ಬಿಜೆಪಿಯೇತರ ಸರಕಾರಗಳಿರುವ ರಾಜ್ಯದಲ್ಲಿ ರಾಜ್ಯಪಾಲರ ‘ರಾಜಕೀಯ’?
Photo: PTI/twitter
ರಾಜ್ಯಪಾಲರು ಹಾಗೂ ರಾಜ್ಯ ಸರಕಾರಗಳ ನಡುವೆ ಸಂಘರ್ಷ ಮತ್ತೊಮ್ಮೆ ಸುದ್ದಿಯಲ್ಲಿದೆ. ದಕ್ಷಿಣದ ಮೂರು ರಾಜ್ಯಗಳಾದ ಕೇರಳ, ತಮಿಳುನಾಡು, ತೆಲಂಗಾಣಗಳಲ್ಲದೆ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ಗಳಲ್ಲಿಯೂ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದೆ. ತಮಿಳುನಾಡು, ಕೇರಳ ಮತ್ತು ಪಂಜಾಬ್ ಸರಕಾರಗಳು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ನೀವು ಬೆಂಕಿ ಜೊತೆ ಆಟವಾಡುತ್ತಿದ್ದೀರಿ ಎಂದು ಇಬ್ಬರು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯಪಾಲರು ಮತ್ತು ರಾಜ್ಯ ಸರಕಾರಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುವುದು ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಸರಕಾರದ ಸೂತ್ರಕ್ಕೆ ತಕ್ಕಂತೆ ರಾಜ್ಯಪಾಲರು ಆಡುವುದರಿಂದ. ಜನರಿಂದ ಚುನಾಯಿತವಾದ ರಾಜ್ಯ ಸರಕಾರಗಳ ಮೇಲೆ, ಕೇಂದ್ರ ಸರಕಾರದಿಂದ ನೇಮಕಗೊಳ್ಳುವ ರಾಜ್ಯಪಾಲರು ಅಧಿಕಾರ ಪ್ರದರ್ಶನ ಮಾಡುವಂತೆ ಇಲ್ಲವೇ ಕಿರಿಕಿರಿಯನ್ನು ಉಂಟುಮಾಡುವ ರೀತಿಯಲ್ಲಿ ವರ್ತಿಸುವುದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಮುಖ್ಯವಾಗಿ ಸರಕಾರ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕದೆ, ಸಮಯದ ಲೆಕ್ಕವಿಲ್ಲದೆ ತಮ್ಮ ಬಳಿ ಇರಿಸಿಕೊಳ್ಳುವ, ಸರಕಾರದ ತೀರ್ಮಾನಗಳಿಗೆ ಅಡ್ಡಗಾಲು ಹಾಕುವ ರಾಜ್ಯಪಾಲರ ನಡೆ ಪದೇ ಪದೇ ವಿವಾದಕ್ಕೆ ಎಡೆ ಮಾಡಿಕೊಡುತ್ತಲೇ ಇದೆ.
ಈಗಲೂ ಕೇರಳ, ತಮಿಳುನಾಡು ಮತ್ತು ಪಂಜಾಬ್ ಸರಕಾರಗಳು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಹಿಂದೆಯೂ ತೆಲಂಗಾಣ ಸೇರಿದಂತೆ ಹಲವು ಸರಕಾರಗಳು ರಾಜ್ಯಪಾಲರ ನಡೆಯ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿರುವುದಿದೆ. ಈಗ ಅಂಥ ರಾಜ್ಯ ಸರಕಾರಗಳು ರಾಜ್ಯಪಾಲರ ವಿರುದ್ಧ ಏಕಸ್ವರದಲ್ಲಿ ಮಾತನಾಡುವ ಹಂತವೂ ಕಾಣಿಸತೊಡಗಿದೆ ಎಂಬುದು ನಿಜ.
ವಿಧಾನಸಭೆಗಳಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಕುರಿತಂತೆ ತಮಿಳುನಾಡು ಮತ್ತು ಪಂಜಾಬ್ ಎರಡೂ ರಾಜ್ಯಗಳ ರಾಜ್ಯಪಾಲರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಚುನಾಯಿತ ವಿಧಾನಸಭೆಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ತಡ ಮಾಡದಂತೆ ಇಬ್ಬರೂ ರಾಜ್ಯಪಾಲರಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮನವಿ ಮಾಡಿದ್ದಾರೆ. ಚುನಾಯಿತ ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ದಿಕ್ಕನ್ನು ದಯವಿಟ್ಟು ಬದಲಿಸಬೇಡಿ. ಇದು ಬಹಳ ಗಂಭೀರ ಕಳವಳದ ಸಂಗತಿ ಎಂದು ಸಿಜೆಐ ಹೇಳಿದ್ದಾರೆ. ನೀವು ಬೆಂಕಿ ಜತೆ ಆಟವಾಡುತ್ತಿದ್ದೀರಿ. ರಾಜ್ಯಪಾಲರು ಹೀಗೆ ಹೇಳಲು ಹೇಗೆ ಸಾಧ್ಯ? ಪಂಜಾಬ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಮಗೆ ಸಂತಸ ತಂದಿಲ್ಲ. ನಾವು ಸಂಸದೀಯ ಪ್ರಜಾಪ್ರಭುತ್ವವಾಗಿ ಮುಂದುವರಿಯುತ್ತೇವೆಯೇ? ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಸ್ಥಾಪಿತ ಸಂಪ್ರದಾಯಗಳು ಮತ್ತು ಪದ್ಧತಿಗಳ ಮೇಲೆ ಭಾರತ ನಡೆಯುತ್ತಿದೆ. ಅವುಗಳನ್ನು ನಾವು ಪಾಲಿಸುವ ಅಗತ್ಯವಿದೆ ಎಂದು ಹೇಳಿದೆ.
► ರಾಜ್ಯಪಾಲರ ವಿರುದ್ಧ ಸರಕಾರಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದೇಕೆ?:
ಸರಕಾರ ಅಂಗೀಕರಿಸಿದ ಮಸೂದೆಗಳನ್ನು ಪರಿಗಣಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ತಮಿಳುನಾಡು, ಕೇರಳ ಮತ್ತು ಪಂಜಾಬ್ ಸರಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಮಸೂದೆ ಹಿಂದಿರುಗಿಸಲು ಅಥವಾ ಒಪ್ಪಿಗೆ ನೀಡಲು ಕಾಲಮಿತಿ ನಿಗದಿ ಮಾಡಬೇಕೆಂಬುದು ಅವುಗಳ ಮನವಿಯಾಗಿತ್ತು. ನಿರ್ಣಾಯಕ ಮಸೂದೆಗಳನ್ನು ಕಾನೂನಾಗಿ ಅಂಗೀಕರಿಸುವುದನ್ನು ವಿನಾಕಾರಣ ವಿಳಂಬಗೊಳಿಸಲು ರಾಜ್ಯಪಾಲರು ಅಸ್ತಿತ್ವದಲ್ಲಿಲ್ಲದ ವಿವೇಚನೆಯನ್ನು ಬಳಸುತ್ತಿದ್ದಾರೆ ಎಂಬುದು ಬಿಜೆಪಿಯೇತರ ಸರಕಾರವಿರುವ ಈ ರಾಜ್ಯಗಳ ಆರೋಪ.
► ತಮಿಳುನಾಡು: ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವೆ ನಿರಂತರ ಸಂಘರ್ಷ ನಡೆದೇ ಇದೆ.
