ಎನ್‌ಕೌಂಟರ್: ಸತ್ಯವನ್ನು ಮುಗಿಸಿಬಿಡುವ ಹೊಸ ಅಸ್ತ್ರ?
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯಲ್ಲಿ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಅಕ್ಷಯ್ ಶಿಂದೆಯನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಪೊಲೀಸರ ಪ್ರಕಾರ, ಶಾಲೆಯೊಂದರಲ್ಲಿ ಗುತ್ತಿಗೆ ಸ್ವೀಪರ್ ಆಗಿದ್ದ ಶಿಂದೆ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಐದು ದಿನಗಳ ನಂತರ ಬಂಧಿಸಲಾಯಿತು. ಹೆಚ್ಚಿನ ತನಿಖೆಗಾಗಿ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಶಸ್ತ್ರಸಜ್ಜಿತ ಪೊಲೀಸರು ಸುತ್ತುವರಿದಿದ್ದರೂ, ಕೈಕೋಳ ಹಾಕಿದ್ದರೂ ಶಿಂದೆ ಬಂದೂಕನ್ನು ಕಸಿದುಕೊಳ್ಳುತ್ತಾನೆ. ಆಘಾತಕ್ಕೊಳಗಾದ ಪೊಲೀಸರಿಗೆ ಅವನನ್ನು ಕೊಲ್ಲುವುದರ ಹೊರತು ಬೇರೆ ದಾರಿಯಿರಲಿಲ್ಲ.
2020ರ ಜುಲೈನಲ್ಲಿ ದರೋಡೆಕೋರ ವಿಕಾಸ್ ದುಬೆಯನ್ನು ಶಸ್ತ್ರಸಜ್ಜಿತ ಉತ್ತರ ಪ್ರದೇಶ ಪೊಲೀಸರು ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಆತ ಪೊಲೀಸ್ ಬಂದೂಕು ಹಿಡಿದು ಗುಂಡು ಹಾರಿಸಿದ್ದ ಮತ್ತು ಅಸಹಾಯಕ ಪೊಲೀಸರಿಗೆ ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎನ್ನಲಾಯಿತು.
ಹೀಗೆ ಪೊಲೀಸರ ಎದುರು ಬೇರೆ ದಾರಿ ಇರದೇ ಹೋಗುವುದು, ಸಾಮಾನ್ಯವಾಗಿ ಯಾವುದೇ ಎನ್‌ಕೌಂಟರ್ ಪ್ರಕರಣಗಳ ಬಳಿಕ ಪೊಲೀಸರು ಹೇಳುವ ಕಥೆಯಲ್ಲಿ ಇದ್ದೇ ಇರುವ ಅಂಶ. ಜಾಗ ಬೇರೆ, ಪೊಲೀಸರು ಬೇರೆ, ಹತ್ಯೆಯಾಗುವ ವ್ಯಕ್ತಿಗಳು ಬೇರೆ. ಆದರೆ ಪೊಲೀಸರು ಹೇಳುವ ಎನ್‌ಕೌಂಟರ್ ಕಥೆ ಹೆಚ್ಚುಕಡಿಮೆ ಇದೇ ರೀತಿಯಲ್ಲಿರುತ್ತದೆ.
ಆದರೆ, ಎನ್‌ಕೌಂಟರ್‌ಗಳ ಬಗೆಗಿನ ಸಾಮಾನ್ಯ ಅನುಮಾನವೆಂದರೆ, ಬಲಿಯಾದವನು ನಿಜವಾಗಿಯೂ ಅಪರಾಧಿಯಾಗಿದ್ದನೆ? ಆತ ಒಂದು ವೇಳೆ ನಿರಪರಾಧಿಯಾಗಿದ್ದರೆ ಕಾನೂನು ಹೋರಾಟದ ಮೂಲಕ ಅದನ್ನು ಸಾಬೀತುಪಡಿಸುವ ಅವಕಾಶ ಅವನಿಗೆ ಸಿಗಬೇಕಿತ್ತಲ್ಲವೆ? ಪೊಲೀಸರು ಹೇಳುವ ಕಥೆಯಲ್ಲಿನ ಸತ್ಯ ಮತ್ತು ಸುಳ್ಳುಗಳ ಪರಿಶೀಲನೆಯೂ ಆಗಬೇಕಲ್ಲವೆ?
ಬದ್ಲಾಪುರ ಪ್ರಕರಣದಲ್ಲಿ ಹತ್ಯೆಯಾದವನು ಸ್ವೀಪರ್ ಆಗಿದ್ದ. ಹಾಗಾಗಿಯೇ ಆತನ ಸಾವಿನ ವಿಚಾರಕ್ಕೆ ದೇಶದಲ್ಲಿ ಆಕ್ರೋಶವಿಲ್ಲ. ಆದರೆ ಅವನು ನಿಜವಾಗಿಯೂ ತಪ್ಪಿತಸ್ಥನೇ? ಶಿವಸೇನಾ ಯುಬಿಟಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಹಲವು ಅಂಶಗಳ ಬಗ್ಗೆ ಗಮನ ಸೆಳೆಯುತ್ತಾರೆ. ಲೈಂಗಿಕ ದೌರ್ಜನ್ಯ ನಡೆದ ನಾಲ್ಕು ದಿನಗಳ ಬಳಿಕ ಎಫ್‌ಐಆರ್ ದಾಖಲಾಗುತ್ತದೆ. ಮತ್ತೂ ಒಂದು ದಿನದ ನಂತರ ಆರೋಪಿಯನ್ನು ಬಂಧಿಸಲಾಗುತ್ತದೆ. ಆದರೆ ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿಲ್ಲ ಮತ್ತು ಶಾಲೆಯ ಯಾರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಿಲ್ಲ. ಶಾಲಾ ಆಡಳಿತ ಮಂಡಳಿಯ ಕೆಲ ಸದಸ್ಯರು ಬಿಜೆಪಿ ಸಂಪರ್ಕ ಹೊಂದಿರುವುದು ಇದಕ್ಕೆ ಕಾರಣ ಎಂದು ಚತುರ್ವೇದಿ ಹೇಳುತ್ತಾರೆ.
