ಗಾಝಾ ನೆಲದಲ್ಲಿ ಇಸ್ರೇಲ್ ಆಕ್ರಮಣ ತಂದಿಟ್ಟಿರುವ ಭೀಕರತೆ ಎಷ್ಟು?
ಅಕ್ಟೋಬರ್ 7 | ಗಾಝಾ ಮೇಲೆ ಇಸ್ರೇಲ್ ಘೋಷಿತ ಆಕ್ರಮಣ ಹಾಗೂ ನರಮೇಧ ಪ್ರಾರಂಭಿಸಿ ಒಂದು ವರ್ಷ
ಗಾಝಾದಲ್ಲಿ ಕೆಲಸ ಮಾಡಲು ಸ್ವಯಂಪ್ರೇರಣೆಯಿಂದ ತೊಡಗಿಸಿಕೊಂಡು, ಅಲ್ಲಿನ ಸ್ಥಿತಿಯನ್ನು ಕಣ್ಣಾರೆ ಕಂಡವರಲ್ಲಿ ಅಮೆರಿಕದ 99 ವೈದ್ಯರ ತಂಡವೂ ಇದೆ. ಆ ವೈದ್ಯರ ತಂಡ ಗಾಝಾದಲ್ಲಿನ ಮಕ್ಕಳು, ಮಹಿಳೆಯರ ಸಾವನ್ನು ನೋಡಲಾರದೆ ಮರುಗಿದೆ. ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಮುಂದಾಗುವಂತೆ ಅಮೆರಿಕದ ಆ ವೈದ್ಯರು ತಮ್ಮ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಪತ್ರ ಬರೆದು ಕೇಳಿಕೊಂಡಿದ್ದಾರೆ. ಗಾಝಾದಲ್ಲಿ ಗ್ರಹಿಕೆಗೂ ಮೀರಿದ ಅಪರಾಧಗಳಿಗೆ ಸಾಕ್ಷಿಯಾಗಿರುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ. ಇಸ್ರೇಲ್‌ಗೆ ನೀಡಲಾಗಿರುವ ಮಿಲಿಟರಿ, ಆರ್ಥಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ತಕ್ಷಣವೇ ಹಿಂಪಡೆಯುವಂತೆ ವೈದ್ಯರು ಒತ್ತಾಯಿಸಿದ್ದಾರೆ.
ಇಸ್ರೇಲ್ ದಾಳಿಯ ನಡುವೆ ತಲೆದೋರಿರುವ ಭೀಕರ ಮಾನವೀಯ ಪರಿಸ್ಥಿತಿ ಕುರಿತ ತಮ್ಮ ಅನುಭವಗಳನ್ನು ವೈದ್ಯರು ಪತ್ರದಲ್ಲಿ ಹಂಚಿಕೊಂಡಿದ್ದಾರೆ.
ಆ ಪತ್ರ ಕಟ್ಟಿಕೊಡುವ ಇವತ್ತಿನ ಗಾಝಾದ ಚಿತ್ರ ಏನು?
ಮಕ್ಕಳು ಆರೋಗ್ಯವಾಗಿ ಜನಿಸಿದರೂ, ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರು ಹಾಲುಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಪ್ರತಿದಿನವೂ ಶಿಶುಗಳು ಸಾಯುವುದನ್ನು ನೋಡಬೇಕಾಗಿದೆ. ಇಡೀ ವರ್ಷ ಗಾಝಾದಾದ್ಯಂತ ಚಿಕ್ಕ ಮಕ್ಕಳ ಮೇಲೆಯೂ ನಡೆದಿರುವ ವ್ಯಾಪಕ ಗುಂಡಿನ ದಾಳಿಗಳು ಹೃದಯವಿದ್ರಾವಕ. ವ್ಯಾಪಕ ಅಪೌಷ್ಟಿಕತೆ ಮತ್ತು ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊರತೆ ಗಾಝಾವನ್ನು ಕಾಡುತ್ತಿದೆ.
► ವೈದ್ಯರು ಕಂಡಿರುವ ಸತ್ಯ: ಗಾಝಾದ ಯಾವುದೇ ಆಸ್ಪತ್ರೆಗಳು ಅಥವಾ ಇತರ ಆರೋಗ್ಯ ಕೇಂದ್ರಗಳಲ್ಲಿ ಫೆಲೆಸ್ತೀನ್ ಉಗ್ರಗಾಮಿ ಚಟುವಟಿಕೆಯನ್ನು ಒಮ್ಮೆಯೂ ನೋಡಿಲ್ಲ. ಆದರೆ ಗಾಝಾದ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಇಸ್ರೇಲ್ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದೆ.
► ವೈದ್ಯರ ಮನವಿ: ನೀರು ಮತ್ತು ವೈದ್ಯಕೀಯ ಸೌಲಭ್ಯ ಪೂರೈಕೆ, ಮಾನವೀಯ ಸಹಾಯವನ್ನು ಗಾಝಾಕ್ಕೆ ತಲುಪಿಸಲು ರಫಾ ಕ್ರಾಸಿಂಗ್ ಅನ್ನು ಪುನಃ ತೆರೆಯುವುದಕ್ಕೆ ವೈದ್ಯರು ಒತ್ತಾಯ ಮಾಡಿದ್ದಲ್ಲದೆ, ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿ ಗಳ ಪೂರೈಕೆಯನ್ನು ನಿಲ್ಲಿಸುವವರೆಗೂ ಪ್ರತೀ ದಿನವೂ ಬಾಂಬ್‌ಗಳಿಂದ ಇಲ್ಲಿ ಮಹಿಳೆಯರು ಛಿದ್ರ ಛಿದ್ರವಾಗುತ್ತಾರೆ ಮತ್ತು ಮಕ್ಕಳ ದೇಹವನ್ನು ಗುಂಡುಗಳು ಹೊಕ್ಕುತ್ತವೆ ಎಂದು ಗಾಝಾದಲ್ಲಿನ ಕರಾಳತೆಯನ್ನು ವಿವರಿಸಿದ್ದಾರೆ.
‘‘ನಾವು ನಾಯಕರಲ್ಲ, ನಮ್ಮ ಬಳಿ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಇಲ್ಲ. ನಾವು ವೈದ್ಯರು ಮಾತ್ರ. ನಾವು ಆರೋಗ್ಯ ಕಾರ್ಯಕರ್ತರು ಮಾತ್ರ’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಅಮೆರಿಕವೇ ಹಿಂದೆ ನಿಂತಿರುವ ಈ ಯುದ್ಧ ಉಂಟುಮಾಡಿರುವ ಕರಾಳತೆಯನ್ನು ಅದೇ ಅಮೆರಿಕದ ವೈದ್ಯರು ಕಂಡಿದ್ದಾರೆ, ತತ್ತರಿಸಿ ಹೋಗಿದ್ದಾರೆ, ಯುದ್ಧವಿರಾಮಕ್ಕೆ ಕ್ರಮ ತೆಗೆದುಕೊಳ್ಳಲು ಕೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಜರ್ಜರಿತವಾಗಿ ಹೋಗಿದೆ ಗಾಝಾ.