12 ಮಸೂದೆಗಳನ್ನು ರಾಜ್ಯಪಾಲರು ವಿಲೇವಾರಿ ಮಾಡದೆ ಉಳಿಸಿಕೊಂಡಿದ್ದಾರೆ. ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗ ಸರಕಾರ ಸಿದ್ಧಪಡಿಸಿದ ಭಾಷಣ ಬಿಟ್ಟು ರವಿ ತಮ್ಮದೇ ಭಾಷಣ ಓದಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಪಾಲರ ನಡೆಯನ್ನು ಜನಾದೇಶದೊಂದಿಗಿನ ಆಟವೆಂದೂ, ಅವರು ತಮ್ಮನ್ನು ತಾವು ರಾಜಕೀಯ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಂಡಿದ್ಧಾರೆ ಎಂದೂ ತಮಿಳುನಾಡು ಸರಕಾರ ಹೇಳಿದೆ.
► ಕೇರಳ: ಕೇರಳ ಸರಕಾರದ ವಿವಿ ನಿಯಮಗಳ ತಿದ್ದುಪಡಿ ಮಸೂದೆ, ಕೇರಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಮತ್ತು ಕೇರಳ ಲೋಕಾಯುಕ್ತ ಮಸೂದೆಗಳನ್ನು ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅಂಕಿತ ಹಾಕದೆ ಮೂರು ವರ್ಷಗಳಿಂದ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಐದು ಮಸೂದೆಗಳಿಗೂ ಅಂಕಿತ ಹಾಕದೆ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಉಳಿಸಿಕೊಂಡಿದ್ದಾರೆ. ಇದು ಆರೀಫ್ ಮತ್ತು ಕೇರಳ ಸರಕಾರದ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ರಾಜ್ಯಪಾಲರ ನಡೆಯ ವಿರುದ್ಧ ಕೇರಳ ಸರಕಾರ ವಿಧಾನಸಭೆಯಲ್ಲಿ ನಿರ್ಣಯವನ್ನೂ ಮಂಡಿಸಿದೆ. ರಾಜ್ಯಪಾಲರ ಹುದ್ದೆ ಇರುವುದು ಸರಕಾರದ ವಿರುದ್ಧ ತೀರ್ಮಾನ ಕೈಗೊಳ್ಳುವುದಕ್ಕಲ್ಲ. ದೇಶದ ಸಾಂವಿಧಾನಿಕ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ರಾಜ್ಯಪಾಲರು ಮಾಡಬೇಕು, ಆದರೆ ನಮ್ಮ ರಾಜ್ಯದ ರಾಜ್ಯಪಾಲರು ಆರೆಸ್ಸೆಸ್ನ ಆಯುಧದಂತೆ ವರ್ತಿಸುತ್ತಿದ್ದಾರೆ ಎಂದು ಆರೀಫ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2023ರ ನವೆಂಬರ್ 8ರಂದು ಕೇರಳ ಸರಕಾರವು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಎರಡನೇ ಬಾರಿಗೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತು. ನಿರ್ಣಾಯಕ ಮಸೂದೆಗಳನ್ನು ಅನಿರ್ದಿಷ್ಟ ಕಾಲ ತಮ್ಮ ಬಳಿಯೇ ಉಳಿಸಿಕೊಳ್ಳುವುದು ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕೇರಳ ಸರಕಾರ ವಾದಿಸಿದೆ. ದೀರ್ಘ ಮತ್ತು ಅನಿರ್ದಿಷ್ಟಾವಧಿಯವರೆಗೆ ಮಸೂದೆಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ರಾಜ್ಯಪಾಲರ ನಡವಳಿಕೆಯು ಸ್ಪಷ್ಟವಾಗಿ ನಿರಂಕುಶವಾದುದಾಗಿದೆ. ಈ ನಡೆ ಶಾಸಕಾಂಗ ಅಂಗೀಕರಿಸಿದ ಕಲ್ಯಾಣ ಯೋಜನೆಗಳ ನಿರಾಕರಣೆಯಾಗುತ್ತದೆ ಎಂದು ಕೇರಳ ಸರಕಾರ ಹೇಳಿದೆ.
► ಪಂಜಾಬ್: ಎಎಪಿ ಸರಕಾರವಿರುವ ಪಂಜಾಬ್ನಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಜೂನ್ನಿಂದಲೂ ಏಳು ಮಸೂದೆಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಸರಕಾರ ದೂರಿದೆ. ರಾಜ್ಯಪಾಲರ ಈ ನಡೆ ಆಡಳಿತ ಸ್ಥಗಿತಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ.
