ಕೆಐಎಡಿಬಿ ಭೂಮಿ ಸಮರ್ಪಕ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೆ?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ಕೆಐಎಡಿಬಿ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬುದು ಬಿಜೆಪಿ ಆರೋಪ. ಬೆಂಗಳೂರಿನ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಕೆಐಎಡಿಬಿಯ 5 ಎಕರೆ ಮಂಜೂರು ಮಾಡಲಾಗಿದೆ. ಇಲ್ಲಿ ನಿಯಮ ಉಲ್ಲಂಘನೆ ಹಾಗೂ ಅಧಿಕಾರದ ದುರುಪಯೋಗ ನಡೆದಿದೆ ಎಂದು ಅದು ತಕರಾರೆತ್ತಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರನ್ನೂ ನೀಡಿದ್ದಾರೆ. ಸಿಎ ನಿವೇಶನ ಪಡೆಯಲು ಕೆಲವು ನಿಯಮಗಳಿರುತ್ತವೆ. ಸಾಮಾಜಿಕ ಚಟುವಟಿಕೆ, ರಂಗಮಂದಿರ, ಆಸ್ಪತ್ರೆಗಳಿಗೆ ಜಮೀನು ನೀಡಲು ಅವಕಾಶ ಇದೆ. ಸಿಎ ನಿವೇಶನ ಮಂಜೂರು ಮಾಡುವಾಗ ಮೊದಲು ಜಾಹೀರಾತು ನೀಡಬೇಕು. ಆದರೆ ಇಲ್ಲಿ ನಿಯಮ ಪಾಲನೆ ಮಾಡಿಲ್ಲ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ಭೂಮಿ ಪಡೆಯಲಾಗಿದೆ ಎಂಬುದು ಖರ್ಗೆ ಕುಟುಂಬದ ವಿರುದ್ಧದ ಬಿಜೆಪಿ ಆರೋಪ. ಇದರೊಡನೆ, 12 ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳಲ್ಲಿ ಸಿಎ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದು, ಸರಕಾರಕ್ಕೆ ಸುಮಾರು 1,000 ಕೋಟಿ ನಷ್ಟವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಈ ಎಲ್ಲ ಆರೋಪಗಳಿಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಉತ್ತರ ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ದೂರು ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಹಳೆಯ ದೂರು. ಹಿಂದೆಯೂ ಉತ್ತರ ಕೊಟ್ಟಿದ್ದೇನೆ. ನಿವೇಶನ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ. ರಾಜ್ಯಪಾಲರು ನೋಟಿಸ್ ನೀಡಿದರೆ ಉತ್ತರಿಸುತ್ತೇನೆ ಎಂದಿದ್ಧಾರೆ.
ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿರುವ 5 ಎಕರೆ ಕೆಐಎಡಿಬಿ ಸಿಎ ನಿವೇಶನದ ಬಗ್ಗೆ ಮಾತನಾಡುತ್ತಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ 2006ರಲ್ಲಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ ಪಡೆದಿರುವ 2 ಎಕರೆಗೂ ಹೆಚ್ಚು ವಿಸ್ತೀರ್ಣದ ಕೆಐಎಡಿಬಿ ನಿವೇಶನದಲ್ಲಿ 18 ವರ್ಷಗಳಾದರೂ ನಿಯಮಾನುಸಾರ ಶೇ.51ರಷ್ಟು ಭೂಮಿ ಅಭಿವೃದ್ಧಿಪಡಿಸಿಲ್ಲ. ಈಗ ಕಾಟಾಚಾರಕ್ಕೆ ಕೇವಲ 5,000 ಚದರ ಅಡಿ ಶೆಡ್ ಕಟ್ಟಿ ಬಾಡಿಗೆಗೆ ಲಭ್ಯವಿದೆ ಎಂದು ಬೋರ್ಡ್ ಹಾಕಿದ್ದಾರೆ. ಅಭಿವೃದ್ಧಿಯನ್ನೇ ಮಾಡದೆ ಸೇಲ್ ಡೀಡ್‌ಗೂ ಅರ್ಜಿ ಹಾಕಿದ್ದಾರೆ ಎಂದು ಪಾಟೀಲ್ ಆರೋಪಿಸಿದ್ದಾರೆ. 6 ತಿಂಗಳಲ್ಲಿ ಅಭಿವೃದ್ಧಿ ಮಾಡದಿದ್ದರೆ ನಿಯಮಗಳ ಪ್ರಕಾರ ಅವರಿಗೆ ನೀಡಿರುವ ಜಮೀನನ್ನು ಸರಕಾರದ ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುರುಗೇಶ್ ನಿರಾಣಿ ವಿರುದ್ಧ ಪಾಟೀಲ್ ಮಾಡಿರುವ ಆರೋಪಗಳು ಹೀಗಿವೆ:
ಒಂದು, ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡಿದ್ದಾರೆ.