ವಿಶ್ವಸಂಸ್ಥೆ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) 2024ರ ಜೂನ್ 18ರಂದು ಪ್ರಕಟಿಸಿದ ವರದಿ, ಗಾಝಾದಲ್ಲಿನ ಯುದ್ಧದಿಂದ ಪರಿಸರದ ಮೇಲೆ ತೀವ್ರ ಪರಿಣಾಮಗಳು ಉಂಟಾಗಿರುವುದರ ಬಗ್ಗೆ ಹೇಳಿತ್ತು. ತಕ್ಷಣದ ಕದನ ವಿರಾಮಕ್ಕೆ ವರದಿ ಒತ್ತಾಯಿಸಿತ್ತು.
ಯುಎನ್‌ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆ್ಯಂಡರ್ಸನ್ ಹೇಳಿದ್ದ ಪ್ರಕಾರ,
1.ಯುದ್ಧದಿಂದ ಗಾಝಾ ಜನರು ಹೇಳಲಾಗದಷ್ಟು ಬಳಲುತ್ತಿದ್ದಾರೆ ಮಾತ್ರವಲ್ಲ, ಉಂಟಾಗಿರುವ ಪರಿಸರ ಹಾನಿ ದೀರ್ಘ ಕಾಲದವರೆಗೆ ಜನರನ್ನು ನೋವಿಗೆ ತಳ್ಳುವ ಅಪಾಯವಿದೆ.
2.ಜನರು ಈಗಾಗಲೇ ಪರಿಸರ ಹಾನಿಯ ಪರಿಣಾಮಗಳ ಜೊತೆಗೇ ಬದುಕುತ್ತಿದ್ದಾರೆ.
3.ನೀರಿನ ಲಭ್ಯತೆ ಮತ್ತು ಸ್ವಚ್ಛತೆ ಕುಸಿದಿದೆ.
4.ನಿರ್ಣಾಯಕ ಮೂಲಸೌಕರ್ಯ ನಾಶವಾಗುತ್ತಲೇ ಇದೆ.
5.ಕರಾವಳಿ ಪ್ರದೇಶಗಳು, ಮಣ್ಣು ಮತ್ತು ಪರಿಸರ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಿದೆ.
6.ಇದೆಲ್ಲವೂ ಜನರ ಆರೋಗ್ಯ, ಆಹಾರ ಭದ್ರತೆಗೆ ದೊಡ್ಡ ಪ್ರಮಾಣದ ಹಾನಿಯನ್ನು ತರಲಿದೆ.
ಜೀವಗಳ ರಕ್ಷಣೆ, ಪರಿಸರ ಪುನಃಸ್ಥಾಪನೆಗೆ ಹಾಗೂ ಫೆಲೆಸ್ತೀನಿಯರು ಸಂಘರ್ಷದಿಂದ ಚೇತರಿಸಿಕೊಳ್ಳಲು ಮತ್ತು ಗಾಝಾದಲ್ಲಿ ಜನರ ಜೀವನ ಮತ್ತು ಜೀವನೋಪಾಯ ಪುನರ್ನಿರ್ಮಾಣ ಪ್ರಾರಂಭಿಸಲು ತುರ್ತಾಗಿ ಕದನ ವಿರಾಮದ ಅಗತ್ಯವಿದೆ ಎಂದು ಅವರು ಹೇಳಿದ್ದರು.
ಯುದ್ಧದಿಂದಾಗಿ ಗಾಝಾದಲ್ಲಿನ ಭೌಗೋಳಿಕ ಮತ್ತು ಪರಿಸರ ಸ್ಥಿತಿ ಹೇಗಿದೆ?
ಘರ್ಷಣೆಯಿಂದ ಅಂದಾಜು 39 ಮಿಲಿಯನ್ ಟನ್‌ಗಳಷ್ಟು ಶಿಲಾಖಂಡರಾಶಿಗಳು ಉತ್ಪತ್ತಿಯಾಗಿವೆ. ಪ್ರತೀ ಚದರ ಮೀಟರ್‌ಗೆ 107 ಕೆಜಿಗೂ ಹೆಚ್ಚು ಶಿಲಾಖಂಡರಾಶಿಗಳಿವೆ. ಇರಾಕ್‌ನ ಮೊಸುಲ್‌ನಲ್ಲಿ 2017ರ ಸಂಘರ್ಷದಿಂದ ಉತ್ಪತ್ತಿಯಾದ ಅವಶೇಷಗಳ ಪ್ರಮಾಣಕ್ಕಿಂತ ಇದು ಐದು ಪಟ್ಟು ಹೆಚ್ಚು.
ಶಿಲಾಖಂಡರಾಶಿಗಳು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತವೆ. ಧೂಳು ಮತ್ತು ಸ್ಫೋಟಗೊಳ್ಳದ ಸ್ಫೋಟಕಗಳು, ಕೈಗಾರಿಕಾ ಮತ್ತು ವೈದ್ಯಕೀಯ ತ್ಯಾಜ್ಯ ಮತ್ತಿತರ ಅಪಾಯಕಾರಿ ಪದಾರ್ಥಗಳು ಮಾಲಿನ್ಯಕ್ಕೆ ಕಾರಣ. ಅವಶೇಷಗಳ ಕೆಳಗೆ ಹೂತುಹೋಗಿರುವ ಮಾನವ ಅವಶೇಷಗಳೂ ಸಮಸ್ಯೆ ತರಲಿದ್ದು, ಸೂಕ್ಷ್ಮ ಮತ್ತು ಸೂಕ್ತ ವ್ಯವಹರಿಸುವಿಕೆ ಅಗತ್ಯ.
ಶಿಲಾಖಂಡರಾಶಿಗಳನ್ನು ತೆರವುಗೊಳಿಸುವುದು ಬೃಹತ್ ಮತ್ತು ಸಂಕೀರ್ಣ ಕೆಲಸ. ಪೂರ್ಣ ಪ್ರಮಾಣದ ತೆರವಿಗೆ ವರ್ಷಗಳಷ್ಟು ಸಮಯವೂ ಬೇಕಾಗಬಹುದು. ಅದನ್ನು ತೆರವುಗೊಳಿಸದೆ ಇತರ ಯಾವುದೇ ಪುನರ್ನಿರ್ಮಾಣ ಕೆಲಸ ಸಾಧ್ಯವಾಗದು.
ನೀರು ಮತ್ತು ನೈರ್ಮಲ್ಯ ವ್ಯವಸ್ಥೆಗಳು ಬಹುತೇಕ
ನಿಷ್ಕ್ರಿಯವಾಗಿವೆ. ಐದು ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳು ಮುಚ್ಚಿ ಹೋಗಿವೆ.
ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ತೀವ್ರವಾಗಿ ಹಾಳಾಗಿದೆ. ಆರು ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳಲ್ಲಿ ಐದು ಹಾನಿಗೊಳಗಾಗಿವೆ. ಅಡುಗೆ ಅನಿಲದ ಕೊರತೆಯಿಂದಾಗಿ ಮರ, ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಸುಡುವಂತಾಗಿದ್ದು, ಇದು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಅಪಾಯಕಾರಿ.
ಇದೆಲ್ಲವೂ ಗಾಳಿಯ ಗುಣಮಟ್ಟವನ್ನು ತೀವ್ರವಾಗಿ ತಗ್ಗಿಸಲಿದೆ. ಅಲ್ಲದೆ, ಈಗ ಅಲ್ಲಿ ಗಾಳಿಯ ಗುಣಮಟ್ಟ ಹೇಗಿದೆ ಎಂಬ ಡೇಟಾ ಕೂಡ ಲಭ್ಯವಿಲ್ಲ.
ಭಾರೀ ಲೋಹಗಳು ಮತ್ತು ಸ್ಫೋಟಕ ರಾಸಾಯನಿಕಗಳನ್ನು ಹೊಂದಿರುವ ಯುದ್ಧಸಾಮಗ್ರಿಗಳ ಅವಶೇಷಗಳು ಮಣ್ಣು ಮತ್ತು ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತವೆ ಮಾತ್ರವಲ್ಲ, ಜನರ ಆರೋಗ್ಯಕ್ಕೂ ಅಪಾಯ ತರುತ್ತವೆ.
ಅದು ಯುದ್ಧ ನಿಂತ ನಂತರವೂ ದೀರ್ಘಕಾಲ ಉಳಿಯುತ್ತದೆ. ಸ್ಫೋಟಗೊಳ್ಳದ ಆಯುಧಗಳು ಮಕ್ಕಳಿಗೆ ಗಂಭೀರ ಅಪಾಯಕಾರಿ. ಸೌರ ಫಲಕಗಳ ನಾಶದಿಂದಾಗಿ ಸೀಸ ಮತ್ತಿತರ ಭಾರ ಲೋಹಗಳ ಸೋರಿಕೆಯಾಗುವ ಸಂಭವವಿದ್ದು, ಅದರಿಂದ ಮಣ್ಣು ಮತ್ತು ನೀರು ಇನ್ನಷ್ಟು ಅಪಾಯಕಾರಿ ಮಟ್ಟದಲ್ಲಿ ಕಲುಷಿತಗೊಳ್ಳುತ್ತದೆ.
ಹಮಾಸ್‌ನ ಸುರಂಗ ವ್ಯವಸ್ಥೆ ಮತ್ತು ಅವುಗಳನ್ನು ನಾಶಮಾಡಲು ಇಸ್ರೇಲ್‌ನ ಪ್ರಯತ್ನಗಳಿಂದ ಪರಿಸರಕ್ಕೆ ಇನ್ನಷ್ಟು ಹಾನಿಯಾಗಬಹುದು.
ಅಂತರ್ಜಲ ಮಾಲಿನ್ಯದಿಂದ ಮಾನವನ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ತಲೆದೋರಿದರೆ, ಬಹುಶಃ ಅಸ್ಥಿರವಾಗಿರುವ ಭೂ ಮೇಲ್ಮೈಗಳಲ್ಲಿ ನಿರ್ಮಿಸಲಾದ ಕಟ್ಟಡಗಳೂ ಯಾವಾಗ ಅಪಾಯಕ್ಕೆ ತುತ್ತಾಗಬಹುದೆಂದು ಹೇಳಲಾಗದು.
ಗಾಝಾದಲ್ಲಿ ತಕ್ಷಣದ ಮತ್ತು ದೀರ್ಘಕಾಲದ ಪರಿಸರ ಸವಾಲುಗಳನ್ನು ಪರಿಹರಿಸುವುದು ಜನರ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂದು ವರದಿಯ ಲೇಖಕರು ಹೇಳಿದ್ದಾರೆ. ಯುದ್ಧಸಾಮಗ್ರಿಗಳಿಂದ ಮಾಲಿನ್ಯ ಮತ್ತು ಇತರ ಸಂಘರ್ಷ ಸಂಬಂಧಿತ ಮಾಲಿನ್ಯದ ಮೌಲ್ಯಮಾಪನ ಸೇರಿದಂತೆ ಪರಿಸರ ವಿಶ್ಲೇಷಣೆಯನ್ನು ಪುನರ್ನಿರ್ಮಾಣ ಯೋಜನೆಯ ಭಾಗವಾಗಿಯೇ ಮಾಡಬೇಕಿದೆ ಎಂಬುದು ಕೂಡ ಅವರ ಒತ್ತಾಯ.
► ಬಾಂಬ್ ದಾಳಿ ನಡೆದಿರುವುದು ಎಲ್ಲೆಲ್ಲಿ?
ಇಸ್ರೇಲ್ ಪಡೆಗಳು ಫೆಲೆಸ್ತೀನ್ ನ ಗಾಝಾಪಟ್ಟಿಯಲ್ಲಿರುವ ಪುರಸಭೆಯ ಸೇವೆಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದೇ ಆರೋಪಿಸಲಾಗಿದೆ. ಮೂಲಸೌಕರ್ಯ ಒದಗಿಸುವ ಕೇಂದ್ರಗಳ ಮೇಲೆಯೇ ಪದೇ ಪದೇ ಬಾಂಬ್ ದಾಳಿ ನಡೆದಿದೆ. ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕೊಲ್ಲಲ್ಪಟ್ಟರು ಮತ್ತು ಫೆಲೆಸ್ತೀನಿಯರಿಗೆ ಸೇವೆಗಳನ್ನು ಒದಗಿಸುವ ಹಲವಾರು ಸೌಲಭ್ಯಗಳು ಮತ್ತು ವಾಹನಗಳನ್ನೇ ಇಸ್ರೇಲ್ ಸೇನೆ ಗುರಿ ಮಾಡಿತ್ತು.
ಆ ದಾಳಿಗಳಲ್ಲಿ ರಸ್ತೆಗಳ ನಾಶ ಮತ್ತು ನೀರಿನ ಟ್ಯಾಂಕ್‌ಗಳು, ಒಳಚರಂಡಿ ಕೇಂದ್ರಗಳು ಮತ್ತು ಬಾವಿಗಳಂತಹ ಹೆಚ್ಚಿನ ಅಗತ್ಯ ಸೇವಾ ಮೂಲಸೌಕರ್ಯಗಳನ್ನು ನಾಶಗೊಳಿಸಲಾಯಿತು. ಹಾಗೆ ದಾಳಿಗೊಳಗಾದ ಸ್ಥಳಗಳೆಂದರೆ,
1.ಗಾಝಾ ಮತ್ತು ಇತರ ನಗರಗಳಲ್ಲಿನ ಒಳಚರಂಡಿ
2.ಬೈತ್ ಲಾಹಿಯಾದಲ್ಲಿನ ದೊಡ್ಡ ನೀರಿನ ಟ್ಯಾಂಕ್‌ಗಳು ಮತ್ತು ಜಬಾಲಿಯಾ ಮತ್ತು ಇತರ ಪ್ರದೇಶಗಳಲ್ಲಿನ ಬಳಕೆಯಲ್ಲಿದ್ದ ಬಾವಿಗಳು
3.ಅಂತರ್ಜಲ ಮತ್ತು ಸಮುದ್ರದ ನೀರಿನ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳು
4.ಗಾಝಾ ಪುರಸಭೆಯ ಗ್ಯಾರೇಜ್ ಮತ್ತು ಅದರ ನಿರ್ವಹಣಾ ಕಾರ್ಯಾಗಾರ
5.ಬುರೇಜ್‌ನಲ್ಲಿ ನಾಲ್ಕು ಪ್ರಮುಖ ಜನರೇಟರ್‌ಗಳನ್ನು ಹೊಂದಿರುವ ವಿದ್ಯುತ್ ಜನರೇಟರ್ ಸ್ಥಾವರ.