ಇಲ್ಲಿ, ಹತ್ಯೆಯಾದ ಆರೋಪಿ ನಿಜವಾಗಿಯೂ ತಪ್ಪು ಮಾಡಿದ್ದನೆ? ಇಂಥ ಯಾವುದೇ ಪ್ರಕರಣದಲ್ಲಿ ಪೊಲೀಸರು ತಮಗೆ ಬೇಕಾದವರನ್ನು ಎತ್ತಿಕೊಂಡು ಹೋಗಿ ಗುಂಡಿಕ್ಕಿ ಕೊಲ್ಲಲು ಅವಕಾಶ ಸಿಗುತ್ತಿದೆಯೆ? ಗುಂಡು ಹಾರಿಸಲು ಮುಕ್ತ ಅನುಮತಿ ಮೂಲಕ, ಅಧಿಕಾರದಲ್ಲಿರುವವರ ಪರವಾಗಿ ಯಾರಿಗೆ ಆದರೂ ಅವರು ಮರಣದಂಡನೆ ನೀಡುವುದನ್ನು ಅನಾಯಾಸ ಎನ್ನುವಂತೆ ಮಾಡಲಾಗಿದೆಯೆ? ಇವು ಪ್ರಮುಖ ಪ್ರಶ್ನೆಗಳು. ಆದರೆ ಕಳೆದೆರಡು ದಶಕಗಳಿಂದಲೂ ಎನ್‌ಕೌಂಟರ್ ರಾಜಕೀಯ ಅಸ್ತ್ರದಂತೆ ಬಳಕೆಯಾಗುತ್ತಿದ್ದರೂ, ಈ ಯಾವ ಪ್ರಶ್ನೆಗಳಿಗೂ ಯಾರೂ ಉತ್ತರಗಳನ್ನು ಬಯಸುವುದಿಲ್ಲ ಎಂಬ ಅನುಮಾನವೇ ಕಾಡುವ ಹಾಗೆ ಸನ್ನಿವೇಶವಿದೆ.
ಬದ್ಲಾಪುರ ಘಟನೆ 1980ರಿಂದ 2010ರ ಅವಧಿಯಲ್ಲಿನ ಮುಂಬೈ ಪೊಲೀಸ್ ಎನ್‌ಕೌಂಟರ್‌ನ ಕರಾಳ ಇತಿಹಾಸವನ್ನು ನೆನಪಿಸುತ್ತದೆ. ಆ ಅವಧಿಯಲ್ಲಿ ಸುಮಾರು 200 ಶಂಕಿತರು ಮತ್ತು ಆರೋಪಿಗಳು ಎನ್‌ಕೌಂಟರ್‌ಗೆ ಬಲಿಯಾಗಿ ಹೋಗಿದ್ದಾರೆ. ಇವುಗಳಲ್ಲಿ ಪೊಲೀಸರು ತಪ್ಪಿತಸ್ಥರು ಎಂದಾದದ್ದು ಬಹಳ ಅಪರೂಪ. ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ವಿರೋಧ ಪಕ್ಷದ ನಾಯಕರಾದ ಶರದ್ ಪವಾರ್, ಪ್ರಿಯಾಂಕಾ ಚತುರ್ವೇದಿ ಮತ್ತು ನಾನಾ ಪಟೋಲೆ ಬದ್ಲಾಪುರ ಪ್ರಕರಣದಲ್ಲಿ ಸರಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಬದ್ಲಾಪುರ ಪ್ರಕರಣದಲ್ಲಿ ಇಬ್ಬರು ಬಾಲಕಿಯರಿಗೆ ನ್ಯಾಯ ಖಚಿತಪಡಿಸಿಕೊಳ್ಳಲು, ಕಾನೂನಿನ ಚೌಕಟ್ಟಿನಲ್ಲಿ ಆರೋಪಿಯನ್ನು ಗಲ್ಲಿಗೇರಿಸಬೇಕಿತ್ತು. ಆದರೆ ಆರೋಪಿಯನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ನಡೆದ ಘಟನೆ, ಗೃಹ ಇಲಾಖೆ ತೋರಿದ ನಿರ್ಲಕ್ಷ್ಯ ಅನುಮಾನಾಸ್ಪದವಾಗಿದೆ ಎಂದು ಪವಾರ್ ಹೇಳಿದ್ದಾರೆ. ಗುಂಡಿಕ್ಕಿ ಆರೋಪಿಯನ್ನು ಕೊಂದಿರುವುದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆೆ, ಶಾಲಾ ಬಾಲಕಿಯರ ಮೇಲೆ ಹೇಯ ಕೃತ್ಯ ನಡೆಸಿದವನ ಪರವಾಗಿ ವಿರೋಧ ಪಕ್ಷಗಳು ಹೇಗೆ ನಿಲ್ಲುತ್ತವೆ? ಎಂದು ಪ್ರಶ್ನಿಸಿದ್ದಾರೆ. ಆರೋಪಿಯ ಹತ್ಯೆಯನ್ನು ಸ್ಥಳೀಯರು ಮತ್ತು ಶಿವಸೇನೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿರುವುದೂ ನಡೆದಿದೆ.
24 ವರ್ಷದ ಆರೋಪಿಯ ಕುಟುಂಬ ಪೊಲೀಸರು ಹೇಳುತ್ತಿರುವ ಕಥೆಯ ಬಗ್ಗೆ ಆಕ್ಷೇಪವೆತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವಂತೆ ಆತನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಅವರ ತಕರಾರಿನ ಬಳಿಕ, ಶಿಂದೆ ಸಾವಿಗೆ ಕಾರಣವೇನು ಎಂಬುದರ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಆರೋಪಿಗೆ ಗುಂಡು ಹಾರಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಶಿಂದೆ, ಈ ಹಿಂದೆ ಥಾಣೆ ಪೊಲೀಸ್ ಕ್ರೈಂ ಬ್ರಾಂಚ್‌ನ ಸುಲಿಗೆ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅಡಿಯಲ್ಲಿ ಕೆಲಸ ಮಾಡಿದವರು.