ಎರಡು, ಸರಕಾರ ಆಗ್ರೋಟೆಕ್ ಪಾರ್ಕ್‌ಗೆ ಮೀಸಲಿಟ್ಟಿದ್ದ ಜಾಗದಲ್ಲಿ ನಿವೇಶನ ಪಡೆದು ತೇಜಸ್ ಇಂಟರ್‌ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಆನಂತರ ಪುನಃ ಕೈಗಾರಿಕಾ ಸಚಿವರಾದಾಗ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡಿದ್ಧಾರೆ.
ಮೂರು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಅದಾಗಲೇ ಬೇರೆ ಸಂಸ್ಥೆಗೆ ಹಂಚಿಕೆಯಾಗಿದ್ದ 112 ಎಕರೆ ಜಮೀನನ್ನು ಏಕಾಏಕಿ ರದ್ದುಮಾಡಿ ತಮಗೆ ತಾವೇ ಹಂಚಿಕೊಂಡಿದ್ದಾರೆ.
ಸಚಿವರೇ ಭೂಮಿ ಪಡೆಯಲು ಅವಕಾಶವಿದೆಯೇ? ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದವರು, ನಾಯಕರಿಗೆ ಎಷ್ಟು ಕೆಐಎಡಿಬಿ ಭೂಮಿ ಹಂಚಿಕೆಯಾಗಿದೆ? ಅದೆಲ್ಲವೂ ಕಾನೂನಾತ್ಮಕವಾಗಿದೆಯೇ? ಷರತ್ತುಬದ್ಧವಾಗಿ ಅಭಿವೃದ್ಧಿ ಆಗಿದೆಯೇ ಎಂದು ಪರಿಶೀಲಿಸಿ, ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭೂಮಿ ವಾಪಸ್ ಪಡೆಯುವ ಬಗ್ಗೆ ಯೋಚಿಸಲಾಗುವುದು ಎಂದು ಪಾಟೀಲ್ ಹೇಳಿದ್ದಾರೆ.
ಆರೆಸ್ಸೆಸ್ ವಿಚಾರದಲ್ಲಿ ಪಾಟೀಲ್ ಆರೋಪ ಹೀಗಿದೆ:
ಚಾಣಕ್ಯ ವಿವಿ, ರಾಷ್ಟ್ರೋತ್ಥಾನ ಪರಿಷತ್ ಸೇರಿದಂತೆ ಆರೆಸ್ಸೆಸ್, ಸಂಘ ಪರಿವಾರದ ಸಂಸ್ಥೆಗಳಿಗೆ ನೀಡಿರುವ ಕೆಐಎಡಿಬಿ ಭೂಮಿಯನ್ನೂ ಪರಿಶೀಲಿಸಿ ಲೀಸ್ ಅವಧಿ ಮುಗಿದರೂ ನಿಯಮಾನುಸಾರ ಶೇ.51ರಷ್ಟು ಅಭಿವೃದ್ಧಿಪಡಿಸದ ಭೂಮಿ ವಾಪಸ್ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಪಾಟೀಲ್ ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ಆರೆಸ್ಸೆಸ್‌ಗೆ ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಪಾರ್ಕ್‌ನಲ್ಲಿ ಚಾಣಕ್ಯ ವಿವಿಗೆ 177 ಕೋಟಿ ಮೌಲ್ಯದ 116 ಎಕರೆ ಭೂಮಿಯನ್ನು ಕೇವಲ 50 ಕೋಟಿ ರೂ ಗಳಿಗೆ ನೀಡಲಾಗಿದೆ ಎಂದು ಪಾಟೀಲ್ ಆರೋಪಿಸಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ 127 ಕೋಟಿ ನಷ್ಟವಾಗಿದೆ. ಅವರಿಗೆ ನೀಡಿರುವ ಭೂಮಿಯ ಲೀಸ್ ಅವಧಿ 2025ರ ಜೂನ್‌ಗೆ ಮುಗಿಯಲಿದೆ.