ಇಸ್ರೇಲ್ ಕನಿಷ್ಠ ಒಂದು ಮಿಲಿಯನ್ ಚದರ ಮೀಟರ್ ಗಾಝಾ ನಗರದ ರಸ್ತೆಗಳನ್ನು ನಾಶಪಡಿಸಿದೆ ಮತ್ತು ಪುರಸಭೆಯ ನೀರು, ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಸೇವೆಗಳನ್ನು ಧ್ವಂಸ ಮಾಡಿದೆ ಎಂದು ಗಾಝಾ ಪುರಸಭೆಯ ತುರ್ತು ಸಮಿತಿ ಹೇಳಿರುವುದಾಗಿ ವರದಿಯಿದೆ. ಈ ವರ್ಷ ಜೂನ್‌ನಲ್ಲಿ ವಿಶ್ವಸಂಸ್ಥೆ ಅಂದಾಜಿಸಿರುವ ಪ್ರಕಾರ, ಇಸ್ರೇಲ್ ಬಾಂಬ್ ದಾಳಿಯಿಂದ ಗಾಝಾದ ಶೇ.70ರಷ್ಟು ನೀರು ಮತ್ತು ನೈರ್ಮಲ್ಯ ಘಟಕಗಳು ನಾಶಗೊಂಡಿವೆ. ಆಗಸ್ಟ್‌ನಲ್ಲಿ ಇಸ್ರೇಲಿ ಪಡೆಗಳು ಗಾಝಾಪಟ್ಟಿಯಲ್ಲಿರುವ ನೀರಿನ ಸಂಸ್ಕರಣಾ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದವು. ಇದೆಲ್ಲದರ ಪರಿಣಾಮ ತುಂಬಿ ಹರಿಯುವ ಕೊಳಚೆನೀರು, ದೊಡ್ಡ ಕಸದ ರಾಶಿಗಳು ಮತ್ತು ಹೆಪಟೈಟಿಸ್ ಮತ್ತು ಕಾಲರಾದಂತಹ ರೋಗಗಳ ಹರಡುವಿಕೆ.
ಗಾಝಾದ ವಿದ್ಯುತ್ ಸೌಲಭ್ಯಗಳಂತೂ ತೀವ್ರವಾಗಿ ಹಾನಿಗೊಳಗಾದವು.
ಅಲ್ ಜಝೀರಾ ಈ ವರ್ಷದ ಎಪ್ರಿಲ್ 2ರಂದು ಪ್ರಕಟಿಸಿದ್ದ ವರದಿ ವಿಶ್ವಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖಿಸಿ, ಗಾಝಾದಲ್ಲಿ 18.5 ಬಿಲಿಯನ್ ಡಾಲರ್ ಮೌಲ್ಯದ ಮೂಲಸೌಕರ್ಯ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಹೇಳಿದೆ ಮತ್ತು ಈ ಭಾರೀ ಪ್ರಮಾಣದ ಹಾನಿ ಗಾಝಾದ ಮೇಲಿನ ಇಸ್ರೇಲ್‌ನ ನಿರಂತರ ಯುದ್ಧದ ಮೊದಲ ನಾಲ್ಕು ತಿಂಗಳಲ್ಲಿಯೇ ಆಗಿದೆ ಎಂಬುದನ್ನು ವರದಿಗಳು ಕಂಡುಕೊಂಡಿವೆ. ಗಾಝಾದಲ್ಲಿನ ವಿನಾಶದ ಮಟ್ಟ ಹಿಂದೆಂದೂ ಕಂಡಿರದಷ್ಟು ಎಂದು ವಿವರಿಸಲಾಗಿದೆ. ಈ ಹಾನಿಯ ಪ್ರಮಾಣ 2022ರಲ್ಲಿನ ವೆಸ್ಟ್ ಬ್ಯಾಂಕ್ ಮತ್ತು ಗಾಝಾದ ಒಟ್ಟು ಜಿಡಿಪಿಯ ಶೇ.97ರಷ್ಟು ಎಂದು ವರದಿ ಅಂದಾಜಿಸಿದೆ.
ಸಂಘರ್ಷದಿಂದ ಗಾಝಾದಲ್ಲಿನ ಸುಮಾರು ಶೇ.62ರಷ್ಟು ಮನೆಗಳು ಹಾನಿಗೊಳಗಾಗಿವೆ ಅಥವಾ ಸಂಪೂರ್ಣ ಧ್ವಂಸವಾಗಿವೆ. ಈ ನಾಶದ ಪ್ರಮಾಣ 2,90,820 ವಸತಿ ಘಟಕಗಳಿಗೆ ಸಮ ಎನ್ನಲಾಗಿದೆ ಮತ್ತು 10 ಲಕ್ಷಕ್ಕಿಂತಲೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಗಾಝಾದ ಎಲ್ಲಾ 6,25,000 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಂತಾಗಿದೆ. ಶೈಕ್ಷಣಿಕ ಮೂಲಸೌಕರ್ಯಕ್ಕೆ ಆಗಿರುವ ಹಾನಿಯ ಮೊತ್ತ 341 ಮಿಲಿಯನ್ ಡಾಲರ್ ಎಂದು ಅಂದಾಜಿಸ
ಲಾಗಿದೆ. ಇಲ್ಲಿಯವರೆಗೆ ಅಂದಾಜಿಸಲಾದ ಒಟ್ಟು ಹಾನಿಯ ಶೇ.80ರಷ್ಟು ಗಾಝಾದ ಗವರ್ನರೇಟ್, ಉತ್ತರ ಗಾಝಾ ಮತ್ತು ಖಾನ್ ಯೂನಿಸ್‌ನಲ್ಲಿಯೇ ಆಗಿದೆ. ಬೈತ್ ಲಾಹಿಯಾ ಮತ್ತು ರಫಾ ಗವರ್ನರೇಟ್‌ಗಳಲ್ಲಿಯೂ ಗಮನಾರ್ಹ ಹಾನಿ ದಾಖಲಾಗಿದೆ.
ಘರ್ಷಣೆ ಮುಂದುವರಿದಂತೆ ಹಾನಿಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಗಾಝಾ ಪಟ್ಟಿಯ ದಕ್ಷಿಣದಲ್ಲಿ ಇದು ನಿಜವಾಗಿದೆ. ಅಲ್ಲಿ ಇತ್ತೀಚಿನ ವಾರಗಳಲ್ಲಿ ಹೆಚ್ಚಿನ ವಿನಾಶ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಮಾನವೀಯ ನೆರವು, ಆಹಾರ ಪೂರೈಕೆ, ಆಹಾರ ಉತ್ಪಾದನೆಯಲ್ಲಿ ಹೆಚ್ಚಳ, ಸ್ಥಳಾಂತರಗೊಂಡ ಜನರಿಗೆ ಆಶ್ರಯ ಮತ್ತು ವಸತಿ ಪರಿಹಾರಗಳನ್ನು ಒದಗಿಸುವುದು ಮತ್ತು ಅಗತ್ಯ ಸೇವೆಗಳನ್ನು ಪುನರಾರಂಭಿಸಲು ವರದಿ ಒತ್ತಾಯಿಸಿದೆ.
ಫ್ರಾನ್ಸ್‌ನ ಸುದ್ದಿ ಪೋರ್ಟಲ್ ಅಊ ಈ ವರ್ಷದ ಮೇ 5ರಂದು ಪ್ರಕಟಿಸಿದ್ದ ವರದಿಯಂತೆ, ಆವರೆಗಿನ 7 ತಿಂಗಳಲ್ಲಿ ಇಸ್ರೇಲ್ ದಾಳಿಯಲ್ಲಿ ಬಲಿಯಾದವರು 34,000ಕ್ಕೂ ಹೆಚ್ಚು. ಜೊತೆಗೆ ಹಸಿವು ಮತ್ತು ಗಾಯಾಳುಗಳ ಸ್ಥಿತಿ ದುರಂತದ ತೀವ್ರತೆಯನ್ನು ಇನ್ನೂ ಹೆಚ್ಚಿಸಿತ್ತು.
ದಾಖಲಾದ ಹಾನಿಯ ಪ್ರಮಾಣ ನಾವು ಮೊದಲು ಅಧ್ಯಯನ ಮಾಡಿದ್ದಕ್ಕಿಂತಲೂ ಭಿನ್ನವಾಗಿದೆ. ಇದು ನಾವು ಮ್ಯಾಪ್ ಮಾಡಿದ ಎಲ್ಲಕ್ಕಿಂತ ಹೆಚ್ಚು ವೇಗವಾಗಿದೆ ಮತ್ತು ಹೆಚ್ಚು ವಿಸ್ತಾರವಾಗಿದೆ ಎಂದು ನ್ಯೂಯಾರ್ಕ್ ಸಿಟಿ ಯೂನಿವರ್ಸಿಟಿಯ ಪಿಎಚ್‌ಡಿ ಅಭ್ಯರ್ಥಿ ಕೊರಿ ಶೆರ್ ಹೇಳಿದ್ದನ್ನು ವರದಿ ಉಲ್ಲೇಖಿಸಿತ್ತು.
ಇಸ್ರೇಲ್ ಪಡೆ ಯಾವಾಗ ಗಾಝಾದ ಕೊನೆಯ ಜನವಸತಿ ಪ್ರದೇಶವಾಗಿದ್ದ ರಫಾದ ಮೇಲೆ ಆಕ್ರಮಣವನ್ನು ಪ್ರಾರಂಭಿಸಿತೋ ಆಗಂತೂ ಗಾಝಾ ಛಿದ್ರ ಛಿದ್ರವಾಗಿ ಹೋದಂತಾಗಿತ್ತು. ಗಾಝಾ ನಗರದ ಮುಕ್ಕಾಲು ಭಾಗ ನಾಶವಾಯಿತು.
ವಿಶ್ವದಲ್ಲೇ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದ್ದ ಗಾಝಾದಲ್ಲಿ ಯುದ್ಧದ ಮೊದಲು 23 ಲಕ್ಷ ಜನರು 365 ಚದರ ಕಿ.ಮೀ. ಅಂದರೆ 140 ಚದರ ಮೈಲಿ ಭೂಪ್ರದೇಶದಲ್ಲಿ ವಾಸಿಸುತ್ತಿದ್ದರು.
ಓರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಭೌಗೋಳಿಕ ಪ್ರಾಧ್ಯಾಪಕರಾದ ಶೆರ್ ಮತ್ತು ಜಾಮೊನ್ ವ್ಯಾನ್ ಡೆನ್ ಹೋಕ್ ಅವರ ಉಪಗ್ರಹ ವಿಶ್ಲೇಷಣೆಗಳ ಪ್ರಕಾರ, ಎಪ್ರಿಲ್ 21 ರ ಹೊತ್ತಿಗೆ ಗಾಝಾದ ಶೇ.56.9ರಷ್ಟು ಕಟ್ಟಡಗಳು ಹಾನಿಗೊಳಗಾಗಿದ್ದವು ಅಥವಾ ನಾಶವಾಗಿದ್ದವು.
ಬಾಂಬ್ ದಾಳಿಯ ಮೊದಲ ಎರಡು ಮೂರು ತಿಂಗಳುಗಳಲ್ಲಿ ವಿನಾಶದ ಪ್ರಮಾಣ ತೀವ್ರವಾಗಿತ್ತು. ಯುದ್ಧದ ಸಮಯದಲ್ಲಿ, ಗಾಝಾದ ಆಸ್ಪತ್ರೆಗಳು ಇಸ್ರೇಲ್‌ನಿಂದ ಪದೇ ಪದೇ ದಾಳಿಗೆ ತುತ್ತಾದವು.
ಆಸ್ಪತ್ರೆಗಳನ್ನು ಹಮಾಸ್ ಮಿಲಿಟರಿ ಉದ್ದೇಶಗಳಿಗಾಗಿ ಬಳಸುತ್ತಿದೆ ಎಂಬ ಅನುಮಾನದಲ್ಲಿ ಇಸ್ರೇಲ್ ಪಡೆ ಆಸ್ಪತ್ರೆಗಳನ್ನೇ ಗುರಿಯಾಗಿಸಿ ದಾಳಿ ನಡೆಸಿತ್ತು.
ಇಸ್ರೇಲ್ ಅಧಿಕೃತ ಅಂಕಿಅಂಶಗಳ ಪ್ರಕಾರ 1,170 ಕ್ಕೂ ಹೆಚ್ಚು ಜನರನ್ನು ಕೊಂದ ಹಮಾಸ್ ದಾಳಿಯಿಂದ ಪ್ರಾರಂಭವಾದ ಯುದ್ಧದ ಮೊದಲ ಆರು ವಾರಗಳಲ್ಲಿ, ಶೇ.60ರಷ್ಟು ಆರೋಗ್ಯ ಸೌಲಭ್ಯಗಳು ನಾಶವಾದವು.
ಗಾಝಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾ ಮೇಲೆ ಇಸ್ರೇಲ್ ಪಡೆ ಎರಡು ಬಾರಿ ಆಕ್ರಮಣ ಮಾಡಿತು. ಮೊದಲನೆಯ ದಾಳಿ ನಡೆದದ್ದು ನವೆಂಬರ್‌ನಲ್ಲಿ ಮತ್ತು ಎರಡನೆಯದು ಈ ವರ್ಷದ ಮಾರ್ಚ್‌ನಲ್ಲಿ.