1980ರ ದಶಕದಿಂದಲೂ ಭೂಗತ ದರೋಡೆಕೋರರು, ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದವರು.
ಕರೀಂ ಲಾಲಾ, ಬಾಬು ರೇಶಿಮ್, ದಾವೂದ್ ಇಬ್ರಾಹೀಂ, ರಾಜನ್ ನಾಯರ್ ಮತ್ತು ಅರುಣ್ ಗಾವ್ಳಿ ಮುಂತಾದ ಗ್ಯಾಂಗ್‌ಸ್ಟರ್‌ಗಳ ನೇತೃತ್ವದ ವಿವಿಧ ಗುಂಪುಗಳ ನಡುವಿನ ರಕ್ತಸಿಕ್ತ ಕದನಗಳಲ್ಲಿ ಮುಂಬೈ ನಗರಿ ಸಿಕ್ಕಿಬಿದ್ದಿದ್ದ ಕಾಲ ಅದು. 1980 ಮತ್ತು 1990ರ ದಶಕದ ಆರಂಭದಲ್ಲಿ ನಿರಂತರ ಭಯಕ್ಕೆ ಕಾರಣವಾಗಿದ್ದ ವಿದ್ಯಮಾನವಾಗಿತ್ತು ಅದು.
1982ರಲ್ಲಿ ದಾವೂದ್ ಇಬ್ರಾಹೀಂನ ಹಿರಿಯ ಸಹೋದರ ಶಬೀರ್ ಕಸ್ಕರ್ ಹತ್ಯೆಗೆ ಕಾರಣವಾದ ಸ್ಥಳೀಯ ಗ್ಯಾಂಗ್‌ಸ್ಟರ್ ಮನೋಹರ್ ಮಾನ್ಯ ಸುರ್ವೆಯನ್ನು ಇನ್‌ಸ್ಪೆಕ್ಟರ್‌ಗಳಾದ ಇಸಾಕ್ ಬಾಗ್ವಾನ್ ಮತ್ತು ರಾಜಾ ತಾಂಬತ್ ವಡಾಲಾದಲ್ಲಿ ಗುಂಡಿಕ್ಕಿ ಕೊಂದದ್ದೇ ಎನ್‌ಕೌಂಟರ್‌ನ ಮೊದಲ ನಿದರ್ಶನವಾಗಿತ್ತು.
ಆನಂತರ ನಡೆದದ್ದು ಸಾಲು ಸಾಲು ಎನ್‌ಕೌಂಟರ್‌ಗಳು. ಮುಂಬೈ ಪೊಲೀಸರ ಎನ್‌ಕೌಂಟರ್ ಸ್ಕ್ವಾಡ್‌ಗೆ ಮುಕ್ತ ಅನುಮತಿ ಸಿಕ್ಕಿಬಿಟ್ಟಿತ್ತು. ಮೇಲಧಿಕಾರಿಗಳೇ ರಕ್ಷಣೆಗೆ ನಿಂತಿದ್ದರು. ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುಹಾಕುವುದೊಂದೇ ಗುರಿಯಾಗಿತ್ತು. ಐಪಿಎಸ್ ಅಧಿಕಾರಿ ಅರವಿಂದ್ ಇನಾಮದಾರ್ ಅವರಲ್ಲಿ ತರಬೇತಿ ಪಡೆದಿದ್ದ ಯುವ ಅಧಿಕಾರಿಗಳಾದ ವಿಜಯ್ ಸಲಸ್ಕರ್, ಪ್ರದೀಪ್ ಶರ್ಮಾ, ಸಚಿನ್ ವಾಝೆ, ಅಸ್ಲಂ ಮೊಮಿನ್ ಮತ್ತು ಪ್ರಫುಲ್ ಭೋಸಲೆ ಅವರೇ ಮೊದಲ ಸಲ ಎನ್‌ಕೌಂಟರ್ ಸ್ಕ್ವಾಡ್ ರಚನೆಯಾದಾಗ ಅದರಲ್ಲಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳು.
ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ಪೊಲೀಸರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಿದೆ. ಅಪರಾಧಿಗಳೇ ತಮ್ಮ ಟಾರ್ಗೆಟ್ ಆಗಿದ್ದುದನ್ನು ಹೇಳಿಕೊಳ್ಳುತ್ತಾರೆ. ಅವರೆಲ್ಲ ಸಾಯಲು ಅರ್ಹರಾಗಿದ್ದರು ಎಂದು ಸಚಿನ್ ವಾಝೆ 2011ರ ‘ಗಾರ್ಡಿಯನ್’ ಸಂದರ್ಶನದಲ್ಲಿ ಹೇಳಿದ್ದಿದೆ.
ಆದರೆ ಆನಂತರದ ವರ್ಷಗಳಲ್ಲಿ ಎನ್‌ಕೌಂಟರ್‌ಗಳ ಬಗ್ಗೆ ಅನುಮಾನ ದೊಡ್ಡ ಮಟ್ಟದಲ್ಲಿಯೇ ಶುರುವಾಗಿತ್ತು.
ಬೇಡದವರನ್ನು ಹೊಡೆದುಹಾಕುವುದಕ್ಕೆ ಒಂದು ನೆಪವಾಗಿರುವ ನಕಲಿ ಎನ್‌ಕೌಂಟರ್ ಆರೋಪಕ್ಕೆ ಹಲವು ಎನ್‌ಕೌಂಟರ್ ಸ್ಪೆಷಲಿಸ್ಟ್ ಗಳು ಒಳಗಾದರು. ಕೆಲವರಿಗೆ ಶಿಕ್ಷೆಯೂ ಆಯಿತು. ಆದರೂ ಕಾನೂನಿನ ಕುಣಿಕೆಯಿಂದ ಪಾರಾದವರೇ ಹೆಚ್ಚು.