► ತೆಲಂಗಾಣ: ತೆಲಂಗಾಣದಲ್ಲಿ ರಾಜ್ಯಪಾಲರು ಸೆಪ್ಟಂಬರ್ 2022ರಿಂದ ಬಾಕಿ ಉಳಿಸಿಕೊಂಡಿದ್ದ ಮಸೂದೆಗಳನ್ನು ವಿಲೇವಾರಿ ಮಾಡಲು ಸುಪ್ರೀಂ ಕೋರ್ಟ್ ಎಪ್ರಿಲ್ನಲ್ಲಿ ಮಧ್ಯಪ್ರವೇಶಿಸಬೇಕಾಯಿತು. ತೆಲಂಗಾಣ ರಾಜ್ಯಪಾಲೆ ತಮಿಳ್ಇಸೈ ಸೌಂದರ್ರಾಜನ್ ವಿರುದ್ಧ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್ ಹಾಗೂ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಗಳು ಹರಿಹಾಯ್ದಿವೆ. ರಾಜ್ಯ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ತಮ್ಮ ಮೂಗು ತೂರಿಸುತ್ತಿದ್ದಾರೆ ಎಂದು ತಮಿಳ್ಇಸೈ ವಿರುದ್ಧ ಡಿಎಂಕೆ ಕಿಡಿಕಾರಿದೆ. ತಮಿಳುನಾಡಿನ ಪ್ರಮುಖ ರಾಜಕೀಯ ಕುಟುಂಬ ಡಿಎಂಕೆ ತೆಲುಗು ಬೇರು ಹೊಂದಿದೆ ಎಂದು ತಮಿಳ್ಇಸೈ ನೀಡಿದ್ದ ಹೇಳಿಕೆಗೆ ಡಿಎಂಕೆ ಮುಖವಾಣಿ ‘ಮುರಸೋಳಿ’ ತಿರುಗೇಟು ನೀಡಿದೆ. ತೆಲಂಗಾಣ ರಾಜ್ಯಪಾಲರು ತಮಿಳುನಾಡಿನಲ್ಲಿ ರಾಜಕಾರಣ ಮಾಡಬಾರದು. ಇದು ಅವರ ಕೆಲಸವಲ್ಲ. ಬೇಕಿದ್ದರೆ ಅವರು ರಾಜೀನಾಮೆ ನೀಡಲಿ ಮತ್ತು ತಮಿಳುನಾಡಿನಲ್ಲಿ ರಾಜಕಾರಣ ಮಾಡಲಿ ಎಂದು ಮುರಸೋಳಿ ಹೇಳಿದೆ. ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ಗಳಲ್ಲಿಯೂ ರಾಜ್ಯ ಸರಕಾರಗಳು ಮತ್ತು ರಾಜ್ಯಪಾಲರ ನಡುವೆ ಸಂಘರ್ಷಗಳಿವೆ.
ಪಶ್ಚಿಮ ಬಂಗಾಳ: ಇಲ್ಲಿನ ಟಿಎಂಸಿ ಸರಕಾರ ಹಾಗೂ ಈ ಮೊದಲು ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್ ನಡುವಿನ ಸಂಘರ್ಷ ತೀವ್ರ ಮಟ್ಟದ್ದಾಗಿತ್ತು. ಈಗ ರಾಜ್ಯಪಾಲರಾಗಿರುವ ಸಿ.ವಿ.ಆನಂದ್ ಬೋಸ್ ಕೂಡ ಸರಕಾರದ ವಿರುದ್ಧ ಸಂಘರ್ಷದಲ್ಲಿ ತೊಡಗಿದ್ದಾರೆ. ಕುಲಪತಿಗಳ ನೇಮಕದ ಅಧಿಕಾರವನ್ನು ಸರಕಾರಕ್ಕೆ ನೀಡುವ ಮಸೂದೆ ಸೇರಿದಂತೆ ಹಲವು ಮಸೂದೆಗಳಿಗೆ ಆನಂದ್ ಬೋಸ್ ಅಂಕಿತ ಹಾಕಿಲ್ಲ.
