ಕಾಂಗ್ರೆಸ್ ಬಲಗೊಳ್ಳಬೇಕಿರುವುದು ಎಲ್ಲಿಂದ?

ಕಾಂಗ್ರೆಸ್ ಬಹಳ ದೊಡ್ಡ ಬದಲಾವಣೆಗೆ ತಯಾರಾಗುತ್ತಿದೆ. ಈ ಇಡೀ ವರ್ಷವನ್ನು ಸಂಘಟನಾತ್ಮಕ ಬಲ ಹೆಚ್ಚಿಸಿಕೊಳ್ಳುವುದಕ್ಕೇ ಮೀಸಲಿಡಲು ಕಾಂಗ್ರೆಸ್ ನಿರ್ಧರಿಸಿದೆ. 2025ನ್ನು ಪಕ್ಷದ ಸಾಂಸ್ಥಿಕ ಪುನರ್ ರಚನೆ ವರ್ಷ ಎಂದೇ ಕರೆಯಲಾಗಿದೆ. ಕಾಂಗ್ರೆಸ್ ಬಲಗೊಳ್ಳಬೇಕಿರುವುದು ದಿಲ್ಲಿಯ ಸಿಡಬ್ಲ್ಯುಸಿ ಮಟ್ಟದಲ್ಲಲ್ಲ, ಬದಲಿಗೆ ತಳಮಟ್ಟದಲ್ಲಿ ಎಂಬುದು ನಾಯಕತ್ವಕ್ಕೆ ಮನವರಿಕೆಯಾಗಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಪ್ರಬಲವಾಗಬೇಕು ಮತ್ತು ಹೆಚ್ಚಿನ ಅಧಿಕಾರದೊಂದಿಗೆ ಕೆಲಸ ಮಾಡಲು ಶಕ್ತವಾಗಬೇಕು ಎಂಬುದನ್ನು ದಿಲ್ಲಿ ನಾಯಕತ್ವ ಕಂಡುಕೊಂಡಿದೆ ಎಂಬುದೇ ಒಂದು ಮಹತ್ವದ ವಿಚಾರ.
ಅದು 1952ರ ಜನವರಿ 31. ಮೊದಲ ಸಾರ್ವತ್ರಿಕ ಚುನಾವಣೆಗಳು ಮುಗಿಯುವ ಮೊದಲೇ, ಜವಾಹರಲಾಲ್ ನೆಹರೂ ಅವರು ಪ್ರಾಥಮಿಕ ಮೌಲ್ಯಮಾಪನ ಮಾಡಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಕಳಿಸಿದ್ದರು. ಕಾಂಗ್ರೆಸ್ ಭಾರೀ ಬಹುಮತದಿಂದ ಗೆಲ್ಲುತ್ತಿದೆ ಎಂಬುದು ಸ್ಪಷ್ಟವಾಗಿದ್ದರೂ, ಅವರ ಟಿಪ್ಪಣಿಯಲ್ಲಿ ಸ್ವಯಂ ಶ್ಲಾಘನೆ ಏನೂ ಇರಲಿಲ್ಲ. ಬದಲಾಗಿ, ಅವರು ದೌರ್ಬಲ್ಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದ್ದರು ಮತ್ತು ತಕ್ಷಣದ ಪರಿಹಾರ ಕ್ರಮಗಳ ಅಗತ್ಯವನ್ನು ಪ್ರತಿಪಾದಿಸಿದ್ದರು. ಅದರಲ್ಲಿ ಅವರು ಬರೆದಿದ್ದ ಒಂದು ಮಾತನ್ನು ಉಲ್ಲೇಖಿಸಬೇಕು:
‘‘ಕಾಂಗ್ರೆಸ್ ಸಂಘಟನೆ ಜನರೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಆಗಾಗ ಹೇಳಲಾಗುತ್ತದೆ. ಚುನಾವಣೆ ಇದನ್ನು ಅನೇಕ ಕಡೆಗಳಲ್ಲಿ ಸಾಬೀತುಪಡಿಸಿದೆ. ವಾಸ್ತವವಾಗಿ, ಇಂದಿನ ಸಂಘಟನೆಯ ರಚನೆಯೇ ಜನರಿಂದ ಪಕ್ಷ ದೂರವಾಗುತ್ತಿರುವುದಕ್ಕೆ ಕಾರಣ. ನಾವು ಉನ್ನತ ಸಮಿತಿಗಳನ್ನಷ್ಟೇ ಗಮನಿಸುತ್ತೇವೆ. ಮುಖ್ಯವಾಗಿ ಪ್ರದೇಶ ಸಮಿತಿಗಳು ಮತ್ತು ಸ್ವಲ್ಪ ಮಟ್ಟಿಗೆ ಜಿಲ್ಲಾ ಸಮಿತಿಗಳ ಮೂಲಕ ಕೆಲಸ ಮಾಡುತ್ತೇವೆ. ತಾಲೂಕು ಸಮಿತಿಗಳು ಸಹ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವುದು ಸಾಧ್ಯವಿದೆ’’ ಎಂದು ನೆಹರೂ ಹೇಳಿದ್ದರು.