2013ರಲ್ಲಿ ದಾವೂದ್ ಸಹಾಯಕ ಲಖನ್ ಬಯ್ಯಾ ಅಲಿಯಾಸ್ ರಾಮನಾರಾಯಣ ಗುಪ್ತಾ ನಕಲಿ ಎನ್‌ಕೌಂಟರ್‌ಗಾಗಿ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅವರು ಕೆಳ ನ್ಯಾಯಾಲಯದಿಂದ ಖುಲಾಸೆಗೊಂಡರೂ ಹೈಕೋರ್ಟ್ ಅವರನ್ನು ಅಪರಾಧಿಯೆಂದು ಹೇಳಿದೆ. ಅದೇ ರೀತಿ, 2002ರ ಘಾಟ್‌ಕೋಪರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತನಾಗಿದ್ದವನ ಕಸ್ಟಡಿ ಸಾವಿನ ಕಾರಣಕ್ಕಾಗಿ 2004ರಲ್ಲಿ ವಾಝೆಯನ್ನು ಅಮಾನತುಗೊಳಿಸಲಾಗಿತ್ತು. ಅವರ ಜೂನಿಯರ್ ದಯಾ ನಾಯಕ್ ಸಹ ಅಕ್ರಮ ಆಸ್ತಿ ಪ್ರಕರಣಗಳನ್ನು ಎದುರಿಸಿದ್ದರೂ, ಕಡೆಗೆ ಆರೋಪ ಮುಕ್ತರಾಗಿದ್ದಾರೆ.
ಹೀಗೆ ಒಂದು ಕಾಲದಲ್ಲಿ ಮುಂಬೈ ಭೂಗತ ಜಗತ್ತನ್ನು ಕ್ಲೀನ್ ಮಾಡಲು ಶುರುವಾಗಿದ್ದ ಎನ್‌ಕೌಂಟರ್ ಹತ್ಯೆಗಳು ಇತ್ತೀಚೆಗೆ ರಾಜಕೀಯ ಒತ್ತಡ, ಮಾಧ್ಯಮಗಳ ಒತ್ತಡ ಮತ್ತು ಸಾರ್ವಜನಿಕ ಆಕ್ರೋಶದ ಸುಳಿಯಲ್ಲಿ ಸಿಲುಕಿವೆ.
ಇನ್ನು, ಎನ್‌ಕೌಂಟರ್‌ಗಳಿಗೆ ಬಲಿಯಾಗುವವರು ಕೆಳವರ್ಗದವರಾದರೆ ಅದನ್ನು ಕೇಳುವವರು ಕೂಡ ಯಾರೂ ಇರುವುದಿಲ್ಲ.
ಆದರೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮಂಗೇಶ್ ಯಾದವ್ ಎಂಬ ವ್ಯಕ್ತಿಯ ಎನ್‌ಕೌಂಟರ್ ಸುದ್ದಿಯಾಯಿತು.
ಜಾತಿಯನ್ನು ನೋಡಿ ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್ ಮಾಡಲಾಗುತ್ತಿದೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಎಎಪಿ ನಾಯಕ ಸಂಜಯ್ ಸಿಂಗ್ ಆರೋಪಿಸಿದರು.
ಸುಲ್ತಾನ್ಪುರದಲ್ಲಿ ದರೋಡೆ ಪ್ರಕರಣದಲ್ಲಿ ಮಂಗೇಶ್ ಯಾದವ್ ಎನ್‌ಕೌಂಟರ್ ನಡೆದಿದೆ. ಮತ್ತದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ವಿಪಿನ್ ಸಿಂಗ್ ಎಂಬ ಮುಖ್ಯ ಆರೋಪಿಗೆ ಶರಣಾಗಲು ಅವಕಾಶ ಮಾಡಿಕೊಟ್ಟು, ಮಂಗೇಶ್ ಯಾದವ್ ನನ್ನು ಕೊಲ್ಲಲಾಗಿದೆ ಎಂಬುದು ಆರೋಪ.
ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಪೊಲೀಸರೆಲ್ಲ ಮೇಲ್ಜಾತಿಯವರು ಎಂದು ಹೇಳಲಾಗುತ್ತಿದೆ. ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಡಿಎಸ್ಪಿ ಧರ್ಮೇಶ್ ಕುಮಾರ್ ಶಾಹಿ ಪತ್ನಿ ರಿತು ಶಾಹಿ ಗೋರಖ್‌ಪುರದ ಬಿಜೆಪಿ ಪದಾಧಿಕಾರಿಯಾಗಿದ್ದು, ಸೆಪ್ಟಂಬರ್ 3ರಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕೇಸ್ ದಾಖಲಿಸಲು ಮಂಗೇಶ್ ಯಾದವ್ ತಂದೆ ಒತ್ತಾಯಿಸಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಈ ಎನ್‌ಕೌಂಟರ್ ವಿಚಾರವಾಗಿ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗೇಶ್ ಎನ್‌ಕೌಂಟರ್ ನಕಲಿ ಎಂದು ಅಖಿಲೇಶ್ ಹೇಳಿದ್ದಾರೆ. ಇಡೀ ಪೊಲೀಸ್ ಕಾರ್ಯಾಚರಣೆಯ ಬಗ್ಗೆಯೇ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಆಡಳಿತ ಪಕ್ಷ ಸುಲ್ತಾನ್‌ಪುರ ಡಕಾಯಿತಿಯಲ್ಲಿ ಭಾಗಿಯಾಗಿರುವವರೊಂದಿಗೆ ಸಂಬಂಧ ಹೊಂದಿರುವಂತೆ ತೋರುತ್ತಿದೆ. ಅದಕ್ಕಾಗಿಯೇ, ಎನ್‌ಕೌಂಟರ್‌ಗೆ ಮೊದಲು, ಅವರು ಮುಖ್ಯ ಆರೋಪಿಯನ್ನು ಸಂಪರ್ಕಿಸಿದ್ದಾರೆ. ಇತರರ ಕಾಲಿಗೆ ಗುಂಡು ಹಾರಿಸುವಾಗ ಶರಣಾಗುವಂತೆ ಹೇಳಿದ್ದಾರೆ. ಆದರೆ, ಮಂಗೇಶ್ ಯಾದವ್‌ನನ್ನು ಮಾತ್ರ ಜಾತಿಯ ಕಾರಣಕ್ಕೆ ಕೊಂದಿದ್ದಾರೆ ಎಂಬುದು ಅಖಿಲೇಶ್ ಯಾದವ್ ಆರೋಪ.