ಎರಡನೇ ದಾಳಿಯ ಪರಿಣಾಮವಾಗಿ ಆಸ್ಪತ್ರೆ ಬರೀ ಮಾನವ ಅವಶೇಷಗಳಿಂದ ತುಂಬಿದ ಹಾಳು ಕಟ್ಟಡ ಮಾತ್ರವಾಗಿ ಹೋಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಓಪನ್‌ಸ್ಟ್ರೀಟ್ ಮ್ಯಾಪ್ ಯೋಜನೆ, ಹಮಾಸ್ ಆರೋಗ್ಯ ಸಚಿವಾಲಯ ಮತ್ತು ವಿಶ್ವಸಂಸ್ಥೆಯ ಉಪಗ್ರಹ ಕೇಂದ್ರ (UNOSAT) ಕೊಟ್ಟಿರುವ ಅಂಕಿಅಂಶಗಳ ಪ್ರಕಾರ ಐದು ಆಸ್ಪತ್ರೆಗಳು ಸಂಪೂರ್ಣವಾಗಿ ನಾಶವಾಗಿವೆ.
ವಿಶ್ವಸಂಸ್ಥೆ ಪ್ರಕಾರ, ಪ್ರತೀ ಮೂರು ಆಸ್ಪತ್ರೆಗಳಲ್ಲಿ ಒಂದಕ್ಕಿಂತ ಕಡಿಮೆಯಷ್ಟು ಅಂದರೆ, ಶೇ.28ರಷ್ಟು ಆಸ್ಪತ್ರೆಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ.
ಇನ್ನುAFP ವರದಿ ಪ್ರಕಾರ, ಹಾನಿಗೀಡಾಗಿರುವ ಶಾಲೆಗಳು ಶೇ.70ರಷ್ಟು.ಏಪ್ರಿಲ್ 25ರ ಹೊತ್ತಿನ UNICEF ಅಂದಾಜಿನಂತೆ, 563 ಶಾಲೆಗಳಲ್ಲಿ 408 ಶಾಲೆಗಳು ಹಾನಿಗೊಳಗಾಗಿವೆ. ಅವುಗಳಲ್ಲಿ 53 ಶಾಲಾ ಕಟ್ಟಡಗಳು ಸಂಪೂರ್ಣ ನಾಶವಾಗಿದ್ದರೆ, 274 ಕಟ್ಟಡಗಳು ನೇರ ಬೆಂಕಿಗೆ ಆಹುತಿಯಾಗಿವೆ. ವಿಶ್ವಸಂಸ್ಥೆ ಅಂದಾಜಿನ ಪ್ರಕಾರ, ಮೂರನೇ ಎರಡರಷ್ಟು ಶಾಲೆಗಳನ್ನು ಹೊಸದಾಗಿ ಕಟ್ಟಬೇಕಾಗಿದೆ.
ಪ್ರಾರ್ಥನಾ ಸ್ಥಳಗಳಿಗೆ ಸಂಬಂಧಿಸಿದಂತೆ UNOSAT ಮತ್ತು ಓಪನ್‌ಸ್ಟ್ರೀಟ್ ಮ್ಯಾಪ್ ಒದಗಿಸಿರುವ ಡೇಟಾ ಪ್ರಕಾರ, ಶೇ.61.5ರಷ್ಟು ಮಸೀದಿಗಳು ಹಾನಿಗೊಳಗಾಗಿವೆ ಅಥವಾ ಪೂರ್ತಿ ಧ್ವಂಸಗೊಂಡಿವೆ.
ಉತ್ತರ ಗಾಝಾದಲ್ಲಿನ ವಿನಾಶದ ಮಟ್ಟ ಜರ್ಮನಿಯ ಡ್ರೆಸ್ಡೆನ್ ನಗರವನ್ನೂ ಮೀರಿಸಿದೆ.
1954ರಿಂದ ನಡೆದಿದ್ದ ಯುಎಸ್ ಮಿಲಿಟರಿ ಅಧ್ಯಯನವನ್ನು ಫೈನಾನ್ಷಿಯಲ್ ಟೈಮ್ಸ್ ಉಲ್ಲೇಖಿಸಿದ್ದು, ಅದರ ಪ್ರಕಾರ ಎರಡನೇ ಮಹಾಯುದ್ಧದ ಕೊನೆಯಲ್ಲಿ ಬಾಂಬ್ ದಾಳಿಯಿಂದಾಗಿ ಡ್ರೆಸ್ಡೆನ್‌ನಗರದ ಶೇ.59 ಕಟ್ಟಡಗಳು ನಾಶವಾದವು.
ಎಪ್ರಿಲ್ ಅಂತ್ಯದ ವೇಳೆಗೆ ಫೆಲೆಸ್ತೀನಿಯನ್ ಪ್ರಾಂತ್ಯಗಳಲ್ಲಿನ ವಿಶ್ವಸಂಸ್ಥೆ ಗಣಿ ತೆರವು ಕಾರ್ಯಕ್ರಮದ ಮುಖ್ಯಸ್ಥ ಮುಂಗೋ ಬಿರ್ಚ್ ಗಮನಿಸಿರುವಂತೆ, ರಶ್ಯದಿಂದ ದಾಳಿಗೊಳಗಾದ ಉಕ್ರೇನ್‌ಗಿಂತಲೂ ಗಾಝಾದಲ್ಲಿ ಹೆಚ್ಚು ಕಲ್ಲುಮಣ್ಣುಗಳ ರಾಶಿ ಬಿದ್ದಿದೆ.
ಮೇ ತಿಂಗಳ ಆರಂಭದಲ್ಲಿ ವಿಶ್ವಸಂಸ್ಥೆ ಅಂದಾಜಿಸಿದ್ದ ಪ್ರಕಾರ, ಗಾಝಾದ ಯುದ್ಧಾನಂತರದ ಪುನರ್ನಿರ್ಮಾಣಕ್ಕೆ 30 ಶತಕೋಟಿ ಡಾಲರ್‌ಗಳಿಂದ 40 ಶತಕೋಟಿ ಡಾಲರ್‌ಗಳವರೆಗೂ ವೆಚ್ಚವಾಗಬಹುದು. 2024ರ ಸೆಪ್ಟಂಬರ್ 23ರಂತೆ, ಇಸ್ರೇಲ್ ಹಮಾಸ್ ಸಂಘರ್ಷದಲ್ಲಿ 43,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇವರಲ್ಲಿ ಫೆಲೆಸ್ತೀನಿಯನ್ನರು - 41,431, ಇಸ್ರೇಲಿಗಳು - 1,706
ಇವರಲ್ಲಿ 116ರಿಂದ 134 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಕೂಡ ಇದ್ದಾರೆ. ಹಾಗೆಯೇ UNRWA ದ 179 ಉದ್ಯೋಗಿಗಳೂ ಸೇರಿದಂತೆ 224ಕ್ಕೂ ಹೆಚ್ಚು ಮಾನವೀಯ ನೆರವು ಕಾರ್ಯಕರ್ತರು ಕೂಡ ಸಾವನ್ನಪ್ಪಿದ್ದಾರೆ.
ಈಗ ಇನ್ನೊಂದು ಮುಖ್ಯ ವಿಚಾರವನ್ನು ಗಮನಿಸಬೇಕು.