ಅಷ್ಟರೊಳಗೆ ನಿಯಮಾನುಸಾರ ಶೇ.51ರಷ್ಟು ಭೂಮಿ ಅಭಿವೃದ್ಧಿಪಡಿಸದಿದ್ದರೆ ವಾಪಸ್ ಪಡೆಯಲಾಗುವುದು ಎಂದಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್‌ಗೂ ಇದೇ ಜಾಗದಲ್ಲಿ 2013ರಲ್ಲಿ ವಾಣಿಜ್ಯ ಸಂಕೀರ್ಣಕ್ಕೆಂದು 5 ಎಕರೆ ಭೂಮಿ ನೀಡಲಾಗಿದೆ. ಈವರೆಗೂ ಅಲ್ಲಿ ಏನೂ ಮಾಡಿಲ್ಲ. 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಅಷ್ಟರೊಳಗೆ ಅಭಿವೃದ್ಧಿಪಡಿಸದೆ ಇದ್ದರೆ ವಾಪಸ್ ಪಡೆಯುವ ಬಗ್ಗೆ ಯೋಚಿಸಲಾಗುವುದು ಎಂದಿದ್ದಾರೆ.
ಕೆಐಎಡಿಬಿ ಪ್ರಕರಣಗಳ ಸಮಗ್ರ ವರದಿ ಕೊಡುವಂತೆ ಕಳೆದ ವರ್ಷದ ಜೂನ್‌ನಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಅದಕ್ಕಾಗಿ ಜುಲೈ 17ರ ಗಡುವು ವಿಧಿಸಿದ್ದರು. ಆಗ ವರದಿಯಾಗಿದ್ದಂತೆ, ಅದಕ್ಕೂ ಹಿಂದಿನ 4-5 ವರ್ಷಗಳಲ್ಲಿ ಕೆಐಎಡಿಬಿ ನಿವೇಶನ ಹಂಚಿಕೆ ಸಂಬಂಧ ದಾಖಲಾಗಿದ್ದ ಮೊಕದ್ದಮೆಗಳು 1,748ರಷ್ಟಿದ್ದವು. ಅವುಗಳ ಪೈಕಿ 921 ಪ್ರಕರಣಗಳ ವಿಚಾರಣೆ ಆ ಹೊತ್ತಲ್ಲಿ ನಡೆಯುತ್ತಿತ್ತು. 762 ಪ್ರಕರಣಗಳಲ್ಲಿ ಆದೇಶ ಸರಕಾರದ ಪರ ಬಂದಿತ್ತು. ಆ ಸಂದರ್ಭದಲ್ಲಿ ಸರಕಾರದ ಬಳಿ 11 ಸಾವಿರ ಎಕರೆ ಭೂಮಿ ಇರುವುದಾಗಿ ಎಂ.ಬಿ. ಪಾಟೀಲ್ ಹೇಳಿದ್ದರು.
ಎಲ್ಲೆಂದರಲ್ಲಿ ಕೈಗಾರಿಕಾ ಪ್ರದೇಶಗಳನ್ನು ಮಾಡುವ ಬದಲು ಬೇಡಿಕೆ ಆಧರಿಸಿ ಮಾಡಬೇಕು ಎಂಬ ಅಭಿಪ್ರಾಯವನ್ನು ಪಾಟೀಲ್ ವ್ಯಕ್ತಪಡಿಸಿದ್ದರು. ರಾಜಕೀಯ ಒತ್ತಡಕ್ಕೆ ಮಣಿಯಕೂಡದು ಎಂದೂ ಆಗ ಪಾಟೀಲ್ ಹೇಳಿದ್ದರು. ಒಂದು ನಿರ್ದಿಷ್ಟ ಮಾದರಿಯ ಯೋಜನೆಗಳಿಗೆ ಮೀಸಲಿಟ್ಟ ಜಾಗಗಳಲ್ಲಿ ಅಂಥ ಉದ್ದಿಮೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಹೋದರೆ ಆ ಜಾಗವನ್ನು ಇತರ ಉದ್ದಿಮೆಗಳಿಗೂ ಒದಗಿಸುವ ನೀತಿ ಅಳವಡಿಸಿಕೊಳ್ಳುವ ಬಗ್ಗೆ ಆಗ ಪಾಟೀಲ್ ಹೇಳಿದ್ದುದು ವರದಿಯಾಗಿತ್ತು.