ಎನ್‌ಕೌಂಟರ್ ವಿಷಯದಲ್ಲಿ ಎದ್ದು ಕಾಣುವುದು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರದ ನಿಲುವು. ಅವರು ಸಿಎಂ ಆದ ನಂತರದ ಅವಧಿ ಸತತ ಎನ್‌ಕೌಂಟರ್‌ಗಳಿಂದಲೇ ನೆತ್ತರುಮಯವಾಗಿದೆ.
ಉತ್ತರ ಪ್ರದೇಶದಲ್ಲಿನ ಎನ್‌ಕೌಂಟರ್‌ಗಳ ಒಂದು ಸ್ಥೂಲ ಚಿತ್ರವನ್ನು ನೋಡುವುದಾದರೆ, 2017 ಮಾರ್ಚ್ 20ರಿಂದ 2024 ಸೆಪ್ಟಂಬರ್ 5ರವರೆಗಿನ 7 ವರ್ಷಗಳ ಅವಧಿಯಲ್ಲಿ ಒಟ್ಟು ಪೊಲೀಸ್ ಎನ್‌ಕೌಂಟರ್‌ಗಳು 12,964 ನಡೆದಿದ್ದು, ಪ್ರತೀ 13 ದಿನಗಳಿಗೊಬ್ಬನಂತೆ ಪಟ್ಟಿಯಲ್ಲಿದ್ದ 207 ಕ್ರಿಮಿನಲ್‌ಗಳ ಹತ್ಯೆಯಾಗಿದೆ. ಎನ್‌ಕೌಂಟರ್ ವೇಳೆ 17 ಪೊಲೀಸರ ಸಾವಿಗೀಡಾಗಿದ್ದಾರೆ. ಎನ್‌ಕೌಂಟರ್‌ಗೆ ಒಳಗಾದ ಹೆಚ್ಚಿನವರ ಬಂಧನಕ್ಕೆ ಬಹುಮಾನದ ಮೊತ್ತ 75,000 ರೂ. ಗಳಿಂದ 5 ಲಕ್ಷ ರೂ ಘೋಷಣೆಯಾಗಿತ್ತು.
ಉತ್ತರ ಪ್ರದೇಶದ ಎನ್‌ಕೌಂಟರ್‌ನಲ್ಲಿ ಮೀರತ್ ವಲಯಕ್ಕೆ ರಾಜ್ಯದಲ್ಲೇ ಅಗ್ರ ಸ್ಥಾನ. ಅಲ್ಲಿ 2017ರಿಂದ ನಡೆದ ಒಟ್ಟು ಎನ್‌ಕೌಂಟರ್‌ಗಳು 3,723 ನಡೆದಿದ್ದು, 66 ಕ್ರಿಮಿನಲ್‌ಗಳ ಹತ್ಯೆ ಮತ್ತು 7,017 ಕ್ರಿಮಿನಲ್‌ಗಳ ಬಂಧನವಾಗಿದೆ.
ಉತ್ತರ ಪ್ರದೇಶ ರಾಜ್ಯಾದ್ಯಂತ ಈವರೆಗಿನ ಎನ್‌ಕೌಂಟರ್‌ಗಳಲ್ಲಿ 27,117 ದುಷ್ಕರ್ಮಿಗಳ ಬಂಧನವಾಗಿದೆ. ಎನ್‌ಕೌಂಟರ್ ವೇಳೆ 1,601 ಕ್ರಿಮಿನಲ್‌ಗಳಿಗೆ ಗಾಯವಾಗಿದೆ.
ಜೂಲಿಯೊ ರಿಬೇರೊ ಟೀಕಿಸಿರುವಂತೆ ಎನ್‌ಕೌಂಟರ್ ಕಾರಣದಿಂದ ಭಾರತ ಪೊಲೀಸ್ ರಾಜ್ಯವಾಗುವ ಸನ್ನಿವೇಶವನ್ನು ಹೇಗೆ ಬದಲಾಯಿಸಬಹುದು? ಹೇಗೆ ಎನ್‌ಕೌಂಟರ್‌ಗಳನ್ನು ತಡೆಯಬಹುದು? ಆರೋಪಿಗಳನ್ನು ಹೀಗೆ ಎನ್‌ಕೌಂಟರ್ ಹೆಸರಿನಲ್ಲಿ ಏಕಾಏಕಿ ಕೊಂದಾಗ, ಸಾವಿನ ನಂತರವು ತನಿಖೆ ಮತ್ತು ವಿಚಾರಣೆಯೇ ಈ ನಿಟ್ಟಿನಲ್ಲಿ ನೆರವಾದೀತೆ?
ಎನ್‌ಕೌಂಟರ್ ನಡೆದುಹೋದಾಗ, ಅದು ನಕಲಿಯೇ, ಅಸಲಿಯೇ ಎಂಬ ತಾಂತ್ರಿಕ ಅಂಶಕ್ಕಿಂತಲೂ, ಅದರಿಂದ ನ್ಯಾಯ ಸಿಕ್ಕಿತೇ ಅಥವಾ ಸಮಾಧಿಯಾಯಿತೇ ಎಂದು ಕೇಳಿಕೊಳ್ಳುವುದು ಬಹಳ ಮುಖ್ಯವೆನಿಸುತ್ತದೆ. ಕೈಕೋಳ ಹಾಕಿದ ವ್ಯಕ್ತಿ, ಬಂದೂಕು ಕಸಿದುಕೊಂಡು ಪೊಲೀಸರಿಗೆ ಗುಂಡು ಹಾರಿಸುವುದು ಹೇಗೆ ಸಾಧ್ಯ ಎಂದು ನಾವಿಲ್ಲಿ ಕೂತು ಕೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಅದಕ್ಕೆಲ್ಲ ನ್ಯಾಯಾಂಗ ತನಿಖೆಯೇ ಉತ್ತರ ಹೇಳುತ್ತದೆ.
