡಗಾಲಾಗುವ ರೀತಿಯಲ್ಲಿ ವರ್ತಿಸಿತ್ತು. ಮಾತೆತ್ತಿದರೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದ್ದ ಬಿಜೆಪಿ ನಾಯಕರು, ಅದನ್ನೇ ತಮ್ಮ ಸಾಧನೆ ಎಂದುಕೊಂಡಿದ್ದರು. ಆದರೆ ಆರೋಪ, ಅಪಪ್ರಚಾರಗಳೇ ಸಾಧನೆಯಲ್ಲ ಎಂಬುದನ್ನು ವಿಪಕ್ಷಗಳಿಗೆ ಈ ಫಲಿತಾಂಶ ಮನದಟ್ಟು ಮಾಡಿದೆ. ಕಾಂಗ್ರೆಸ್ ಸರಕಾರದ ವಿರುದ್ಧ ಸತತ ಅಪಪ್ರಚಾರಗಳನ್ನು ಮಾಡುತ್ತ ಬಂದ ಅನಗತ್ಯ ಆರೋಪಗಳನ್ನು ಮಾಡುತ್ತ ಬಂದ, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಅದು ಬಳಸಿದ್ದ ವಕ್ಫ್ ಆಸ್ತಿ ಅಪಪ್ರಚಾರದ ಅಸ್ತ್ರವಂತೂ ಛಿದ್ರ ಛಿದ್ರವಾಗಿದೆ.
ಕುಟುಂಬ ರಾಜಕಾರಣದ ಬಗ್ಗೆ ತಿರಸ್ಕಾರವೂ ಅಲ್ಲ, ಪೂರ್ಣ ಸಮ್ಮತಿಯೂ ಇಲ್ಲ:
ಇನ್ನು ಕುಟುಂಬ ರಾಜಕಾರಣಕ್ಕೆ ಈ ಚುನಾವಣೆಯಲ್ಲಿ ಜನರು ಮಣೆ ಹಾಕಿಲ್ಲ, ಹಾಗೆಂದು ಪೂರ್ತಿ ತಿರಸ್ಕರಿಸಿದ್ದಾರೆ ಎಂತಲೂ ಅಲ್ಲ. ಎಲ್ಲಿ ಅದು ಅತಿರೇಕಕ್ಕೆ ಹೋಗುತ್ತಿದೆ ಎನ್ನಿಸಿದೆಯೋ ಅಲ್ಲಿ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಜನರು ಚಿಕಿತ್ಸೆ ನೀಡಿದ್ದಾರೆ ಎನ್ನುವುದಕ್ಕೆ, ಎರಡು ಕ್ಷೇತ್ರಗಳಲ್ಲಿ ಕಣದಲ್ಲಿದ್ದ ಮಾಜಿ ಸಿಎಂಗಳ ಪುತ್ರರನ್ನು ಸೋಲಿಸಿರುವುದು ನಿದರ್ಶನ. ಚನ್ನಪಟ್ಟಣದ ಉಪ ಚುನಾವಣೆ ಫಲಿತಾಂಶವನ್ನು ನೋಡಿದರೆ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿಯ ರಾಜಕೀಯ ಪ್ರವೇಶಕ್ಕೆ ಸತತ ಮೂರನೇ ಸಲವೂ ಜನ ಸಮ್ಮತಿ ಕೊಟ್ಟಿಲ್ಲ. ಕಾಂಗ್ರೆಸ್ ಸರಕಾರವನ್ನು ಬೀಳಿಸದೆ ವಿರಮಿಸಲಾರೆ ಎಂಬ ದೇವೇಗೌಡರ ದ್ವೇಷ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ.