► ಜಾರ್ಖಂಡ್: ಜೆಎಂಎಂ ನೇತೃತ್ವದ ಮೈತ್ರಿ ಸರಕಾರವಿರುವ ಜಾರ್ಖಂಡ್ನಲ್ಲಿ ಕೂಡ ಈ ಮೊದಲು ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಸುಮಾರು 20 ಮಸೂದೆಗಳಿಗೆ ಅಂಕಿತ ಹಾಕಿರಲಿಲ್ಲ. ಈಗ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್ ಕೂಡ ಅಂಥದೇ ನಡೆ ಅನುಸರಿಸುತ್ತಿದ್ದಾರೆ.
► ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕುವ ಪ್ರಕ್ರಿಯೆ
ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಬರುವ ವಿಚಾರ ಇದು. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಿ ಅಂಗೀಕಾರಗೊಂಡ ಮಸೂದೆ ತಮ್ಮ ಬಳಿ ಬಂದಾಗ ಅಂಕಿತ ಹಾಕುವುದು ರಾಜ್ಯಪಾಲರ ಕರ್ತವ್ಯ.
ಇದರ ಹೊರತಾಗಿ, ಅದು ಹಣಕಾಸು ಮಸೂದೆಯಲ್ಲದಿದ್ದರೆ ಒಪ್ಪಿಗೆಯನ್ನು ತಡೆಹಿಡಿಯಬಹುದು. ಮಸೂದೆ ಹೈಕೋರ್ಟ್ನ ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಅವಹೇಳನ ಮಾಡುತ್ತದೆ ಅಥವಾ ಅಪಾಯಕ್ಕೆ ಸಿಲುಕಿಸುತ್ತದೆ ಎನ್ನಿಸಿದಲ್ಲಿ ಅದನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬಹುದು. ರಾಜ್ಯಪಾಲರು ಸಮ್ಮತಿಯನ್ನು ತಡೆಹಿಡಿಯುವುದಾದಲ್ಲಿ, ಮಸೂದೆಯ ನಿರ್ದಿಷ್ಟ ನಿಬಂಧನೆಗಳನ್ನು ಮರುಪರಿಶೀಲಿಸುವಂತೆ ಅಥವಾ ತಿದ್ದುಪಡಿಗೆ ಸೂಚಿಸಿ ಸಾಧ್ಯವಾದಷ್ಟು ಬೇಗ ಶಾಸನ ಸಭೆಗೆ ಹಿಂದಿರುಗಿಸಬೇಕು. ವಿಧಾನಸಭೆಯು ಮಸೂದೆಯನ್ನು ಮರುಪರಿಶೀಲಿಸಿ ಅಂಗೀಕರಿಸಿ ಪುನಃ ರಾಜ್ಯಪಾಲರ ಬಳಿ ಕಳಿಸಿದಾಗ ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿಯಬಾರದು. ಸರಳವಾಗಿ ಹೇಳಬೇಕೆಂದರೆ, ರಾಜ್ಯಪಾಲರು ಜನರು ಚುನಾಯಿಸಿದ ಸರಕಾರದ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತದೆ.
ಗವರ್ನರ್ ಸ್ವಂತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಸಚಿವಾಲಯದ ಸಲಹೆಯ ಮೇರೆಗೆ ಮಾತ್ರ ಕಾರ್ಯನಿರ್ವಹಿಸಬಹುದು ಎಂಬ ಅಭಿಪ್ರಾಯಗಳು ಈಗಾಗಲೇ ಇವೆ. ರಾಜ್ಯದ ಔಪಚಾರಿಕ ಮುಖ್ಯಸ್ಥರಾಗಿ ರಾಜ್ಯಪಾಲರು ತಮ್ಮ ಎಲ್ಲಾ ಅಧಿಕಾರಗಳು ಮತ್ತು ಕಾರ್ಯಗಳನ್ನು ಸಂವಿಧಾನದ ಮೂಲಕ ಅಥವಾ ಅವರ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ನಿರ್ವಹಿಸುತ್ತಾರೆ. ರಾಜ್ಯಪಾಲರು ತಮ್ಮ ವಿವೇಚನೆಗೆ ಅನುಗುಣವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಂವಿಧಾನದಲ್ಲಿ ಅವಕಾಶವಿದೆ. ಮಸೂದೆಗೆ ಅಂಕಿತ ಹಾಕುವುದು ಅಥವಾ ಅಂಕಿತ ಹಾಕದೆ ಮರಳಿಸುವುದು ರಾಜ್ಯಪಾಲರ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳ ವೈಯಕ್ತಿಕ ವಿವೇಚನೆಗೆ ಒಳಪಡುವುದಿಲ್ಲ.
200ನೇ ವಿಧಿಯಲ್ಲಿ ಹೇಳಲಾಗಿರುವ ಸಾಧ್ಯವಾದಷ್ಟು ಬೇಗ ಎಂಬುದರ ಅರ್ಥದ ಬಗ್ಗೆ ಸಂವಿಧಾನ ವಿವರಿಸುವುದಿಲ್ಲ. ಆದರೆ ಇದನ್ನು ಸುಪ್ರೀಂ ಕೋರ್ಟ್ ಅರ್ಥೈಸಿರುವ ಪ್ರಕಾರ, ಸೂಕ್ತ ಸಮಯ ಎಂದರೆ ಮೂರು ತಿಂಗಳು. ರಾಜ್ಯಪಾಲರು ಇಂತಿಷ್ಟೇ ಸಮಯದೊಳಗೆ ಮಸೂದೆಗಳನ್ನು ವಿಲೇವಾರಿ ಮಾಡಬೇಕು ಎಂದು ಸಂವಿಧಾನವು ಕಾಲಮಿತಿ ನಿಗದಿ ಮಾಡದೇ ಇರುವುದರಿಂದ, ಕಾಲಮಿತಿ ನಿಗದಿ ಮಾಡುವಂತೆ ಈಗ ರಾಜ್ಯಗಳು ನ್ಯಾಯಾಲಯವನ್ನು ಒತ್ತಾಯಿಸಿವೆ.
► ಸುಪ್ರೀಂ ಕೋರ್ಟ್ ಹೇಳಿರುವುದೇನು?:
ಮೂರು ರಾಜ್ಯ ಸರಕಾರಗಳು ತಮ್ಮ ರಾಜ್ಯಪಾಲರ ವಿರುದ್ಧ ಮಸೂದೆಗಳನ್ನು ಬಾಕಿ ಇರಿಸಿದ್ದಕ್ಕಾಗಿ ದೂರಿರುವ ಹಿನ್ನೆಲೆಯಲ್ಲಿ, ಈ ವಿಷಯ ಇಲ್ಲಿಯವರೆಗೂ ಬರುವ ಮೊದಲು ರಾಜ್ಯಪಾಲರು ತಮ್ಮ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯಪಾಲರು ಮತ್ತು ಹಾಗೆಯೇ ಮುಖ್ಯಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ಕರೆ ನೀಡಿದೆ.
ರಾಜ್ಯಪಾಲರು ಹಾಗೂ ಸರಕಾರಗಳ ನಡುವೆ ಮತ್ತೆ ಮತ್ತೆ ಸಂಘರ್ಷ ತಲೆದೋರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಪೀಠ, ರಾಜ್ಯಪಾಲರು ತಾವು ಚುನಾಯಿತ ಪ್ರತಿನಿಧಿಯಲ್ಲ ಎಂಬುದನ್ನು ಮರೆಯಬಾರದು ಎಂದು ಖಡಕ್ಕಾಗಿಯೇ ಎಚ್ಚರಿಸಿದೆ. ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ಗೆ ಬರುವಂಥ ಸ್ಥಿತಿ ಏಕೆ ಬರುತ್ತದೆ? ಅದಕ್ಕೂ ಮೊದಲೇ ರಾಜ್ಯಪಾಲರು ತಮ್ಮ ಕೆಲಸ ಮಾಡಬೇಕು. ಸುಪ್ರೀಂ ಕೋರ್ಟ್ಗೆ ದೂರು ಬಂದ ಬಳಿಕವೇ ರಾಜ್ಯಪಾಲರು ಕೆಲಸ ಶುರು ಮಾಡುತ್ತಾರೆ. ಇದು ನಿಲ್ಲಬೇಕು ಎಂದು ಪೀಠ ಹೇಳಿದೆ.
ಪಂಜಾಬ್ನಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮಸೂದೆಗಳನ್ನು ತಮ್ಮ ಬಳಿಯೇ ಇರಿಸಿ ಕೊಂಡಿದ್ದರ ವಿರುದ್ಧ ಸರಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಮಾರನೇ ದಿನವೇ ಅವರು ತಮ್ಮ ಬಳಿ ಇದ್ದ ಎಲ್ಲ ಮಸೂದೆಗಳಿಗೆ ಸಹಿ ಮಾಡಿದ್ದರು. ಬಜೆಟ್ ಅಧಿವೇಶನ ಕರೆಯಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಯಾಕೆ ಬರಬೇಕು? ಇದು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಇತ್ಯರ್ಥಪಡಿಸಿಕೊಳ್ಳಬೇಕಿರುವ ವಿಚಾರ ಎಂದು ಪೀಠ ಹೇಳಿದೆ. ಬಜೆಟ್ ಅಧಿವೇಶನವನ್ನು ರಾಜ್ಯಪಾಲರು ಕರೆಯುತ್ತಿಲ್ಲ ಎಂದು ಫೆಬ್ರವರಿಯಲ್ಲಿ ಕೂಡ ಪಂಜಾಬ್ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಹಿಂದೆ ದಿಲ್ಲಿ, ಮಹಾರಾಷ್ಟ್ರಗಳಲ್ಲಿ ಇಂಥದೇ ಬೆಳವಣಿಗೆಗಳ ಸಂದರ್ಭಗಳಲ್ಲಿ, ರಾಜ್ಯಪಾಲರು ರಾಜಕೀಯ ಮಾಡಬಾರದು ಎಂಬಂಥ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಿದ್ದಿದೆ.
ರಾಜ್ಯಪಾಲರು ತಮ್ಮ ಒಂದು ಮಿತಿಯನ್ನು ದಾಟಿದಂತೆ ನಡೆದುಕೊಳ್ಳುವಲ್ಲಿ ಕೇಂದ್ರದಲ್ಲಿನ ಸರಕಾರಕ್ಕೆ ನಿಷ್ಠವಾಗಿರುವ ರೀತಿಯೇ ಕಾಣಿಸುವುದು, ರಾಜ್ಯ ಸರಕಾರಗಳ ವಿರುದ್ಧದ ಉದ್ದೇಶವನ್ನು ಕೇಂದ್ರ ಸರಕಾರ ಸಾಧಿಸಿಕೊಳ್ಳುವಂತಾಗಲು ರಾಜ್ಯಪಾಲರು ಸಾಧನವಾಗುವುದು ಈ ಸಂಘರ್ಷ ತಾರಕಕ್ಕೇರುವುದಕ್ಕೆ ಕಾರಣವಾಗುತ್ತಲೇ ಇರುತ್ತದೆ. ಈಗ ಹಲವು ರಾಜ್ಯಗಳು ಆಯಾ ರಾಜ್ಯಪಾಲರ ವಿರುದ್ಧ ಸಿಡಿದೇಳುತ್ತಿರುವುದರಿಂದ ಬೀರಬಹುದಾದ ಪರಿಣಾಮ ಏನಿರಬಹುದು ಎಂಬುದನ್ನು ಕಾದು ನೋಡಬೇಕಿದೆ.