ಒಂದು ಮುಖ್ಯ ಪ್ರಶ್ನೆ ಏನೆಂದರೆ, ತ್ವರಿತ ನ್ಯಾಯಕ್ಕೆ ಆಗ್ರಹಿಸುವ ನಾವು, ನ್ಯಾಯ ವಿಳಂಬವನ್ನು ನ್ಯಾಯ ನಿರಾಕರಣೆ ಎನ್ನುತ್ತೇವೆಯೇ ಹೊರತು, ಎನ್‌ಕೌಂಟರ್ ಮೂಲಕ ನ್ಯಾಯವಾದರೆ ಅದು ನ್ಯಾಯದ ಸಮಾಧಿಯಾಗುವುದಿಲ್ಲವೇ ಎಂದು ಯೋಚಿಸುವುದಿಲ್ಲ ಎಂಬುದು. ಶತಮಾನಗಳಿಂದಲೂ ನ್ಯಾಯ ಎಂಬುದು ಬಹಳ ಸಂಕೀರ್ಣವಾದ ಪದ.
ನ್ಯಾಯ ಒದಗಿಸುವುದನ್ನು ಖಾತ್ರಿಪಡಿಸುವಲ್ಲಿ ನಾವು ಅನುಸರಿಸುವ ಕಾರ್ಯವಿಧಾನಗಳು ನ್ಯಾಯ ವಿಳಂಬಕ್ಕೆ ಕಾರಣವಾಗಿದ್ದರೂ, ನ್ಯಾಯ ಸಮಾಧಿಯಾಗದಂತೆ ತಡೆಯುತ್ತದೆ. ನ್ಯಾಯ ತೋರಿಕೆಯದ್ದಾಗದೆ, ನಿಜವಾಗಿಯೂ ನ್ಯಾಯವನ್ನು ದೊರಕಿಸಿಕೊಡುವುದು ಮುಖ್ಯ.
ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸ್, ನ್ಯಾಯಾಂಗ ಮತ್ತು ತಪ್ಪು ಸರಿಪಡಿಸಿಕೊಳ್ಳುವಿಕೆ ಇವೆ.
ಆದರೆ ಇವುಗಳಲ್ಲಿ ಯಾವುದೇ ಒಂದು ವಿಭಾಗ ಇತರರ ಕೆಲಸವನ್ನೂ ತಾನೇ ಮಾಡಲು ನಿಂತುಬಿಟ್ಟರೆ ಆಗ ನ್ಯಾಯ ಇಲ್ಲವಾಗುತ್ತದೆ. ಯಾವುದೇ ಕ್ರಿಮಿನಲ್ ಆರೋಪಿಯ ವಿರುದ್ಧದ ಕ್ರಮ ನ್ಯಾಯಸಮ್ಮತವಾಗಿಯೇ ಇರಬೇಕು.
ಅಲ್ಲದೆ, ನಿರಪರಾಧಿಯನ್ನು ಪ್ರಕರಣದೊಳಗೆ ಸಿಲುಕಿಸಿ ನಿಜವಾದ ಆರೋಪಿ ತಪ್ಪಿಸಿಕೊಳ್ಳುವಂತೆ ಮಾಡುವುದೂ ಆಗಕೂಡದು.
ಬದ್ಲಾಪುರ ಪ್ರಕರಣ ಅಥವಾ ಹೈದರಾಬಾದ್ ವೈದ್ಯೆ ಅತ್ಯಾಚಾರ ಪ್ರಕರಣದಲ್ಲಿನ ಎನ್‌ಕೌಂಟರ್‌ಗಳು ನಡೆದಾಗ, ಆರೋಪಿಗಳಿಗೆ ಸೂಕ್ತ ವಿಚಾರಣೆ ಎದುರಿಸುವ ಅವಕಾಶವನ್ನೇ ತಪ್ಪಿಸಿದಂತಾಗಿದೆ. ಆದರೆ ಅವರೇ ಅಪರಾಧಿಗಳು ಎಂಬುದು ಕೂಡ ಖಚಿತವಿಲ್ಲ. ಸಾಮಾನ್ಯವಾಗಿ, ಆರೋಪಿಗಳನ್ನು ಗುಂಡಿಕ್ಕಿ ಕೊಂದಾಗ, ಆ ವಿಷಯದ ತನಿಖೆಯನ್ನು ಮುಚ್ಚಿಹಾಕಲಾಗುತ್ತದೆ. ಅವರು ನಿಜವಾಗಿಯೂ ತಪ್ಪಿತಸ್ಥರಾಗಿದ್ದರಾ ಎಂಬುದು ತೀರ್ಮಾನವಾಗದೆ ಉಳಿದುಬಿಡುತ್ತದೆ. ಅಂಥ ಹತ್ಯೆಯ ಜೊತೆಗೇ ಸತ್ಯದ ಕೊಲೆಯೂ ಆಗಿಹೋಗಿರುತ್ತದೆ. ಸತ್ಯವನ್ನು ಹೂತುಹಾಕುವುದಕ್ಕೇ ಎನ್‌ಕೌಂಟರ್ ನಡೆದುಬಿಟ್ಟಿರುತ್ತದೆ. ಬದ್ಲಾಪುರ ಪ್ರಕರಣದಲ್ಲೂ ಇದೇ ರೀತಿಯ ಅನುಮಾನಗಳು ಮೂಡಿವೆ. ಆದರೆ ದುಃಖದ ವಿಚಾರವೆಂದರೆ, ನ್ಯಾಯಾಲಯಗಳು ಎನ್‌ಕೌಂಟರ್‌ನ ಕಾನೂನುಬದ್ಧತೆ ಬಗ್ಗೆ ತನಿಖೆಗೆ ಆದೇಶಿಸಿದ್ದರೂ, ಸತ್ತ ಆರೋಪಿಯನ್ನು ಬಂಧಿಸಿದ ಪ್ರಾಥಮಿಕ ಅಪರಾಧದ ತನಿಖೆಯ ಅಗತ್ಯ ಪರಿಗಣನೆಗೇ ಬರುವುದಿಲ್ಲ.