ದೇವೇಗೌಡರ ಕುಟುಂಬದ ಕಣ್ಣೀರಿನ ರಾಜಕಾರಣ, ವೀಲ್‌ಚೇರ್ ಪ್ರಚಾರ, ಆ್ಯಂಬುಲೆನ್ಸ್‌ನಲ್ಲಿ ಬಂದು ಪ್ರಚಾರದಲ್ಲಿ ಪಾಲ್ಗೊಳ್ಳುವ ಸಿಂಪಥಿ ಗಿಟ್ಟಿಸುವ ತಂತ್ರಗಾರಿಕೆ ಇವಾವುದಕ್ಕೂ ಜನ ಮರುಳಾಗಿಲ್ಲ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಸಮುದಾಯದ ನಾಯಕನಾಗುವ ಕುಮಾರಸ್ವಾಮಿ ಹಠಕ್ಕೆ ಹೀನಾಯ ಸೋಲಾಗಿದೆ. ಹೀಗೆ, ಎಲ್ಲಿ ಕುಟುಂಬ ರಾಜಕಾರಣ ಸೋತಿದೆಯೋ, ಚನ್ನಪಟ್ಟಣ ಏನಿದ್ದರೂ ತನ್ನದು ಎಂದುಕೊಂಡೇ ಕುಮಾರಸ್ವಾಮಿ ಆಡುತ್ತಿದ್ದ ಭಾವನಾತ್ಮಕ ಆಟಕ್ಕೆ ಎಲ್ಲಿ ಸೋಲಾಗಿದೆಯೋ ಆ ಕ್ಷೇತ್ರದಲ್ಲಿ ರಾಜಕೀಯ ವೈರತ್ವವನ್ನು ಮೀರಿದ ಪ್ರಾಮಾಣಿಕ ಸಮನ್ವಯವನ್ನು ಜನರು ಗೆಲ್ಲಿಸಿದ್ದಾರೆ. ಇನ್ನು, ಶಿಗ್ಗಾಂವಿಯಲ್ಲಿ ತನ್ನ ಕ್ಷೇತ್ರ ತನ್ನ ಮಗನ ಹಿಡಿತಕ್ಕೆ ಬರಬೇಕೆಂಬ ಬಸವರಾಜ ಬೊಮ್ಮಾಯಿಯವರ ದುರಾಸೆಯನ್ನು ಪಕ್ಷದವರೇ ಒಳಗೊಳಗೇ ವಿರೋಧಿಸಿದ್ದರು. ಅದಕ್ಕೀಗ ಕ್ಷೇತ್ರದ ಜನರು ಕೂಡ ತಮ್ಮ ಮುದ್ರೆಯೊತ್ತಿದ್ದು, ಕುಟುಂಬ ರಾಜಕಾರಣವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. 2008ರಿಂದ ಸತತ ನಾಲ್ಕು ಚುನಾವಣೆಗಳನ್ನು ಗೆದ್ದಿದ್ದ ಕ್ಷೇತ್ರದಲ್ಲಿ ಮಗನನ್ನು ರಾಜಕೀಯವಾಗಿ ಸ್ಥಾಪಿಸುವ ಇರಾದೆ ಹೊಂದಿದ್ದ ಬಸವರಾಜ ಬೊಮ್ಮಾಯಿ, ಈಗ ತನ್ನ ಹಿಡಿತವನ್ನೇ ಕ್ಷೇತ್ರದಲ್ಲಿ ಕಳೆದುಕೊಂಡಂತಾಗಿದೆ. ಆದರೆ, ಸಂಡೂರಿನಲ್ಲಿ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರನ್ನು ಜನರು ಗೆಲ್ಲಿಸಿದ್ದಾರೆ. ಅವರ ಎದುರಾಳಿಗಳ ವಿಚಾರದಲ್ಲಿ ಜನರು ತೆಗೆದುಕೊಂಡ ನಿಲುವು ಕೂಡ ಅಂತಿಮವಾಗಿ ಇಲ್ಲಿ ಕುಟುಂಬ ರಾಜಕಾರಣದ ವಿಚಾರದಲ್ಲಿ ನಿಷ್ಠುರವಾಗದೇ ಇರಲು ಕಾರಣವಾಗಿದ್ದಿರಬಹುದು.
ಮತ್ತೊಮ್ಮೆ ಎಡವಿದ ಮತಗಟ್ಟೆ ಸಮೀಕ್ಷೆಗಳು:
ಉಪ ಚುನಾವಣೆ ಫಲಿತಾಂಶದ ವಿಚಾರದಲ್ಲಿಯೂ ಮತಗಟ್ಟೆ ಸಮೀಕ್ಷೆಗಳ ಲೆಕ್ಕ ತಪ್ಪಾಗಿದೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಪಕ್ಷ ಗೆಲ್ಲಲಿದೆ ಎಂದು ಈ ಹಿಂದಿನ ಚುನಾವಣೆಯ ಫಲಿತಾಂಶದ ಪುನರಾವರ್ತನೆಯ ಸುಳಿವನ್ನೇ ಮತಗಟ್ಟೆ ಸಮೀಕ್ಷೆಗಳು ನೀಡಿದ್ದವು. ಸಾಮಾನ್ಯವಾಗಿ ಯಾರೂ ಅಂದಾಜಿಸಬಹುದಾದ ರೀತಿಯಲ್ಲೇ ಇದನ್ನು ಊಹೆ ಮಾಡಿದಂತಿತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ಮೀರಿ, ಮೂರೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಮತದಾರರು ತೆಗೆದುಕೊಳ್ಳಬಹುದಾದ ತೀರ್ಮಾನ ಯಾರದೇ ಊಹೆಗೆ, ಅಂದಾಜಿಗೆ ನಿಲುಕದೆಯೂ ಇರಬಹುದು ಎಂಬುದಕ್ಕೆ ಈ ಫಲಿತಾಂಶವೂ ಒಂದು ಸಾಕ್ಷಿ.
ಫಲಿತಾಂಶದ ಪರಿಣಾಮಗಳೇನು?:
1. ಮೂರೂ ಕ್ಷೇತ್ರಗಳಲ್ಲಿನ ಗೆಲುವಿನಿಂದ ಕಾಂಗ್ರೆಸ್ ಪಾಲಿಗೆ ನೈತಿಕ ಬಲ ಸಿಕ್ಕಂತಾಗಿದೆ.
2. ಸಂಡೂರು ಕ್ಷೇತ್ರದಲ್ಲಿನ ಗೆಲುವಿನಿಂದ ಜನಾರ್ದನ ರೆಡ್ಡಿ ಸವಾಲಿಗೆ ಸಿದ್ದರಾಮಯ್ಯ ತಕ್ಕ ಉತ್ತರ ಕೊಟ್ಟಂತಾಗಿದೆ.
3. ಚನ್ನಪಟ್ಟಣದಲ್ಲಿನ ಜಯದಿಂದ ಪಕ್ಷ ಮತ್ತು ಸರಕಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಾಬಲ್ಯ ಹೆಚ್ಚಬಹುದು.
4. ಶಿಗ್ಗಾಂವಿಯಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಸಿಕ್ಕ ಗೆಲುವು ಬಸವರಾಜ ಬೊಮ್ಮಾಯಿಯ ರಾಜಕೀಯ ಬದುಕಿಗೆ ದೊಡ್ಡ ಏಟು ಕೊಟ್ಟಿದೆ.
5. ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಅಹಿಂದ ವರ್ಗಗಳನ್ನು ಕಾಂಗ್ರೆಸ್ ಪರ ಒಗ್ಗೂಡಿಸುವುದರೊಂದಿಗೆ ಸಿದ್ದರಾಮಯ್ಯ ತಾಕತ್ತು ಮತ್ತೊಮ್ಮೆ ಸಾಬೀತಾಗಿದೆ.
5. ಕಾಂಗ್ರೆಸ್‌ನ ಗ್ಯಾರಂಟಿಗಳ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
6. ಚನ್ನಪಟ್ಟಣದಲ್ಲಿನ ಗೆಲುವಿನೊಂದಿಗೆ, ಒಕ್ಕಲಿಗರೇ ಪ್ರಬಲರಾಗಿರುವ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ದುರ್ಬಲಗೊಳಿಸುವ ಡಿ.ಕೆ. ಶಿವಕುಮಾರ್ ತಂತ್ರ ಯಶಸ್ವಿಯಾಗಿದೆ.
7. ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಅನಗತ್ಯವಾಗಿ ಮುನ್ನೆಲೆಗೆ ಬರುವುದನ್ನು ಈ ಫಲಿತಾಂಶ ತಡೆಯಲಿದೆ.