ವೈಜ್ಞಾನಿಕ ನಿಯತಕಾಲಿಕೆ ‘ದಿ ಲ್ಯಾನ್ಸೆಟ್’ ಗಾಝಾದಲ್ಲಿ ನಡೆದ ಸಾವು-ನೋವುಗಳ ಒಂದು ಅಧ್ಯಯನವನ್ನು ಈ ವರ್ಷದ ಆರಂಭದಲ್ಲಿಯೇ ಪ್ರಕಟಿಸಿದೆ.
ಅದರಲ್ಲಿ, ಕಳೆದ ವರ್ಷ ಅಕ್ಟೋಬರ್ 7ರಿಂದ ಆಕ್ರಮಣ ಶುರುವಾದ ಬಳಿಕ ಗಾಝಾದಲ್ಲಿ 1,86,000ಕ್ಕಿಂತಲೂ ಅಧಿಕ ಜನರು ಪ್ರಾಣ ಕಳೆದುಕೊಂಡಿರುವುದಾಗಿ ಹೇಳಲಾಗಿದೆ. ದಿ ಲ್ಯಾನ್ಸೆಟ್ ಅದನ್ನು ಪ್ರಕಟಿಸಿದ ಹೊತ್ತಲ್ಲಿ ಗಾಝಾದಲ್ಲಿ ಸಾವಿಗೀಡಾದವರ ಕುರಿತ ಅಧಿಕೃತ ಅಂಕಿಅಂಶಗಳು 38,000 ಎಂದು ಸೂಚಿಸುತ್ತಿದ್ದವು.
ಗಾಝಾದಲ್ಲಿ ಮರಣ ಹೊಂದಿದವರ ಸಂಖ್ಯೆ 1,86,000ಕ್ಕಿಂತಲೂ ಅಧಿಕ ಎಂದು ಆಗಲೇ ಅದು ಲೆಕ್ಕ ಹಾಕಿರುವುದರ ಹಿಂದಿನ ತರ್ಕವೇನು?
ಗಾಝಾ ನೆಲದಲ್ಲಿ ಇಸ್ರೇಲ್ ಆಕ್ರಮಣ ತಂದಿಟ್ಟಿರುವ ಭೀಕರತೆ ಮತ್ತು ಆನಂತರದ ಪರಿಣಾಮಗಳಿಗೆ ನಿಜವಾಗಿಯೂ ಬಲಿಯಾಗಿರುವವರು ಎಷ್ಟು? ಅಧಿಕೃತವಾಗಿ ಪ್ರಕಟಿಸಲಾಗಿರುವ ಅಂಕಿಅಂಶಗಳನ್ನೂ ಮೀರಿದ ಬೇರೆಯದೇ ಸತ್ಯವೊಂದಿದೆಯೇ? ಲೆಕ್ಕಕ್ಕೇ ಸಿಗದೆ ಹೋಗಿರುವ ಜೀವಗಳ ಬಗ್ಗೆಯೂ ಕಳವಳಿಸಬೇಕಾಗಿದೆ ಎಂಬುದನ್ನು ಅದು ಸೂಚಿಸುತ್ತದೆ.
ಪ್ರಪಂಚದಲ್ಲಿ ಬಹುತೇಕ ಎಲ್ಲದರ ಪರಿಹಾರವನ್ನೂ ಕೊಡಬಹುದು; ಆದರೆ, ಒಬ್ಬನ ಸಾವಿನ ಬದಲಿಗೆ ಪರಿಹಾರ ಒದಗಿಸಲು ಸಾಧ್ಯವೇ ಇಲ್ಲ.
ಕೇವಲ ಎಣಿಸುವುದರಿಂದ ಸಾವನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಅಂದಹಾಗೆ, ಅತ್ಯಂತ ಕಹಿಸತ್ಯವೆಂದರೆ ಈ ಲೋಕಕ್ಕೆ ವಿದಾಯ ಘೋಷಿಸಿದ ಬಳಿಕ ಯಾವುದೇ ಜೀವ ಎಣಿಕೆಗೆ ಸಿಗುವ ಅಥವಾ ಸಿಗದೆಯೂ ಹೋಗಬಹುದಾದ ಇನ್ನೊಂದು ಸಂಖ್ಯೆ ಮಾತ್ರ.
ಹಾಗಾಗಿ, ಸಾವಿಗೆ ಸಂಬಂಧಿಸಿದ ಅಂಕಿ-ಅಂಶಗಳು ಬಂದರೆ ಅವುಗಳನ್ನು ಅತಿ ನಿರ್ಲಿಪ್ತತೆಯಿಂದ ಕಾಣಲು ಸಾಧ್ಯವಿಲ್ಲ. ಅಲ್ಲಿ, ಇಲ್ಲವಾದ ಜೀವವೊಂದರ ಭಾವನೆಗಳನ್ನು ಕಾಣಲು ಯತ್ನಿಸಬೇಕಾಗುತ್ತದೆ.
‘ದಿ ಲ್ಯಾನ್ಸೆಟ್’ ಪ್ರಕಾರ, ಗಾಝಾದಲ್ಲಿ ಸಂಭವಿಸಿದ ಸಾವು-ನೋವುಗಳ ಅಂಕಿಅಂಶಗಳನ್ನು ಒಟ್ಟುಗೂಡಿಸುವುದು ಕಷ್ಟಕರ.
ಕೇವಲ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಮತ್ತು ಮಾಧ್ಯಮಗಳಲ್ಲಿ ಹೇಳಲಾಗುತ್ತಿರುವ ಅಂಕಿಅಂಶಗಳನ್ನು ಮಾತ್ರ ಪರಿಗಣಿಸಿದರೆ ಸಾಲದು. ಹಾಗಾಗಿ, ಗಾಝಾದಲ್ಲಿ ತೀರಿಹೋದವರ ಲೆಕ್ಕವೇ ಕಷ್ಟದ್ದಾಗಿದೆ. ಧ್ವಂಸಗೊಂಡಿರುವ ಕಟ್ಟಡಗಳ
ಅವಶೇಷಗಳಡಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ಯಾರೂ ಪರಿಗಣಿಸಿಯೇ ಇಲ್ಲ.
ಗಾಝಾದ ಜನಸಾಮಾನ್ಯರು ಕೇವಲ ಶಸ್ತ್ರಸಜ್ಜಿತ ಯೋಧರೊಂದಿಗೆ ಯುದ್ಧ ಮಾಡುತ್ತಿಲ್ಲ; ಶಾಲೆಗಳು, ಮನೆಗಳಲ್ಲಿ ಇರುವವರೂ ಇಸ್ರೇಲ್ ಬಾಂಬ್ ದಾಳಿಗೆ ತುತ್ತಾಗುತ್ತಿದ್ಧಾರೆ ಎಂಬುದಷ್ಟೇ ಲೆಕ್ಕಕ್ಕೆ ಸಿಗುವ ಸಾವುಗಳಲ್ಲ.
ಹೀಗೆ ನೇರ ಹಿಂಸಾಚಾರದಿಂದ ಸಾಯುತ್ತಿರುವವರು ಒಂದೆಡೆಯಾದರೆ, ಆಕ್ರಮಣದ ಬಳಿಕವೂ ಹಸಿವು, ಸಾಂಕ್ರಾಮಿಕ ರೋಗಗಳು ಹೀಗೆ ಪರೋಕ್ಷ ಹಿಂಸಾಚಾರಕ್ಕೂ ಜನರು ಬಲಿಯಾಗುತ್ತಲೇ ಇದ್ದಾರೆ.
‘ದಿ ಲ್ಯಾನ್ಸೆಟ್’ ವರದಿ ಪ್ರಕಟವಾದ ಹೊತ್ತಿನಲ್ಲಿ ಗಾಝಾದಲ್ಲಿ ಆಸ್ಪತ್ರೆಯ ಸೌಲಭ್ಯವೇ ಇಲ್ಲವಾಗಿ, ಸುರಕ್ಷಿತ ಪ್ರದೇಶಕ್ಕೆ ಹೋಗುವವರು ದಾರಿಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದರು.
ವಿಶ್ವಸಂಸ್ಥೆಯ ಮಾನವೀಯ ನೆರವನ್ನು ಒದಗಿಸುವ ಸಂಘ-ಸಂಸ್ಥೆಗಳಲ್ಲಿ ಕೇವಲ ಒಂದು ಸಂಸ್ಥೆ ಗಾಝಾದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಅದನ್ನೂ ಇಸ್ರೇಲ್ ಸಹಿಸುತ್ತಿರಲಿಲ್ಲ. ಆ ಸಂಸ್ಥೆಗೆ ಸಿಗುತ್ತಿರುವ ಧನಸಹಾಯವನ್ನೇ ತಡೆಯಲಾಗಿತ್ತು.
ಯುದ್ಧದಲ್ಲಿ ಆಗುತ್ತಿರುವ ನೇರ ಹಿಂಸಾಚಾರಕ್ಕಿಂತಲೂ ಹದಿನೈದು ಪಟ್ಟು ಹೆಚ್ಚು ಸಾವುಗಳು ಪರೋಕ್ಷ ಹಿಂಸಾಚಾರದಿಂದ ಸಂಭವಿಸಿವೆ.
ಹಾಗಾಗಿ, ನೇರ ಯುದ್ಧದಲ್ಲಿ ಸತ್ತವರಲ್ಲದೆ, ಪರೋಕ್ಷ ಹಿಂಸಾಚಾರದಲ್ಲಿ ಜೀವ ಕಳೆದುಕೊಂಡವರೂ ಸೇರಿ, ಬಲಿಯಾದವರ ಸಂಖ್ಯೆ, 1,86,000ಕ್ಕಿಂತಲೂ ಅಧಿಕ ಎಂದು ಆ ವರದಿ ಹೇಳಿತ್ತು.
ತಮ್ಮ ಅಧ್ಯಕ್ಷರಿಗೆ ಪತ್ರ ಬರೆದಿರುವ, ಗಾಝಾದಲ್ಲಿ ಕೆಲಸ ಮಾಡುತ್ತಿರುವ, ಅಲ್ಲಿನ ಎಲ್ಲ ಸತ್ಯಗಳನ್ನು ಕಂಡಿರುವ ಅಮೆರಿಕದ ವೈದ್ಯರ ತಂಡ ಕೂಡ ಈ ಸತ್ಯವನ್ನು ಒಪ್ಪಿಕೊಂಡಿರುವ ಹಾಗಿದೆ.
‘ದಿ ಲಾನ್ಸೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯನ್ನು ಆ ವೈದ್ಯರು ಪತ್ರದಲ್ಲಿ ಉಲ್ಲೇಖಿಸಿದ್ದು, ಗಾಝಾದಲ್ಲಿ ಸಾವಿನ ಸಂಖ್ಯೆ ಈಗಾಗಲೇ 1,18,000 ಮೀರಿದೆ, ಇದು ಗಾಝಾದ ಜನಸಂಖ್ಯೆಯ ಶೇ.5ಕ್ಕಿಂತ ಹೆಚ್ಚು ಎಂದು ವಿವರಿಸಿದ್ದಾರೆ.
ಗಾಝಾ ನೆಲದಲ್ಲಿನ ಕಟು ವಾಸ್ತವವನ್ನು ಕಂಡ ಆ ವೈದ್ಯರುಗಳಿಗೂ, ಅಧಿಕೃತ ಅಂಕಿಅಂಶಗಳಿಗಿಂತ ಈ ಲೆಕ್ಕಾಚಾರವೇ ಸರಿ ಮತ್ತು ಮಾನವೀಯ ಎನ್ನಿಸಿದಂತಿದೆ.
ಕಳೆದ ವರ್ಷ, ಫೆಲೆಸ್ತೀನ್ ಮೇಲೆ ಆಕ್ರಮಣ ಪ್ರಾರಂಭಿಸಲು ಬೆಂಜಮಿನ್ ನೆತನ್ಯಾಹು ಮುಖ್ಯವಾಗಿ ಎರಡು ಕಾರಣಗಳನ್ನು ಹೇಳಿದ್ದರು. ಒಂದು, ಅದು ತಮ್ಮ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದು; ಇನ್ನೊಂದು, ಹಮಾಸ್ ಅನ್ನು ಸಮಗ್ರವಾಗಿ ನಾಶಗೊಳಿಸುವುದು.
ಆದರೆ, ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.
ಮೊದಮೊದಲು, ಇಸ್ರೇಲ್ ತಾನು ಉತ್ತರ ಮತ್ತು ಮಧ್ಯ ಗಾಝಾವನ್ನು ವಶಪಡಿಸಿಕೊಂಡಿರುವುದಾಗಿ ಕೊಚ್ಚಿಕೊಂಡಿತ್ತು.
ಆದರೆ, ಹಮಾಸ್ ದಾಳಿಯೂ ಮುಂದುವರಿದಿತ್ತು.
ಪ್ರತೀ ದೇಶಕ್ಕೆ ತನ್ನ ಸುರಕ್ಷತೆಯ ಕುರಿತು ಚಿಂತಿಸುವ ಅಧಿಕಾರವಿದೆ. ಆದರೆ, ಆ ಅಧಿಕಾರದ ಹೆಸರಲ್ಲಿ ಇಂತಹ ಘೋರ ಆಕ್ರಮಣಕ್ಕೆ ಏನು ಹೇಳೋದು ?
ಇಸ್ರೇಲ್ ತನ್ನ ಆತ್ಮರಕ್ಷಣೆಯ ನೆಪದಲ್ಲಿ ಗಾಝಾದಲ್ಲಿ ಆಕ್ರಮಣವನ್ನಷ್ಟೇ ನಡೆಸಲಿಲ್ಲ; ಬದಲಿಗೆ, ಅದು ಯುದ್ಧಾಪರಾಧ
ವಾಗಿದೆ.
ಈಗ ಲೆಬನಾನ್ ಮೇಲಿನ ಯುದ್ಧದಲ್ಲೂ ಇಸ್ರೇಲ್ ಅದನ್ನೇ ಮುಂದುವರಿಸಿದೆ.