ಸಮಸ್ಯೆ ಇರುವುದೇ ಇಲ್ಲಿ. ಎನ್‌ಕೌಂಟರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ, ಆರೋಪಿ ಸತ್ತಿದ್ದರೂ ಪ್ರಾಥಮಿಕ ಪ್ರಕರಣದ ಸರಿಯಾದ ತನಿಖೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಇದರಿಂದ ಎರಡು ರೀತಿಯಲ್ಲಿ ಪ್ರಯೋಜನಗಳಿವೆ. ಒಂದು, ಅಪರಾಧದ ಹಿಂದೆ ಕಾಣದ ಕೈಗಳಿದ್ದರೆ, ಅವು ಬಹಿರಂಗಗೊಳ್ಳುತ್ತವೆ. ಅಂದರೆ, ಆರೋಪಿಗಳು ನಿರಪರಾಧಿಗಳಾಗಿದ್ದು, ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರೆ, ಪ್ರತೀ ಪ್ರಕರಣದಲ್ಲೂ ಎನ್‌ಕೌಂಟರ್‌ಗೆ ಒತ್ತಾಯಿಸುವ ಜನರ ಮನಃಸ್ಥಿತಿಯೂ ಬದಲಾಗಬಹುದು. ಎರಡು, ಆರೋಪಿಗಳ ಅಪರಾಧ ಸಾಬೀತಾದರೆ, ಅವರು ಶಿಕ್ಷೆಗೆ ಅರ್ಹರಾಗಿದ್ದರು ಎಂಬ ಒಂದಂಶ ಖಚಿತವಾಗುತ್ತದೆ. ಆಗಲೂ ಎನ್‌ಕೌಂಟರ್ ನ್ಯಾಯವಲ್ಲ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನ್ಯಾಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಉದ್ದೇಶ ನ್ಯಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದೇ ಹೊರತು ಪ್ರತೀಕಾರವಲ್ಲ. ನೂರು ಮಂದಿ ತಪ್ಪಿತಸ್ಥರು ತಪ್ಪಿಸಿಕೊಳ್ಳುವುದಕ್ಕಿಂತ ದೊಡ್ಡ ವಿಚಾರ ಒಬ್ಬ ಅಮಾಯಕನಿಗೆ ಶಿಕ್ಷೆಯಾಗುವುದು. ಯಾವುದೇ ತಪ್ಪಿತಸ್ಥ ವ್ಯಕ್ತಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದು ಎಷ್ಟು ಮುಖ್ಯವೋ ಯಾವುದೇ ಅಮಾಯಕ ಶಿಕ್ಷೆಗೆ ಒಳಗಾಗದಂತೆ ಖಾತರಿ ಪಡಿಸುವುದೂ ಅಷ್ಟೇ ಮುಖ್ಯ.
ಪೊಲೀಸ್ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವೂ ಎನ್ಕೌಂಟರ್‌ನಂಥ ಘೋರಕ್ಕೆ ಕಾರಣವಾಗುವುದು ಮತ್ತೆ ಮತ್ತೆ ಬಯಲಾಗುತ್ತಲೇ ಇರುವ ಸತ್ಯ. ಇಂಥ ಅಪಾಯದಿಂದ ಬಿಡುಗಡೆ ಬೇಕಿದೆ.
000000
ಅತೀ ಹೆಚ್ಚು ಸದ್ದು ಮಾಡಿದ್ದ ಕೆಲವು ಎನ್‌ಕೌಂಟರ್‌ಗಳು
1. ದಿಶಾ ಅತ್ಯಾಚಾರ ಪ್ರಕರಣದ ಎನ್‌ಕೌಂಟರ್:
2019ರಲ್ಲಿ 25 ವರ್ಷದ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಾದ ನಾಲ್ವರನ್ನು ಹೈದರಾಬಾದ್ ಪೊಲೀಸ್ ತಂಡ ಕೊಂದುಹಾಕಿತು. ಅದು ನಕಲಿ ಎನ್‌ಕೌಂಟರ್ ಎಂದು ಸುಪ್ರೀಂ ಕೋರ್ಟ್ ರಚಿತ ಸಮಿತಿ ಹೇಳಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾ. ಸಿರ್ಪುರ್ಕರ್ ಆಯೋಗ ಪೊಲೀಸರ ವಿರುದ್ಧ ಕೊಲೆ ಆರೋಪ ಹೊರಿಸುವಂತೆ ಶಿಫಾರಸು ಮಾಡಿತ್ತು.
2. ವಿಕಾಸ್ ದುಬೆ ಎನ್‌ಕೌಂಟರ್:
ಎಂಟು ಪೊಲೀಸರನ್ನು ಕೊಂದ ನಂತರ ಪೊಲೀಸ್ ದಾಳಿಯಿಂದ ತಪ್ಪಿಸಿಕೊಂಡ ವಿಕಾಸ್ ದುಬೆಯನ್ನು 2020ರ ಜುಲೈನಲ್ಲಿ ಉಜ್ಜಯಿನಿಯಿಂದ ಕಾನ್ಪುರಕ್ಕೆ ವರ್ಗಾಯಿಸುವಾಗ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಗುಂಡಿಕ್ಕಿ ಕೊಂದಿತು. ಆದರೆ ಇದರಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.
3. ಲಖನ್ ಭಯ್ಯಾ ಎನ್‌ಕೌಂಟರ್:
ಮುಂಬೈ ಪೊಲೀಸ್ ತಂಡ 2006ರ ನವೆಂಬರ್ 11ರಂದು ಲಖನ್ ಭಯ್ಯಾ ಅಲಿಯಾಸ್ ರಾಮನಾರಾಯಣ ಗುಪ್ತಾನನ್ನು ವಾಶಿಯಲ್ಲಿನ ಮನೆಯಿಂದ ವಶಕ್ಕೆ ತೆಗೆದುಕೊಂಡು ವರ್ಸೋವಾ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಮುಗಿಸಿಹಾಕಿತ್ತು. ಪೊಲೀಸರಿಗೆ ಶಿಕ್ಷೆಯಾದ ಅಪರೂಪದ ಪ್ರಕರಣಗಳಲ್ಲಿ ಇದೂ ಒಂದು.