ಕೆಐಎಡಿಬಿ ಹಗರಣಗಳಿಂದ ಹೊರತಾಗಿಲ್ಲ. ಒಂದಲ್ಲ ಒಂದು ಆರೋಪಗಳು ಅದಕ್ಕೆ ಸುತ್ತಿಕೊಳ್ಳುತ್ತಲೇ ಇರುತ್ತವೆ.
2022ರ ಡಿಸೆಂಬರ್‌ನಲ್ಲಿನ ವರದಿಯೊಂದರ ಪ್ರಕಾರ, ಪರಿಹಾರ ಮೊತ್ತ ಬಿಡುಗಡೆ ಕುರಿತ ನಕಲಿ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಧಾರವಾಡದಲ್ಲಿನ 14 ಮಂದಿ ಕೆಐಎಡಿಬಿ ಮತ್ತು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. 19.99 ಕೋಟಿಯ ಆ ಭೂ ಹಗರಣದಲ್ಲಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಹಣ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇದೇ ಆಗಸ್ಟ್ 9 ಮತ್ತು 10ರಂದು ಕೆಐಎಡಿಬಿಯ ಬೆಂಗಳೂರು ಮತ್ತು ಧಾರವಾಡ ಕಚೇರಿಗಳ ಮೇಲೆ ಈ.ಡಿ. ದಾಳಿ ನಡೆದಿತ್ತು.
ಕೆಐಎಡಿಬಿ ಮೇಲಿರುವ ಆರೋಪಗಳು:
ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರದ ಹೆಸರಲ್ಲಿ ವಂಚನೆ.
ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಲೂಟಿ.
ಐಡಿಬಿಐ ಬ್ಯಾಂಕ್‌ನ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿರುವುದು.
ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹೆಸರಲ್ಲಿ ಅಕ್ರಮ.
ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಲೂಟಿ.
ಈ ಎಲ್ಲ ಆರೋಪಗಳ ಕುರಿತಂತೆ ಈ.ಡಿ. ತನಿಖೆ ಕೈಗೊಂಡಿದೆ.
ಈಗ, ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದು, ಅದಕ್ಕೆ ಸಚಿವ ಎಂ.ಬಿ. ಪಾಟೀಲ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು, ಕೈಗಾರಿಕೆ ಹೆಸರಿನಲ್ಲಿ ಹಂಚಿಕೆಯಾಗುವ ಭೂಮಿಯನ್ನು ಉದ್ಯಮಿಗಳು ಸದ್ಬಳಕೆ ಮಾಡದೆ ಇರುವುದು ಎದ್ದು ಕಾಣುವ ಮತ್ತೊಂದು ಅಂಶ. ಕೈಗಾರಿಕೆಗಳಿಗೆ ಬೇಕಾದ ಭೂಮಿಯನ್ನು ಕೆಐಎಡಿಬಿ ಒದಗಿಸುತ್ತದೆ. ಅದೆಷ್ಟೋ ಕಂಪೆನಿಗಳು ಹೂಡಿಕೆ ಪ್ರಸ್ತಾವ ಸಲ್ಲಿಸಿ ಭೂಮಿ ಪಡೆದುಕೊಂಡಿದ್ದರೂ, ಬಳಸಿಯೇ ಇಲ್ಲ. ವರದಿಯೊಂದರ ಪ್ರಕಾರ, ಹೀಗೆ ಭೂಮಿ ಬಳಸದ ಕೈಗಾರಿಕೋದ್ಯಮಿಗಳ ಸಂಖ್ಯೆ 1,117. ಹಂಚಿಕೆಯಾಗಿದ್ದೂ ಬಳಕೆಯಾಗದೆ ಉಳಿದಿರುವ ಭೂಮಿ 9,572 ಎಕರೆ.
ಹೀಗೆ ಭೂಮಿ ಸದ್ಬಳಕೆಯಾಗದೆ ಇದ್ದರೆ ವಾಪಸ್ ಪಡೆಯುವ ಬಗ್ಗೆ ಸರಕಾರ ಹಿಂದೊಮ್ಮೆ ಚಿಂತನೆ ನಡೆಸಿತ್ತು.
ಈಗ ಸಚಿವ ಎಂ.ಬಿ. ಪಾಟೀಲ್ ಕೂಡ ಆರೆಸ್ಸೆಸ್‌ಗೆ ನೀಡಲಾಗಿರುವ ಕೆಐಎಡಿಬಿ ಭೂಮಿ ವಿಚಾರವಾಗಿ ಅಂಥದೇ ಎಚ್ಚರಿಕೆ ನೀಡಿದ್ದಾರೆ.