‘‘ತಾಲೂಕು ಘಟಕ ಕೂಡ ಸರಿಯಾದ ಕೆಲಸಕ್ಕೆ ತುಂಬಾ ಮುಖ್ಯ. ಈ ಘಟಕ ಸುಮಾರು 25 ರಿಂದ 30 ಹಳ್ಳಿಗಳನ್ನು ಒಳಗೊಂಡಿರುವ ಒಂದು ಘಟಕಕ್ಕಿಂತ ದೊಡ್ಡದಾಗಿರಬಾರದು. ಯುಪಿಯಲ್ಲಿ, ಈ ರೀತಿಯ ಮಂಡಲ ಸಮಿತಿಗಳು ಇದ್ದವು ಮತ್ತು ಅವು ಬಹಳ ಯಶಸ್ವಿಯಾಗಿವೆ. ಅವುಗಳನ್ನು ಏಕೆ ರದ್ದುಪಡಿಸಲಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ಇದರಿಂದಾಗಿ ಯುಪಿಯಲ್ಲಿ ಕಾಂಗ್ರೆಸ್‌ಗೆ ತೀವ್ರವಾಗಿ ಘಾಸಿಯಾಯಿತು ಮತ್ತು ಪಕ್ಷ ದುರ್ಬಲಗೊಂಡಿತೆಂಬುದು ನನಗೆ ಖಚಿತವಾಗಿದೆ’’ ಎಂದು ಉದಾಹರಣೆಯೊಂದಿಗೆ ವಿವರಿಸಿದ್ದರು.
ಸಂಘಟನೆಯಲ್ಲಿ ತಳಮಟ್ಟ ಶಕ್ತವಾಗಿರಬೇಕಾದ ಅಗತ್ಯವನ್ನು ಅವರು ಅವತ್ತೇ ಗುರುತಿಸಿದ್ದರು. ಈಗ, 73 ವರ್ಷಗಳ ಬಳಿಕ, ಸಂಘಟನಾತ್ಮಕವಾಗಿ ಬಲಗೊಳ್ಳಲು ಅದೇ ನೆಹರೂ ದೃಷ್ಟಿಕೋನವೇ ನೆರವಾದೀತೆಂದು ಕಾಂಗ್ರೆಸ್ ನಂಬುತ್ತಿದೆ.
ಹಾಗಾದರೆ, 139 ವರ್ಷಗಳಷ್ಟು ಹಳೆಯ ಪಕ್ಷ ಮತ್ತೊಮ್ಮೆ ಮೈಕೊಡವಿ ಮೇಲೇಳಲಿದೆಯೆ? ಪೂರ್ತಿಯಾಗಿ ಹೊಸ ರೂಪ ಮತ್ತು ಚೈತನ್ಯದೊಂದಿಗೆ ಅದು ಚುನಾವಣೆಗಳಿಗಾಗಿ ಸಜ್ಜಾಗಲಿದೆಯೆ? ಕಳೆದ ವಾರ ಅಹ್ಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹೊಸ ಸಂಕಲ್ಪಗಳನ್ನು ಮಾಡಲಾಗಿದೆ. ಅಲ್ಲಿ ಕಾಂಗ್ರೆಸ್‌ನ ಅಜೆಂಡಾಗಳೆಂದರೆ: ಮೈತ್ರಿ ನಿರ್ವಹಣೆ, ಸಂಘಟನೆಯ ಪುನರ್ ರಚನೆ, ಚುನಾವಣಾ ತಯಾರಿ, ವಕ್ಫ್ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು, ಗುಜರಾತ್ ಚುನಾವಣೆಗಾಗಿ ದೊಡ್ಡ ಮಟ್ಟದ ಸಿದ್ಧತೆ.
ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸುವುದನ್ನು ಪ್ರಬಲವಾಗಿಯೇ ಪ್ರತಿಪಾದಿಸಲಾಗಿದೆ. ಪಕ್ಷವನ್ನು ತಳಮಟ್ಟದಿಂದ ಮರುಸಂಘಟನೆ ಮಾಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿ ದ್ದಾರೆ. ಅಲ್ಲದೆ, ಪಕ್ಷದ ಜಿಲ್ಲಾ ಘಟಕಗಳ ಬಲವರ್ಧನೆ ಮತ್ತು ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಒಲವು ವ್ಯಕ್ತವಾಗಿದೆ. ಮರುಸಂಘಟನೆ ಹಾಗೂ ಜಿಲ್ಲಾಧ್ಯಕ್ಷರಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡುವುದರ ಬಗ್ಗೆ ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚೆಯಾಗಿದೆ.
ಈ ಅಧಿವೇಶನಕ್ಕೂ ಮೊದಲು ಎರಡು ಮಹತ್ವದ ಬೆಳವಣಿಗೆಗಳು ಪಕ್ಷದೊಳಗೆ ನಡೆದವು. ಮೊದಲನೆಯದಾಗಿ, ಫೆಬ್ರವರಿಯಲ್ಲಿ ಕೆಲ ಯುವ ಮತ್ತು ಅನುಭವಿ ನಾಯಕರನ್ನು ಪಕ್ಷ ಸಂಘಟನೆಗೆ ನಿಯೋಜಿಸಲಾಯಿತು. ಕೆಲವರನ್ನು ಕೈಬಿಡುವ ಮೂಲಕ, ಸಂಘಟನೆ ಹೊಣೆಯನ್ನು ಯಾರೂ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಎಂಬ ಸಂದೇಶ ರವಾನಿಸಲಾಯಿತು. ಪುನರ್ ರಚನೆ ಮಾಡಿದ ನಂತರ ನಿಯೋಜಿತರಾದ ಪದಾಧಿಕಾರಿಗಳಲ್ಲಿ ಹೆಚ್ಚಿನವರು ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯವರಾಗಿದ್ದಾರೆ. ಹಾಗೆಯೇ ಪ್ರಬಲ ಜಾತಿಗಳ ನಾಯಕರಿಗೂ ಸ್ಥಾನ ನೀಡಲಾಗಿದೆ.
ಇನ್ನು ಎರಡನೆಯ ಬೆಳವಣಿಗೆಯೆಂದರೆ, ಮಾರ್ಚ್ 27, 28 ಮತ್ತು ಎಪ್ರಿಲ್ 3ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರುಗಳ ಜೊತೆ ಮೂರು ಸುತ್ತಿನ ಚರ್ಚೆಯನ್ನು ನಡೆಸಲಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮಹತ್ವದ ಸಂವಾದ ನಡೆಸಿದರು. ನೇರವಾಗಿ ಜಿಲ್ಲಾ ಘಟಕಗಳ ಮುಖ್ಯಸ್ಥರಿಂದಲೇ ಕಾಂಗ್ರೆಸ್‌ನ ವಾಸ್ತವತೆ ಬಗ್ಗೆ ತಿಳಿದುಕೊಳ್ಳುವುದು ಮತ್ತು ಜಿಲ್ಲಾ ಘಟಕಗಳಿಗೆ ಆದ್ಯತೆ ನೀಡಿ, ಸಂಘಟನಾತ್ಮಕವಾಗಿ ಅವುಗಳಿಗೆ ಶಕ್ತಿ ತುಂಬುವುದು ಸಭೆಯ ಉದ್ದೇಶವಾಗಿತ್ತು. ದೇಶದ 750ಕ್ಕೂ ಹೆಚ್ಚು ಜಿಲ್ಲಾ ಘಟಕಗಳ ಮುಖ್ಯಸ್ಥರೊಡನೆ ಸುಮಾರು 250 ಮಂದಿಯ ಬ್ಯಾಚ್‌ಗಳಲ್ಲಿ ಈ ಚರ್ಚೆ ನಡೆಸಲಾಯಿತು. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಪುನರುಜ್ಜೀವನಗೊಳ್ಳುವ ನಿಟ್ಟಿನಲ್ಲಿಯೂ ಇದು ಮಹತ್ವದ್ದಾಗಿತ್ತು. 2009ರ ಲೋಕಸಭಾ ಚುನಾವಣೆಗೆ ಮುಂಚೆ ನಡೆದ ಸಮ್ಮೇಳನದಲ್ಲಿ ಡಿಸಿಸಿ ಮತ್ತು ಬ್ಲಾಕ್ ಅಧ್ಯಕ್ಷರು ಸಹ ಪಾಲ್ಗೊಂಡಿದ್ದರು. ಅದಾದ 15 ವರ್ಷಗಳ ನಂತರ ಈಗ ಮತ್ತೊಮ್ಮೆ ಡಿಸಿಸಿ ಅಧ್ಯಕ್ಷರುಗಳ ಜೊತೆ ಸಭೆ ನಡೆಯಿತು.
ಜಿಲ್ಲಾ ಘಟಕಗಳನ್ನು ಹೇಗೆ ಸಬಲೀಕರಣಗೊಳಿಸುವುದು ಮತ್ತು ಅವುಗಳನ್ನು ಸಂಘಟನೆಯ ಕೇಂದ್ರಬಿಂದುವನ್ನಾಗಿ ಹೇಗೆ ಮಾಡುವುದು ಎಂಬುದರ ಕುರಿತು ಇಡೀ ಚರ್ಚೆಯ ಗಮನವಿತ್ತು. ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಲು ಕಾಂಗ್ರೆಸ್ ಆಂತರಿಕ ಸಮಿತಿ ಪ್ರಸ್ತಾವಿಸಿದೆ. ದೇಶಾದ್ಯಂತ 750ಕ್ಕೂ ಹೆಚ್ಚು ಅಂತಹ ಸಮಿತಿಗಳು, ಇನ್ನು ಮುಂದೆ ಆಯಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಯ ಹೊಣೆ ನಿಭಾಯಿಸುತ್ತವೆ. ಈ ಪ್ರಸ್ತಾವದ ಪ್ರಕಾರ, ಡಿಸಿಸಿಗಳು ಮತ್ತು ಅವುಗಳ ಅಧ್ಯಕ್ಷರನ್ನು ಕಾಂಗ್ರೆಸ್ ಸಾಂಸ್ಥಿಕ ರಚನೆಯ ಮೂಲವಾಗಿ ಬಲಪಡಿಸುವ ಮತ್ತು ಸಬಲೀಕರಣಗೊಳಿಸುವುದು ಗುರಿಯಾಗಿದೆ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ತಮ್ಮ ಅಭಿಪ್ರಾಯ ನೀಡಲು ಈ ಜಿಲ್ಲಾ ಘಟಕಗಳ ಮುಖ್ಯಸ್ಥರನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಗಳಿಗೆ ಆಹ್ವಾನಿತರನ್ನಾಗಿ ಮಾಡುವ ಪ್ರಸ್ತಾಪವೂ ಇದೆ. ಡಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅವರ ಸಂಘಟನಾತ್ಮಕ ತಾಕತ್ತನ್ನು ಆಧರಿಸಿರಬೇಕೇ ಅಥವಾ ‘ಸಂದರ್ಶನ ಆಧಾರಿತ’ವಾಗಿರಬೇಕೇ ಎಂಬುದರ ಚರ್ಚೆಯೂ ಆಗಿದೆ. ಡಿಸಿಸಿ ಅಧ್ಯಕ್ಷರು ಪಕ್ಷದ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು ಮತ್ತು ಇದಕ್ಕಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೂ, ರಾಜ್ಯಸಭೆ, ವಿಧಾನ ಪರಿಷತ್ತುಗಳಿಗೆ ನಾಮನಿರ್ದೇಶನಗಳು ಮತ್ತು ಸರಕಾರಿ ಮಂಡಳಿಗಳು, ಆಯೋಗಗಳಲ್ಲಿ ಸ್ಥಾನಗಳಂತಹ ಅವಕಾಶಗಳನ್ನು ನೀಡಬಹುದು ಎನ್ನಲಾಗಿದೆ. ಆದರೆ ಅದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿರುತ್ತದೆ. ಡಿಸಿಸಿ ಅಧ್ಯಕ್ಷರಲ್ಲಿ ಸಾಮಾಜಿಕ, ಲಿಂಗ, ಪೀಳಿಗೆಯ ಕೋಟಾವನ್ನು ಸೇರಿಸುವ ಸಲಹೆಗಳಿದ್ದರೂ, ಡಿಸಿಸಿ ಅಧ್ಯಕ್ಷರ ಆಯ್ಕೆ ಜಿಲ್ಲೆಗಳ ಸಾಮಾಜಿಕ ಪ್ರೊಫೈಲ್ ಮತ್ತು ಪಕ್ಷದ ಸಾಮಾಜಿಕ ನೆಲೆಗಳಿಗೆ ಹೊಂದಿಕೆಯಾಗಬೇಕಾಗಿರುವುದರಿಂದ ಅದನ್ನು ಯಾಂತ್ರಿಕವಾಗಿ ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆಯೂ ಚರ್ಚೆಯಾಗಿದೆ. ಡಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಪ್ರಸ್ತಾವಿತ ಸಮಿತಿಗಳನ್ನು ಆಯಾ ಪಿಸಿಸಿಗಳು ರಚಿಸುತ್ತವೆ.
ಎಐಸಿಸಿ ಅಧ್ಯಕ್ಷರು ಡಿಸಿಸಿ ಮುಖ್ಯಸ್ಥರನ್ನು ನೇರವಾಗಿ ನಾಮನಿರ್ದೇಶನ ಮಾಡುವ ಪ್ರಸ್ತುತ ವ್ಯವಸ್ಥೆ ಬದಲಾಗಬಹುದು ಎನ್ನಲಾಗಿದೆ. ಇದರಿಂದ, ಮೂಲಭೂತವಾಗಿ ಹೈಕಮಾಂಡ್ ದಿಲ್ಲಿಯಿಂದ ನೇಮಕಾತಿ ಪ್ರಕ್ರಿಯೆ ವಹಿಸಿಕೊಂಡಾಗ ಉದ್ಭವಿಸುವ ಸಮಸ್ಯೆಗಳು ಇಲ್ಲವಾಗಲಿವೆ. ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಬಲೀಕರಣ ಮತ್ತು ಅವುಗಳನ್ನು ಪಕ್ಷದ ಚಟುವಟಿಕೆಗಳ ನಿಜವಾದ ಕೇಂದ್ರವನ್ನಾಗಿ ಮಾಡುವ ಯೋಜನೆ ಇದು. ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ರಚನೆಯನ್ನು ವಿಕೇಂದ್ರೀಕರಿಸುವ ಮೊದಲ ಹೆಜ್ಜೆ ಇದಾಗಲಿದೆ. ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ, ಡಿಸಿಸಿಗಳನ್ನು ಪುನರ‌್ರಚಿಸಲು ಮತ್ತು ಹೊಸ ಜಿಲ್ಲಾ ಅಧ್ಯಕ್ಷರನ್ನು ನೇಮಿಸಲು ಯೋಜನೆಗಳಿವೆ. ಹರ್ಯಾಣದಂತಹ ರಾಜ್ಯಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಯಾವುದೇ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳಿಲ್ಲ.
ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರ ಕೊನೆಯ ಸಮ್ಮೇಳನ ಕೂಡ ಪಕ್ಷದ ಪಾಲಿಗೆ ಉತ್ತಮ ಫಲಿತಾಂಶಗಳನ್ನು ನೀಡಿತ್ತು. ಯುಪಿಎ ಅಧಿಕಾರಕ್ಕೆ ಮರಳುವಂತೆ ನೋಡಿಕೊಳ್ಳಲು ತಳಮಟ್ಟದ ನಾಯಕರನ್ನು ಪ್ರೇರೇಪಿಸಿತ್ತು. 1967ರವರೆಗೆ ಪಕ್ಷದಲ್ಲಿ ಜಿಲ್ಲಾ ಸಮಿತಿಗಳು ದೊಡ್ಡ ಪಾತ್ರವನ್ನು ಹೊಂದಿದ್ದವು. ಈಗ ಮತ್ತೆ ನಾಯಕತ್ವ ತನ್ನ ಬೇರುಗಳಿಗೆ ಹಿಂದಿರುಗಲು ಬಯಸುತ್ತಿದೆ. ಡಿಸಿಸಿಗಳು ಸೂಚಿಸಿದ ಒಂದೇ ಹೆಸರನ್ನು ಈ ಹಿಂದೆ ಕೇಂದ್ರ ಚುನಾವಣಾ ಸಮಿತಿ ಯಾವುದೇ ಬದಲಾವಣೆಯಿಲ್ಲದೆ ಅನುಮೋದಿಸಿದ್ದ ಉದಾಹರಣೆಯೂ ಇದೆ ಎಂಬುದನ್ನು ನಾಯಕರು ನೆನಪಿಸಿಕೊಳ್ಳುತ್ತಾರೆ. ಜಿಲ್ಲಾ ಸಮಿತಿಗಳು ಹಿಂದಿನ ವೈಭವವನ್ನು ಮರಳಿ ಪಡೆಯಬೇಕೆಂದು ಪಕ್ಷದ ಕೇಂದ್ರ ನಾಯಕತ್ವ ಈಗ ಬಯಸುತ್ತಿದೆ ಎಂಬುದು ನಿಜ. ಇದರೊಂದಿಗೆ, ಜಿಲ್ಲಾ ಅಧ್ಯಕ್ಷರು ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, ಬಿಜೆಪಿ ವಿರುದ್ಧದ ಹೋರಾಟದಲ್ಲಿ ದಿಲ್ಲಿ ಕೇಂದ್ರಿತ ನಿರ್ಧಾರ ಪ್ರಕ್ರಿಯೆ ಕೆಲಸಕ್ಕೆ ಬರುತ್ತಿಲ್ಲ ಎಂಬುದು ನಾಯಕರ ಮನಸ್ಸಿಗೆ ಬಂದಿದೆ. ವಿಕೇಂದ್ರೀಕರಣದ ಅಗತ್ಯವಿದೆ ಮತ್ತು ಹೆಚ್ಚಿನ ತಳಮಟ್ಟದ ಭಾಗವಹಿಸುವಿಕೆಯ ಅಗತ್ಯವಿದೆ ಮತ್ತು ಕಾರ್ಯತಂತ್ರವನ್ನು ಪುನಃ ರೂಪಿಸಲು, ಜಿಲ್ಲಾ ಅಧ್ಯಕ್ಷರನ್ನು ನೇಮಿಸುವ ವಿಧಾನ ಮತ್ತು ಸಮಿತಿಗೆ ಹೆಚ್ಚಿನ ಸಾಂಸ್ಥಿಕ ಜವಾಬ್ದಾರಿಗಳನ್ನು ನೀಡಬೇಕಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಮೊದಲಿಗಿಂತ ಹೆಚ್ಚು ಸಬಲರನ್ನಾಗಿ ಮಾಡುವುದು ಈಗ ಕಾಂಗ್ರೆಸ್‌ನ ಉದ್ದೇಶವಾಗಿದೆ. ಹಳ್ಳಿಗಳು, ವಿಭಾಗಗಳು ಮತ್ತು ಬೂತ್‌ಗಳಲ್ಲಿ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸುವುದು ಇಂಥ ಕ್ರಮದ ಗುರಿಯಾಗಿದೆ. 2025ರ ಉದ್ದಕ್ಕೂ ಕಾಂಗ್ರೆಸ್ ತನ್ನ ಕಾರ್ಯಕರ್ತರನ್ನು ಬಲಪಡಿಸಲು, ತನ್ನ ಸಿದ್ಧಾಂತವನ್ನು ವಿಸ್ತರಿಸಲು ಯೋಜಿಸಿದೆ. ಪಾದಯಾತ್ರೆಗಳು ಮತ್ತು ಮನೆ-ಮನೆ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸಾಮೂಹಿಕ ಸಂಪರ್ಕ ಕಾರ್ಯಕ್ರಮದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದೆ. ಇದೆಲ್ಲ ವಿಚಾರಗಳನ್ನು ಹೇಳುತ್ತಿರುವ ನಾಯಕರು, ಇದು ಸಂಘಟನೆಯ ವರ್ಷವಾಗಿದೆ ಎಂದು ಹೇಳುತ್ತಾರೆ.
ಚುನಾವಣೆಗಳನ್ನು ಗೆಲ್ಲಲೇಬೇಕು ಎನ್ನುವ ನಿಶ್ಚಯದೊಂದಿಗೆ ಅದು ತಯಾರಾಗುತ್ತಿದೆ. ಬಿಜೆಪಿ ಮತ್ತು ಎನ್‌ಡಿಎಗೆ ಕಠಿಣ ಸವಾಲನ್ನು ನೀಡಲು ಅದು ತಯಾರಾಗುತ್ತಿದೆ. ಅಹ್ಮದಾಬಾದ್‌ನಲ್ಲಿ ಮೊನ್ನೆ ನಡೆದ ಎಐಸಿಸಿ 86ನೇ ಅಧಿವೇಶನದಲ್ಲಿ ಚರ್ಚಿಸಲಾಗಿರುವ ಕಾಂಗ್ರೆಸ್‌ನ ಪುನರುಜ್ಜೀವನ ತಂತ್ರ ಫಲ ಕೊಡಲಿದೆಯೇ ಎಂಬುದು ಈಗಿನ ಪ್ರಶ್ನೆ. ಹರ್ಯಾಣ, ಮಹಾರಾಷ್ಟ್ರ ಮತ್ತು ದಿಲ್ಲಿ ಚುನಾವಣೆಗಳಲ್ಲಿನ ಸೋಲು ಕಾಂಗ್ರೆಸ್ ಅನ್ನು ನಿರಾಸೆಗೊಳಿಸಿದೆ. 2024ರ ಲೋಕಸಭೆ ಚುನಾವಣೆ ಗೆಲುವಿನ ನಂತರದ ಉತ್ಸಾಹ ಪಕ್ಷದಲ್ಲೀಗ ಇಲ್ಲವಾಗಿದೆ. 2029ರಲ್ಲಾದರೂ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕ್ಷೀಣಿಸಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಬಹಳ ದೃಢವಾದ ಹೆಜ್ಜೆ ತೆಗೆದುಕೊಳ್ಳುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿನ ಗೆಲುವಿಗಾಗಿ ಪಟ್ಟ ಸಂಭ್ರಮ ಅರ್ಥಹೀನ ಎಂಬ ಭಾವನೆ ಅದಕ್ಕೆ ಬಂದಿದೆ. ಆ ಗೆಲುವು ತನ್ನ ಪುನರುಜ್ಜೀವನದ ಪ್ರತಿಬಿಂಬವಾಗಿರಲಿಲ್ಲ ಎಂಬುದು ಕಾಂಗ್ರೆಸ್‌ಗೆ ಮನವರಿಕೆಯಾಗಿದೆ. ಅದು ಅವನತಿಯ ಸ್ಥಿತಿಯಲ್ಲಿದೆ, ಅದರ ಸಾಂಸ್ಥಿಕ ರಚನೆ ಶಿಥಿಲಗೊಂಡಿದೆ. ವಿಶೇಷವಾಗಿ ಉತ್ತರ ಮತ್ತು ಪೂರ್ವದ ಜನನಿಬಿಡ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿರುವ ಹೊತ್ತು ಇದು. ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯಂತಹ ನಿರ್ಣಾಯಕ ವಿಷಯಗಳ ಬಗ್ಗೆ ಪಕ್ಷದ ಸೈದ್ಧಾಂತಿಕ ಚೌಕಟ್ಟು ಗೊಂದಲದಿಂದ ಕೂಡಿದೆ. ಬಿಜೆಪಿಯ ಧಾರ್ಮಿಕ ಅಜೆಂಡಾವನ್ನು ತಟಸ್ಥಗೊಳಿಸುವ ನಿಟ್ಟಿನ ಕಾಂಗ್ರೆಸ್ ಅಭಿಯಾನ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ವಿಫಲವಾಯಿತು. ಮೋದಿ ಸರಕಾರದ ಅದಾನಿ-ಅಂಬಾನಿ ಸಂಪರ್ಕದ ಬಗೆಗಿನ ಕಾಂಗ್ರೆಸ್ ದಾಳಿ ಕೂಡ ಮತದಾರರನ್ನು ಸೆಳೆಯುವಲ್ಲಿ ಗೆಲ್ಲದೇ ಹೋಯಿತು. ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಗುಜರಾತ್‌ನಲ್ಲಿ ಅದು ಅಧಿಕಾರ ಕಳೆದುಕೊಂಡೇ 30 ವರ್ಷಗಳಾಗಿವೆ.
ಜನರನ್ನು ತಲುಪಲು ಪಕ್ಷದ ಬಲವಾದ ಸಂಘಟನೆ ಮತ್ತು ಉತ್ಸಾಹಭರಿತ ಕಾರ್ಯಕರ್ತರ ಅಗತ್ಯವಿರುತ್ತದೆ. ಆ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ತಂತ್ರಗಾರಿಕೆ ಈ ಹಂತದಲ್ಲಿ ಪಕ್ಷಕ್ಕೆ ಹೇಗೆ ಒದಗಲಿದೆ? ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ, ಅನೇಕ ಹಂತಗಳಲ್ಲಿ ಪಕ್ಷದ ಅಡಿಪಾಯ ದುರ್ಬಲವಾಗಿದೆ ಎಂಬ ಆರೋಪಗಳಿವೆ. ಹೀಗಿರುವಾಗ, ಜಿಲ್ಲಾಧ್ಯಕ್ಷರ ಮೂಲಕ ಅಧಿಕಾರವನ್ನು ವಿಕೇಂದ್ರೀಕರಿಸುವ ಹೊಸ ಸಂಕಲ್ಪ ಎರಡು ಅಲಗಿನ ಕತ್ತಿಯಾಗಿ ಪರಿಣಮಿಸಬಹುದು ಎಂಬ ಆತಂಕವೂ ಇನ್ನೊಂದೆಡೆಯಿಂದ ವ್ಯಕ್ತವಾಗುತ್ತಿದೆ. ಸಂಘಟನಾತ್ಮಕ ಸಮಸ್ಯೆಗಳಿಗೆ ಪರಿಹಾರ, ಹರ್ಯಾಣದಂತೆ ಪ್ರಾದೇಶಿಕ ನಾಯಕರಿಗೆ ಅನಿಯಂತ್ರಿತ ಅಧಿಕಾರ ನೀಡುವುದರಲ್ಲಿ ಅಥವಾ ಆಯ್ಕೆಯಾಗದ ಜಿಲ್ಲಾ ನಾಯಕರನ್ನು ಹೈಕಮಾಂಡ್‌ನ ಪ್ರತಿನಿಧಿಯನ್ನಾಗಿ ಮಾಡುವುದರಲ್ಲಿ ಇಲ್ಲ ಎಂಬುದು ವಿಶ್ಲೇಷಕರ ಟೀಕೆ. ಮೇಲಿನಿಂದ ಕೆಳಗಿನವರೆಗೆ ಎಲ್ಲಾ ಸ್ಥಾನಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಚುನಾವಣೆಗೆ ಮುಕ್ತವಾಗಿ ಇರಿಸುವ ಮೂಲಕ, ನಿಜವಾದ ಉತ್ಸಾಹವನ್ನು ಮೂಡಿಸುವ ಮೂಲಕ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವನ್ನು ರಚಿಸಬೇಕಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ಅಧಿವೇಶನದಲ್ಲಿ ಕಾಂಗ್ರೆಸ್ ರಾಷ್ಟ್ರೀಯತೆ ಬಗ್ಗೆ ಮತ್ತೆ ಮತ್ತೆ ಒತ್ತಿಹೇಳಿದೆ. ಹಾಗೆಯೇ ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಪಕ್ಷದ ಸ್ವಾತಂತ್ರ್ಯ ಚಳವಳಿಯ ನಾಯಕರ ಪರಂಪರೆಯನ್ನು ಮರಳಿ ತನ್ನದಾಗಿಸಿಕೊಳ್ಳಲು ಯತ್ನಿಸಿದೆ. ಸಿಡಬ್ಲ್ಯುಸಿ ಸಭೆಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಸ್ಮಾರಕದಲ್ಲಿ ನಡೆಸಲಾಯಿತು ಎಂಬುದನ್ನು ಗಮನಿಸಬೇಕು. ನಗರಾದ್ಯಂತ ಮತ್ತು ಅಧಿವೇಶನ ಸ್ಥಳದಲ್ಲಿ ಪಕ್ಷ ಹಾಕಿದ್ದ ಹೋರ್ಡಿಂಗ್‌ಗಳಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಪಟೇಲ್ ಒಟ್ಟಿಗೆ ಕುಳಿತಿರುವ ಛಾಯಾಚಿತ್ರಗಳು ಇದ್ದವು. ಪಕ್ಷ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ಮತ್ತು ಇತ್ತೀಚೆಗೆ ಗಾಂಧಿಯವರ ಕಾಂಗ್ರೆಸ್ ಅಧ್ಯಕ್ಷತೆಯ 100ನೇ ವಾರ್ಷಿಕೋತ್ಸವವನ್ನು ನೆನಪಿಸಿಕೊಂಡದ್ದು ಈ ಹೊತ್ತಿನಲ್ಲಿ ಬಹಳ ಸಾಂಕೇತಿಕವಾಗಿ ಕಂಡವು. ಇದೇ ವೇಳೆ, ಬಿಜೆಪಿ ಮತ್ತು ಆರೆಸ್ಸೆಸ್‌ನ ಹುಸಿ ರಾಷ್ಟ್ರೀಯತೆ ಮೂಲಕ ದೇಶ ಮತ್ತು ಜನರನ್ನು ವಿಭಜಿಸಲು ಪ್ರಯತ್ನಿಸುತ್ತದೆ ಎಂದು ಆರೋಪಿಸಲಾಯಿತು. ಬಿಜೆಪಿ ಮತ್ತು ಆರೆಸ್ಸೆಸ್ ಮಾದರಿಯ ರಾಷ್ಟ್ರೀಯತೆ ಭಾರತದ ವೈವಿಧ್ಯತೆಯನ್ನು ಅಳಿಸಿಹಾಕುವ ದುರುದ್ದೇಶದ್ದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ವೇಳೆ, ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ ಕೆಲ ಕಾಂಗ್ರೆಸ್ ನಾಯಕರು ತಳಮಟ್ಟದ ಕಾಳಜಿ ತೋರಿಸಿದರು. ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಕೇರಳ ಕಾಂಗ್ರೆಸ್ ನಾಯಕರು, ಬಿಜೆಪಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಅದರ ಬಗ್ಗೆ ಪಕ್ಷದ ನಾಯಕತ್ವ ಗಮನ ಹರಿಸುವಂತೆ ಕೇಳಿಕೊಂಡರು.
ಸರ್ದಾರ್ ಪಟೇಲ್ ಬಗ್ಗೆ ಪ್ರತ್ಯೇಕ ನಿರ್ಣಯವನ್ನು ಕಾಂಗ್ರೆಸ್ ಅಂಗೀಕರಿಸಿತು. ತಮ್ಮ ಭಾಷಣದಲ್ಲಿ, ಖರ್ಗೆ ಅನೇಕ ರಾಷ್ಟ್ರೀಯ ವೀರರ ವಿರುದ್ಧ ಚೆನ್ನಾಗಿ ಯೋಜಿಸಲಾದ ಬಿಜೆಪಿಯ ಪಿತೂರಿ ಬಗ್ಗೆ ಮಾತನಾಡಿದರು. ದೇಶದಲ್ಲಿ 140 ವರ್ಷಗಳ ಸೇವೆ ಮತ್ತು ಹೋರಾಟದ ಅದ್ಭುತ ಇತಿಹಾಸ ಹೊಂದಿರುವ ಕಾಂಗ್ರೆಸ್ ವಿರುದ್ಧದ ವಾತಾವರಣ ಸೃಷ್ಟಿಯಾಗುತ್ತಿದೆ. ತಮ್ಮ ಸಾಧನೆಗಳೆಂದು ತೋರಿಸಲು ಏನೂ ಇಲ್ಲದ ಜನರು ಈ ಕುತಂತ್ರದ ಕೆಲಸ ಮಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು. ಸಂಘಟನೆ ಇಲ್ಲದೆ ಸಂಖ್ಯೆಗಳು ಅರ್ಥ ಹೀನ, ಸಂಘಟನೆ ಇಲ್ಲದೆ ಸಂಖ್ಯೆಗಳಿಗೆ ನಿಜವಾದ ಶಕ್ತಿ ಇಲ್ಲ ಎಂದು ಸರ್ದಾರ್ ಪಟೇಲ್ ಪ್ರತಿಪಾದಿಸಿದ್ದನ್ನು ಖರ್ಗೆ ಉಲ್ಲೇಖಿಸಿದರು.
ಕಾಂಗ್ರೆಸ್ ಸಂಘಟನಾತ್ಮಕವಾಗಿ ಬಲಿಷ್ಠವಾಗಲು ಅದರ ಪ್ರತೀ ಹಂತದಲ್ಲೂ ಸೈದ್ಧಾಂತಿಕ ಸ್ಪಷ್ಟತೆ ಮೂಡುವುದೂ ಬಹಳ ಮುಖ್ಯವಾಗಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗಿರುವ ಸೈದ್ಧಾಂತಿಕ ಸ್ಪಷ್ಟತೆ ಅವರ ಜೊತೆಗಿರುವ ಎಲ್ಲಾ ನಾಯಕರೂ, ಪಕ್ಷದ ರಾಜ್ಯ ನಾಯಕರು, ಜಿಲ್ಲಾ, ತಾಲೂಕು ಹಾಗೂ ಬ್ಲಾಕ್ ನಾಯಕರಲ್ಲೂ ಇರಬೇಕಾಗಿರುವುದು ತುರ್ತು ಅಗತ್ಯವಾಗಿದೆ. ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಹೋಗುವಾಗ ತಾಲೂಕು ಮಟ್ಟದ ಕಾಂಗ್ರೆಸ್ ನಾಯಕರು ಮೃದು ಹಿಂದುತ್ವ ಅನುಸರಿಸಿದರೆ ಕಾಂಗ್ರೆಸ್ ಉದ್ಧಾರ ಆಗುವುದಿಲ್ಲ. ಕಾಂಗ್ರೆಸ್ ತನ್ನ ಸಂಘಟನೆ ಬಲಪಡಿಸುವಾಗ ಸೇವಾ ದಳವನ್ನು ಹೇಗೆ ಮತ್ತೆ ಸಕ್ರಿಯವಾಗಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನೊಂದೆಡೆ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗಳಾಗುವ ಸೂಚನೆಗಳಿವೆ. ಅಲ್ಲಿ ಮತ್ತೆ ಎಲ್ಲವನ್ನೂ ಆರೆಸ್ಸೆಸ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಂತೆ ಕಾಣಿಸುತ್ತಿದೆ. ದೇಶದೆದುರು ಧರ್ಮವನ್ನು ರಾಜಕಾರಣಕ್ಕೆ ಬಳಸುವ ಮತ್ತು ಹೆಜ್ಜೆ ಹೆಜ್ಜೆಗೂ ಧಾರ್ಮಿಕ ದಾಳಿಯ ಅಸ್ತ್ರ ಬಳಕೆಯಾಗುತ್ತಿರುವ ಹೊತ್ತಿನಲ್ಲಿ, ಬಿಜೆಪಿಯೆದುರು ಕಾಂಗ್ರೆಸ್ ಬಲಿಷ್ಠವಾಗಿ ಮುಖಾಮುಖಿಯಾಗುವ ದಿನಗಳು ಬರಬೇಕಿರುವ ಜರೂರು ಖಂಡಿತ ಇದೆ. ಆ ದಿಕ್ಕಿನಲ್ಲಿ ಕಾಂಗ್ರೆಸ್ ಗೆಲ್ಲಬಲ್ಲುದೇ ಎಂಬುದೇ ಈಗಿನ ದೊಡ್ಡ ಕುತೂಹಲ.