4. ಬಾಟ್ಲಾ ಹೌಸ್ ಎನ್‌ಕೌಂಟರ್:
ದಿಲ್ಲಿ ಪೊಲೀಸ್‌ನ ವಿಶೇಷ ಸೆಲ್‌ನ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ನೇತೃತ್ವದ ಏಳು ಸದಸ್ಯರ ದಿಲ್ಲಿ ಪೊಲೀಸ್ ತಂಡವು 2008, ಸೆಪ್ಟಂಬರ್ 19ರ ಬೆಳಗ್ಗೆ ಬಾಟ್ಲಾ ಹೌಸ್‌ನಲ್ಲಿ ರುವ ಫ್ಲ್ಯಾಟ್ ನಂ. ಎಲ್ 18ನಲ್ಲಿದ್ದ ಐಎಂ ಕಮಾಂಡರ್ ಅತೀಫ್ ಅಮೀನ್ ಮತ್ತು ಅವರ ಸಹಚರರನ್ನು ಬಂಧಿಸಲು ಬಂದಿತ್ತು.
ದಿಲ್ಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬ ಜಾಮಿಯಾ ನಗರದ ಬಾಟ್ಲಾ ಹೌಸ್‌ನಲ್ಲಿರುವ ಫ್ಲ್ಯಾಟ್ ಒಂದರಲ್ಲಿ ಅಡಗಿಕೊಂಡಿದ್ದಾನೆ ಎಂಬ ನಿರ್ದಿಷ್ಟ ಮಾಹಿತಿ ತಂಡಕ್ಕೆ ಸಿಕ್ಕಿತ್ತು. ಎರಡನೇ ಮಹಡಿಯಲ್ಲಿರುವ ಫ್ಲ್ಯಾಟ್‌ಗೆ ನುಗ್ಗಲು ಪೊಲೀಸರು ಯತ್ನಿಸಿದಾಗ ಭಾರೀ ಗುಂಡಿನ ಚಕಮಕಿ ನಡೆಯಿತು. ಭಯೋತ್ಪಾದಕರ ಗುಂಡಿಗೆ ಶರ್ಮಾ ಗುರಿಯಾದರು. ನಂತರದ ಗುಂಡಿನ ಚಕಮಕಿಯಲ್ಲಿ ಅತೀಫ್ ಅಮೀನ್ ಮತ್ತು ಮುಹಮ್ಮದ್ ಸಾಜಿದ್ ಕೊಲ್ಲಲ್ಪಟ್ಟರು. ಇನ್ನಿಬ್ಬರು ಮುಹಮ್ಮದ್ ಸೈಫ್ ಮತ್ತು ಜೀಶಾನ್‌ರನ್ನು ಬಂಧಿಸಲಾಗಿತ್ತು. ಇಬ್ಬರು ದಿಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಶರ್ಮಾ ನಂತರ ಸಾವನ್ನಪ್ಪಿದರು. ಡಿಸಿಪಿ ಸಂಜೀವ್ ಕುಮಾರ್ ಯಾದವ್ ಕೂಡ ಈ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾನವ ಹಕ್ಕು ಹೋರಾಟಗಾರರ ಆಗ್ರಹದ ಬಳಿಕ ಎನ್‌ಕೌಂಟರ್ ಬಗ್ಗೆ ತನಿಖೆಗೆ ಸಮಿತಿ ರಚಿಸಲಾ ಗಿತ್ತು. ಆದರೆ ಸಮಿತಿ ದಿಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿತ್ತು.
5. ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್:
2005ರಲ್ಲಿ ನಡೆದಿದ್ದ ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಕೇಸ್‌ನಲ್ಲಿ ಸೊಹ್ರಾಬುದ್ದೀನ್ ಹಾಗೂ ಸಹಚರ ತುಳಸೀರಾಮ್ ಪ್ರಜಾಪತಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಈ ಕೊಲೆಗಳು ರಾಜಕೀಯ ಮತ್ತು ಆರ್ಥಿಕ ಲಾಭಕ್ಕಾಗಿ ಪಿತೂರಿಯ ಫಲ ಎಂದು ಆರೋಪಿಸಿತ್ತು. ಇನ್ನು, ಪ್ರಕರಣದಲ್ಲಿ ಒಟ್ಟು 38 ಆರೋಪಿಗಳಿದ್ದರು. ಈ ಪೈಕಿ, ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ, ಐಪಿಎಸ್ ಹಿರಿಯ ಅಧಿಕಾರಿಯಾಗಿದ್ದ ಡಿ.ಜಿ. ವಂಜಾರಾ ಹಾಗೂ ಅನೇಕ ಪೊಲೀಸ್ ಅಧಿಕಾರಿಗಳು ಸಹ ಆರೋಪಿಗಳಾಗಿದ್ದರು. ನಂತರ, ಅವರನ್ನು ಖುಲಾಸೆಗೊಳಿಸಲಾಗಿತ್ತು. ಪ್ರಾಸಿಕ್ಯೂಷನ್‌ನ 92 ಸಾಕ್ಷಿಗಳು ಕೋರ್ಟ್‌ಗೆ ಸಾಕ್ಷಿ ಹೇಳಲು ಒಪ್ಪಿಕೊಂಡಿರಲಿಲ್ಲ. ಆದರೆ, ಪ್ರಕರಣವನ್ನು ಪಿತೂರಿ ಹಾಗೂ ಕೊಲೆ ಪ್ರಕರಣವೆಂದು ಸಾಬೀತುಪಡಿಸುವಲ್ಲಿ ಸಾಕ್ಷಿಗಳು ಮತ್ತು ಪುರಾವೆಗಳು ವಿಫಲವಾಗಿವೆ ಎಂದು ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದ 22 ಆರೋಪಿಗಳ ಪೈಕಿ ಬಹುತೇಕ ಎಲ್ಲರೂ ಗುಜರಾತ್, ರಾಜಸ್ಥಾನ ಹಾಗೂ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಗಳಾಗಿದ್ದರು. ಕಡೆಗೆ 2018ರ ಡಿಸೆಂಬರ್‌ನಲ್ಲಿ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತು.